ಚಿಕ್ಕಮಗಳೂರು: ಎಲ್ಲಾ ವಿಚಾರದ ಬಗ್ಗೆ ಜ್ಞಾನ ಇರುವ ಸರ್ವಜ್ಞನ ರೀತಿ ವರ್ತಿಸುವ ಸಚಿವ ಪ್ರಿಯಾಂಕ್ ಖರ್ಗೆ ಅವರಿಗೆ ಅವರ ಪರಮಾಪ್ತ ಲಿಂಗರಾಜು ಕಣ್ಣಿ ಡ್ರಗ್ಸ್ ದಂಧೆ ನಡೆಸುವ ಬಗ್ಗೆ ಮಾಹಿತಿ ಲಭ್ಯವಾಗದಿರುವುದು ಆಶ್ಚರ್ಯ ಎಂದು ವಿಧಾನ ಪರಿಷತ್ ಸದಸ್ಯ ಸಿ.ಟಿ.ರವಿ ವ್ಯಂಗ್ಯವಾಡಿದರು.
ಬುಧವಾರ ನಗರದಲ್ಲಿ ಸುದ್ದಿಗಾರರ ಜೊತೆ ಮಾತನಾಡಿದ ಅವರು, ಪ್ರಿಯಾಂಕ್ ಖರ್ಗೆ ಆಪ್ತ, ಕಾಂಗ್ರೆಸ್ ಶಾಸಕ ಅಲ್ಲಮಪ್ರಭು ಪಾಟೀಲರ ಪರಮಾಪ್ತ, ಕಲ್ಬುರ್ಗಿ ಗ್ರಾಮೀಣ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಲಿಂಗರಾಜು ಕಣ್ಣಿ ಡ್ರಗ್ಸ್ ದಂಧೆಯಲ್ಲಿ ಭಾಗಿಯಾದ ಆರೋಪಕ್ಕೆ ಮಹರಾಷ್ಟ್ರ ಪೊಲೀಸರಿಂದ ಬಂಧನಕ್ಕೊಳಗಾಗಿದ್ದಾರೆ. ಆದರೆ ಕರ್ನಾಟಕದ ಪೊಲೀಸರಿಗೆ ಜಾಲದ ಬಗ್ಗೆ ಯಾಕೆ ಗೊತ್ತಾಗಲಿಲ್ಲ ಎಂದು ಪ್ರಶ್ನಿಸಿದರು.
ಪ್ರಿಯಾಂಕ್ ಖರ್ಗೆ ಜಾಗತಿಕವಾಗಿ ನಡೆಯುವ ವಿದ್ಯಮಾನಗಳ ಬಗ್ಗೆ ಪ್ರತಿಕ್ರಿಯಿಸುತ್ತಾರೆ. ತಮ್ಮ ಮೂಗಿನಡಿ ತಮ್ಮ ಆಪ್ತನ ಡ್ರಗ್ಸ್ ದಂಧೆ ಬಗ್ಗೆ ಅವರಿಗೆ ಗೊತ್ತಿಲ್ಲವೇ ಎಂದು ಪ್ರಶ್ನಿಸಿ, ಬೆಂಗಳೂರು ಸೇರಿದಂತೆ ಕೆಲವು ಮೆಟ್ರೋಪಾಲಿಟನ್ ಸಿಟಿಗಳಿಗೆ ಸೀಮಿತವಾಗಿದ್ದ ಡ್ರಗ್ಸ್ ಜಾಲ ರಾಜ್ಯದ ಉದ್ದಗಲಕ್ಕೂ ವಿಸ್ತರಿಸುತ್ತಿರುವುದು ಕಳವಳಕಾರಿ. ಇದರಿಂದ ಸಂಗ್ರಹವಾಗು ಹಣದಿಂದ ಕೊಲೆ, ಸುಲಿಗೆ, ಭಯೋತ್ಪಾದನೆ, ಲವ್ಜಿಹಾದ್ ನಂತಹ ಸಮಾಜ ವಿರೋಧಿ, ರಾಷ್ಟ್ರ ವಿರೋಧಿ ಚಟುವಟಿಕೆಗಳು ಹೆಚ್ಚಾಗಲು ಕಾರಣವಾಗುತ್ತಿದೆ ಎಂದು ದೂರಿದರು.
ಡ್ರಗ್ಸ್ ಸೇವಿಸುವವರು ತಾವು ಯಾವ ಸ್ಥಿತಿಯಲ್ಲಿದ್ದೇವೆ ಎನ್ನುವ ಅರಿವಿಲ್ಲದೆ ಕೈಂ ಮಾಡುತ್ತಿದ್ದಾರೆ. ಸರ್ಕಾರ ಡ್ರಗ್ಸ್ ದಂಧೆ ಬಗ್ಗೆ ಶೂನ್ಯ ಸಹಿಷ್ಣುತೆ ತೋರಬೇಕು. ಪೊಲೀಸ್ ಇಲಾಖೆಯ ಕೆಲವು ಅಧಿಕಾರಿಗಳ ಅನೈತಿಕ ಆದಾಯದ ಮೂಲವೂ ಇದೇ ಡ್ರಗ್ಸ್ ದಂಧೆ ಎನ್ನುವುದು ಅಪಾಯಕಾರಿ. ಕಲ್ಬುರ್ಗಿಯಲ್ಲಿ ಕೆಲ ತಿಂಗಳ ಹಿಂದೆ ಡ್ರಗ್ಸ್ ಪೆಡ್ಲರ್ಗಳನ್ನು ವಶಕ್ಕೆ ಪಡೆದರೂ ಗಂಭೀರ ಕ್ರಮ ಆಗಿಲ್ಲ ಎನ್ನುವ ಆರೋಪ ಇದೆ. ಇದದರ ಹಿಂದೆ ಅಧಿಕಾರಸ್ಥರ ಕೃಪಾಕಟಾಕ್ಷ ಇದೆಯಾ ಎನ್ನುವ ಬಗ್ಗೆ ತನಿಖೆ ಆಗಬೇಕು ಎಂದರು.
ಬೆಂಗಳೂರಿನಲ್ಲಿ ಟನಲ್ ರಸ್ತೆ ನಿರ್ಮಾಣ ಯೋಜನೆಯಲ್ಲಿ ಕೋಟ್ಯಾಂತರ ರೂ. ಹಣ ಹೊಡೆಯುವ ಹುನ್ನಾರ ನಡೆದಿದೆ. ಸರ್ಕಾರ ಯೋಜನೆಬಗ್ಗೆ ಮರುಪರಿಶೀಲಿಸದೇ ಇದ್ದಲ್ಲಿ ಹೋರಾಟ ಅನಿವಾರ್ಯ ಹೇಳಿದರು.
ಈ ಬಗ್ಗೆ ಸಂಸದ ತೇಜಸ್ವಿ ಸೂರ್ಯ ಅವರು ಈಗಾಗಲೇ ಸರ್ಕಾರದ ಗಮನ ಸೆಳೆದಿದ್ದಾರೆ. ಈ ಯೋಜನೆಗೆ ೧೭೬೬೦ ಕೋಟಿ ರೂ.ನ ಕ್ರಿಯಾ ಯೋಜನೆ ತಯಾರಿಸಲಾಗಿದೆ. ಮುಂದೆ ಇದು ೨೦ ಸಾವಿರ ಕೋಟಿಗೆ ತಲುಪಲಿದೆ. ಆದರೆ ಮುಂಬೈನಲ್ಲಿ ಸಮುದ್ರದ ಮಧ್ಯೆ ನಿರ್ಮಿಸಿರುವ ರಸ್ತೆಗಿಂತಲೂ, ಜಮ್ಮು ಕಾಶ್ಮೀರದಲ್ಲಿ ಪರ್ವತವನ್ನು ಸೀಳಿ ಮಾಡಿರುವ ರಸ್ತೆಗಿಂತ ಹೆಚ್ಚು ಅನುದಾನವನ್ನು ಬೆಂಗಳೂರಿನ ಟನಲ್ ರಸ್ತೆಗೆ ಇಡಲಾಗುತ್ತಿದೆ. ಈಗಾಗಲೇ ಬೆಂಗಳೂರು ನಗರ ಯೋಜನೆಯನ್ನು ಹಳ್ಳ ಹಿಡಿಸಿ ಆಗಿದೆ. ಈಗ ಟನಲ್ ರಸ್ತೆ ಹೆಸರಲ್ಲಿ ಹಣ ನುಂಗುವ ಹುನ್ನಾರ ನಡೆದಿದೆ ಎಂದರು.
ಸರ್ಕಾರ ನಡೆಸುವವರು ಮುಖ್ಯಮಂತ್ರಿ ಯಾರು ಎನ್ನುವ ಬಗ್ಗೆ ಗಂಭೀರವಾಗಿ ಚರ್ಚಿಸುತ್ತ ರಾಜ್ಯದ ಹಿತವನ್ನು ಕಡೆಗಣಿಸಿದ ಪರಿಣಾಮ ದೊಡ್ಡ ದೊಡ್ಡ ಕಂಪನಿಗಳು ಕರ್ನಾಟಕದಿಂದ ಬೇರೆ ರಾಜ್ಯಗಳಿಗೆ ವಲಸೆ ಹೋಗುತ್ತಿವೆ ಎಂದು ಆರೋಪಿಸಿ ಜನರು ಆಯ್ಕೆ ಮಾಡಿರುವುದು ರಾಜ್ಯಕ್ಕೆ ಒಳ್ಳೆಯದಾಗಲಿ ಎಂದು. ನಾನು ಹೆಚ್ಚು, ನೀನು ಹೆಚ್ಚು ಎಂದು ಜಗಳವಾಡಲು ಅಲ್ಲ. ಆದರೂ ಕಾಂಗ್ರೆಸ್ನ ಒಳ ರಾಜಕೀಯ ಆಟದಿಂದ ರಾಜ್ಯಕ್ಕೆ ಅನ್ಯಾಯವಾಗುತ್ತಿದೆ ಎಂದು ದೂರಿದರು.
ಟಯೋಟಾ ಕಾರ್ ಕಂಪನಿ ಈಗಾಗಲೇ ಮಹರಾಷ್ಟ್ರಕ್ಕೆ ಹೋಗಿದೆ. ಇಲ್ಲಿ ಅವರಿಗೆ ಮೂಲ ಸೌಕರ್ಯ ಒದಗಿಸಿದ್ದರೆ ನಮ್ಮ ಜನರಿಗೆ ಹೆಚ್ಚು ಉದ್ಯೋಗ ಸಿಗುತ್ತಿತ್ತು. ತೆರಿಗೆ ಹಣದಿಂದ ರಾಜ್ಯದ ಆರ್ಥಿಕ ಸಂಪನ್ಮೂಲ ಹೆಚ್ಚಾಗುತ್ತಿತ್ತು. ಇನ್ಫೋಸಿಸ್ ಕಂಪನಿ ನಮ್ಮ ರಾಜ್ಯದ ಮೂಲದ್ದು ಆದರೂ ಅದರ ಶಾಖೆ ಮೂಲ ಸೌಲಭ್ಯ ವಿಸ್ತರಣೆ ಇಲ್ಲದ ಕಾರಣಕ್ಕೆ ಆಂಧ್ರಕ್ಕೆ ಹೋಯಿತು. ಆಪಲ್ ಕಂಪನಿಯ ಸ್ಮಾರ್ಟ್ ಫೋನ್ ಕಂಪನಿಯೂ ಬೇರೆರಾಜ್ಯಕ್ಕೆ ಹೋಗುವಂತಾಗಿದೆ. ಇದರ ನಡುವೆ ಆಂಧ್ರದ ಸಿಎಂ ಚಂದ್ರಬಾಬು ನಾಯ್ಡು ಅವರ ಪುತ್ರ ಬೆಂಗಳೂರಿಗೆ ಹತ್ತಿರದಲ್ಲೇ ತಮ್ಮ ರಾಜ್ಯದಲ್ಲಿ ೮೦೦೦ ಚದರ ಅಡಿ ಜಾಗ ಹಾಗೂ ಮೂಲ ಸೌಕರ್ಯ ಮತ್ತು ತೆರಿಗೆ ವಿನಾಯಿತಿ ನೀಡುವುದಾಗಿ ತಿಳಿಸಿದ್ದಾರೆ. ಈ ಎಲ್ಲಾ ಕಾರಣದಿಂದ ಬೃಹತ್ ಕಂಪನಿಗಳು ಸ್ಥಳಾಂತರಗೊಳ್ಳುತ್ತಿವೆ. ರಾಜ್ಯ ಸರ್ಕಾರ ಎಚ್ಚರ ವಹಿಸದೇ ಇದ್ದಲ್ಲಿ ಕರ್ನಾಟಕಕ್ಕೆ ನಷ್ಟವಾಗಲಿದೆ ಎಂದರು.
ಬೆಲೆ ಏರಿಕೆ, ಬ್ರಷ್ಟಾಚಾರಗಳು ಸಾಧನೆ ಆಗುವುದಿಲ್ಲ ಎಂದು ಹೇಳಿದ ಸಿ.ಟಿ.ರವಿ, ಸಾಧನಾ ಸಮಾವೇಶಕ್ಕೆ ಮುಂದಾಗಿರುವ ಕಾಂಗ್ರೆಸ್ನ ಕಾಲೆಳೆದರು.
ಮೈಸೂರಿನಲ್ಲಿ ಕಾಂಗ್ರೆಸ್ ಸಾಧನಾ ಸಮೇವೇಶ ನಡೆಸಲು ಮುಂದಾಗಿದೆ. ಬೆಲೆ ಏರಿಕೆ, ಬ್ರಷ್ಟಾಚಾರ ಮಾಡದೆ ಪಂಚ ಗ್ಯಾರಂಟಿಗಳನ್ನು ಕೊಟ್ಟಿದ್ದರೆ ಸಾಧನೆ ಎಂದು ಒಪ್ಪಬಹುದಾಗಿತ್ತು. ಆದರೆ ಒಂದು ವರ್ಷದಲ್ಲಿ ರಾಜ್ಯ ಸರ್ಕಾರ ೧.೧೬ ಲಕ್ಷ ಕೋಟಿ ರೂ. ಸಾಲ ಮಾಡಿದೆ. ಸರ್ಕಾರದ ಮೇಲೆ ಒಟ್ಟು ಸಾಲ ೭.೩೨ ಲಕ್ಷ ಕೋಟಿ ರೂ. ಇದೆ ಇದು ಸಾಧನೆಯಾ ಎಂದು ಪ್ರಶ್ನಿಸಿದರು.
ಈ ನಡುವೆ ಕಾಂಗ್ರೆಸ್ ಉಸ್ತುವಾರಿ ಸುರ್ಜೇವಾಲ ಅವರು ಸಚಿವರ ಜಮೀರ್ ಅಹಮದ್ಗೆ ಭೇಷ್ ಎಂದಿದ್ದಾರೆ. ಅಂದರೆ ವಸತಿ ಯೋಜನೆಯಲ್ಲಿ ಭ್ರಷ್ಟಾಚಾರ ನಡೆದಿದೆ ಎನ್ನುವ ಕಾಂಗ್ರೆಸ್ ಶಾಸಕ ಬಿ.ಆರ್.ಪಾಟೀಲ ಅವರ ಆರೋಪಕ್ಕೆ ಭೇಷ್ ಎಂದಂತಾಗಿದೆ ಎಂದು ರವಿ ಟೀಕಿಸಿದರು.
ಧರ್ಮಸ್ಥಳ ಕ್ಷೇತ್ರದ ಮೇಲೆ ಜನತೆ ಶ್ರದ್ಧೆ, ಭಕ್ತಿ, ನಂಬಿಕೆ ಇಟ್ಟಿದ್ದಾರೆ. ಶ್ರೀಕ್ಷೇತ್ರವು ಗ್ರಾಮೀಣಾಭಿವೃದ್ಧಿ ಜೊತೆಗೆ ಭಕ್ತಿ ಮತ್ತು ಸಮಾನತೆಯನ್ನು ಗಟ್ಟಿಗೊಳಿಸುವ ಕೆಲಸ ಮಾಡುತ್ತಿದೆ. ಅದನ್ನು ಸಹಿಸದ ಕೆಲವರು ವ್ಯಾಪಕವಾಗಿ ಅಪಪ್ರಚಾರ ಮಾಡುತ್ತಾ ನಿಗೂಢ ರೀತಿಯಲ್ಲಿ ಧರ್ಮಸ್ಥಳದಲ್ಲಿ ಏನೋ ನಡೆದಿದೆ ಎಂದು ಬಿಂಬಿಸಲು ಹೊರಟಿದ್ದಾರೆ. ಜನರ ಭಕ್ತಿ ಭಾವವನ್ನು ದುರ್ಬಲಗೊಳಿಸುವ ಸಂಚಿನ ಭಾಗ ಇದಾಗಿದೆ ಎಂದು ದೂರಿದರು.
Doesn’t Minister Priyank Kharge know about the drug racket of his close aide…?