ಚಿಕ್ಕಮಗಳೂರು: ಮಲ್ಲೇನಹಳ್ಳಿ ಬಿಂಡಿಗ ದೇವೀರಮ್ಮನ ದರ್ಶನ ಪಡೆಯಲು ಭಕ್ತರು ಬರಿಗಾಲಿನಲ್ಲೇ ದಣಿವರಿಯದೆ ಬೆಟ್ಟ ಹತ್ತಿದರು. ಮಳೆ, ಕಾಡುಮೇಡು, ತಗ್ಗುದಿಣ್ಣೆ, ಮೊನಚು, ಬೆಣಚು ಕಲ್ಲು, ಜಲ್ಲಿಕಲ್ಲು ಯಾವುದನ್ನೂ ಲೆಕ್ಕಿಸದೆ ಸಾವಿರಾರು ಭಕ್ತರು ಸೋಮವಾರ ದೇವೀರಮ್ಮನ ಬೆಟ್ಟಕ್ಕೆ ಸಾಗಿ ಬಂದರು.
ಈ ಬಾರಿ ದೇವಸ್ಥಾನ ಆಡಳಿತ ಮಂಡಳಿ ಹಾಗೂ ಜಿಲ್ಲಾಡಳಿತ ಬೆಟ್ಟದಲ್ಲಿ ಜನದಟ್ಟಣೆ ತಪ್ಪಿಸಲು ಎರಡು ದಿನ ಬೆಟ್ಟ ಹತ್ತಲು ಅವಕಾಶ ಮಾಡಿಕೊಟ್ಟಿತ್ತು. ಭಾನುವಾರ ಸಾವಿರಾರು ಜನರು ಬೆಟ್ಟವೇರಿದ್ದರು. ಎರಡನೇ ದಿನವಾದ ಸೋಮವಾರವೂ ಸಾವಿರಾರು ಭಕ್ತರು ಬೆಟ್ಟ ಹತ್ತಿ ಪುಳಕಿತರಾದರು.
ಭಾನುವಾರ ರಾತ್ರಿ ಸುರಿದ ನಿರಂತರ ಮಳೆಯಿಂದಾಗಿ ಇಡೀ ಬೆಟ್ಟದಲ್ಲಿ ತೇವಾಂಶ ಹೆಚ್ಚಾಗಿ ಜಾರಿಕೆ ಹೆಚ್ಚಾಗಿಯೇ ಇತ್ತು. ಯಾವುದನ್ನೂ ಭಕ್ತಗಣ ಲೆಕ್ಕಿಸಲಿಲ್ಲ. ಅಗ್ನಿಶಾಮಕ ಸಿಬ್ಬಂದಿ ಕಟ್ಟಿದ್ದ ಹಗ್ಗ ಹಿಡಿದು ಹೆಜ್ಜೆಯ ಮೇಲೆ ಹೆಜ್ಜೆ ಹಾಕಿ ಒಬ್ಬರಿಗೊಬ್ಬರು ಸಹಕರಿಸುತ್ತ ಬೆಟ್ಟ ಹತ್ತಿದರು. ಕಡಿದಾದ ಸ್ಥಳಗಳಲ್ಲಿ ಪೊಲೀಸ್ ಸಿಬ್ಬಂದಿ ಭಕ್ತರ ಕೈಹಿಡಿದು ಮೇಲೆ ಎತ್ತಿ ಮುಂದೆ ದಾಟಿಸಿದರು.
ಮಲ್ಲೇನಹಳ್ಳಿ ಕಡೆಯಿಂದ ಪ್ರಮುಖ ದಾರಿಯಲ್ಲಿ ಬಹುತೇಕ ಭಕ್ತರು ಬಂದರೆ, ಮಾಣಿಕ್ಯಧಾರ ಜಲಪಾತದ ಕಡೆಯಿಂದಲೂ ಭಕ್ತರು ಸಾಲುಗಟ್ಟಿ ಬಂದರು. ಇನ್ನೊಂದೆಡೆ ಅರಿಶಿಣಗುಪ್ಪೆ ಕಡೆಯಿಂದ ತೋಟದೊಳಗಿನ ಮಾರ್ಗದಲ್ಲೂ ಹಲವರು ಬಂದು ದೇವಿಯ ದರ್ಶನ ಪಡೆದರು.
ಬೆಟ್ಟ ಏರಿದವರ ಪೈಕಿ ಮೊಬೈಲ್ ಕ್ಯಾಮೆರಾಗಳಲ್ಲಿ ಸೆಲ್ಫಿ ಕ್ಲಿಕ್ಕಿಸಿಕೊಳ್ಳದವರೇ ಇಲ್ಲ. ಸವಿ ನೆನಪುಗಳನ್ನು ಹಿಡಿದಿಟ್ಟುಕೊಂಡರು. ಸಾಮಾಜಿಕ ಮಾಧ್ಯಮಗಳಿಗೆ ಫೋಟೊಗಳನ್ನು ಅಪ್ಲೋಡ್ ಮಾಡಿ ಖುಷಿಪಟ್ಟರು. ಈ ಸಂಭ್ರಮದಲ್ಲಿ ಬೆಟ್ಟ ಹತ್ತಿದ ಪ್ರಯಾಸ ಮರೆಯಾಗಿತ್ತು.
ಬೆಟ್ಟ ಏರುವಾಗ ಕೆಲ ಭಕ್ತರು ಕಾಲು ಉಳುಕಿಸಿಕೊಂಡರು. ಇಬ್ಬರು ಮಹಿಳೆಯರು ಸುಸ್ತಾಗಿ ಅಸ್ವಸ್ಥಗೊಂಡರು. ಎಲ್ಲರನ್ನೂ ಅಗ್ನಿಶಾಮಕ ಸಿಬ್ಬಂದಿ ಸುರಕ್ಷಿತವಾಗಿ ಬೆಟ್ಟದಿಂದ ಹೊತ್ತುಕೊಂಡು ಬಂದು ಬೆಟ್ಟದ ಕೆಳಗೆ ಬಿಟ್ಟರು. ನಂತರ ಅವರನ್ನು ಆಂಬುಲೆನ್ಸ್ ಮೂಲಕ ಆಸ್ಪತ್ರೆಗೆ ಕಳುಹಿಸಿಕೊಡಲಾಯಿತು.
ರಾತ್ರಿ 7 ಗಂಟೆಗೆ ಬೆಟ್ಟದಲ್ಲಿ ಭಕ್ತರು ತಂದಿದ್ದ ಕಟ್ಟಿಗೆ ಹಾಗೂ ಬಟ್ಟೆಗೆ ಬೆಣ್ಣೆ ಸವರಿ ದೀಪೋತ್ಸವ ಕಾರ್ಯಕ್ರಮ ನಡೆಸಲಾಯಿತು. ಜಾರಿಕೆ ನಡುವೆ ಬೆಟ್ಟ ಏರಲು ಅಗ್ನಿಶಾಮಕ ಸಿಬ್ಬಂದಿ, ಪೊಲೀಸರು ಹಾಗೂ ಸ್ವಯಂ ಸೇವಕರು ಮಳೆಯನ್ನು ಲೆಕ್ಕಿಸದೆ ಭಕ್ತರ ಸಹಾಯಕ್ಕೆ ನಿಂತಿದ್ದರು.
ಅಗ್ನಿಶಾಮಕ ಸಿಬ್ಬಂದಿ ಅಲ್ಲಲ್ಲಿ ಹಗ್ಗಗಳನ್ನು ತಮ್ಮ ಸೊಂಟಕ್ಕೆ ಸಿಕ್ಕಿಸಿಕೊಂಡು ಭಕ್ತರು ಹಗ್ಗ ಹಿಡಿದು ಮೇಲೆ ಬರಲು ಸಹಕರಿಸಿದರು. ಅಲ್ಲಲ್ಲಿ ಕೆಲ ಸಂಘ–ಸಂಸ್ಥೆಗಳ ವತಿಯಿಂದ ಪಾನಕ, ಹಣ್ಣು, ನೀರು ವಿತರಣೆ ಮಾಡಿದರು. ಭಾನುವಾರ ರಾತ್ರಿ ಸುರಿದ ಮಳೆಯಿಂದ ಹಾನಿಯಾದ ರಸ್ತೆ ಗುಂಡಿಗಳು ಹಾಗೂ ವಾಹನ ನಿಲುಗಡೆ ಸ್ಥಳಗಳಲ್ಲಿ ತೊಂದರೆಯಾಗದಂತೆ ಪೊಲೀಸ್ ಸಿಬ್ಬಂದಿ ಸೋಮವಾರ ಬೆಳಿಗ್ಗೆಯೇ ವೆಟ್ ಮಿಕ್ಸ್ ಹಾಕಿ ಸರಿಪಡಿಸಿದರು
Devotees who had traveled to Deviramma Hill to have darshan of Deviramma