ಚಿಕ್ಕಮಗಳೂರು: ಬಾಲ್ಯವಿವಾಹ ತಡೆಯಲು ಹಾಗೂ ಈ ಕುರಿತು ಜನಜಾಗೃತಿ ಮೂಡಿಸುವಲ್ಲಿ ಸ್ತ್ರೀಶಕ್ತಿ ಸ್ವ-ಸಹಾಯ ಸಂಘಗಳ ಪಾತ್ರ ಹಿರಿದು ಎಂದು ನಗರಸಭೆ ಪೌರಾಯುಕ್ತ ಬಿ.ಸಿ. ಬಸವರಾಜ್ ಕರೆ ನೀಡಿದರು.
ಅವರು ಇಂದು ಅಂಬೇಡ್ಕರ್ ಭವನದಲ್ಲಿ ಆಯೋಜಿಸಲಾಗಿದ್ದ ಸ್ವ-ಸಹಾಯ ಸಂಘಗಳ ಮಹಿಳೆಯರಿಗೆ ವಿವಾಹ ನೋಂದಣಿ ಬಗ್ಗೆ ಜಾಗೃತಿ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿ ೧೮ ವರ್ಷ ತುಂಬುವ ಮುನ್ನವೇ ಹೆಣ್ಣುಮಕ್ಕಳಿಗೆ ಹಾಗೂ ೨೧ ವರ್ಷ ತುಂಬುವ ಮೊದಲು ಪುರುಷರಿಗೆ ವಿವಾಹ ಮಾಡುತ್ತಿರುವ ಬಗ್ಗೆ ನಾಗರೀಕರಲ್ಲಿ ಜಾಗೃತಿ ಮೂಡಿಸಬೇಕು. ಸರ್ಕಾರ ನಿಗದಿಪಡಿಸಿರುವ ವಯಸ್ಸಿನ ಮುನ್ನ ಮದುವೆ ಮಾಡಿದರೆ ಅಂಗವಿಕಲ ಮಕ್ಕಳು ಜನಿಸುತ್ತಾರೆ. ಕಠಿಣ ಕಾನೂನು ಕ್ರಮವನ್ನು ಎದುರಿಸಬೇಕಾಗುತ್ತದೆ ಎಂಬ ತಿಳಿವಳಿಕೆಯನ್ನು ನೀಡಬೇಕಾಗಿದೆ ಎಂದರು.
ಈ ಸಂಬಂಧ ತಮ್ಮ ವಾರ್ಡಿನಲ್ಲಿ ಬಾಲ್ಯವಿವಾಹವಾಗಿದ್ದರೆ ಅಂತವರಿಗೆ ಜಾಗೃತಿ ಮೂಡಿಸಿ ಹಿರಿಯರು ಮಾಡಿದ ತಪ್ಪಿನಿಂದ ಜೀವನವಿಡೀ ನೋವನ್ನು ಅನುಭವಿಸಬೇಕಾಗುತ್ತದೆ ಎಂದು ಎಚ್ಚರಿಸಿ ಜಿಲ್ಲೆಯ ಬೇರೆ ತಾಲ್ಲೂಕುಗಳಲ್ಲಿ ಸ್ತ್ರೀಶಕ್ತಿ ಸ್ವ-ಸಹಾಯ ಸಂಘಗಳು ಕ್ರಿಯಾಶೀಲವಾಗಿ ಚಟುವಟಿಕೆ ನಡೆಸುತ್ತಿವೆ. ಆದರೆ, ಜಿಲ್ಲಾ ಕೇಂದ್ರದಲ್ಲಿರುವ ಸಂಘಗಳು ನಿಷ್ಕ್ರಿಯವಾಗಿ ಆಸಕ್ತಿ ವಹಿಸುತ್ತಿಲ್ಲ ಎಂದು ವಿಷಾಧ ವ್ಯಕ್ತಪಡಿಸಿದರು.
ಜಿಲ್ಲಾಧಿಕಾರಿಗಳ ಕಛೇರಿಯಿಂದ ಪ್ರತೀ ಸ್ಥಳೀಯ ಸಂಸ್ಥೆಗಳಿಗೆ ಸ್ತ್ರೀಶಕ್ತಿ ಸಂಘಗಳಲ್ಲಿ ಉತ್ತಮವಾಗಿ ಕೆಲಸ ಮಾಡುವ ಎಸ್ಎಸ್ಎಲ್ಸಿ ಉತ್ತೀರ್ಣರಾದವರನ್ನು ಕಮ್ಯುನಿಟಿ ಮೊಬೈಲೈಸರ್ ಎಂದು ಆಯ್ಕೆಮಾಡಲು ೨೩ ಹುದ್ದೆಗಳಿಗೆ ಅರ್ಜಿ ಆಹ್ವಾನಿಸಿದರೆ ಕೇವಲ ೨೦ ಜನ ಅರ್ಜಿ ಹಾಕಿದ್ದೀರಿ ಎಂದರು.
ಈಗಾಗಲೇ ೧೫೦ ಕ್ಕೂ ಹೆಚ್ಚು ಸಂಘಗಳಿದ್ದು, ಅದರಲ್ಲಿ ಎಸ್ಎಸ್ಎಲ್ಸಿ ಉತ್ತೀರ್ಣರಾಗಿರುವವರು ಇಲ್ಲವೇ ಎಂದು ಪ್ರಶ್ನಿಸಿದ ಅವರು, ತಿಂಗಳಿಗೆ ೨೦ ಸಾವಿರ ವೇತನ ಸಿಗುವ ಈ ಹುದ್ದೆ ಜೊತೆಗೆ ನಗರಸಭೆಯೊಂದಿಗೆ ಒಡನಾಟ ಇಟ್ಟುಕೊಳ್ಳಬಹುದು. ಆರ್ಥಿಕ ಅಭಿವೃದ್ಧಿಯಾಗಬೇಕೆಂಬ ಆಸಕ್ತಿ ಇಲ್ಲವೇ ಎಂದು ಹೇಳಿದರು.
ಸಾಮಾಜಿಕವಾಗಿ ಸಾರ್ವಜನಿಕರೊಟ್ಟಿಗೆ ಬೆರೆಯುವ ಜೊತೆಗೆ ನಗರಸಭೆಯಿಂದ ಮನೆ ಕಸ ಬಿಲ್, ಮನೆ ಕಂದಾಯ, ನೀರಿನ ಕರ ವಸೂಲಿ ಸೇರಿದಂತೆ ಮತ್ತಿತರ ಕೆಲಸಗಳಿಗೆ ಸ್ತ್ರೀಶಕ್ತಿ ಸಂಘಗಳಿಂದ ಅರ್ಜಿ ಆಹ್ವಾನಿಸಿದರೆ ಕೇವಲ ೮ ಅರ್ಜಿಗಳು ಬಂದಿವೆ ಎಂದು ಹೇಳಿದರು.
ಈ ಸಂದರ್ಭದಲ್ಲಿ ಕೌಶಲ್ಯಾಭಿವೃದ್ಧಿ ಇಲಾಖೆಯ ಅಧಿಕಾರಿ ಶಿವಲಿಂಗಯ್ಯ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಬಿಂದ್ಯಾ, ನಗರಸಭೆ ಸಿಬ್ಬಂದಿಗಳಾದ ಕಲಾವತಿ ಚಂದ್ರಶೇಖರ್ ಉಪಸ್ಥಿತರಿದ್ದರು
Public awareness is needed to prevent child marriage