ಚಿಕ್ಕಮಗಳೂರು: ನಗರದ ನಾಗರಿಕರ ಆರೋಗ್ಯ ಕಾಪಾಡುವ ನಿಟ್ಟಿನಲ್ಲಿ ಪ್ರತಿದಿನ ಸ್ವಚ್ಚತೆ ಕಾಯಕ ಮಾಡುವ ಪೌರ ಕಾರ್ಮಿಕರು ಮತ್ತು ಪೌರ ನೌಕರರ ಆರೋಗ್ಯ ಕಾಪಾಡಲು ರಾಜ್ಯಸರ್ಕಾರ ಕ್ರೀಡಾಕೂಟ ಆಯೋಜನೆ ಮಾಡಿದೆ ಎಂದು ಶಾಸಕ ಹೆಚ್.ಡಿ. ತಮ್ಮಯ್ಯ ಹೇಳಿದರು.
ಅವರು ಇಂದು ಜಿಲ್ಲಾ ಆಟದ ಮೈದಾನದಲ್ಲಿ ನಗರಸಭೆ, ಕರ್ನಾಟಕ ರಾಜ್ಯ ಪೌರ ನೌಕರರ ಸಂಘ ಇವರ ಸಂಯುಕ್ತಾಶ್ರಯದಲ್ಲಿ ಪೌರ ಕಾರ್ಮಿಕರ ದಿನಾಚರಣೆ ಅಂಗವಾಗಿ ಏರ್ಪಡಿಸಲಾಗಿದ್ದ ಕ್ರೀಡಾಕೂಟ ಉದ್ಘಾಟನಾ ಸಮಾರಂಭದಲ್ಲಿ ಭಾಗವಹಿಸಿ ಮಾತನಾಡಿ ಪೌರ ಕಾರ್ಮಿಕರು ತಮ್ಮ ಕುಟುಂಬವನ್ನು ಗಂಭೀರವಾಗಿ ಪರಿಗಣಿಸಿ ಆರೋಗ್ಯ ಆದ್ಯತೆ ನೀಡಬೇಕು ಎಂಬ ಉದ್ದೇಶದಿಂದ ಸರ್ಕಾರ ಗ್ಲೌಸ್, ಶೂ, ಸಮವಸ್ತ್ರ ಮುಂತಾದ ಹಲವಾರು ಸೌಲಭ್ಯಗಳನ್ನು ಕಲ್ಪಿಸಿದ್ದು, ಜೊತೆಗೆ ವಿಮಾ ಸೌಲಭ್ಯವನ್ನು ನೀಡಲಾಗಿದೆ ಎಂದರು.
ವಾರ್ಷಿಕವಾಗಿ ಪೌರಕಾರ್ಮಿಕರಿಗೆ ಉಚಿತ ಆರೋಗ್ಯ ತಪಾಸಣಾ ಶಿಬಿರವನ್ನು ಚಿಕಿತ್ಸೆ ನೀಡಲಾಗುತ್ತಿದೆ. ಇವುಗಳನ್ನು ಕಟ್ಟುನಿಟ್ಟಾಗಿ ಪಾಲಿಸಬೇಕು ಹಾಗೂ ಆರೋಗ್ಯವನ್ನು ಚೆನ್ನಾಗಿಟ್ಟುಕೊಳ್ಳಬೇಕು ಎಂದು ಹೇಳಿದರು. ಸ್ವಾರ್ಥವಿಲ್ಲದೆ ನಿಸ್ವಾರ್ಥವಾಗಿ ಬದುಕುವ ಸಂದರ್ಭದಲ್ಲಿ ತಮ್ಮ ಕುಟುಂಬಕ್ಕಾಗಿ ಪೌರ ಕಾರ್ಮಿಕರು ಆರೋಗ್ಯವನ್ನು ಚೆನ್ನಾಗಿ ನೋಡಿಕೊಳ್ಳಬೇಕು ಎಂದು ಸಲಹೆ ನೀಡಿದರು.
ಈ ಕ್ರೀಡಾಕೂಟದಲ್ಲಿ ಸಕ್ರಿಯವಾಗಿ ಭಾಗವಹಿಸಿದಾಗ ಮನಸ್ಸು ಹಗುರವಾಗುತ್ತದೆ, ಸದೃಢ ದೇಹ ಹೊಂದಲು ಸಹಕಾರಿಯಾಗುತ್ತದೆ ಎಂದು ತಿಳಿಸಿದರು.
ಕಾರ್ಯಕ್ರಮವನ್ನು ಉದ್ಘಾಟಿಸಿದ ವಿಧಾನ ಪರಿಷತ್ ಸದಸ್ಯ ಎಸ್.ಎಲ್ ಭೋಜೇಗೌಡ ಮಾತನಾಡಿ, ಪೌರಕಾರ್ಮಿಕರು ಪ್ರತಿನಿತ್ಯ ಸ್ವಚ್ಚತೆ ಮಾಡಿ ನಗರದ ನಾಗರಿಕರ ಆರೋಗ್ಯಕ್ಕೆ ಪೂರಕವಾಗಿ ಕೆಲಸ ಮಾಡುವ ನೀವು ನಿಮ್ಮ ಅರೋಗ್ಯಕ್ಕೆ ಹೆಚ್ಚಿನ ಕಾಳಜಿ ಮತ್ತು ಆದ್ಯತೆ ನೀಡಬೇಕೆಂದು ವಿನಂತಿಸಿದರು.
ಪೌರ ಕಾರ್ಮಿಕರ ದಿನಾಚರಣೆ ಅಂಗವಾಗಿ ಅವರ ಕುಟುಂಬದವರಿಗಾಗಿ ಸಾಂಸ್ಕೃತಿಕ ಚಟುವಟಿಕೆ ಕಾರ್ಯಕ್ರಮಗಳನ್ನು ಆಯೋಜಿಸಿ ಕುಟುಂಬದವರ ಅಭಿರುಚಿಗೆ ತಕ್ಕಂತೆ ಕಾರ್ಯಕ್ರಮ ನಡೆಸಬೇಕೆಂದು ಹೇಳಿದರು. ಇನ್ನು ಗುತ್ತಿಗೆ ಆಧಾರದಲ್ಲಿ ಸೇವೆ ಸಲ್ಲಿಸುತ್ತಿರುವ ಪೌರ ಕಾರ್ಮಿಕರನ್ನು ರಾಜ್ಯಸರ್ಕಾರ ಶೀಘ್ರವೇ ಕಾಯಂಗೊಳಿಸಬೇಕು ಹಾಗೂ ನಿವೃತ್ತಿ ವೇತನ ಮಂಜೂರು ಮಾಡಬೇಕೆಂದು ಒತ್ತಾಯಿಸಿದರು.
ನಗರಸಭೆ ಪೌರ ಕಾರ್ಮಿಕರಿಗೆ ಆರ್ಥಿಕ ಭದ್ರತೆ ಕೊಡಬೇಕು ಆ ನಿಟ್ಟಿನಲ್ಲಿ ಕ್ರಮವಹಿಸಬೇಕೆಂದು ಅಧಿಕಾರಿಗಳಿಗೆ ಸೂಚನೆ ನೀಡಿದರು. ಅಧ್ಯಕ್ಷತೆ ವಹಿಸಿದ್ದ ನಗರಸಭಾಧ್ಯಕ್ಷೆ ಶೀಲಾದಿನೇಶ್ ಮಾತನಾಡಿ, ಸದೃಢ ಆರೋಗ್ಯಕ್ಕಾಗಿ ಪೌರ ಕಾರ್ಮಿಕರು ಕ್ರೀಡಾಕೂಟದಲ್ಲಿ ಭಾಗವಹಿಸುವುದು ಮುಖ್ಯ ಎಂದು ಶುಭ ಕೋರಿದರು.
ಪೌರಾಯುಕ್ತ ಬಿ.ಸಿ. ಬಸವರಾಜ್ ಸ್ವಾಗತಿಸಿ ಮಾತನಾಡಿ, ಪೌರಕಾರ್ಮಿಕರಿಗೆ ಸರ್ಕಾರದಿಂದ ದೊರೆಯುವ ಎಲ್ಲಾ ರೀತಿಯ ಸೌಲಭ್ಯಗಳನ್ನು ನೀಡಲಾಗುತ್ತಿದೆ. ಕಳೆದ ೪ ವರ್ಷಗಳಿಂದ ಗುಂಪು ವಿಮೆಯನ್ನು ಮಾಡಿಸಿದ್ದೇವೆ ಎಂದ ಅವರು, ಪ್ರತಿ ನಾಲ್ಕು ತಿಂಗಳಿಗೊಮ್ಮೆ ಪೌರಕಾರ್ಮಿಕರ ಅರೋಗ್ಯ ತಪಾಸಣೆ ನಡೆಸಿ ಅವರ ಆರೋಗ್ಯಕ್ಕಾಗಿ ಶೂ, ಗ್ಲೌಸ್, ಸಮವಸ್ತ್ರ ಮುಂತಾದ ಸೌಲಭ್ಯಗಳನ್ನು ನೀಡಿದ್ದೇವೆ ಎಂದರು.
ಈ ಸಂದರ್ಭದಲ್ಲಿ ಉಪಾಧ್ಯಕ್ಷ ಲಲಿತಾನಾಯ್ಕ್, ಸದಸ್ಯರಾದ ವರಸಿದ್ದಿ ವೇಣುಗೋಪಾಲ್, ಗುರುಮಲ್ಲಪ್ಪ, ಗೋಪಿ, ರೂಪ ಕುಮಾರ್, ಜಾವಿದ್, ಎ.ಸಿ. ಕುಮಾರಗೌಡ, ಅಣ್ಣಯ್ಯ, ಶ್ರೀನಿವಾಸ್, ದಿನೇಶ್, ಪ್ರಕಾಶ್ ರೈ, ಉಪ ವಿಭಾಗಾಧಿಕಾರಿ ಸುದರ್ಶನ್, ಮ್ಯಾನೇಜರ್ ರವಿ, ಆರೋಗ್ಯ ನಿರೀಕ್ಷಕರಾದ ವೆಂಕಟೇಶ್, ಈಶ್ವರ್, ನಾಗಪ್ಪ, ರಂಗಪ್ಪ, ಚಂದ್ರಶೇಖರ್, ಮತ್ತಿತರರು ಉಪಸ್ಥಿತರಿದ್ದರು.
Civic workers involved in sanitation work should prioritize health