ಚಿಕ್ಕಮಗಳೂರು: ದೈಹಿಕ ಕಾಯಿಲೆಗಳಿಗಿಂತ ಹೆಚ್ಚಾಗಿ ಇಂದು ಮನಸ್ಸು ಮತ್ತು ಸಮಾಜದ ಮೇಲೆ ಮಾನಸಿಕ ಕಾಯಿಲೆ ಪ್ರಭಾವ ಬೀರುತ್ತಿದೆ ಎಂದು ವಿಧಾನ ಪರಿಷತ್ ಸದಸ್ಯ ಸಿ.ಟಿ. ರವಿ ತಿಳಿಸಿದರು.
ಅವರು ಇಂದು ನಗರದ ಹನುಮಂತಪ್ಪ ವೃತ್ತದಲ್ಲಿ ಭಾರತೀಯ ಮನೋವೈದ್ಯಕೀಯ ಸಂಘ ಕರ್ನಾಟಕ ಶಾಖೆ, ಚಿಕ್ಕಮಗಳೂರು ವೈದ್ಯಕೀಯ ವಿಜ್ಞಾನಗಳ ಸಂಸ್ಥೆ ಇವರುಗಳ ಸಂಯುಕ್ತಾಶ್ರಯದಲ್ಲಿ ಏರ್ಪಡಿಸಲಾಗಿದ್ದ ಮಾನಸಿಕ ಆರೋಗ್ಯ ಅರಿವು ಜಾಥಾ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.
ಒತ್ತಡದ ಜೀವನ, ಅತಿಯಾದ ನಿರೀಕ್ಷೆ, ಹಂಚಿಕೊಳ್ಳುವಂತಹ ಸ್ನೇಹ ಸಂಬಂಧವನ್ನು ಕಡಿಮೆ ಮಾಡಿಕೊಂಡಿರುವುದೇ ಇದಕ್ಕೆ ಪ್ರಮುಖ ಕಾರಣವಾಗಿದ್ದು, ಸಮಾಜದೊಂದಿಗೆ ಸಂಪರ್ಕ ಅಗದಿದ್ದರೆ ವ್ಯಕ್ತಿಗತವಾಗಿ ಮಾನಸಿಕ ಒತ್ತಡ ರೂಪುಗೊಳ್ಳುತ್ತದೆ ಎಂದು ಹೇಳಿದರು.
ಈಗಿನ ಜೀವನ ಶೈಲಿ ಮಾನಸಿಕ ಒತ್ತಡಕ್ಕೆ ಕಾರಣವಾಗಿದ್ದು, ಇದೊಂದು ದೊಡ್ಡ ಪಿಡುಗಾಗಿ ಪರಿವರ್ತನೆಯಾಗಿದೆ. ಮಾದಕ ದ್ರವ್ಯಗಳು ಇದಕ್ಕೆ ಬೆಂಬಲವಾಗಿ ನಿಂತಿದೆ. ಇದರಿಂದ ಹೊರಬರಲು ಏನು ಮಾಡಬೇಕೆಂಬ ಬಗ್ಗೆ ಅರಿವು ಮೂಡಿಸುವುದೇ ಈ ಜಾಥಾದ ಪ್ರಮುಖ ಉದ್ದೇಶ ಎಂದರು.
ಒತ್ತಡದಿಂದ ಮುಕ್ತವಾಗಲು ಪೂರ್ವಿಕರ ಜ್ಞಾನ ಬಳಸಿಕೊಂಡು ಮಾನಸಿಕತೆಯಿಂದ ಹೊರಬರಬೇಕು. ಇದಕ್ಕಾಗಿ ಪರಿಪೂರ್ಣ ಪ್ರಯತ್ನ ಮಾಡಿದಾಗ ಮಾನಸಿಕತೆಯಿಂದ ಹೊರಬರಲು ಸಾಧ್ಯ ಎಂದು ಹೇಳಿದರು.
ಆಸೆಗಳನ್ನು ತ್ಯಜಿಸುವುದೂ ಸಹ ಆಂತರಿಕ ನೆಮ್ಮದಿಗೆ ಪೂರಕವಾಗಿದೆ, ಪರಿಸರಕ್ಕೆ ಮತ್ತು ಸಮಾಜಕ್ಕೆ ಹಿತಕಾರಿ ಎಂದು ಶ್ರೀಗಳು ಹೇಳಿರುವುದನ್ನು ಸರ್ವರೂ ಕಾರ್ಯರೂಪಕ್ಕೆ ತರುವ ನಿಟ್ಟಿನಲ್ಲಿ ಪ್ರಯತ್ನಿಸಬೇಕಾದ ಅಗತ್ಯ ಇದೆ ಎಂದರು.
ನ್ಯಾಯಾಧೀಶ ಹಾಗೂ ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ವಿ.ಹನುಮಂತಪ್ಪ ಮಾತನಾಡಿ, ಮಾನಸಿಕ ಒತ್ತಡ ಇಂದು ದೇಹದ ಮೇಲೆ ದುಷ್ಟರಿಣಾಮ ಬೀರುತ್ತಿದೆ. ದೈಹಿಕ ಮತ್ತು ಮಾನಸಿಕವಾಗಿ ಸದೃಢವಾಗಿದ್ದಾಗ ಮಾತ್ರ ಆರೋಗ್ಯವಂತರನ್ನಾಗಿ ಕರೆಯುತ್ತೇವೆ ಎಂದು ಹೇಳಿದರು.
ಮಾನಸಿಕ ಆರೋಗ್ಯದಿಂದ ವೇದನೆ ಅನುಭವಿಸುತ್ತಿರುವವರಿಗೆ ಕಾನೂನು ಸೇವಾ ಪ್ರಾಧಿಕಾರದಲ್ಲಿ ಉಚಿತವಾಗಿ ಅರಿವು ಮೂಡಿಸಿ ನೆರವು ನೀಡುವ ಬಹುದೊಡ್ಡ ವ್ಯವಸ್ಥೆಯನ್ನು ರೂಪಿಸಲಾಗಿದೆ ಎಂದು ತಿಳಿಸಿದರು.
ಮಾನಸಿಕತೆ ನಿಯಂತ್ರಣಕ್ಕಾಗಿ ಸಹಾಯವಾಣಿ ಸಂಖ್ಯೆ-೧೪೪೧೬ ಗೆ ಕರೆಮಾಡಿದರೆ ಮಾನಸಿಕತೆಯಿಂದ ಬಳಲುತ್ತಿರುವವರ ಬಗ್ಗೆ ಮಾಹಿತಿ, ಸೂಕ್ತ ಸಲಹೆ ನೀಡಲಿಕ್ಕೆ ಸಹಾಯವಾಗುತ್ತದೆ ಎಂದರು.
ಈ ಸಂಬಂಧ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಕಾನೂನು ಸೇವಾ ಪ್ರಾಧಿಕಾರ ಸಂಯುಕ್ತವಾಗಿ ಉಚಿತ ಆರೋಗ್ಯ ಆರೋಗ್ಯ ತಪಾಸಣೆ ಶಿಬಿರ ನಡೆಸುವ ಮೂಲಕ ಸಮಾಜದಲ್ಲಿ ಜಾಗೃತಿ ಮೂಡಿಸಿ ನಿರಂತರವಾಗಿ ನಡೆಯುತ್ತಿದೆ ಎಂದು ಹೇಳಿದರು.
‘ಆಸೆಯೇ ದುಃಖಕ್ಕೆ ಮೂಲ’ ಎಂಬ ಬುದ್ದರ ಸಂದೇಶವನ್ನು ಎಲ್ಲರೂ ಪಾಲಿಸಿದಾಗ ಇಂತಹ ಮಾನಸಿಕ ವೇದನೆಯಿಂದ ಹೊರಬರಲು ಸಾಧ್ಯ. ಈ ನಿಟ್ಟಿನಲ್ಲಿ ಜಾಥಾ ಕಾರ್ಯಕ್ರಮ ಯಶಸ್ವಿಯಾಗಲಿ ಎಂದು ಶುಭಹಾರೈಸಿದರು.
ಭಾರತೀಯ ಮನೋವೈದ್ಯಕೀಯ ಸಂಘದ ರಾಜ್ಯಾಧ್ಯಕ್ಷ ಡಾ. ಸೋಮಶೇಖರ ಪ್ರಾಸ್ತಾವಿಕವಾಗಿ ಮಾತನಾಡಿದರು. ಮೊದಲಿಗೆ ಜಲಜಾಕ್ಷಿ ಸ್ವಾಗತಿಸಿದರು. ಈ ಸಂದರ್ಭದಲ್ಲಿ ಜಿ.ಪಂ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಹೆಚ್.ಎಸ್. ಕೀರ್ತನ, ಡಾ. ನಾರಾಯಣ್ ಮುತಾಲಿಕ್, ಡಾ. ವೆಂಕಟೇಶ್, ಡಾ. ಲೋಕೇಶ್ ಬಾಬು, ಡಾ. ಕೃಷ್ಣೇಗೌಡ, ಡಾ. ಚಂದ್ರಶೇಖರ್, ಡಾ. ವೀಣಾ, ಡಾ. ಗೀತಾ ವೆಂಕಟೇಶ್ ಮತ್ತಿತರರು ಭಾಗವಹಿಸಿದ್ದರು.
Mental illness is having an impact on society