ಚಿಕ್ಕಮಗಳೂರು: ಮಾನಸಿಕ ಮತ್ತು ಮಾದಕ ವ್ಯಸನಿಗಳು ನಾನಾ ಕಾರಣಗಳಿಗಾಗಿ ಆತ್ಮಹತ್ಯೆ ಮಾಡಿಕೊಳ್ಳಬೇಕೆಂಬ ನಿರ್ಧಾರಕ್ಕೆ ಬರುತ್ತಿದ್ದಾರೆ. ಇದು ಬದಲಾಗುವ ಮನಸ್ಥಿತಿ ಬರಬೇಕು ಎಂದು ಹಿರಿಯ ಸಿವಿಲ್ ನ್ಯಾಯಾಧೀಶರು ಹಾಗೂ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿಗಳಾದ ವಿ.ಹನುಮಂತಪ್ಪ ಹೇಳಿದರು.
ಅವರು ಇಂದು ಜಿಲ್ಲಾಡಳಿತ, ಜಿ.ಪಂ, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಆರಕ್ಷಕ ಇಲಾಖೆ, ವಾರ್ತಾ ಇಲಾಖೆ, ಜಿಲ್ಲಾ ಮಾನಸಿಕ ಆರೋಗ್ಯ ಕಾರ್ಯಕ್ರಮ, ಯುವ ರೆಡ್ಕ್ರಾಸ್ ಘಟಕ, ಐಡಿಎಸ್ಜಿ ಸರ್ಕಾರಿ ಕಾಲೇಜು ಇವರುಗಳ ಸಂಯುಕ್ತಾಶ್ರಯದಲ್ಲಿ ಏರ್ಪಡಿಸಲಾಗಿದ್ದ ‘ವಿಶ್ವ ಆತ್ಮಹತ್ಯೆ ತಡೆ ದಿನಾಚರಣೆ-೨೦೨೫’ ನ್ನು ಉದ್ಘಾಟಿಸಿ ಮಾತನಾಡಿದರು.
ಜೀವನ ಜಿಗುಪ್ಸೆಯಾದಾಗ, ಜೂಜಿನಲ್ಲಿ ಹಣ ಕಳೆದುಕೊಂಡಾಗ, ಪ್ರೀತಿಸಿದವರು ಕೈಕೊಟ್ಟಾಗ ಬೇಸರ, ಪರೀಕ್ಷೆಯಲ್ಲಿ ಅನುತ್ತೀರ್ಣರಾದಾಗ ದುಃಖಿತರಾಗಿ ಆತ್ಮಹತ್ಯೆ ಆಲೋಚನೆಗಳು ಮೂಡುತ್ತವೆ. ಇಂತಹ ಸಂದರ್ಭದಲ್ಲಿ ಕಾನೂನು ಮತ್ತು ಆರೋಗ್ಯ ಇಲಾಖೆ ಜನರಲ್ಲಿ ಆತ್ಮಸ್ಥೈರ್ಯ ತುಂಬಬೇಕಾಗಿದೆ ಎಂದರು.
ಕಾನೂನು ಸೇವಾ ಪ್ರಾಧಿಕಾರ ಈ ರೀತಿಯ ಪ್ರಕರಣಗಳ ಬಗ್ಗೆ ಹೆಚ್ಚು ಪರಿಣಾಮಕಾರಿಯಾಗಿ ಮನಃಪರಿವರ್ತನೆ ಮಾಡುವ ಉದ್ದೇಶ ಹೊಂದಿದೆ. ಮಾನಸಿಕ ವ್ಯಕ್ತಿಗಳನ್ನು ಪತ್ತೆಹಚ್ಚಿ ಸೂಕ್ತ ಚಿಕಿತ್ಸೆ ನೀಡುವ ಯೋಜನೆಯೂ ಇದರಲ್ಲಿದೆ ಎಂದು ಹೇಳಿದರು.
ಮಾನಸಿಕ ವೇದನೆ ಅನುಭವಿಸುತ್ತಿರುವ ವ್ಯಕ್ತಿಗಳಿಗೆ ಅವರ ಕುಟುಂಬಗಳೇ ಸ್ಪಂದಿಸುತ್ತಿಲ್ಲದಿರುವುದು ಇದಕ್ಕೆ ಕಾರಣ. ಇನ್ನಾದರೂ ಸಂಬಂಧಪಟ್ಟವರು ಆಸ್ಪತ್ರೆಗಳಲ್ಲಿ ಚಿಕಿತ್ಸೆ ಕೊಡಿಸುವ ಮೂಲಕ ಅವರು ನಮ್ಮಂತೆ ಸಮಾನರು ಎಂದು ಅವರ ನೆರವಿಗೆ ಧಾವಿಸಬೇಕೆಂದು ಮನವಿ ಮಾಡಿದರು.
ದೇಶದಲ್ಲಿ ನಾನಾ ಕಾರಣಗಳಿಂದ ವಾರ್ಷಿಕ ಒಂದು ಲಕ್ಷಕ್ಕೂ ಹೆಚ್ಚು ಜನ ಆತ್ಮಹತ್ಯೆ ಮಾಡಿಕೊಳ್ಳುತ್ತಿರುವುದನ್ನು ತಡೆಯುವ ನಿಟ್ಟಿನಲ್ಲಿ ಸರ್ವರ ಪ್ರಯತ್ನದ ಅವಶ್ಯಕತೆ ಇದೆ ಎಂದು ಹೇಳಿದರು.
ಆತ್ಮಹತ್ಯೆ ಮಾಡಿಕೊಳ್ಳುವ ಮನಸ್ಥಿತಿಯವರು ಕಂಡಾಗ ಸಹಾಯವಾಣಿ ಸಂಖ್ಯೆ-೧೫೧೦೦ ಗೆ ದೂರವಾಣಿ ಕರೆಮಾಡಿ ತಿಳಿಸಬಹುದಾಗಿದ್ದು, ಕಾನೂನು ಸಮಸ್ಯೆಗೆ ಸಂಬಂಧಿಸಿದ ಈ ದೂರವಾಣಿ ಸಂಖ್ಯೆ ದಿನದ ೨೪ ಗಂಟೆ ಮುಕ್ತವಾಗಿರುತ್ತದೆ ಎಂದರು.
ಮಕ್ಕಳ ಸಹಾಯವಾಣಿ ಸಂಖ್ಯೆ-೧೦೫೮ ಹಾಗೂ ಮಹಿಳೆಯರು ೧೧೨ ಗೆ ಕರೆಮಾಡಿ ತೊಂದರೆಯಲ್ಲಿರುವ ಬಗ್ಗೆ ಖಚಿತಪಡಿಸಬೇಕೆಂದು ವಿನಂತಿಸಿದರು.
೧೫ ವರ್ಷಕ್ಕಿಂತ ಕಡಿಮೆ ಇರುವ ಯುವತಿಯರ ಮೇಲೆ ಲೈಂಗಿಕ ದೌರ್ಜನ್ಯವಾದರೆ ಪೋಕ್ಸೋ ಕಾಯ್ದೆಯಡಿ ಪ್ರಕರಣ ದಾಖಲು ಮಾಡಲು ಅವಕಾಶವಿದ್ದು, ಯುವಕರು ಬಾಲಕಿಯರನ್ನು ಪ್ರೀತಿ ಮಾಡುತ್ತಿದ್ದರೆ ಕೂಡಲೇ ನಿಲ್ಲಿಸಬೇಕು. ಇಲ್ಲದಿದ್ದರೆ ಹೈಟೆನ್ಸನ್ ವೈರ್ ಹಿಡಿದಂತೆ ಎಂದು ಎಚ್ಚರಿಸಿದರು.
ಡಾ. ವಿನಯ್ಕುಮಾರ್ ಪ್ರಾಸ್ತಾವಿಕವಾಗಿ ಮಾತನಾಡಿ, ಸೆ.೧೦ ನೇ ದಿನದಂದು ವಿಶ್ವ ಆತ್ಮಹತ್ಯೆ ತಡೆ ದಿನಾಚರಣೆಯನ್ನು ಆಚರಿಸಿಕೊಂಡು ಬರುತ್ತಿದ್ದು, ನಾನಾ ಕಾರಣಗಳಿಂದ ಲಕ್ಷಾಂತರ ಜನರು ಸಾವಿಗೀಡಾಗುತ್ತಿದ್ದಾರೆ ಎಂದು ಮಾಹಿತಿ ನೀಡಿದರು.
ಪ್ರತೀ ವರ್ಷ ಜೀವನ ಜಿಗುಪ್ಸೆ, ಮಾದಕ ವ್ಯಸನ ಮುಂತಾದ ಕಾರಣಗಳಿಂದಾಗಿ ೧.೬೩ ಲಕ್ಷ ಜನ ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದು, ಇದನ್ನು ತಡೆಯಲು ೧೪೪೧೬ ಸಹಾಯವಾಣಿ ಸಂಖ್ಯೆಗೆ ದೂರು ಸಲ್ಲಿಸಬಹುದಾಗಿದೆ ಎಂದು ಮನವಿ ಮಾಡಿದರು.
ಕಾರ್ಯಕ್ರಮದಲ್ಲಿ ಡಾ. ಶಶಿಕಲಾ, ಡಾ. ಮಂಜುನಾಥ್, ಡಾ. ಬಾಲಕೃಷ್ಣ, ಡಾ. ಸೀಮಾ ಮತ್ತಿತರರು ಭಾಗವಹಿಸಿದ್ದರು. ವೈದ್ಯಕೀಯ ವಿಜ್ಞಾನ ಸಂಸ್ಥೆಯ ಚಿಕಿತ್ಸಾ ಮನೋಶಾಸ್ತ್ರಜ್ಞ ಹೆಚ್.ಪಿ ಸತೀಶ್ ಉಪನ್ಯಾಸ ನೀಡಿದರು.
ಅಧ್ಯಕ್ಷತೆಯನ್ನು ಐಡಿಎಸ್ಜಿ ಕಾಲೇಜು ಪ್ರಾಂಶುಪಾಲರಾದ ತಸ್ನಿಮ ಕೌಸರ್ ವಹಿಸಿದ್ದರು. ಮೊದಲಿಗೆ ಯುವ ರೆಡ್ಕ್ರಾಸ್ ಘಟಕದ ಸಂಚಾಲಕ ಡಾ. ಎಂ.ಲೋಕೇಶ್ ಸ್ವಾಗತಿಸಿ, ಆರೋಗ್ಯ ಶಿಕ್ಷಣಾಧಿಕಾರಿ ಬೇಬಿ ವಂದಿಸಿದರು. ಡಿಹೆಚ್ಇಓ ಲಲಿತಾ ನಿರೂಪಿಸಿದರು.
Suicide mindset needs to change for various reasons