ಚಿಕ್ಕಮಗಳೂರು: ಕಳೆದ ಎರಡು ವಾರದಿಂದ ನಗರದ ಸಂತೆ ಮಾರುಕಟ್ಟೆ ಸ್ವಚ್ಚತೆ ಹಾಗೂ ವರ್ತಕರಲ್ಲಿ ಜಾಗೃತಿ ಮೂಡಿಸಿದ ಪರಿಣಾಮ ಇಂದು ನಾಗರೀಕರು ಸಂತಸದಿಂದ ವ್ಯಾಪಾರ ಮಾಡಲು ಅನುಕೂಲವಾಗಿದೆ ಎಂದು ನಗರಸಭಾ ಪೌರಾಯುಕ್ತ ಬಿ.ಸಿ. ಬಸವರಾಜ್ ತಿಳಿಸಿದರು.
ಅವರು ಇಂದು ಸಂತೆ ಮಾರ್ಕೆಟ್ಗೆ ಭೇಟಿನೀಡಿ ಸಂತೆಯಲ್ಲಿ ಸ್ವಚ್ಚತೆ ಕಾಪಾಡುವಂತೆ ವರ್ತಕರಿಗೆ ಸೂಚನೆ ನೀಡಿ ಗ್ರಾಹಕರಿಗೆ ಅರಿವು ಮೂಡಿಸಿ ನಂತರ ಸುದ್ದಿಗಾರರೊಂದಿಗೆ ಮಾತನಾಡಿ ಎಲ್ಲಾ ವರ್ತಕರು ಪ್ರತೀ ವಾರ ಇದೇ ರೀತಿ ವ್ಯಾಪಾರ ವಹಿವಾಟು ನಡೆಸಬೇಕೆಂದು ಸೂಚನೆ ನೀಡಿದ ಅವರು, ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಬಂದು ತರಕಾರಿ ಮುಂತಾದ ಅಗತ್ಯ ವಸ್ತುಗಳನ್ನು ಖರೀದಿಸಬೇಕೆಂದು ಮನವಿ ಮಾಡಿದರು.
ನಗರದಲ್ಲಿ ಪ್ಲಾಸ್ಟಿಕ್ ಸಂಪೂರ್ಣ ನಿಷೇಧ ಮಾಡಿದ್ದು, ಸಂತೆ ಮಾರುಕಟ್ಟೆಯಲ್ಲಿ ಅಲ್ಲಲ್ಲಿ ಪ್ಲಾಸ್ಟಿಕ್ನ್ನು ವರ್ತಕರು ಇಟ್ಟುಕೊಂಡು ವ್ಯಾಪಾರ ಮಾಡುತ್ತಿರುವುದು ಕಂಡುಬರುತ್ತಿದ್ದು, ಗ್ರಾಹಕರು ಬಟ್ಟೆ ಬ್ಯಾಗ್ಗಳನ್ನು ತರುವ ಮೂಲಕ ನಗರಸಭೆಯೊಂದಿಗೆ ಸಹಕರಿಸಬೇಕೆಂದು ವಿನಂತಿಸಿದರು.
ಶುದ್ಧಗಂಗಾ ಕುಡಿಯುವ ನೀರಿನ ಘಟಕ ಹಾಗೂ ಶೌಚಾಲಯ ನಿರ್ಮಿಸಬೇಕೆಂಬ ವರ್ತಕರು ಹಾಗೂ ಸಾರ್ವಜನಿಕರ ಬೇಡಿಕೆಗನುಗುಣವಾಗಿ ಮಾರುಕಟ್ಟೆಯಲ್ಲಿ ಹಾಲಿ ಇರುವುದರ ಜೊತೆಗೆ ಶುದ್ಧಗಂಗಾ ಕುಡಿಯುವ ನೀರಿನ ಘಟಕವನ್ನು ನಗರಸಭೆಯಲ್ಲಿ ಅನುಮೋದನೆ ಪಡೆದು ಇನ್ನೊಂದು ತಿಂಗಳಲ್ಲಿ ನಿರ್ಮಾಣ ಮಾಡುವುದಾಗಿ ಭರವಸೆ ನೀಡಿದರು.
ಬೀದಿಬದಿ ವ್ಯಾಪಾರಿಗಳಿಗೆ ಹಾಗೂ ತಳ್ಳುವ ಗಾಡಿಗಳಲ್ಲಿ ವ್ಯಾಪಾರ ನಡೆಸುತ್ತಿರುವವರ ಅನುಕೂಲಕ್ಕಾಗಿ ಮಯೂರ ಹೋಟೆಲ್ ಹಿಂಭಾಗದ ಕಟ್ಟೆ ನಿರ್ಮಿಸಿದ್ದು, ತಾತ್ಕಾಲಿಕವಾಗಿ ಮಾರುಕಟ್ಟೆ ನಿರ್ಮಾಣ ಮಾಡಲಾಗಿದೆ. ದಿನದ ೨೪ ಗಂಟೆ ಇಲ್ಲಿಯೇ ವ್ಯಾಪಾರ ಮಾಡಬೇಕೆಂದು ಸೂಚನೆ ನೀಡಿದರು.
ನಗರಸಭೆ ಸದಸ್ಯೆ ಸಿ.ಎನ್ ಸಲ್ಮಾ ಮಾತನಾಡಿ, ನಗರಸಭೆಯ ನಿರ್ಧಾರದಿಂದಾಗಿ ಸಂತೆ ಮಾರುಕಟ್ಟೆ ಸ್ವಚ್ಚತೆಯಿಂದ ಕೂಡಿದ್ದು, ವರ್ತಕರು ಮತ್ತು ನಾಗರೀಕರು ಇದೇ ರೀತಿ ಸಹಕರಿಸಬೇಕೆಂದು ಮನವಿ ಮಾಡಿದರು. ಈ ಸಂದರ್ಭದಲ್ಲಿ ಆರೋಗ್ಯ ನಿರೀಕ್ಷಕರಾದ ಈಶ್ವರ್, ಅಣ್ಣಯ್ಯ ಇತರರು ಉಪಸ್ಥಿತರಿದ್ದರು.
Instructions to maintain cleanliness in the market