ಚಿಕ್ಕಮಗಳೂರು: ಉಪ್ಪಳ್ಳಿಯಲ್ಲಿ ನಿರ್ಮಾಣವಾಗುತ್ತಿರುವ ಮೌಲಾನಾ ಆಜಾದ್ ಮಾದರಿ ಶಾಲಾ ಕಟ್ಟಡ ಪೂರ್ಣಗೊಂಡ ನಂತರ ಎಲ್ಕೆಜಿಯಿಂದ ದ್ವಿತೀಯ ಪಿಯುಸಿ ವರೆಗೆ ಉಚಿತ ಶಿಕ್ಷಣ, ಬಿಸಿಯೂಟ ನೀಡಲು ಸರ್ಕಾರದ ಮಟ್ಟದಲ್ಲಿ ಜಾರಿಮಾಡಿಸಲು ಪ್ರಾಮಾಣಿಕ ಪ್ರಯತ್ನ ಮಾಡುವುದಾಗಿ ಶಾಸಕ ಹೆಚ್.ಡಿ. ತಮ್ಮಯ್ಯ ಭರವಸೆ ನೀಡಿದರು.
ಅವರು ಇಂದು ಉಪ್ಪಳ್ಳಿಯ ಹಿರೇಕೊಳಲೆ ರಸ್ತೆ ಎಬಿ ವಾಜಪೇಯಿ ವಸತಿ ಬಡಾವಣೆಯಲ್ಲಿ ಜಿಲ್ಲಾಡಳಿತ, ಜಿ.ಪಂ, ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆ ಇವರುಗಳ ಸಂಯುಕ್ತಾಶ್ರಯದಲ್ಲಿ ಸುಮಾರು ೫ ಕೋಟಿ ರೂ ವೆಚ್ಚದಲ್ಲಿ ಮೌಲಾನಾ ಆಜಾದ್ ಮಾದರಿ ಶಾಲೆಯ ನೂತನ ಕಟ್ಟಡ ನಿರ್ಮಾಣ ಕಾಮಗಾರಿಗೆ ಶಂಕುಸ್ಥಾಪನೆ ನೆರವೇರಿಸಿ ಮಾತನಾಡಿದರು.
ದೇಶಭಕ್ತರಾಗಿ ಸಂಸ್ಕಾರಯುತ ಜೀವನ ನಡೆಸಲು ಉತ್ತಮ ಶಿಕ್ಷಣ ಅಗತ್ಯ, ಈ ನಿಟ್ಟಿನಲ್ಲಿ ಎಲ್ಲಾ ವರ್ಗದ ಬಡವರು, ಶೋಷಿತರನ್ನು ಸಮಾಜದ ಮುನ್ನಲೆಗೆ ತರಲು ಸರ್ಕಾರ ಶ್ರಮಿಸುತ್ತಿದೆ ಎಂದು ಹೇಳಿದರು.
ಅಲ್ಪಸಂಖ್ಯಾತರ ಮಕ್ಕಳು ಶಾಲೆ ತೊರೆದ ಸಂದರ್ಭದಲ್ಲಿ ಮರಳಿ ಬಾ ಶಾಲೆಗೆ ಯೋಜನೆಯನ್ನು ಜಾರಿಗೆ ತಂದು ಶಿಕ್ಷಣ ಕೊಡಬೇಕೆಂಬ ದೃಷ್ಟಿಯಿಂದ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಚಿಂತನೆ ನಡೆಸಿದ್ದರು ಎಂದು ತಿಳಿಸಿದರು.
೬ನೇ ತರಗತಿಯಿಂದ ೧೦ನೇ ತರಗತಿವರೆಗೆ ಆಂಗ್ಲ ಮಾದ್ಯಮ ಶಾಲೆಯಲ್ಲಿ ಸುಮಾರು ೩೦೦ ವಿದ್ಯಾರ್ಥಿಗಳಿಗೆ ಶಿಕ್ಷಣ ನೀಡುವ ಯೋಜನೆಯನ್ನು ರಾಜ್ಯದಲ್ಲಿ ಅನುಷ್ಠಾನಕ್ಕೆ ತಂದು ೨೦೦ ಶಾಲೆಗಳಿಗೆ ಮಂಜೂರಾತಿ ನೀಡಿದ್ದು, ಇದರ ಭಾಗವಾಗಿ ನಗರದ ಬಸವನಹಳ್ಳಿಯಲ್ಲಿ ಶಾಲೆ ನಡೆಸಲಾಗುತ್ತಿದೆ ಎಂದರು.
ಈ ದೇಶದಲ್ಲಿ ಜನಿಸಿದ ಮುಸ್ಲಿಂ, ಕ್ರೈಸ್ತ, ಬೌದ್ಧ, ಪಾದ್ರಿ, ಜೈನ, ಸಿಖ್ ಮುಂತಾದ ಈ ಸಮುದಾಯದವರೆಲ್ಲ ಅಲ್ಪಸಂಖ್ಯಾತರೇ ಆಗಿದ್ದು, ಇವರ ಮಕ್ಕಳು ಉತ್ತಮ ಶಿಕ್ಷಣ ಪಡೆಯಬೇಕೆಂಬ ಉದ್ದೇಶದಿಂದ ಸರ್ಕಾರ ತೆಗೆದುಕೊಂಡ ಮಹತ್ವದ ನಿರ್ಧಾರ ಇದು ಎಂದು ತಿಳಿಸಿದರು.
ಈ ಶಾಲಾ ಕಟ್ಟಡಕ್ಕೆ ನಿವೇಶನ ಗುರ್ತಿಸುವ ಸಂದರ್ಭದಲ್ಲಿ ಇಂದಾವರ ಗ್ರಾಮದಲ್ಲಿ ವಿರೋಧ ವ್ಯಕ್ತವಾಗಿದ್ದರಿಂದ ಅಲ್ಪಸಂಖ್ಯಾತರು ಹೆಚ್ಚಿನ ಸಂಖ್ಯೆಯಲ್ಲಿ ವಾಸಿಸುತ್ತಿರುವ ಪ್ರದೇಶದಲ್ಲಿ ಈ ಶಾಲಾ ಕಟ್ಟಡ ನಿರ್ಮಾಣ ಮಾಡಬೇಕೆಂದು ನಿರ್ಧರಿಸಲಾಗಿತ್ತು ಎಂದರು.
ಮಳೆಗಾಲ ಮುಗಿದ ಬಳಿಕ ಉಪ್ಪಳ್ಳಿಯಿಂದ ಒಡೆಯರಪುರದವರೆಗೂ ರಸ್ತೆಯನ್ನು ಡಾಂಬರೀಕರಣಗೊಳಿಸಿ ಪಕ್ಕದ ಬಾಕ್ಸ್ ಚರಂಡಿಯನ್ನು ನಿರ್ಮಿಸುವುದಾಗಿ ವಿಶ್ವಾಸ ವ್ಯಕ್ತಪಡಿಸಿದರು. ನಗರಸಭಾಧ್ಯಕ್ಷೆ ಶೀಲಾದಿನೇಶ್ ಮಾತನಾಡಿ, ಶಾಸಕ ಹೆಚ್.ಡಿ. ತಮ್ಮಯ್ಯ ಅವರು ಅಧಿಕಾರ ಸ್ವೀಕರಿಸಿದಂದಿನಿಂದ ಈವರೆಗೆ ಜನಪರ ಆಡಳಿತ ನೀಡುತ್ತಿದ್ದಾರೆ. ಅವರನ್ನು ಅಭಿನಂದಿಸುವುದಾಗಿ ಹೇಳಿದ ಅವರು, ಈ ಶಾಲಾ ಕಟ್ಟಡ ಕಾಮಗಾರಿಯನ್ನು ಶೀಘ್ರವಾಗಿ ಮುಕ್ತಾಯಗೊಳಿಸುವಂತೆ ವಿನಂತಿಸಿದರು.
ಸದಸ್ಯ ಮುನೀರ್ ಅಹಮದ್ ಮಾತನಾಡಿ, ಈ ಭಾಗದಲ್ಲಿ ‘ನಮ್ಮ ಕ್ಲಿನಿಕ್’ ಉದ್ಘಾಟಿಸಿದ ಶಾಸಕ ತಮ್ಮಯ್ಯ ಅವರು, ಜನರ ಆರೋಗ್ಯಕ್ಕೆ ಪೂರಕವಾದ ಕೆಲಸ ಮಾಡುತ್ತಿದ್ದಾರೆ ಎಂದು ಶ್ಲಾಘಿಸಿದ ಅವರು, ಈ ಶಾಲೆ ೬ ರಿಂದ ೧೦ನೇ ತರಗತಿವರೆಗೆ ಉಚಿತ ಶಿಕ್ಷಣ ನೀಡುವ ಯೋಜನೆಯನ್ನು ತಂದ ಶಾಸಕರನ್ನು ಅಭಿನಂದಿಸಿದರು.
ಈ ಸಂದರ್ಭದಲ್ಲಿ ನಗರಸಭೆ ಉಪಾಧ್ಯಕ್ಷೆ ಲಲಿತಾ ನಾಯ್ಕ್, ಸಿಡಿಎ ಅಧ್ಯಕ್ಷ ನಯಾಜ್ ಅಹಮದ್, ಖಲಂದರ್, ಮಾರ್ಕಂಡಯ್ಯ, ಜಾವಿದ್, ಅನ್ಸರ್, ಸುದೀಪ್, ಗುಣಾವತಿ, ತನೂಜ್ ನಾಯ್ಡ್, ಕುಸುಮ, ಖಲೀಲ್, ರಾಜು, ಸಂಪತ್ ಮತ್ತಿತರರು ಇದ್ದರು.ಮೊದಲಿಗೆ ಯುವರಾಣಿ ಸ್ವಾಗತಿಸಿದರು.
Maulana Azad Model School constructed at a cost of Rs 5 crore
