ಚಿಕ್ಕಮಗಳೂರು: ಆಪರೇಷನ್ ಸಿಂಧೂರ ಕಾರ್ಯಚರಣೆಯಲ್ಲಿ ಹೋರಾಡಿದ ಸೈನಿಕರಿಗೆ ಆತ್ಮಸ್ಥೈರ್ಯ ತುಂಬಲು ರಾಷ್ಟ್ರ ರಕ್ಷಣೆಗಾಗಿ ನಾಗರಿಕರು ಸಂಘಟನೆಯಿಂದ ನಗರದಲ್ಲಿ ಶುಕ್ರವಾರ ತಿರಂಗಾಯಾತ್ರೆ ನಡೆಸಲಾಯಿತು.
ಒಂಕಾರೇಶ್ವರ ದೇವಾಲಯದಿಂದ ಆಜಾದ್ ಪಾರ್ಕ್ ವೃತ್ತದ ತನಕ ಸಾವಿರ ಅಡಿ ಉದ್ದದ ರಾಷ್ಟ್ರಧ್ವಜ ಹಿಡಿದು ನೂರಾರು ಜನ ಘೋಷಣೆ ಕೂಗುತ್ತಾ ಸಾಗಿದರು. ಈ ವೇಳೆ ಮಾತನಾಡಿದ ವಿಧಾನ ಪರಿಷತ್ ಸದಸ್ಯ ಸಿ.ಟಿ. ರವಿ, ‘ನಾವೆಲ್ಲರು ಒಂದಾಗಿ ಸೈನಿಕರ ಜತೆಗೆ ನಾವಿದ್ದೇವೆ ಎಂಬ ದೃಷ್ಟಿಯಿಂದ ತಿರಂಗಯಾತ್ರೆ ಆಯೋಜಿಸಲಾಗಿದೆ’ ಎಂದರು.
ಪಾಕಿಸ್ತಾನ ಭಯೋತ್ಪಾದನೆಯ ಬೀಜ ಬಿತ್ತಿ ಆ ಮೂಲಕ ಭಾರತವನ್ನು ದುರ್ಬಲಗೊಳಿಸುವ ಸಂಚು ಮಾಡುತ್ತಿದೆ. ಭಯೋತ್ಪಾದನೆ ಕೊನೆಯಾಗಬೇಕು. ಭಯೋತ್ಪಾದನೆ ಮಾನವತೆಗೆ ವಿರೋಧವಾಗಿದೆ. ಪ್ರಜಾಪ್ರಭುತ್ವಕ್ಕೆ ಭಯ ಹುಟ್ಟಿಸುತ್ತಿದೆ. ಇದು ಸಂವಿಧಾನಕ್ಕೆ ವಿರುದ್ಧವಾಗಿದೆ. ಹೀಗಾಗಿ ಇದು ಕೊನೆಯಾಗಬೇಕು. ಕೇವಲ ಭಯೋತ್ಪಾದಕರನ್ನು ಮಟ್ಟ ಹಾಕುವುದರಿಂದ ಇದು ಕೊನೆಯಾಗಲ್ಲ. ಭಯೋತ್ಪಾದನೆಯ ಡಿಎನ್ಎ ನಾಶಪಡಿಸುವ ಕೆಲಸ ಮಾಡಬೇಕಾಗುತ್ತದೆ ಎಂದು ಹೇಳಿದರು.
‘ದೇಶದ ಒಳಗೂ ಕೆಲವರಿದ್ದಾರೆ. ದೇಶದ ಅನ್ನ ತಿಂದು ಪಾಕಿಸ್ತಾನಕ್ಕೆ ಜಿಂದಾಬಾದ್ ಎಂದು ಕೂಗುವವರಿಗೆ ತಕ್ಕ ಪಾಠ ಕಲಿಸಬೇಕಿದೆ. ಭಾರತದ ಜತೆ ನಾವೆಲ್ಲರೂ ಇದ್ದೇವೆ ಎಂಬ ಸಂದೇಶವನ್ನು ಈ ತಿರಂಗಾಯಾತ್ರೆಯ ಮೂಲಕ ಸಾರಿದ್ದೇವೆ’ ಎಂದರು.
ವಿಧಾನ ಪರಿಷತ್ ಉಪಸಭಾಪತಿ ಎಂ.ಕೆ.ಪ್ರಾಣೇಶ್, ಮುಖಂಡ ಡಿ.ಎನ್. ಜೀವರಾಜ್, ಬಿಜೆಪಿ ಜಿಲ್ಲಾ ಘಟಕದ ಅಧ್ಯಕ್ಷ ದೇವರಾಜ್ ಶೆಟ್ಟಿ, ನಗರ ಮಂಡಲ ಅಧ್ಯಕ್ಷ ಪುಷ್ಪರಾಜ್, ಬಿಜೆಪಿ ಜಿಲ್ಲಾ ವಕ್ತಾರ ಪುಟ್ಟಸ್ವಾಮಿ, ಯುವ ಮೋರ್ಚಾ ಅಧ್ಯಕ್ಷ ಸಂತೋಷ್ ಕೋಟ್ಯಾನ್ , ಮಹಿಳಾ ಮೋರ್ಚಾ ಅಧ್ಯಕ್ಷೆ ಜಸಿಂತಾ ಅನಿಲ್ ಕುಮಾರ್, ಜಿಲ್ಲಾ ಬಿಜೆಪಿ ಉಪಾಧ್ಯಕ್ಷ ಪ್ರೇಮಕುಮಾರ್, ಬಿಜೆಪಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ನರೇಂದ್ರ, ಮುಖಂಡ ಕೋಟೆ ರಂಗನಾಥ್ ಇದ್ದರು.
Tiranga Yatra in the city to boost the morale of the soldiers