ಚಿಕ್ಕಮಗಳೂರು: ರಾಜ್ಯ ಸರ್ಕಾರದ ಜನಪ್ರಿಯ ಪಂಚ ಗ್ಯಾರಂಟಿ ಯೋಜನೆಗಳು ಮತ್ತು ಭದ್ರಾ ಕಾಡಾ ಪ್ರಾಧಿಕಾರದ ಸವಲತ್ತುಗಳನ್ನು ಮನೆ ಮನಗಳಿಗೆ ಮುಟ್ಟಿಸುವ ಜವಾಬ್ದಾರಿ ಸದಸ್ಯರ ಮೇಲಿದೆ ಎಂದು ಭದ್ರಾ ಅಚ್ಚುಕಟ್ಟು ಪ್ರದೇಶಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಕೆ.ಪಿ.ಅಂಶುಮಂತ್ ತಿಳಿಸಿದರು.
ಶಿವಮೊಗ್ಗ ಜಿಲ್ಲೆಯ ಭದ್ರಾ ಕಾಡಾ ಪ್ರಾಧಿಕಾರದ ಸಭಾಂಗಣದಲ್ಲಿ ಸೋಮವಾರ ನಡೆದ ಚಿಕ್ಕಮಗಳೂರು ಮತ್ತು ಶಿವಮೊಗ್ಗ ಜಿಲ್ಲೆಗಳ ಪಂಚ ಗ್ಯಾರಂಟಿ ಪ್ರಾಧಿಕಾರದ ಸಭೆ ಉದ್ಘಾಟಿಸಿ ಅವರು ಮಾತನಾಡಿದರು.
ಭದ್ರಾ ಕಾಡಾ ಪ್ರಾಧಿಕಾರದಿಂದ ರೈತರಿಗೆ ಅನೇಕ ಮಾರ್ಗಸೂಚಿಗಳನ್ನು ನೀಡಲಾಗಿದೆ. ಹೆಚ್ಚು ನೀರು ಬಳಕೆಯಿಂದ ಭೂಮಿ ಹದಗೆಡುವ ಸಾಧ್ಯತೆಯಿದ್ದು, ಆದ್ದರಿಂದ ನಿಯಮಿತ ನೀರು ಬಳಸಿಕೊಂಡು ಭೂಮಿ ಫಲವವತ್ತೆ ಕಾಪಾಡಿಕೊಳ್ಳಬೇಕು ಎಂದರು.
ಸರ್ಕಾರ ಅಧಿಕಾರಕ್ಕೆ ಬಂದ ದಿನದಿಂದಲೂ ಅನ್ನಭಾಗ್ಯ ಯೋಜನೆಯಡಿ ಅಕ್ಕಿ ವಿತರಿಸಿದ್ದು, ಮುಂದಿನ ದಿನಗಳಲ್ಲಿ ಹೊಸದಾಗಿ ಆಹಾರದ ಕಿಟ್ಗಳನ್ನು ವಿತರಿಸುವ ಗುರಿ ಹೊಂದಿದೆ ಎಂದು ತಿಳಿಸಿದರು.
ದೇಶದ ಬೆನ್ನಲುಬಾಗಿರುವ ರೈತರಿಗೆ ನೀರಿನ ಸಮರ್ಪಕ ಬಳಕೆ ಬಗ್ಗೆ ಜಾಗೃತಿ ಮೂಡಿಸುವ ಕಾರ್ಯವನ್ನು ಪ್ರಾಧಿಕಾರ ನಿರಂತರವಾಗಿ ಮಾಡುತ್ತಿದೆ ಎಂದರು.
ಚಿಕ್ಕಮಗಳೂರು ಜಿಲ್ಲಾ ಗ್ಯಾರಂಟಿ ಪ್ರಾಧಿಕಾರದ ಅಧ್ಯಕ್ಷ ಎಂ.ಸಿ.ಶಿವಾನಂದಸ್ವಾಮಿ ಮಾತನಾಡಿ, ‘ಪಂಚ ನದಿಗಳ ಉಗಮ ಸ್ಥಾನವಾದ ಜಿಲ್ಲೆಗೆ ವಿಶೇಷ ಗೌರವವಿದೆ. ಅಲ್ಲದೇ ಜಿಲ್ಲೆಯಿಂದ ಹರಿಯುವ ನೀರು ಶಿವಮೊಗ್ಗದತ್ತ ಸಾಗಿ ಲಕ್ಷಾಂತರ ಜನರಿಗೆ ಕುಡಿಯಲು ಬಳಕೆ ಆಗುತ್ತಿದೆ’ ಎಂದರು.
ಗ್ಯಾರಂಟಿ ಯೋಜನೆ ಹಾಗೂ ಸಮರ್ಪಕ ನೀರು ಬಳಸುವ ಸಂಬಂಧ ಜಿಲ್ಲಾ, ತಾಲ್ಲೂಕು ಮಟ್ಟದ ಅಧಿಕಾರಿಗಳೊಂದಿಗೆ ಸಭೆ ನಡೆಸಿ ಚರ್ಚಿಸಲಾಗುವುದು. ಶಿವಮೊಗ್ಗದಲ್ಲೂ ಈ ರೀತಿಯ ಕಾರ್ಯ ಚಟುವಟಿಕೆಗಳನ್ನು ಕೈಗೊಂಡರೆ ಉಪಯೋಗಿಯಾಗಲಿದೆ. ಜನರಿಂದ ತೆರಿಗೆ ಪಡೆದು ಜನರಿಗಾಗಿ ವ್ಯಯಿಸುವ ಕೆಲಸವನ್ನು ಗ್ಯಾರಂಟಿ ಯೋಜನೆ ಮೂಲಕ ಸರ್ಕಾರ ಮಾಡುತ್ತಿದೆ ಎಂದರು.
ಶಿವಮೊಗ್ಗ ಜಿಲ್ಲಾ ಗ್ಯಾರಂಟಿ ಪ್ರಾಧಿಕಾರದ ಅಧ್ಯಕ್ಷ ಚಂದ್ರಭೂಪಾಲ್ ಮಾತನಾಡಿ, ‘ಪಂಚ ಗ್ಯಾರಂಟಿ ಯೋಜನೆ ಜಿಲ್ಲೆಯಲ್ಲಿ ಅನುಷ್ಠಾನಗೊಂಡು ಶೇ 98.5 ರಷ್ಟು ಪ್ರಗತಿ ಸಾಧಿಸಿದೆ. ಉದ್ಯೋಗ ಮೇಳ ನಡೆಸಿ ಶೇ 90ರಷ್ಟು ನಿರುದ್ಯೋಗಿಗಳಿಗೆ ಉದ್ಯೋಗ ಕಲ್ಪಿಸಿದೆ ಎಂದು ಮಾಹಿತಿ ನೀಡಿದರು.
ಸಭೆಯಲ್ಲಿ ಭದ್ರಾ ಕಾಡಾ ಪ್ರಾಧಿಕಾರದ ಆಡಳಿತಾಧಿಕಾರಿ ಆರ್.ಸತೀಶ, ಭೂ ಅಭಿವೃದ್ದಿ ಬ್ಯಾಂಕ್ ಅಧಿಕಾರಿ ತಾಂತ್ರಿಕ್, ಪ್ರಭಾರ ಕೃಷಿ ಅಧಿಕಾರಿ ಕೆ.ಪ್ರಶಾಂತ್, ಭೂ ಅಭಿವೃದ್ದಿ ಅಧಿಕಾರಿ ನಾಗೇಶ್ ಡೊಂಗ್ರೆ, ಚಿಕ್ಕಮಗಳೂರು-ಶಿವಮೊಗ್ಗ ತಾಲ್ಲೂಕು ಅಧ್ಯಕ್ಷರು, ಸದಸ್ಯರು ಉಪಸ್ಥಿತರಿದ್ದರು.
The responsibility of bringing the benefits of the authority to the homes of the members lies with them.