ಚಿಕ್ಕಮಗಳೂರು: ನಮ್ಮ ದೇಶದ ಭವಿಷ್ಯ ಯುವ ಜನತೆಯ ಕೈಯಲ್ಲಿದೆ. ವಿದ್ಯಾರ್ಥಿಗಳ ಭವಿಷ್ಯ ರೂಪಿಸಲು ನಾವು ಈ ಉದ್ಯೋಗ ಮೇಳವನ್ನು ಹಮ್ಮಿಕೊಂಡಿದ್ದೇವೆ ಎಂದು ಚಿಕ್ಕಮಗಳೂರು ವಿಧಾನ ಸಭಾ ಕ್ಷೇತ್ರದ ಶಾಸಕ ಹೆಚ್.ಡಿ. ತಮ್ಮಯ್ಯ ಹೇಳಿದರು.
ನಗರದ ಐ.ಡಿ.ಎಸ್.ಜಿ. ಸರ್ಕಾರಿ ಕಾಲೇಜಿನಲ್ಲಿ ಭಾನುವಾರ ಸಂಕಲ್ಪ ಯೋಜನೆಯ ಸರ್ವರಿಗೂ ಉದ್ಯೋಗ ಕಾರ್ಯಕ್ರಮದಡಿ ಜಿಲ್ಲಾ ಮಟ್ಟದ ಕೌಶಲ್ಯ ರೋಜ್ ಗಾರ್ ಉದ್ಯೋಗ ಮೇಳ-೨೦೨೫ರ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿ ರಾಜ್ಯದಲ್ಲಿರುವ ನಿರುದ್ಯೋಗ ಯುವಕ ಯುವತಿಯರನ್ನು ದೃಷ್ಟಿಯಲ್ಲಿಟ್ಟುಕೊಂಡು ಈ ಉದ್ಯೋಗ ಮೇಳವನ್ನು ಆಯೋಜಿಸಲಾಗಿದೆ ಎಂದರು.
ಎಸ್ಎಸ್ಎಲ್ಸಿ, ಪಿಯುಸಿ ಹಾಗೂ ಯಾವುದೇ ಪದವಿ, ಡಿಪ್ಲೋಮಾ ಪೂರೈಸಿರುವಂತಹ ವಿದ್ಯಾರ್ಥಿಗಳು ತಮ್ಮ ಮೂಲ ದಾಖಲೆಗಳೊಂದಿಗೆ ಇಂದು ನಡೆಯುತ್ತಿರುವ ಉದ್ಯೋಗ ಮೇಳದಲ್ಲಿ ಭಾಗವಹಿಸಿ ತಮ್ಮ ವಿದ್ಯಾರ್ಹತೆಗೆ ತಕ್ಕಂತೆ ಉದ್ಯೋಗ ಮೇಳದ ಪ್ರಯೋಜನವನ್ನು ಪಡೆದುಕೊಳ್ಳಬಹುದು ಎಂದರು.
ಅವರಿಗೆ ಮುಂದೆ ತಮ್ಮ ಕಾಲಮೇಲೆ ತಾವು ನಿಂತುಕೊಳ್ಳಲು ನಾವು ತಯಾರು ಮಾಡುತ್ತಿದ್ದೇವೆ ಎಂದು ಈ ಸಂದರ್ಭದಲ್ಲಿ ಅವರು ಹೇಳಿದರು. ಬಂದಿರುವಂತಹ ಎಲ್ಲಾ ನಿರುದ್ಯೋಗ ಯುವಕ ಯುವತಿಯರಿಗೆ ಈ ಉದ್ಯೋಗ ಮೇಳದಲ್ಲಿ ಪ್ರತಿಯೊಬ್ಬರಿಗೂ ಉದ್ಯೋಗ ಸಿಗಲೆಂದು ಹಾರೈಸುತ್ತೇನೆ ಎಂದು ಹೇಳಿದರು.
ಜಿ.ಪಂ ಮುಖ್ಯ ಕಾರ್ಯನಿರ್ವಾಹಣಾಧಿಕಾರಿ ಹೆಚ್.ಎಸ್ ಕೀರ್ತನಾ ಮಾತನಾಡಿ ನಾವು ಮಾಡುವ ಕೆಲಸದ ಮೇಲೆ ನಮಗೆ ಮೊದಲು ಗೌರವವಿರಬೇಕು. ಸಣ್ಣ ಕೆಲಸವೇ ಇರಲಿ , ದೊಡ್ಡ ಕೆಲಸವೇ ಇರಲಿ ಅದನ್ನು ಶ್ರಧ್ದೆಯಿಂದ ಮಾಡಿದರೆ ಯಶಸ್ಸು ಕಾಣಲು ಸಾಧ್ಯ. ಜಿಲ್ಲೆಯನ್ನು ಸಂಪೂರ್ಣವಾಗಿ ನಿರುದ್ಯೋಗ ಮುಕ್ತಗೊಳಿಸುವ ನಿಟ್ಟಿನಲ್ಲಿ ಈ ಕಾರ್ಯಕ್ರಮ ಆಯೋಜಿಸಲಾಗಿದೆ. ಇದರಿಂದ ಎಲ್ಲರಿಗೂ ಉದ್ಯೋಗ ಅವಕಾಶ ಸಿಗಲಿ ಎಂದು ಹೇಳಿದರು.
ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿ ಜಿಲ್ಲಾ ಅಧ್ಯಕ್ಷ ಎಂ.ಸಿ. ಶಿವಾನಂದ ಸ್ವಾಮಿ ಅವರು ಮಾತನಾಡಿ ವಿದ್ಯಾರ್ಥಿಗಳಿಗೆ ಇದೊಂದು ಸುವರ್ಣ ಅವಕಾಶ ಇಂತಹ ಉದ್ಯೋಗ ಮೇಳದಿಂದ ಅವರಿಗೆ ಉದ್ಯೋಗದ ಅವಕಾಶ ದೊರಕುವಂತಾಗುತ್ತದೆ ಎಂದು ಹೇಳಿದರು.
ಕ. ರಾ. ಕೃಷಿ ಉತ್ಪನ್ನ ಸಂಸ್ಕರಣೆ ಮತ್ತು ರಫ್ತು ನಿಗಮ ಅಧ್ಯಕ್ಷರಾದ ಬಿ.ಹೆಚ್. ಹರೀಶ್ ಮಾತನಾಡಿ ತಮ್ಮ ಪದವಿಗೆ ತಕ್ಕಂತೆ ಉದ್ಯೋಗ ನಿಮಗೆ ಈ ಕಾರ್ಯಕ್ರಮದಿಂದ ಸಿಗಲಿ ಹಾಗೂ ಇದನ್ನು ಸದ್ಬಳಕೆ ಮಾಡಿಕೊಂಡು ತಮ್ಮ ಗುರಿಯನ್ನು ಸಾಧಿಸಿಕೊಳ್ಳಿ ಎಂದು ಹೇಳಿದರು.
ಜಿಲ್ಲಾ ಸರ್ಕಾರಿ ನೌಕರ ಸಂಘದ ಅಧ್ಯಕ್ಷರಾದ ದೇವೇಂದ್ರ ಅವರು ಮಾತನಾಡಿ ಎಲ್ಲರೂ ತಮ್ಮದೇ ಆದ ಕೌಶಲ್ಯ ಹೊಂದಿರುತ್ತಾರೆ. ಆ ಕೌಶಲ್ಯಕ್ಕೆ ತಕ್ಕ ವೇದಿಕೆ ಸಿಗದೇ ನಿರುದ್ಯೋಗಿಗಳಾಗಿರುತ್ತಾರೆ. ಅಂತವರಿಗೆ ಇದೊಂದು ಒಳ್ಳೆಯ ವೇದಿಕೆಯಾಗಿದೆ ಇದರ ಪ್ರಯೋಜನ ಪಡೆದುಕೊಂಡು ತಮ್ಮ ಕನಸ್ಸನ್ನು ನನಸಾಗಿಸಿಕೊಳ್ಳಿ ಎಂದು ಹೇಳಿದರು.
ಜಿಲ್ಲಾ ಕೌಶಲ್ಯಾಭಿವೃಧ್ಧಿ ಇಲಾಖೆ ಅಧಿಕಾರಿ ಪ್ರಶಾಂತ್ ಹೆಚ್.ಸಿ ಅವರು ಪ್ರಸ್ತಾವಿಕ ನುಡಿಗಳನ್ನಾಡಿದರು. ಕಾರ್ಯಕ್ರಮದಲ್ಲಿ ಐ.ಡಿ.ಎಸ್.ಜಿ ಕಾಲೇಜಿನ ಪ್ರಾಂಶುಪಾಲರಾದ ಡಾ. ಪುಷ್ಪಭಾರತಿ ಆರ್.ಎ, ವಿವಿಧ ಇಲಾಖೆ ಅಧಿಕಾರಿ ಸಿಬ್ಬಂದಿಗಳು ಉಪಸ್ಥಿತರಿದ್ದರು.
District Level Skill Roj Gar Job Fair-2025