ಚಿಕ್ಕಮಗಳೂರು: ತಾಲ್ಲೂಕಿನ ಮಲ್ಲೇನಹಳ್ಳಿ ಗ್ರಾಮದ ಬಿಂಡಿಗಾ ದೇವೀರಮ್ಮ ಉತ್ಸವ ಆರಂಭವಾಗಿದ್ದು, ಮೊದಲ ದಿನ ಭಕ್ತರು ಮಳೆ, ಚಳಿ, ಬಿಸಿಲು ಲೆಕ್ಕಿಸದೆ ಬೆಟ್ಟ ಏರಿ ದೇವಿಯ ದರ್ಶನ ಪಡೆದರು. ಬೆಳಿಗ್ಗೆ 6ರಿಂದಲೇ ದೇವೀರಮ್ಮ ಬೆಟ್ಟಕ್ಕೆ ಬರಿಗಾಲಿನಲ್ಲಿ ಭಕ್ತರು ಏರಲು ಆರಂಭಿಸಿದರು. ಇಡೀ ರಾತ್ರಿ ಮಳೆ ಸುರಿದಿದ್ದರಿಂದ ಹಾದಿ ಜಾರುತ್ತಿತ್ತು.
ವರ್ಷಕ್ಕೊಮ್ಮೆ ಮಾತ್ರ ದರ್ಶನ ನೀಡುವ ಬಿಂಡಿಗ ದೇವಿರಮ್ಮ ದೇವಿಯನ್ನು ಕಣ್ತುಂಬಿಕೊಂಡು ಆಶೀರ್ವಾದ ಪಡೆಯಲು ಭಾನುವಾರ ಭಕ್ತ ಸಾಗರವೇ ಹರಿದಿತ್ತು. ಇಡೀ ದೇವೀರಮ್ಮ ಗುಡ್ಡ ಭಕ್ತರಿಂದ ತುಂಬಿಕೊಂಡಿತ್ತು. ಬೆಳಿಗ್ಗೆ ಮಳೆ ಬಿಡುವು ನೀಡಿದ್ದರೂ ಮೋಡ ಕವಿದ ವಾತಾವರಣ ಇತ್ತು. ಚಿಕ್ಕಮಗಳೂರು ನಗರದ ಬಸ್ ನಿಲ್ದಾಣದಿಂದ ಪ್ರತಿ ಐದು ನಿಮಿಷಕ್ಕೆ ಒಂದರಂತೆ ಮಲ್ಲೇನಹಳ್ಳಿಗೆ ಬಸ್ ವ್ಯವಸ್ಥೆ ಕಲ್ಪಿಸಲಾಗಿತ್ತು. ಮಲ್ಲೇನಹಳ್ಳಿ ಕಡೆಯಿಂದ ಹೆಚ್ಚಿನ ಸಂಖ್ಯೆಯಲ್ಲಿ ಭಕ್ತರು ಬೆಟ್ಟ ಏರಿದರೆ, ಮಾಣಿಕ್ಯಧಾರ ಜಲಪಾತ ಕಡೆಯಿಂದಲೂ ಭಕ್ತರು ಬಂದರು. ಇನ್ನೊಂದೆಡೆ ಅರಿಶಿನಗುಪ್ಪೆ ಕಡೆಯಿಂದಲೂ ಭಕ್ತರು ಬೆಟ್ಟ ಏರಿದರು.
ಭಾನುವಾರ ಬೆಳಿಗ್ಗೆ ವಿಗ್ರಹವನ್ನು ಬೆಟ್ಟದ ಮೇಲಕ್ಕೆ ಹೊತ್ತೊಯ್ದು ಪ್ರತಿಷ್ಠಾಪಿಸಲಾಗಿತ್ತು. ಕಟ್ಟಿಗೆ ಹೊತ್ತು ತಂದವರು ಕೊಂಡಕ್ಕೆ ಹಾಕಿ ಹರಕೆ ಒಪ್ಪಿಸಿದರು. ಬೆಣ್ಣೆಬಟ್ಟೆ ಸುಡುವ ಕೈಂಕರ್ಯಕ್ಕೆ ಈ ಕಟ್ಟಿಗೆಗಳನ್ನು ಬಳಸಲಾಗುತ್ತದೆ. ಕಾಡುಮೇಡು, ತಗ್ಗುದಿಣ್ಣೆ, ಮೊನಚು, ಬೆಣಚು ಕಲ್ಲು, ಜಲ್ಲಿಕಲ್ಲು, ಕಡಿದಾದ ಬೆಟ್ಟದ ಹಾದಿಯಲ್ಲಿ ಭಕ್ತರು ಸಾಗಿದರು. ಹಾದಿಯುದ್ದಕ್ಕೂ ಒಬ್ಬರಿಗೊಬ್ಬರು ಆಸರೆಯಾಗಿ ಕೈಹಿಡಿದುಕೊಂಡು ನಡೆದರು. ಜಾರಿದವರ ಕೈಹಿಡಿದು ಎತ್ತಿ, ಹಿಂದೆ ಉಳಿದವರನ್ನು ಎಳೆದುಕೊಂಡು ಮುಂದೆ ಸಾಗಿದರು. ಕೆಲವರು ಬೆಟ್ಟದಲ್ಲಿನ ಹುಲ್ಲುಹಾಸಿನಲ್ಲಿ ಮಲಗಿ ವಿರಮಿಸಿದರು.
ಬೆಟ್ಟ ಏರಿದವರ ಪೈಕಿ ಮೊಬೈಲ್ ಕ್ಯಾಮೆರಾಗಳಲ್ಲಿ ಸೆಲ್ಫಿ ಕ್ಲಿಕ್ಕಿಸಿಕೊಳ್ಳದವರೇ ಇಲ್ಲ. ಸವಿ ನೆನಪುಗಳನ್ನು ಹಿಡಿದಿಟ್ಟುಕೊಂಡರು. ವಾಟ್ಸಆ್ಯಪ್, ಫೆಸ್ಬುಕ್ ಸಾಮಾಜಿಕ ಮಾಧ್ಯಮಗಳಿಗೆ ಫೋಟೊಗಳನ್ನು ಅಪ್ಲೋಡ್ ಮಾಡಿ ಖುಷಿಪಟ್ಟರು. ಈ ಸಂಭ್ರಮದಲ್ಲಿ ಬೆಟ್ಟ ಹತ್ತಿದ ಪ್ರಯಾಸ ಮರೆಯಾಗಿತ್ತು. ಜಾತ್ರಾ ಮಹೋತ್ಸವದ ಅಂಗವಾಗಿ ಪೊಲೀಸ್ ಬಂದೋಬಸ್ತ್ ನಿಯೋಜಿಸಲಾಗಿತ್ತು. ಮಳೆ, ಚಳಿ, ಗಾಳಿಯ ನಡುವೆ ರಕ್ಷಣಾ ತಂಡ ಕಾರ್ಯನಿರ್ವಹಿಸಿತು. ಕಡಿದಾದ ಜಾಗದಲ್ಲಿ ಬೆಟ್ಟ ಏರಲು ಆಗದವರಿಗೆ ರಕ್ಷಣಾ ತಂಡ ಹಗ್ಗದ ಸಹಾಯದಲ್ಲಿ ನೆರವಾಯಿತು.
ಪೊಲೀಸರು, ಅಗ್ನಿಶಾಮಕ ಸಿಬ್ಬಂದಿ, ಸ್ವಯಂ ಸೇವಕರ ತಂಡದ ಈ ಕಾರ್ಯಕ್ಕೆ ಎಲ್ಲರಿಂದ ಶ್ಲಾಘನೆ ವ್ಯಕ್ತವಾಯಿತು. ಮಲ್ಲೇನಹಳ್ಳಿ ಬಳಿ ವಾಹನ ದಟ್ಟಣೆ ಉಂಟಾಗದಂತೆ ಕ್ರಮ ಕೈಗೊಳ್ಳಲಾಗಿತ್ತು. ಕೈಮರ ಚೆಕ್ಪೋಸ್ಟ್ ಬಳಿಯ ವಾಹನಗಳನ್ನು ತಡೆದು ಬೇರೆಡೆಗೆ ಕಳುಹಿಸಲಾಯಿತು. ಇದೇ ಮೊದಲ ಬಾರಿಗೆ ಬೆಟ್ಟ ಏರಿ ದೇವಿಯ ದರ್ಶನ ಪಡೆಯಲು ಎರಡು ದಿನ ಅವಕಾಶ ನೀಡಲಾಗಿದೆ.
ಸಾಮಾನ್ಯವಾಗಿ ನರಕ ಚತುರ್ದಶಿಯ ದಿನ ಬೆಟ್ಟದ ಮೇಲೆ ದೇವಿಯ ದರ್ಶನಕ್ಕೆ ಅವಕಾಶ ಇತ್ತು. ಮಳೆ ಮುನ್ಸೂಚನೆ ಇರುವುದರಿಂದ ರಾತ್ರಿ ವೇಳೆ ಬೆಟ್ಟ ಏರಲು ಅವಕಾಶ ನೀಡದೆ ಮುನ್ನ ದಿನವೇ ದೇವಿಯ ಉತ್ಸವ ಮೂರ್ತಿಯನ್ನು ಬೆಟ್ಟದ ತುದಿಗೆ ಕೊಂಡೊಯ್ದು ಪೂಜೆ ಸಲ್ಲಿಸಲಾಯಿತು. ಭಾನುವಾರ ಇಡೀ ದಿನ ಬೆಟ್ಟ ಏರಿದ ಭಕ್ತರು ದೇವಿಯನ್ನು ಕಣ್ತುಂಬಿಕೊಂಡರು. ಸೋಮವಾರ ಇನ್ನೂ ಹೆಚ್ಚಿನ ಸಂಖ್ಯೆಯಲ್ಲಿ ಭಕ್ತರು ಬರುವ ನಿರೀಕ್ಷೆ ಇದೆ.
ಮಲ್ಲೇನಹಳ್ಳಿ ಕಡೆಯಿಂದ ದೇವೀರಮ್ಮ ಬೆಟ್ಟ ಹತ್ತಲು ಬರುವ ಭಕ್ತರು, ಕೆಎಸ್ಆರ್ಟಿಸಿ ಬಸ್ಗಳಲ್ಲಿ ಬರುವಂತೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ವಿಕ್ರಮ ಅಮಟೆ ಮನವಿ ಮಾಡಿದ್ದಾರೆ. ಮಲ್ಲೇನಹಳ್ಳಿ ಪ್ರೌಢಶಾಲೆ ಆವರಣದಲ್ಲಿ ವಾಹನ ನಿಲುಗಡೆ ಅವಕಾಶ ಮಾಡಲಾಗಿತ್ತು. ವಿಪರೀತ ಮಳೆಯಿಂದ ನಿಲುಗಡೆ ಸಾಧ್ಯವಾಗುತ್ತಿಲ್ಲ. ವಾಹನಗಳ ನಿಲುಗಡೆ ಬೇರೆ ಜಾಗ ಇಲ್ಲದ ಕಾರಣ ಭಕ್ತರು ಚಿಕ್ಕಮಗಳೂರು ನಗರದಲ್ಲಿ ವಾಹನ ನಿಲ್ಲಿಸಿ ಬಸ್ಗಳಲ್ಲಿ ಬರುವುದು ಸೂಕ್ತ ಎಂದು ತಿಳಿಸಿದ್ದಾರೆ.
ಕಡೂರು, ಸಖರಾಯಪಟ್ಟಣ, ಬಾಣಾವರ ಕಡೆಯಿಂದ ಬರುವ ಭಕ್ತರು ಐಡಿಎಸ್ಜಿ ಕಾಲೇಜು ಆವರಣದಲ್ಲೇ ತಮ್ಮ ವಾಹನಗಳನ್ನು ನಿಲ್ಲಿಸಬೇಕು. ಅಲ್ಲಿಂದ ಮಲ್ಲೇನಹಳ್ಳಿಗೆ ಹೋಗಿ ಬರಲು ಕೆಎಸ್ಆರ್ಟಿಸಿ ಬಸ್ ವ್ಯವಸ್ಥೆ ಕಲ್ಪಿಸಲಾಗಿದೆ.
ಬೆಂಗಳೂರು, ಹಾಸನ, ಬೇಲೂರು, ಮೂಡಿಗೆರೆ, ಬಾಳೆಹೊನ್ನೂರು, ಶೃಂಗೇರಿ ಕಡಗಳಿಂದ ಚಿಕ್ಕಮಗಳೂರು ನಗರ ಮಾರ್ಗವಾಗಿ ಮಲ್ಲೇನಹಳ್ಳಿಗೆ ಬರುವ ಭಕ್ತರಿಗೆ ಐ.ಜಿ. ರಸ್ತೆ, ಎಂ.ಜಿ. ರಸ್ತೆ, ಡಿಎಸಿಜಿ ಪಾಲಿಟೆಕ್ನಿಕ್ ಆವರಣದಲ್ಲಿ ಖಾಸಗಿ ವಾಹನಗಳ ನಿಲುಗಡೆಗೆ ಅವಕಾಶ ಕಲ್ಪಿಸಲಾಗಿದೆ. ಬಸ್ ನಿಲ್ದಾಣ ಮತ್ತು ಟೌನ್ ಕ್ಯಾಂಟೀನ್ ವೃತ್ತದಿಂದ ಬಸ್ ವ್ಯವಸ್ಥೆ ಇದೆ ಎಂದು ವಿವರಿಸಿದ್ದಾರೆ. ತರೀಕೆರೆ ಹಾಗೂ ಲಿಂಗದಹಳ್ಳಿ ಕಡೆಗಳಿಂದ ಬರುವವರಿಗೆ ಕುಮಾರಗಿರಿಯಲ್ಲಿ ವಾಹನ ನಿಲುಗಡೆ ವ್ಯವಸ್ಥೆ ಮಾಡಲಾಗಿದೆ. ಅಲ್ಲಿಂದ ದೇವಸ್ಥಾನಕ್ಕೆ ಬಸ್ ವ್ಯವಸ್ಥೆ ಇದೆ ಎಂದು ಮಾಹಿತಿ ನೀಡಿದ್ದಾರೆ.
Bindiga Deviramma festival begins in Mallenahalli village