ಸಂಗಮೇಶ್ವರಪೇಟೆ: ಗ್ರಾಮೀಣ ರೈತರ ಆರ್ಥಿಕ ಸಧೃಡರಾದರೆ ದೇಶದ ಆರ್ಥಿಕತೆ ಸದೃಢವಾಗುತ್ತದೆ. ಸಹಕಾರಿ ಆಂದೋಲನ ಜನರ ಆಂದೋಲನವಾಗಬೇಕೇ ಹೊರತು ಸರ್ಕಾರದ ಆಂದೋಲನವಾಗಬಾರದು ಎಂದು ಸಹಕಾರ ಸಚಿವ ಕೆ.ಎನ್.ರಾಜಣ್ಣ ತಿಳಿಸಿದರು.
ಇಲ್ಲಿನ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಅಮೃತ ಮಹೋತ್ಸವ ಸಮಾರಂಭ ಉದ್ಘಾಟಿಸಿ ಮಾತನಾಡಿದ ಅವರು, ‘ಪಿಎಸಿಎಸ್ಗಳು ತಪ್ಪಿ ನಡೆದಾಗ ಅದನ್ನು ಸರಿದಾರಿಗೆ ತರುವುದು ಸರ್ಕಾರದ ಕೆಲಸ. ಎಲ್ಲಿಯವರೆಗೆ ರೈತರು ಬೆಳೆದ ಬೆಳೆಗೆ ರೈತರೇ ದರ ನಿಗದಿ ಮಾಡಿ ಮಾರಾಟಮಾಡುವ ಸ್ಥಿತಿಗೆ ಬರುವುದಿಲ್ಲವೂ ಅಲ್ಲಿಯವರೆಗೆ ಆರ್ಥಿಕ ಸಂಕಷ್ಟ ಎದುರಿಸುವುದು ಸಾಮಾನ್ಯ.
ಕೇಂದ್ರ ಸರ್ಕಾರ ಬಂಡವಾಳಶಾಹಿಗಳ ₹16 ಲಕ್ಷ ಕೋಟಿ ಸಾಲ ಮನ್ನಾ ಮಾಡಿದೆ. ಆದರೆ, ರಾಜ್ಯ ಸರ್ಕಾರ ರೈತರ ಸಾಲ ಮನ್ನಾ ಮಾಡಲು ಮುಂದಾದರೆ ದೇಶದ ಆರ್ಥಿಕ ಪರಿಸ್ಥಿತಿ ಅಲ್ಲೊಲ್ಲ ಕಲ್ಲೊಲ ಆಗುತ್ತದೆ ಎಂದು ಕೇಂದ್ರ ಸರ್ಕಾರದ ಅಧಿಕಾರಿಯೊಬ್ಬರು ಹೇಳುತ್ತಿದ್ದಾರೆ. ರೈತರ ಪರ ಯಾವ ಸರ್ಕಾರ ಇದೆ ಎಂಬುದನ್ನು ಜನ ತಿರ್ಮಾನ ಮಾಡಲಿ’ ಎಂದರು.
ಚಿಕ್ಕಮಗಳೂರು–ಅರಸೀಕೆರೆ ಸೇರಿಸಿ ಜಿಲ್ಲೆಯಲ್ಲಿ ಹಾಲಿನ ಡೇರಿ ಆರಂಭಿಸಲು ಮುಖ್ಯಮಂತ್ರಿ ಒಪ್ಪಿದ್ದಾರೆ. ಶೀಘ್ರದಲ್ಲೇ ಹಾಲು ಸಂಗ್ರಹಿಸುವ ಡೇರಿ ಆರಂಭಗೊಳ್ಳಲಿದೆ ಎಂದರು.
ಶಾಸಕ ಟಿ.ಡಿ.ರಾಜೇಗೌಡ ಮಾತನಾಡಿ, ‘ಸರ್ಕಾರದ ಸೌಲಭ್ಯವನ್ನು ಕಟ್ಟಕಡೆಯ ವ್ಯಕ್ತಿಗೂ ತಲುಪಿಸುವಲ್ಲಿ ಪ್ರಾಥಮಿಕ ಕೃಷಿ ಪತ್ತಿನ ಸಂಗಮೇಶ್ವರ ಪೇಟೆ ಪಿಎಸಿಎಸ್ನಲ್ಲಿ ವಾರ್ಷಿಕ ₹180 ಕೋಟಿ ವ್ಯವಹಾರ ನಡೆಸುತ್ತಿದೆ. 4 ಸಾವಿರ ಮೆಟ್ರಿಕ್ ಟನ್ ಸಾಮರ್ಥ್ಯದ ₹2.5ಕೋಟಿ ವೆಚ್ಚದಲ್ಲಿ ಉಗ್ರಾಣ ನಿರ್ಮಾಣ ಮಾಡಿದೆ’ ಎಂದರು.
ಇದೇ ಸಂದರ್ಭದಲ್ಲಿ ಸಂಘದ ಅಧ್ಯಕ್ಷರಾಗಿ ಸೇವೆ ಸಲ್ಲಿಸಿದ್ದ ಎಸ್.ವಿ.ಮಂಜುನಾಥ್, ಉದಯಕುಮಾರ್ ಹೆಗ್ಡೆ ಸೇರಿದಂತೆ ಹತ್ತು ಜನರನ್ನು ಸನ್ಮಾನಿಸಿ, ಸ್ಮರಣ ಸಂಚಿಕೆ ಬಿಡುಗಡೆ ಮಾಡಲಾಯಿತು. ಬೆಳೆ ದಾಸ್ತಾನಿಗಾಗಿ ನಿರ್ಮಿಸಿದ್ದ ಉಗ್ರಾಣ ಉದ್ಘಾಟಿಸಲಾಯಿತು.
ಪಿಎಸಿಎಸ್ ಅಧ್ಯಕ್ಷ ಕೆ.ಎಲ್.ಚಂದ್ರೇಗೌಡ, ಉಪಾಧ್ಯಕ್ಷ ಯು.ವಿ.ಜಯರಾಮ್, ಮಹಿಳಾ ಸಹಕಾರಿ ಬ್ಯಾಂಕ್ ಅಧ್ಯಕ್ಷೆ ಬಿ.ಸಿ.ಗೀತಾ, ಮಾಜಿ ಎಂಎಲ್ಸಿ ಎಸ್.ವಿ.ಮಂಜುನಾಥ್, ಟಿ.ಇ.ಮಂಜುನಾಥ್, ತ್ರಿವೇಣಿರಾವ್, ಬಿ.ಎನ್.ಸೋಮೇಶ್, ಸಿಇಒ ಬಾಲಕೃಷ್ಣ, ರಮಣ ರೆಡ್ಡಿ, ಡಿ.ಎಸ್.ತೇಜಸ್ವಿನಿ, ಪ್ರತಾಪ್ ರೆಡ್ಡಿ, ಸ್ನೇಹಾ ನೀಲಪ್ಪಗೌಡ, ಸಾಧ್ವಿನಿ ಕೊಪ್ಪ ಭಾಗವಹಿಸಿದ್ದರು.
If the economy of rural farmers is strong the country’s economy will be strong.