ಚಿಕ್ಕಮಗಳೂರು: ನಗರದ ಕೆಎಸ್ಆರ್ಟಿಸಿ ಬಸ್ ನಿಲ್ದಾಣಗಳಲ್ಲಿ ಸ್ವಚ್ಚತೆ ಇಲ್ಲದೆ ಕಸವನ್ನು ಎಲ್ಲೆಂದರಲ್ಲಿ ಹಾಕಿ ಪ್ರಯಾಣಿಕರಿಗೆ ತೊಂದರೆಯಾಗುತ್ತಿರುವ ಕುರಿತು ಸಾರಿಗೆ ಸಂಸ್ಥೆ ವಿಭಾಗೀಯ ನಿಯಂತ್ರಣಾಧಿಕಾರಿಗಳಿಗೆ ಸ್ವಚ್ಚತೆಗೆ ಆದ್ಯತೆ ನೀಡಬೇಕೆಂದು ಸೂಚನೆ ನೀಡಲಾಗಿದೆ ಎಂದು ವಿಧಾನ ಪರಿಷತ್ ಸದಸ್ಯ ಎಸ್.ಎಲ್. ಭೋಜೇಗೌಡ ತಿಳಿಸಿದರು.
ಅವರು ಕೆಎಸ್ಆರ್ಟಿಸಿ ಗ್ರಾಮಾಂತರ ಬಸ್ ನಿಲ್ದಾಣದಲ್ಲಿ ಕಸವನ್ನು ಹಾಕುವುದರ ಜೊತೆಗೆ ಸ್ವಚ್ಚತೆ ಕಾಪಾಡದಿರುವ ಬಗ್ಗೆ ಗುರುನಾಥ ವೃತ್ತದ ಬಿಎಂಶ್ರೀ ರಸ್ತೆ, ಶೆಟ್ರು ಬೀದಿಯಲ್ಲಿ ಫುಟ್ಪಾತ್ ಮೇಲೆ ವಸ್ತುಗಳನ್ನು ಇಟ್ಟು ನಾಗರೀಕರಿಗೆ ತೊಂದರೆ ಕೊಡುತ್ತಿರುವ ವರ್ತಕರ ವಿರುದ್ಧ ಕ್ರಮ ಕೈಗೊಳ್ಳುವಂತೆ ನಗರಸಭೆ ಅಧಿಕಾರಿಗಳಿಗೆ ಸೂಚನೆ ನೀಡಿ ಮಾತನಾಡಿದರು.
ನಗರದ ದಿನಸಿ, ತರಕಾರಿ, ಫ್ಯಾನ್ಸಿ ಸ್ಟೋರ್, ಬಟ್ಟೆ ಅಂಗಡಿ ಮುಂತಾದ ಅಂಗಡಿಗಳ ವರ್ತಕರು ಫುಟ್ಪಾತ್ ಮೇಲೆ ವಸ್ತುಗಳನ್ನು ಇಡುತ್ತಿರುವುದರಿಂದ ವಾಹನ ಸಂಚಾರಕ್ಕೆ ಮತ್ತು ನಾಗರೀಕರ ಓಡಾಟಕ್ಕೆ ತೊಂದರೆಯಾಗುತ್ತಿದೆ ಎಂದು ಹೇಳಿದರು.ವ್ಯಾಪಾರಕ್ಕೆ ತೊಂದರೆಯಾಗದಂತೆ ಚಿಕ್ಕ ರಸ್ತೆಯಲ್ಲಿ ಸುಗಮ ಸಂಚಾರಕ್ಕೆ ಅನುಕೂಲವಾಗುವುದನ್ನು ತೋರಿಸಿದ್ದು, ತರಕಾರಿ ಅಂಗಡಿಯವರು ಎಲ್ಲೆಂದರಲ್ಲಿ ಕಸವನ್ನು ಎಸೆಯುವುದರ ಬದಲು ಒಂದೆಡೆ ಗುಡ್ಡೆ ಹಾಕಿ ಅಥವಾ ಮೂಟೆಗೆ ತುಂಬಿಸಿದರೆ ಪೌರಕಾರ್ಮಿಕರಿಗೆ ಕೆಲಸ ಮಾಡಲು ಸುಗಮವಾಗಲಿದೆ ಎಂದು ಸಲಹೆ ನೀಡಿದರು.
ಭ್ರಷ್ಟಾಚಾರಕ್ಕೆ ಅವಕಾಶವಾಗದಂತೆ ನಗರಸಭೆಯವರು ಸಂಬಂಧಪಟ್ಟ ಅಂಗಡಿಗಳ ವರ್ತಕರಿಗೆ ನಿಗದಿತ ಸಮಯದಲ್ಲಿ ಪರವಾನಗಿ ನೀಡಿದರೆ ಅವರು ವ್ಯಾಪಾರ ವಹಿವಾಟು ನಡೆಸಲು ಸಹಾಯವಾಗುತ್ತದೆ. ವರ್ತಕರು ನಗರಸಭೆಯೊಂದಿಗೆ ಸಹಕರಿಸಿದಾಗ ಅಗತ್ಯ ಸೌಲಭ್ಯ ಕಲ್ಪಿಸಲಾಗುವುದು ಎಂದು ಭರವಸೆ ನೀಡಿದರು.
ನಗರಸಭೆ ನೂತನ ಅಧ್ಯಕ್ಷರ ನೇತೃತ್ವದಲ್ಲಿ ಸಂತೆ ಮಾರ್ಕೆಟ್ ಪರಿಶೀಲಿಸಿದಾಗ ಸ್ವಚ್ಚತೆ ಜೊತೆಗೆ ಕಟ್ಟೆಮೇಲಿಟ್ಟು ವ್ಯಾಪಾರ ಮಾಡುತ್ತಿದ್ದಾರೆ. ಈ ಸಂಬಂಧ ಮೂವರೂ ಶಾಸಕರೊಂದಿಗೆ ನಗರ ಪ್ರದಕ್ಷಿಣೆ ಹಾಕಿ ಮೂಲಭೂತ ಸೌಕರ್ಯಗಳ ಕೊರತೆ ಬಗ್ಗೆ ಪರಿಶೀಲನೆ ನಡೆಸಿ ಕ್ರಮವಹಿಸುವುದಾಗಿ ವಿಶ್ವಾಸ ವ್ಯಕ್ತಪಡಿಸಿದರು.
ನಗರಸಭಾಧ್ಯಕ್ಷೆ ಶೀಲಾ ದಿನೇಶ್ ಮಾತನಾಡಿ, ನಗರದ ವರ್ತಕರು ಸಾರ್ವಜನಿಕರಿಗೆ ತೊಂದರೆಯಾಗದಂತೆ ವ್ಯಾಪಾರ ನಡೆಸಬೇಕೆಂದು ಮನವಿ ಮಾಡಿದರು. ಸಾರಿಗೆ ಸಂಸ್ಥೆಯ ಎರಡೂ ಬಸ್ ನಿಲ್ದಾಣಗಳಲ್ಲಿ ಸ್ವಚ್ಚತೆ ಕಾಪಾಡಬೇಕು ಮತ್ತು ಅಂಗಡಿಗಳ ಮುಂದೆ ವಸ್ತುಗಳನ್ನು ಇಡದಂತೆ ಸೂಚನೆ ನೀಡಿರುವುದಾಗಿ ತಿಳಿಸಿದರು.
ನಗರಸಭೆ ಸದಸ್ಯ ಎ.ಸಿ. ಕುಮಾರ್ಗೌಡ ಮಾತನಾಡಿ, ನಗರದ ನಾಗರೀಕರ ಹಿತಾಸಕ್ತಿಯ ಹಿನ್ನೆಲೆಯಲ್ಲಿ ನಗರ ಸುಂದರ ಸ್ವಚ್ಚವಾಗಿರಬೇಕೆಂಬ ದೃಷ್ಟಿಕೋನದಲ್ಲಿ ವಿಧಾನ ಪರಿಷತ್ ಸದಸ್ಯರು, ನಗರಸಭಾಧ್ಯಕ್ಷರು, ಪೌರಾಯುಕ್ತರು, ಪೊಲೀಸ್ ಇಲಾಖೆ ಎಲ್ಲರೂ ಒಟ್ಟುಗೂಡಿ ರಸ್ತೆಬದಿ ವಸ್ತುಗಳನ್ನಿಡದಂತೆ ಸೂಚನೆ ನೀಡಿದ್ದು, ನಗರಸಭೆ ನಿಯಮಗಳನ್ನು ಉಲ್ಲಂಘಿಸುವ ವರ್ತಕರಿಗೆ ಕಡಕ್ ಸೂಚನೆ ನೀಡಲಾಗಿದೆ ಎಂದರು.
ಪೌರಾಯುಕ್ತ ಬಿ.ಸಿ. ಬಸವರಾಜ್ ಮಾತನಾಡಿ, ನಗರದ ವ್ಯಾಪ್ತಿಯಲ್ಲಿ ಸ್ವಚ್ಚತಾ ಆಂದೋಲನ ಕೈಗೊಂಡಿರುವ ಜೊತೆಗೆ ಫುಟ್ಪಾತ್ ಮೇಲಿನ ವಸ್ತುಗಳನ್ನು ತೆರವುಗೊಳಿಸುವ ಕಾರ್ಯ ಬಹಾಳ ಬಿರುಸಿನಿಂದ ನಡೆಯುತ್ತಿದೆ ಎಂದು ತಿಳಿಸಿದರು. ನಗರಸಭೆ ನಿಯಮಗಳನ್ನು ಉಲ್ಲಂಘಿಸಿ ವ್ಯಾಪಾರ ಮಾಡುತ್ತಿರುವ ವರ್ತಕರ ಮೇಲೆ ಮೊಕದ್ದಮೆ ದಾಖಲಿಸಿ ಕಾನೂನು ಕ್ರಮ ಕೈಗೊಂಡು ಪರವಾನಗಿ ರದ್ದುಪಡಿಸಿ ಅಂಗಡಿ ಬಂದ್ ಮಾಡುವುದಾಗಿ ಎಚ್ಚರಿಸಿದರು.
Instructions to maintain cleanliness at transport bus stops