ಚಿಕ್ಕಮಗಳೂರು: ಜಿಲ್ಲೆಯ ಪಶ್ಚಿಮಘಟ್ಟ ಪ್ರದೇಶದಲ್ಲಿ ಪೂರ್ವಿಕರು ಉಳಿಸಿ ಹೋಗಿರುವ ಪ್ರಕೃತಿದತ್ತ ಪರಿಸರವನ್ನು ಉಳಿಸಿ-ಬೆಳಸಿ ಕಾಪಾಡುವುದು ಎಲ್ಲರ ಆದ್ಯ ಕರ್ತವ್ಯ ಮತ್ತು ಜವಾಬ್ದಾರಿ ಎಂದು ಶಾಸಕ ಹೆಚ್.ಡಿ. ತಮ್ಮಯ್ಯ ಹೇಳಿದರು.
ಅವರು ಇಂದು ಇಲ್ಲಿನ ತಾಲ್ಲೂಕು ಕಚೇರಿ ಆವರಣದಲ್ಲಿ ಅರಣ್ಯ ಇಲಾಖೆ ಭದ್ರಾ ಹುಲಿ ಸಂರಕ್ಷಿತ ಪ್ರದೇಶ ಇವರುಗಳ ಸಂಯುಕ್ತಾಶ್ರಯದಲ್ಲಿ ಆಯೋಜಿಸಿದ್ದ ವನ್ಯಜೀವಿ ಸಪ್ತಾಹ ೨೦೨೫ ವನ್ಯಜೀವಿ ಸಂರಕ್ಷಣೆಗಾಗಿ ನಡಿಗೆಗೆ ಹಸಿರು ನಿಶಾನೆ ತೋರಿಸುವ ಮೂಲಕ ಚಾಲನೆ ನೀಡಿ ಮಾತನಾಡಿ ಪರಿಸರ ಹಾನಿಯಾದರೆ ಮುಂದಿನ ದಿನಗಳಲ್ಲಿ ಅನಾರೋಗ್ಯಕ್ಕೆ ಕಾರಣವಾಗುತ್ತದೆ. ಈ ನಿಟ್ಟಿನಲ್ಲಿ ಗಿಡಮರ ಚೆನ್ನಾಗಿದ್ದರೆ ಪ್ರಾಣಿ-ಪಕ್ಷಿಗಳು ಮತ್ತು ನಾಗರಿಕರ ಆರೋಗ್ಯಕ್ಕೆ ಅನುಕೂಲವಾಗಲಿದೆ ಎಂದು ತಿಳಿಸಿದರು.
ಅರಣ್ಯ ಮತ್ತು ಪರಿಸರ ಉಳಿದರೆ ಅತೀ ಹೆಚ್ಚು ಮಳೆ ಬೀಳುತ್ತದೆ. ದಟ್ಟ ಅರಣ್ಯ ಉಳಿಸಿ ಬೆಳೆಸಲು ಜಿಲ್ಲಾಡಳಿತ, ಅರಣ್ಯ ಇಲಾಖೆ, ಸರ್ಕಾರ ಎಲ್ಲಾ ಸಂಘ-ಸಂಸ್ಥೆಗಳು ಮುಂದಾಗಬೇಕೆಂದು ಸಲಹೆ ನೀಡಿ ಕಂದಾಯ ಭೂಮಿಯನ್ನು ಡೀಮ್ಡ್ ಅರಣ್ಯ ಎಂದು ಮಾಡಿರುವ ಬಗ್ಗೆ ವಿರೋಧಿಸಿದ ಅವರು, ಆಶ್ರಯ ಮನೆ, ಆಸ್ಪತ್ರೆ, ಸಮುದಾಯ ಭವನ ಇವುಗಳಿಗೆ ಆದ್ಯತೆ ಮೇಲೆ ಭೂಮಿ ಮೀಸಲಿಡಬೇಕು ಹಾಗೂ ೧-೩ ಎಕರೆ ವರೆಗಿನ ಶೋಷಿತರು ಮಾಡಿರುವ ಸಾಗುವಳಿ ಭೂಮಿಗೆ ತೊಂದರೆಯಾಗದಂತೆ ಕ್ರಮವಹಿಸಬೇಕೆಂದು ಅರಣ್ಯಾಧಿಕಾರಿಗಳಿಗೆ ಸೂಚಿಸಿದರು.
ವಿಧಾನ ಪರಿಷತ್ ಸದಸ್ಯ ಸಿ.ಟಿ ರವಿ ಮಾತನಾಡಿ, ಕಾಡು ಇದ್ದರೆ ನಾಡು ಎಂಬಂತೆ ಜಗತ್ತು ಮತ್ತು ಭೂಮಿ ಇರುವುದು ಕೇವಲ ಮನುಷ್ಯರಿಗಾಗಿ ಅಲ್ಲ, ಎಲ್ಲಾ ಸಕಲ ಪ್ರಾಣಿ-ಪಕ್ಷಿಗಳು, ಸೂಕ್ಷ್ಮಾಣು ಜೀವಿಗಳು ಜೀವಿಸಲು ಅದರದೇ ಆದ ಸ್ಥಾನವನ್ನು ದೇವರು ಕಲ್ಪಿಸಿದ್ದಾನೆ ಎಂದು ಹೇಳಿದರು.
ಒಂದಕ್ಕೊಂದು ಪೂರಕವಾಗಿದ್ದು, ಒಂದು ನಾಶಮಾಡಿ ಇನ್ನೊಂದು ಬದುಕಲಾಗದು ಎಂಬುದು ತಾತ್ಕಾಲಿಕ ಮಾತ್ರ. ಎಲ್ಲಾ ಜೀವಸಂಕುಲ ಪರಿಸರದ ಮೇಲೆ ಪ್ರತಿಕೂಲ ಪರಿಣಾಮ ಬೀರುತ್ತವೆ. ಈ ಎಲ್ಲವನ್ನು ಸಮತೋಲನವಾಗಿಡುವ ಪ್ರಾಕೃತಿಕ ವ್ಯವಸ್ಥೆಯನ್ನು ಉಳಿಸಿ ಗೌರವಿಸಬೇಕು ಎಂದರು.
ದುರಾಸೆಯಿಂದ ಇಂದು ಪರಿಸರ ನಾಶವಾಗುತ್ತಿದೆ. ಮುಂದೊಂದು ದಿನ ನಮ್ಮ ನಾಶಕ್ಕೆ ನಾವೇ ಕಾರಣವಾಗುತ್ತೇವೆ ಎಂದು ಎಚ್ಚರಿಸಿದ ಅವರು, ಈ ವನ್ಯಜೀವಿ ಸಪ್ತಾಹ ಎಲ್ಲಾ ಜೀವಿಗಳಿಗೆ ಬದುಕುವ ಹಕ್ಕಿದೆ ಎಂದು ಭಾವಿಸುವ ಅಗತ್ಯವಿದೆ ಎಂದು ಹೇಳಿದರು.
ವಿಧಾನ ಪರಿಷತ್ ಸದಸ್ಯ ಎಸ್.ಎಲ್ ಭೋಜೇಗೌಡ ಮಾತನಾಡಿ, ಪರಿಸರ ರಕ್ಷಣೆ ನಮ್ಮೆಲ್ಲರ ಹೊಣೆ ಎಂಬ ಕರ್ತವ್ಯವನ್ನು ಅರಿತು ಮುಂದಿನ ಪೀಳಿಗೆಗೆ ಪರಿಸರದ ಮಹತ್ವ ತಿಳಿಸಬೇಕಾಗಿದೆ. ಹಿಂದೆ ವಾಹನಗಳು ಇರಲಿಲ್ಲ, ಅದಕ್ಕಾಗಿ ರಸ್ತೆಬದಿ ನೆರಳಿಗಾಗಿ ಸಾಲುಮರ ನೆಡುತ್ತಿದ್ದರು. ಹಕ್ಕಿಪಕ್ಷಿಗಳಿಗಾಗಿ ಹಣ್ಣಿನ ಮರಗಳಿದ್ದವು. ಇಂದು ಒಂದೇ ಒಂದು ಆ ರೀತಿಯ ಹಣ್ಣಿನ ಮರಗಳಿಲ್ಲ ಎಂದು ವಿಷಾಧಿಸಿದರು.
ರಾಜ್ಯಸರ್ಕಾರ ಅಕೇಶಿಯಾ ಮತ್ತು ನೀಲಿಗಿರಿಯನ್ನು ಬೇರು ಸಹಿತ ತೆಗೆಯಬೇಕೆಂದು ಆದೇಶ ಮಾಡಿದ್ದರೂ ಇದುವರೆಗೆ ಈ ಕಾರ್ಯ ಸಾಧ್ಯವಾಗಿಲ್ಲ. ಆಗುಂಬೆಯನ್ನು ಮಲೆನಾಡಿನ ಚಿರಾಪುಂಜಿ ಎಂದು ಕರೆಯುತ್ತೇವೆ. ಅತೀ ಹೆಚ್ಚು ಮಳೆ ಬೀಳುವ ಪ್ರದೇಶಗಳಾದ ಕುದುರೆಮುಖ ರಾಷ್ಟ್ರೀಯ ಉದ್ಯಾನ, ಶಿರಾಡಿಘಾಟ್, ಕೊಪ್ಪ-ಶೃಂಗೇರಿ ಹೋಗುವ ರಸ್ತೆ ಇಕ್ಕೆಲಗಳಲ್ಲಿ ಈ ಮರಗಳನ್ನು ಕಾಣಬಹುದಾಗಿದ್ದು, ತಿನ್ನಲು ಏನೂ ಸಿಗದ ಕಾರಣ ಮಂಗಗಳು ಪ್ರವಾಸಿಗರು ನೀಡುವ ಕಾಯಿ-ಬಾಳೇಹಣ್ಣಿಗಾಗಿ ಪರಿತಪಿಸುತ್ತಿರುವುದು ಕರುಣಾಜನಕವಾಗಿದೆ ಎಂದು ಹೇಳಿದರು.
ಮಾನವ-ವನ್ಯ ಪ್ರಾಣಿಗಳ ಸಂಘರ್ಷ ದಿನನಿತ್ಯ ಕಾಣುತ್ತಿದ್ದೇವೆ. ಚಿರತೆ, ಕಾಡಾನೆ, ಹುಲಿ ಮುಂತಾದವುಗಳು ಆಹಾರವನ್ನು ಅರಸಿ ನಾಡಿಗೆ ಬರುತ್ತಿರುವುದು ಪ್ರಮುಖ ಕಾರಣವಾಗಿದ್ದು, ಅವುಗಳ ನೆಮ್ಮದಿ ಜೀವನಕ್ಕೆ ಅವಕಾಶ ಇಲ್ಲದಂತಾಗಿದೆ ಎಂದರು. ಈ ಸಂದರ್ಭದಲ್ಲಿ ಅರಣ್ಯ ಇಲಾಖೆಯ ಉಪ ಅರಣ್ಯ ಸಂರಕ್ಷಣಾಧಿಕಾರಿ, ಎಸಿಎಫ್ ಮತ್ತು ಸಿಬ್ಬಂದಿ ಭಾಗವಹಿಸಿದ್ದರು.
It is everyone’s duty to preserve nurture and protect the environment.