ಚಿಕ್ಕಮಗಳೂರು: ಜಿಲ್ಲಾದ್ಯಂತ ಎಲ್ಲಾ ತಾಲ್ಲೂಕುಗಳಲ್ಲಿ ಉತ್ತಮವಾದ ಮಳೆಯಾಗಿದ್ದು, ಪೂರ್ವ ಮುಂಗಾರು ಕೃಷಿಗೆ ಭೂಮಿ ಸಿದ್ಧತೆ ಚಟುವಟಿಕೆ ಚುರುಕುಗೊಂಡಿದೆ. ಅಶ್ವಿನಿ ಮಳೆ ನಕ್ಷತ್ರದಿಂದ ಉತ್ತಮ ಆರಂಭ ಪಡೆದ ಮಳೆ ಇದುವರೆಗೆ ೯೪.ಮಿ.ಮೀ.ನಷ್ಟು (ಶೇ.೬೮ ರಷ್ಟು ಹೆಚ್ಚು) ಸುರಿದಿದ್ದು, ಕೃಷಿ ಯೋಗ್ಯ ವಾತಾವರಣ ಕಲ್ಪಿಸಿಕೊಟ್ಟಿದೆ ಜಂಟಿ ಕೃಷಿ ನಿರ್ದೇಶಕರು ತಿಳಿಸಿದ್ದಾರೆ.
೨೦೨೫-೨೬ ರಲ್ಲಿ ಜಿಲ್ಲೆಯಲ್ಲಿ ಮುಂಗಾರು ಹಂಗಾಮಿಗೆ ೯೦೦೯೦ ಹೆಕ್ಟೇರ್ ಬಿತ್ತನೆ ಗುರಿ ಹೊಂದಿದ್ದು, ಪೂರ್ವ ಮುಂಗಾರು ಹಂಗಾಮಿಗೆ ೯೧೫೫ ಹೆಕ್ಟೇರ್ ಪ್ರದೇಶದಲ್ಲಿ (ನೆಲಗಡಲೆ-೨೨೦೦ ಹೆಕ್ಟೇರ್, ಹೆಸರು ೧೭೧೦ ಹೆಕ್ಟೇರ್, ಹತ್ತಿ ೧೪೨೦ ಹೆಕ್ಟೇರ್, ಅಲಸಂದೆ ೧೩೦೦ ಹೆಕ್ಟೇರ್, ಉದ್ದು ೪೨೫ ಹೆಕ್ಟೇರ್, ಎಳ್ಳು ೨೧೦೦ ಹೆಕ್ಟೇರ್) ಬಿತ್ತನೆ ಗುರಿ ಹೊಂದಲಾಗಿದೆ.
ಬಿತ್ತನೆ ಬೀಜ ಪೂರೈಕೆ: ಪೂರ್ವ ಮುಂಗಾರು ಹಂಗಾಮಿಗೆ ಜಿಲ್ಲೆಯಲ್ಲಿ ೧೦೦೯.೨೫ ಕ್ವಿಂಟಾಲ್ ಬಿತ್ತನೆ ಬೀಜದ ಗುರಿಯಿದ್ದು, ಬೇಡಿಕೆಗೆ ಅನುಸಾರವಾಗಿ ಬಿತ್ತನೆಗೆ ಅನುಕೂಲವಾಗುವಂತೆ ಉದ್ದು, ಹೆಸರು, ಅಲಸಂದೆ, ನೆಲಗಡಲೆ ಬಿತ್ತನೆ ಬೀಜಗಳನ್ನು ರೈತ ಸಂಪರ್ಕ ಕೇಂದ್ರಗಳಲ್ಲಿ ದಾಸ್ತಾನು ಮಾಡಲಾಗಿದ್ದು ರಿಯಾಯಿತಿ ದರದಲ್ಲಿ ವಿತರಿಸುವ ಕಾರ್ಯ ಪ್ರಗತಿಯಲ್ಲಿದೆ. ಬಿತ್ತನೆ ಬೀಜದಲ್ಲಿ ಯಾವುದೇ ಕೊರತೆಯಾಗಿಲ್ಲ. ಅದರಂತೆ ಮುಂಗಾರು ಹಂಗಾಮಿಗೆ ಜಿಲ್ಲೆಯಲ್ಲಿ ೪೩೦೮.೮೯ ಕ್ವಿಂಟಾಲ್ ಬಿತ್ತನೆ ಬೀಜಗಳಿಗೆ ಬೇಡಿಕೆ ಇದ್ದು, ಅಗತ್ಯವಾದ ಬಿತ್ತನೆ ಬೀಜಗಳನ್ನು ರಿಯಾಯಿತಿ ದರದಲ್ಲಿ ರೈತ ಸಂಪರ್ಕ ಕೇಂದ್ರಗಳ ಮೂಲಕ ಸಕಾಲದಲ್ಲಿ ರೈತರ ಬೇಡಿಕೆಗೆ ಅನುಗುಣವಾಗಿ ಪೂರೈಸಲು ಇಲಾಖೆಯು ಸಜ್ಜುಗೊಂಡಿದೆ.
ಅಧಿಕೃತ ಮಾರಾಟಗಾರರಿಂದ ಖರೀದಿ ಸೂಕ್ತ: ರೈತರು ಅಧಿಕೃತ ಬಿತ್ತನೆ ಬೀಜ ಮಾರಾಟಗಾರರಿಂದಲೇ ಬಿತ್ತನೆ ಬೀಜವನ್ನು ಖರೀದಿಸುವುದು ಉತ್ತಮ. ಬಿತ್ತನೆ ಬೀಜ ಹಾಗೂ ರಸಗೊಬ್ಬರ ಖರೀದಿಸಿದಾಗ ತಪ್ಪದೇ ಅಧಿಕೃತ ರಶೀದಿ ಪಡೆಯಬೇಕು. ಬಿತ್ತನೆ ಬೀಜ ರಶೀದಿಯಲ್ಲಿ ಲಾಟ್ನಂಬರ್ ನಮೂದಿಸಿರಬೇಕು. ಬಿತ್ತನೆ ಬೀಜದ ಚೀಲ, ಸ್ವಲ್ಪ ಪ್ರಮಾಣದ ಬಿತ್ತನೆ ಬೀಜ, ದೃಢೀಕರಣದ ಬಗ್ಗೆ ಲಗತ್ತಿಸಿರುವ ಟ್ಯಾಗುಗಳನ್ನು ಬೆಳೆ ಕಟಾವು ಆಗುವವರೆಗೆ ಸುರಕ್ಷಿತವಾಗಿ ಕಾಯ್ದಿಟ್ಟುಕೊಳ್ಳಬೇಕು.
ಬಿತ್ತನೆ ಬೀಜವನ್ನು ಪೀಡೆನಾಶಕಗಳಿಂದ ಉಪಚರಿಸಲಾಗಿದೆಯೆ ಎಂಬುದನ್ನು ಗಮನಿಸುವುದು ಹಾಗೂ ಒಂದು ವೇಳೆ ಬಿತ್ತನೆ ಬೀಜಗಳು ಬೀಜೋಪಚಾರವಾಗಿರದಿದ್ದಲ್ಲಿ ಬೀಜದಿಂದ ಹಾಗೂ ಮಣ್ಣಿನಿಂದ ಹರಡುವ ರೋಗ ಮತ್ತು ಕೀಟಗಳಿಂದ ಬೆಳೆಗಳನ್ನು ರಕ್ಷಿಸಲು ಬೀಜವನ್ನು ಬಿತ್ತನೆಗೆ ಉಪಯೋಗಿಸುವ ಮೊದಲು ಪೀಡೆನಾಶಕಗಳಿಂದ ಉಪಚರಿಸಿ ಬಿತ್ತುವುದರಿಂದ ಪೀಡೆಗಳ ನಿರ್ವಹಣೆಗಳೊಂದಿಗೆ ಹೆಚ್ಚಿನ ಇಳುವರಿ ಪಡೆಯಬಹುದು.
ರಸಗೊಬ್ಬರ ಪೂರೈಕೆ: ಜಿಲ್ಲೆಯಲ್ಲಿ ಏಪ್ರಿಲ್ ಮಾಸದವರೆಗೆ ಒಟ್ಟು ೧೭೮೨೨ ಟನ್ ವಿವಿಧ ರಸಗೊಬ್ಬರಗಳ ಬೇಡಿಕೆ ಇದ್ದು ಪ್ರಸ್ತುತ ಕಾಪು ದಾಸ್ತಾನು ಮತ್ತು ರಸಗೊಬ್ಬರ ಮಾರಾಟಗಾರರಲ್ಲಿ ಒಟ್ಟು ೨೬೫೪೧ ಟನ್ (ಡಿ ಎಪಿ-೭೫೦, ಕಾಂಪ್ಲೆಕ್ಸ್ ೧೪೦೭೨ ಟನ್, ಎಂಒಪಿ ೪೪೨೭ ಟನ್, ಯೂರಿಯಾ ೬೦೫೭ ಟನ್, ಎಸ್ಎಸ್ಪಿ ೧೨೩೫ ಟನ್) ರಸಗೊಬ್ಬರ ದಾಸ್ತಾನಿದ್ದು ಯಾವುದೇ ಕೊರತೆ ಇರುವುದಿಲ್ಲ.
ರೈತರು ರಸಗೊಬ್ಬರಗಳನ್ನು ಖರೀದಿಸುವಾಗ ಚೀಲದ ಮೇಲೆ ನಮೂದಿಸಿರುವ ಎಂ.ಆರ್.ಪಿ ದರದಲ್ಲಿಯೇ ಖರೀದಿಸಬೇಕು ಹಾಗೂ ಕಡ್ಡಾಯವಾಗಿ ರಸೀದಿಯನ್ನು ಪಡೆಯಬೇಕು. ರಸಗೊಬ್ಬರ ಮಾರಾಟಗಾರರು ಎಂ.ಆರ್.ಪಿ ದರಕ್ಕಿಂತ ಹೆಚ್ಚಿನ ಬೆಲೆಗೆ ಮಾರಾಟ ಮಾಡುವುದು ಕಂಡುಬಂದಲ್ಲಿ ಹತ್ತಿರದ ರೈತ ಸಂಪರ್ಕ ಕೇಂದ್ರ, ಸಹಾಯಕ ಕೃಷಿ ನಿರ್ದೇಶಕರ ಕಚೇರಿ, ಉಪ ಕೃಷಿ ನಿರ್ದೇಶಕರ ಕಚೇರಿ, ಜಂಟಿ ಕೃಷಿ ನಿರ್ದೇಶಕರ ಕಚೆರಿಗೆ ಸೂಕ್ತ ದಾಖಲೆಯೊಂದಿಗೆ ಮಾಹಿತಿ ನೀಡಿದಲ್ಲಿ ಅಂತಹ ರಸಗೊಬ್ಬರ ಮಾರಾಟಗಾರರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಅವರು ಮಾಹಿತಿ ನೀಡಿದ್ದಾರೆ.
Pre-monsoon gives good start to the district