ಚಿಕ್ಕಮಗಳೂರು: ಪತ್ರಿಕೋದ್ಯಮ ವೈಚಾರಿಕೆ ಪ್ರಜ್ಞೆ ಮೂಡಿಸುವ ಪ್ರಬಲ ಮಾದ್ಯಮ ಎಂದು ಸಾಹಿತಿ ಹಾಗೂ ಕೆಪಿಸಿಸಿ ವಕ್ತಾರ ರವೀಶ್ ಬಸಪ್ಪ ಹೇಳಿದರು.
ಅವರು ಪ್ರವಾಸಿ ಮಂದಿರದಲ್ಲಿ ಚಿಕ್ಕಮಗಳೂರು ಪ್ರೆಸ್ಕ್ಲಬ್ ನೂತನ ಅಧ್ಯಕ್ಷರಾಗಿ ಸಿ.ಡಿ ಚಂದ್ರೇಗೌಡ ಆಯ್ಕೆಯಾಗಿರುವ ಬಗ್ಗೆ ಕಾಂಗ್ರೆಸ್ ಪಕ್ಷ ಮತ್ತು ವಿವಿಧ ಜನಪರ ಸಂಘಟನೆಗಳಿಂದ ಏರ್ಪಡಿಸಲಾಗಿದ್ದ ಅಭಿನಂದನಾ ಸಮಾರಂಭದಲ್ಲಿ ಅಭಿನಂದಿಸಿ ಮಾತನಾಡಿದರು.
ಸಮಾಜದಲ್ಲಿ ವ್ಯಕ್ತಿ ಎಷ್ಟೇ ಪ್ರಭಾವಿಯಾಗಿದ್ದರೂ ಅವರನ್ನು ಸುದ್ದಿಯಾಗಿಯೇ ನೋಡಬೇಕು, ಜಾತಿ, ಧರ್ಮ, ಪಕ್ಷ ನೋಡದೆ ಸುದ್ದಿಗೆ ಸೀಮಿತವಾಗಿ ಅವರನ್ನು ಕಾಣಬೇಕು. ಗ್ರಾಮೀಣ ಭಾಗದ ಜನರ ಸಮಸ್ಯೆಗಳ ಬಗ್ಗೆ ಪತ್ರಕರ್ತರ ತಂಡ ಬೆಳಕು ಚೆಲ್ಲಿ ಗ್ರಾಮ, ವಾರ್ಡ್ಗೆ ಭೇಟಿನೀಡುವ ಮೂಲಕ ಜನರಿಗೆ ಅರಿವು ಮೂಡಿಸಿದಾಗ ಪತ್ರಿಕೋದ್ಯಮ ನಮ್ಮದು ಎಂಬ ಭಾವನೆ ಬೆಳೆಯುತ್ತದೆ ಎಂದರು.
ವಸ್ತುನಿಷ್ಠ ಸುದ್ದಿಗಳು ಕಡಿಮೆಯಾಗಿರುವ ಜೊತೆಗೆ ಜಾಹಿರಾತುಗಳ ಬರಾಟೆಯಿಂದಾಗಿ ಇಂದು ದಿನಪತ್ರಿಕೆ ಓದುಗರ ಸಂಖ್ಯೆ ಗಣನೀಯವಾಗಿ ಕ್ಷೀಣಿಸುತ್ತಿದೆ ಎಂದು ವಿಷಾಧಿಸಿದರು. ಇಲ್ಲಿನ ಪತ್ರಕರ್ತರು ಹೊಗರೇಖಾನ್ ಚಳುವಳಿ ಆರಂಭಿಸಿದಾಗ ಪರಿಣಾಮಕಾರಿಯಾಗಿ ಸುದ್ದಿ ಪ್ರಕಟಿಸಿ ಹೋರಾಟಕ್ಕೆ ಶಕ್ತಿ ತುಂಬಿ ಬೆಂಬಲಿಸಿದರು ಎಂದು ಶ್ಲಾಘಿಸಿದರು.
ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಹೆಚ್.ಪಿ ಮಂಜೇಗೌಡ ಮಾತನಾಡಿ, ರಾಜಕಾರಣಿಗಳು ತಪ್ಪುಮಾಡಿದಾಗ ತಿದ್ದಿ ತೀಡಿ ಸರಿದಾರಿಗೆ ತರುವ ಕೆಲಸವನ್ನು ಪತ್ರಿಕಾಮಾದ್ಯಮ ಮಾಡುತ್ತಿದೆ. ಆ ಸಾಲಿನಲ್ಲಿ ಚಂದ್ರೇಗೌಡರು ಮುಂಚೂಣಿಯಲ್ಲಿದ್ದು, ಹಿಂದೆ ಪ್ರೆಸ್ನೋಟ್ಗಳನ್ನು ಸಿದ್ದಪಡಿಸಿಕೊಂಡು ಪತ್ರಿಕಾ ಕಚೇರಿಗಳಿಗೆ ಕೊಡುವ ಪದ್ದತಿ ಇತ್ತು, ರಾಜೀವ್ ಗಾಂಧಿಯವರ ಕನಸು ಕಂಡಂತೆ ಸಾಮಾಜಿಕ ಜಾಲತಾಣ ಇಂದು ಪ್ರಬಲವಾಗಿದೆ ಎಂದು ಸ್ಮರಿಸಿದರು.
ಚಂದ್ರೇಗೌಡರು ಉತ್ತಮ ವ್ಯಕ್ತಿತ್ವ, ಸರಳ ಸಜ್ಜನಿಕೆಯನ್ನು ಮೈಗೂಡಿಸಿಕೊಂಡು ಜಿಲ್ಲೆಯ ಮೊಟ್ಟ ಮೊದಲ ಪತ್ರಿಕೆ ಗಿರಿವಾರ್ತಾ ಸೇರಿದಂತೆ ಹಲವು ಪತ್ರಿಕೆಗಳಿಗೆ ಸುದ್ದಿ ನೀಡುತ್ತಿದ್ದು, ಈಗ ನಗರದಲ್ಲಿ ಪ್ರಕಟವಾಗುತ್ತಿರುವ ಮಲೆನಾಡು ಐಸಿರಿ ಕನ್ನಡ ದಿನಪತ್ರಿಕೆಯ ಪ್ರಧಾನ ವರದಿಗಾರರಾಗಿ ಸೇವೆ ಸಲ್ಲಿಸುತ್ತಿರುವುದು ಹೆಮ್ಮೆಯ ವಿಷಯ ಎಂದರು.
ಪ್ರೆಸ್ಕ್ಲಬ್ಗೆ ಸ್ವಂತ ನಿವೇಶನ, ಕಟ್ಟಡ ನಿರ್ಮಾಣ ಕಾರ್ಯ ನಿಮ್ಮ ಅಧಿಕಾರವಧಿಯಲ್ಲಿ ಆಗಲಿ. ಇದಕ್ಕೆ ನಮ್ಮ ಸಂಪೂರ್ಣ ಸಹಕಾರ, ಬೆಂಬಲ ನೀಡುವುದಾಗಿ ಭರವಸೆ ನೀಡಿ ಶುಭ ಹಾರೈಸಿದರು.
ದಸಂಸ ರಾಜ್ಯ ಸಂಚಾಲಕ ಮರ್ಲೆ ಅಣ್ಣಯ್ಯ ಮಾತನಾಡಿ, ಪ್ರೆಸ್ಮೀಟ್ ಮಾಡಲು ನಾವು ಹಿಂಜರಿಯುತ್ತಿದ್ದ ಸಂದರ್ಭದಲ್ಲಿ ಚಂದ್ರೇಗೌಡರು ಹುರಿದುಂಬಿಸಿ ನೀವು ನಾಯಕರಾಗಬೇಕಾದರೆ ಸುದ್ದಿಗೋಷ್ಠಿ ನಡೆಸಿದಾಗ ಮಾತ್ರ ಸಾಧ್ಯ. ಸಂಘಟನೆ ಮೂಲಕ ನೊಂದವರ ಧ್ವನಿಯಾಗಿ ಕೆಲಸ ಮಾಡಬೇಕೆಂದು ಭರವಸೆ ತುಂಬಿದ ಹಿನ್ನೆಲೆಯಲ್ಲಿ ಇಂದು ಮುಖಂಡನಾಗಿದ್ದೇನೆ ಎಂದರು. ಗೌಡರು ಅಧ್ಯಕ್ಷರಾಗಿರುವುದು ಪತ್ರಿಕಾ ಮಾದ್ಯಮಕ್ಕೆ ಮೌಲ್ಯ ಬಂದಿದೆ. ಉತ್ತಮ ವ್ಯಕ್ತಿತ್ವ ಹೊಂದಿರುವ ಇವರಿಗೆ ಅಭಿನಂದಿಸುವುದಾಗಿ ಹೇಳಿದರು.
ಅಭಿನಂದನೆ ಸ್ವೀಕರಿಸಿ ಮಾತನಾಡಿದ ಸಿ.ಡಿ ಚಂದ್ರೇಗೌಡ ಅವರು, ಕಳೆದ ೩೩ ವರ್ಷಗಳ ಪತ್ರಿಕೋದ್ಯಮ ವೃತ್ತಿ ಬದುಕಿನಲ್ಲಿ ಇಂದು ಸಾಧನೆಯ ಸಾರ್ಥಕತೆ ಅನಿಸುತ್ತಿದೆ, ಈ ಸಂದರ್ಭದಲ್ಲಿ ಅಭಿನಂದಿಸಿ ಗೌರವಿಸಿದ ಎಲ್ಲರಿಗೂ ಧನ್ಯವಾದ ಅರ್ಪಿಸಿದರು.
ವಕೀಲ ಡಿ.ಸಿ ಪಟ್ಟೇಗೌಡ ಮಾತನಾಡಿ, ನ್ಯಾಯಾಂಗ, ರಾಜ್ಯಾಂಗ, ಕಾರ್ಯಾಂಗ ಈ ಮೂರು ರಂಗಗಳನ್ನು ನಿಯಂತ್ರಿಸುವ ಶಕ್ತಿ ಪತ್ರಿಕಾ ರಂಗಕ್ಕಿದೆ ಎಂದು ಹೇಳಿದ ಅವರು, ಪ್ರೆಸ್ಕ್ಲಬ್ ನೂತನ ಅಧ್ಯಕ್ಷರಾಗಿ ಚಂದ್ರೇಗೌಡರು ಆಯ್ಕೆಯಾಗಿರುವುದು ಹೆಮ್ಮೆಯ ಸಂಗತಿ ಎಂದು ಶುಭ ಹಾರೈಸಿದರು.
ಅಹಿಂದಾ ಜಿಲ್ಲಾಧ್ಯಕ್ಷ ತ್ರಿಭುವನ್, ಕಾಂಗ್ರೆಸ್ ಮುಖಂಡರಾದ ಎನ್.ಡಿ ಚಂದ್ರಪ್ಪ, ಪ್ರವೀಣ್ ಬೆಟಗೇರೆ, ತನೂಜ್ ನಾಯ್ಡ್ ಮಧು, ಮತ್ತಿತರರು ಉಪಸ್ಥಿತರಿದ್ದರು.
Journalism is a powerful medium for creating ideological consciousness