ಚಿಕ್ಕಮಗಳೂರು: ತಾಲ್ಲೂಕು ಮಲ್ಲೇನಹಳ್ಳಿ ಬಿಂಡಿಗ ಆದಿಶಕ್ತ್ಯಾತ್ಮಕ ಶ್ರೀ ದೇವೀರಮ್ಮನವರ ದೀಪೋತ್ಸವ ಅ.೧೯ ರಿಂದ ೨೩ ರವರೆಗೆ ನಡೆಯಲಿದ್ದು, ಬೆಟ್ಟ ಹತ್ತಲು ರಾತ್ರಿ ಹೊರತುಪಡಿಸಿ ೨ ದಿನ ಅವಕಾಶ ಕಲ್ಪಿಸಲಾಗಿದೆ ಎಂದು ದೇವೀರಮ್ಮ ದೇವಸ್ಥಾನ ಸಮಿತಿ ಅಧ್ಯಕ್ಷ ಕುಲಶೇಖರ್ ತಿಳಿಸಿದರು.
ಅವರು ಇಂದು ದೇವಸ್ಥಾನದಲ್ಲಿ ಪತ್ರಕರ್ತರೊಂದಿಗೆ ಮಾತನಾಡಿ, ಅ.೧೯ ರಂದು ಬೆಳಗ್ಗೆ ೯ ಗಂಟೆಯಿಂದ ಸಂಜೆ ೫ ಗಂಟೆಯವರೆಗೆ ಹಾಗೂ ಅ.೨೦ ರಂದು ಬೆಳಗ್ಗೆ ೭ ಗಂಟೆಯಿಂದ ಬೆಟ್ಟ ಹತ್ತಲು ಭಕ್ತರಿಗೆ ಅವಕಾಶ ನೀಡಲಾಗಿದ್ದು, ಗಿರಿಪ್ರದೇಶದಲ್ಲಿ ಈ ಬಾರಿ ಅತಿ ಹೆಚ್ಚು ಮಳೆಯಾಗುತ್ತಿರುವ ಕಾರಣ ರಾತ್ರಿ ಬೆಟ್ಟ ಹತ್ತಲು ನಿಷೇಧಿಸಲಾಗಿದೆ ಎಂದರು.
ಅ.೧೯ ರಂದು ಬೆಳಗ್ಗೆ ೭ ಗಂಟೆಗೆ ಬೆಟ್ಟದಲ್ಲಿ ಅಭಿಷೇಕ, ಪೂಜಾ ಕಾರ್ಯಕ್ರಮಗಳು ಜರುಗಿದ ಬಳಿಕ ೯ ರಿಂದ ೫ ಗಂಟೆಯವರೆಗೆ ದೇವೀರಮ್ಮ ದೇವಿಯವರ ದರ್ಶನಕ್ಕೆ ಅವಕಾಶ ಕಲ್ಪಿಸಲಾಗಿದೆ. ೨೦ ರಂದು ೩ ಗಂಟೆಯವರೆಗೆ ಮಾತ್ರ ದೇವಿ ದರ್ಶನಕ್ಕೆ ಅವಕಾಶವಿದ್ದು, ಸಂಜೆ ೭ ಗಂಟೆಗೆ ದೀಪೋತ್ಸವ ನಡೆಯಲಿದೆ ಎಂದರು.
೨೧ ರಂದು ದೇವೀರಮ್ಮ ದೇವಸ್ಥಾನದಲ್ಲಿ ದೇವಿಯವರಿಗೆ ಉಡುಗೆ ಪೂಜೆ, ಸಂಜೆ ೬.೩೦ ಕ್ಕೆ ಬೆಣ್ಣೆಬಟ್ಟೆ ಸುಡುವುದು ನಂತರ ಮಹಾಮಂಗಳಾರತಿ, ಪ್ರಸಾದ ವಿನಿಯೋಗ, ೨೨ ರಂದು ಮಹಾಗಣಪತಿ ಪೂಜೆ, ಕುಂಕುಮಾರ್ಚನೆ ಇತ್ಯಾದಿ. ೨೩ ರಂದು ಮಹಾಮಂಗಳಾರತಿ, ಹರಕೆ ಒಪ್ಪಿಸುವುದು, ತೀರ್ಥಪ್ರಸಾದ ವಿನಿಯೋಗ.
ಶ್ರೀ ಕ್ಷೇತ್ರದಲ್ಲಿ ನಡೆಯುವ ಪ್ರಸಾದ ವಿನಿಯೋಗಕ್ಕೆ ಅಕ್ಕಿ, ಬೇಳೆ, ಎಣ್ಣೆ ಹಾಗೂ ಧನಸಹಾಯ ಮಾಡುವವರು ಕ್ಷೇತ್ರಕ್ಕೆ ತಂದು ಒಪ್ಪಿಸಬಹುದಾಗಿದೆ. ಬೆಟ್ಟದ ಮೇಲೆ ತೆಂಗಿನಕಾಯಿ ಒಡೆಯುವುದನ್ನು ನಿಷೇಧಿಸಲಾಗಿದೆ ಎಂದು ಹೇಳಿದರು.
ದೇವಿಯ ದರ್ಶನವಾದ ಬಳಿಕ ಬೆಟ್ಟದ ಮೇಲೆ ಕುಳಿತುಕೊಳ್ಳದೆ ಕೆಳಗೆ ಇಳಿಯಬೇಕು, ಬೆಟ್ಟದ ಹಾಗೂ ದೇವಸ್ಥಾನದ ಸುತ್ತಮುತ್ತ ಪ್ಲಾಸ್ಟಿಕ್ ಇತ್ಯಾದಿ ತ್ಯಾಜ್ಯ ವಸ್ತುಗಳನ್ನು ಎಸೆಯಬಾರದು, ದೇವಸ್ಥಾನದಲ್ಲಿ ಪ್ಲಾಸ್ಟಿಕ್ ಬಳಕೆಯನ್ನು ಕಡ್ಡಾಯವಾಗಿ ನಿಷೇಧಿಸಲಾಗಿದ್ದು, ತರೀಕೆರೆ, ಬೀರೂರು, ಕಡೂರು, ಚಿಕ್ಕಮಗಳೂರಿನಿಂದ ಕೆಎಸ್ಆರ್ಟಿಸಿ ಬಸ್ ವ್ಯವಸ್ಥೆ ಮಾಡಲಾಗಿದೆ ಎಂದರು.
ಬೆಟ್ಟದಲ್ಲಿ ಪಟಾಕಿ ಒಡೆಯುವುದನ್ನು ಸಂಪೂರ್ಣವಾಗಿ ನಿಷೇಧಿಸಲಾಗಿದೆ, ಭಕ್ತರು ಸ್ವಚ್ಚತೆ ಕಾಪಾಡುವ ಜೊತೆಗೆ ಪರಿಸರದ ಕಾಳಜಿಯನ್ನು ಹೊಂದಬೇಕು ಎಂದು ಹೇಳಿದರು.
Deviramma Deepotsava from 19th to 23rd October