ಚಿಕ್ಕಮಗಳೂರು: ಈ ವರ್ಷ ಪ್ರಧಾನ ಮಂತ್ರಿಗಳ ಕಿರು ಆಹಾರ ಸಂಸ್ಕರಣಾ ಉದ್ದಿಮೆಗಳ ಐದು ಸಾವಿರ ಘಟಕಗಳು ರಾಜ್ಯದಲ್ಲಿ ರೂಪುಗೊಳ್ಳಬೇಕೆಂಬ ಗುರಿಯನ್ನು ಹೊಂದಿರುವುದಾಗಿ ಕೃಷಿ ಸಚಿವ ಎನ್.ಚೆಲುವರಾಯಸ್ವಾಮಿ ತಿಳಿಸಿದರು.
ಕೇಂದ್ರದ ಆಹಾರ ಸಂಸ್ಕರಣಾ ಸಚಿವಾಲಯ, ರಾಜ್ಯ ಕೃಷಿ ಉತ್ಪನ್ನಗಳ ಸಂಸ್ಕರಣೆ ರಫ್ತು ನಿಗಮ, ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ ಹಾಗೂ ಕೃಷಿ ಇಲಾಖೆಯ ಆಶ್ರಯದಲ್ಲಿ ನಗರದ ಜಿಲ್ಲಾ ಪಂಚಾಯಿತಿಯ ಅಬ್ದುಲ್ ನಜೀರ್ಸಾಬ್ ಸಭಾಂಗಣದಲ್ಲಿ ಇಂದು ಪ್ರಧಾನ ಮಂತ್ರಿಗಳ ಕಿರು ಆಹಾರ ಸಂಸ್ಕರಣಾ ಉದ್ದಿಮೆಗಳ ನಿಯಮಬದ್ಧಗೊಳಿಸುವಿಕೆ ಯೋಜನೆ ಅರಿವು ಮೂಡಿಸುವ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಕಳೆದ ಐದು ವರ್ಷಗಳಲ್ಲಿ ಕಿರು ಆಹಾರ ಸಂಸ್ಕರಣಾ ಉದ್ದಿಮೆಗಳ ಆರು ಸಾವಿರ ಘಟಕಗಳು ಈಗಾಗಲೇ ಕಾರ್ಯ ನಿರ್ವಹಿಸುತ್ತಿವೆ. ಆದರೆ ರಾಜ್ಯ ಸರ್ಕಾರ ಈ ಒಂದೇ ವರ್ಷದಲ್ಲಿ ಹೆಚ್ಚುವರಿಯಾಗಿ ೫ ಸಾವಿರ ಘಟಕಗಳ ಗುರಿಯನ್ನು ಹೊಂದಿದೆ. ನಮ್ಮದು ಶೇ. ೬೦ ರಿಂದ ೭೦ ರಷ್ಟು ಕೃಷಿ ಪ್ರಧಾನವಾದ ರಾಷ್ಟ್ರ. ಈ ಕಾರಣಕ್ಕಾಗಿಯೇ ಈ ಘಟಕಗಳ ಆರಂಭಕ್ಕೆ ರಾಜ್ಯ ಸರ್ಕಾರ ಹೆಚ್ಚು ಒತ್ತು ನೀಡುತ್ತಿದೆ. ಈ ಯೋಜನೆಗೆ ಇಡೀ ರಾಷ್ಟ್ರದಲ್ಲಿ ಕೇಂದ್ರದಿಂದ ಶೇ.೬೦ ಹಾಗೂ ರಾಜ್ಯದಿಂದ ಶೇ.೪೦ ರಷ್ಟು ಪಾಲನ್ನು ನೀಡುತ್ತಿದ್ದರೆ, ನಮ್ಮ ರಾಜ್ಯದಲ್ಲಿ ಮಾತ್ರ ಕೇಂದ್ರ ಸರ್ಕಾರದಿಂದ ಶೇ.೪೦ ಹಾಗೂ ರಾಜ್ಯ ಸರ್ಕಾರದಿಂದ ಶೇ.೬೦ ರಷ್ಟು ಪಾಲನ್ನು ನೀಡಲಾಗುತ್ತಿದೆ. ಕೃಷಿಕರಿಗೆ ಈ ಸರ್ಕಾರ ಎಷ್ಟು ಮನ್ನಣೆ ನೀಡುತ್ತಿದೆ ಎಂಬುದನ್ನು ಇದರಿಂದ ಅರ್ಥಮಾಡಿಕೊಳ್ಳಬಹುದು ಎಂದರು.
ರಾಜ್ಯದಲ್ಲಿ ಘಟಕ ಆರಂಭಿಸಲು ಈಗಾಗಲೇ ೫ ಸಾವಿರ ಅರ್ಜಿಗಳು ಬಂದಿದ್ದರೆ, ಈ ಜಿಲ್ಲೆಯಲ್ಲಿ ೩೫೬ ಅರ್ಜಿಗಳು ಬಂದಿವೆ. ಹೊಸ ಘಟಕಗಳನ್ನು ಸ್ಥಾಪಿಸಲು ನೀಡುವ ಸಾಲಕ್ಕೆ ಸಿಬಿಲ್ ಸ್ಕೋರ್ ಅನ್ವಯಿಸುವುದಿಲ್ಲ. ಬ್ಯಾಂಕ್ಗಳು ಜಾಮೀನು ರಹಿತವಾಗಿ ಹೊಸ ಉದ್ದಿಮೆ ಸ್ಥಾಪಿಸುವ ಕೃಷಿಕರಿಗೆ ಸಾಲ ಒದಗಿಸಬೇಕು. ಈ ನಿಟ್ಟಿನಲ್ಲಿ ಜಿಲ್ಲಾಧಿಕಾರಿಗಳು ಬ್ಯಾಂಕರ್ಸ್ಗಳ ಸಭೆ ಕರೆದು ಸೂಕ್ತ ಸೂಚನೆ ನೀಡುವಂತೆ ತಿಳಿಸುವುದಾಗಿ ಹೇಳಿದರು.
ಬದುಕಿಗೋಸ್ಕರ ಶಿಕ್ಷಣ ಪಡೆಯುವುದಾಗಬಾರದು. ಶಿಕ್ಷಣ ಜ್ಞಾನ ಸಂಪಾದನೆಗಾಗಿ ಮತ್ತು ಇಂದಿನ ವಿದ್ಯಮಾನಗಳನ್ನರಿತು ವಿಚಾರ ವಿನಿಮಯ ಮಾಡಲು, ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳಲು ಶಿಕ್ಷಣ ಪಡೆಯಬೇಕು. ವಿದ್ಯಾರ್ಥಿ ಜೀವನ ಮುಗಿದ ಬಳಿಕ ಕಂಪನಿಗಳು, ಸಚಿವರು, ಶಾಸಕರ ಮನೆಯ ಕದ ತಟ್ಟುವುದು ಸೂಕ್ತವಲ್ಲ. ಕೃಷಿ ಆಧಾರಿತ ಉದ್ಯಮವನ್ನು ಅವಲಂಬಿಸಿದರೆ ಆರ್ಥಿಕವಾಗಿ ಸದೃಢರಾಗಬಹುದು. ಇತರರಿಗೂ ಉದ್ಯೋಗಾವಕಾಶವನ್ನು ಕಲ್ಪಿಸಬಹುದು ಎಂದು ತಿಳಿಸಿದರು.
ಮಹಿಳೆಯರಿಗೆ, ಕೃಷಿಕರಿಗೆ ಬಡ್ಡಿ ಇಲ್ಲದ ಸಾಲ ನೀಡಲಾಗುತ್ತಿದೆ. ಆದರೆ ಈ ಬಡ್ಡಿಯನ್ನು ನಮ್ಮ ಸರ್ಕಾರ ಪೂರ್ಣ ಪ್ರಮಾಣದಲ್ಲಿ ಭರಿಸುತ್ತಿದೆ. ಪಂಚ ಗ್ಯಾರಂಟಿ ಯೋಜನೆಗಳ ಅನುಷ್ಠಾನದ ನಡುವೆ ಶಿಕ್ಷಣ ಇಲಾಖೆಯಿಂದ ಮಕ್ಕಳಿಗೆ ನೀಡುವ ಕಾರ್ಯಕ್ರಮ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ, ಸಮಾಜ ಕಲ್ಯಾಣ ಇಲಾಖೆ, ಕೃಷಿ ಇಲಾಖೆ ಮತ್ತಿತರ ಇಲಾಖೆಗಳ ಕಾರ್ಯಕ್ರಮವನ್ನು ಹೆಚ್ಚು ಮಾಡಿದ್ದೇವೆಯೇ ಹೊರತು ನಿಲ್ಲಿಸಿಲ್ಲ. ಅಭಿವೃದ್ಧಿ ಕಾರ್ಯಗಳಿಗೆ ಸಮಸ್ಯೆಯಾಗದಂತೆ ನೋಡಿಕೊಂಡು ಎರಡು ವರ್ಷದಲ್ಲಿ ಗ್ಯಾರಂಟಿ ಯೋಜನೆಗೆ ೯೦ ಸಾವಿರ ಕೋಟಿ ರೂ.ಗಳನ್ನು ನೀಡಲಾಗಿದೆ ಎಂದು ತಿಳಿಸಿದರು.
ಕ್ರೆಡಿಲ್ ಅಧ್ಯಕ್ಷರು ಹಾಗೂ ಶಾಸಕರಾದ ಟಿ.ಡಿ.ರಾಜೇಗೌಡ, ವಿಧಾನ ಪರಿಷತ್ ಸದಸ್ಯರಾದ ಎಸ್.ಎಲ್.ಭೋಜೇಗೌಡ, ಅಧ್ಯಕ್ಷತೆ ವಹಿಸಿದ್ದ ಶಾಸಕರಾದ ಹೆಚ್.ಡಿ.ತಮ್ಮಯ್ಯ, ಕ.ರಾ.ಕೃಷಿ ಉತ್ಪನ್ನ ಸಂಸ್ಕರಣೆ ಮತ್ತು ರಫ್ತು ನಿಗಮದ ಅಧ್ಯಕ್ಷರಾದ ಬಿ.ಹೆಚ್.ಹರೀಶ್ ಮಾತನಾಡಿದರು. ಭದ್ರಾ ಕಾಡಾ ಅಧ್ಯಕ್ಷರಾದ ಡಾ.ಕೆ.ಪಿ.ಅಂಶುಮಂತ್, ಜಿಲ್ಲಾ ಗ್ಯಾರಂಟಿ ಅನುಷ್ಠಾನ ಪ್ರಾಧಿಕಾರದ ಅಧ್ಯಕ್ಷ ಎಂ.ಸಿ.ಶಿವಾನಂದಸ್ವಾಮಿ, ಹಾಪ್ಕಾಮ್ಸ್ ಅಧ್ಯಕ್ಷ ಕುಮಾರಸ್ವಾಮಿ, ಕೃಷಿಕ ಸಮಾಜದ ಅಧ್ಯಕ್ಷ ಡಿ.ಎಲ್.ಅಶೋಕ್ಕುಮಾರ್, ನಗರಸಭೆ ಅಧ್ಯಕ್ಷೆ ಶೀಲಾ ದಿನೇಶ್, ಉಪಾಧ್ಯಕ್ಷೆ ಲಲಿತಾಬಾಯಿ, ಕ.ರಾ.ಕೃಷಿ ಉತ್ಪನ್ನ ಸಂಸ್ಕರಣೆ ಮತ್ತು ರಫ್ತು ನಿಗಮದ ವ್ಯವಸ್ಥಾಪಕ ನಿರ್ದೇಶಕ ಶಿವಪ್ರಕಾಶ್, ಜಿಲ್ಲಾಧಿಕಾರಿ ಸಿ.ಎನ್.ಮೀನಾ ನಾಗರಾಜ್, ಜಿ.ಪಂ.ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಹೆಚ್.ಎಸ್.ಕೀರ್ತನಾ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ.ವಿಕ್ರಮ್ ಅಮಟೆ ಮತ್ತಿತರರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. ಜಂಟಿ ಕೃಷಿ ನಿರ್ದೇಶಕಿ ಹೆಚ್.ಎಲ್.ಸುಜಾತ ಸ್ವಾಗತಿಸಿದರು.
Target of 5000 small food processing units in the state