ಚಿಕ್ಕಮಗಳೂರು: ಸಂಗೀತ, ಸಾಹಿತ್ಯ ಭಾರತೀಯ ಸಂಸ್ಕೃತಿಯ ಅವಿಭಾಜ್ಯ ಅಂಗವಾಗಿದ್ದು ಅದನ್ನು ಉಳಿಸಿ ಬೆಳೆಸುವುದು ನಮ್ಮ ನಿಮ್ಮೆಲ್ಲರ ಆದ್ಯ ಕರ್ತವ್ಯ ಎಂದು ಕನ್ನಡ ಪೂಜಾರಿ ಹಿರೇಮಗಳೂರು ಕಣ್ಣನ್ ಹೇಳಿದರು.
ನಗರದ ಕುವೆಂಪು ಕಲಾಮಂದಿರದಲ್ಲಿ ಮನೋರಂಜನೆ ಸಂಗೀತ ಮಹಾವಿದ್ಯಾಲಯ ಟ್ರಸ್ಟ್ನ ರಜತ ಮಹೋತ್ಸವ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು ಪಾಶ್ಚ್ಯಾತ್ಯ ಸಂಸ್ಕೃತಿಗೆ ಯುವ ಪೀಳಿಗೆ ಮಾರುಹೋಗುತ್ತಿದ್ದು, ಸಂಗೀತ ಪರಂಪರೆಯನ್ನು ಉಳಿಸುವಲ್ಲಿ ಯುವಜನತೆಯ ಪಾತ್ರ ಮಹತ್ವವಾಗಿದೆ ಎಂದರು.
ಭಾರತೀಯ ಸಂಸ್ಕೃತಿಯ ಅವಿಚಿನ್ನ ಭಾಗವಾದ ಸಾಂಸ್ಕೃತಿಕ, ಧಾರ್ಮಿಕ,ಸಾಮಾಜಿಕ ಮೌಲ್ಯಗಳಿಗೆ ತರ್ಪಣ ಬಿಡುತ್ತಿರುವ ಸಂದಿಗ್ದ ಪರಿಸ್ಥಿತಿಯಲ್ಲಿ ದೇಶೀಯ ಸಂಗೀತ ಕಲೆ ಉಳಿಸುವಲ್ಲಿ ಮತ್ತು ಕರ್ಮ,ಯೋಗ ,ಜ್ಞಾನಮಾರ್ಗದಲ್ಲಿ ತೊಡಗಿಸಿಕೊಂಡಿರುವ ಮನರಂಜನೆ ಸಂಗೀತ ಮಹಾವಿದ್ಯಾಲಯದ ಕಾರ್ಯಶ್ಲಾಘನೀಯ ಎಂದರು.
ಸಂಗೀತಗಾರರಿಗೆ ಮತ್ತು ಕೇಳುಗರಿಗೆ ಮೆದುಳಿನ ಅಗತ್ಯವಿಲ್ಲ ಹೃದಯವಂತಿಕೆ ಇರಬೇಕು. ಇಂದಿನ ಅಬ್ಬರದ ಕಾರ್ಯಕ್ರಮಗಳ ಅಪಸಂಸ್ಕೃತಿಯ ಹೊರಳು ಹಾದಿಯಲ್ಲಿರುವ ಸಮಾಜದಲ್ಲಿ ಸಂಸ್ಕೃತಿಯನ್ನು ಉಳಿಸಿ,ಬೆಳೆಸುವ ಇಂತಹ ಕಾರ್ಯಕ್ರಮಗಳು ಹೆಚ್ಚು ಹೆಚ್ಚು ನಡೆಯಬೇಕು ಎಂದು ಹೇಳಿದರು.
ಶಿವಮೊಗ್ಗದ ಸಂಗೀತ ವಿದ್ವಾನ್ಗುರುಗುಹಾನಾಗರಾಜ್ ಮಾತನಾಡಿ ಶಾಸ್ತ್ರೀಯ ಸಂಗೀತ ಮನಸ್ಸು,ಬುದ್ಧಿಗಳನ್ನು ಎಚ್ಚರ ಸ್ಥಿತಿಯಲ್ಲಿಡುವ ಮಾಧ್ಯಮ ವಾಗಿದ್ದು,ಭಾರತದಲ್ಲಿ ಎರಡು ಸಂಗೀತ ಪರಂಪರೆಗಳಿದ್ದರೂ ಸಹ ಆ ಸಂಗೀತವನ್ನು ಆಸ್ವಾದಿಸುವ ವಾತಾವರಣ ಸೃಷ್ಟಿಸುವಲ್ಲಿ ಸಂಗೀತಗಾರರು ಎಂದು ವಿಫಲರಾಗಿದ್ದಾರೆ ಎಂದು ವಿಷಾದಿಸಿದರು.
೩೦೦೦ ವರ್ಷಕ್ಕೂ ಹೆಚ್ಚಿನ ವರ್ಷಗಳ ಇತಿಹಾಸವಿರುವ ಸಂಗೀತವನ್ನು ವೇದಿಕೆ ಕಾರ್ಯಕ್ರಮಗಳಿಗೆ ಸೀಮಿತಗೊಳಿಸದೆ ಪೋಷಕರು ಮಕ್ಕಳನ್ನು ಸಂಗೀತ ಔಪಾಸಕರನ್ನಾಗಿ ಮಾಡಬೇಕು ಎಂದ ಅವರು ಸಂಗೀತಗಾರರು ಶೋತ್ರುಗಳಿಗಾಗಿ ಹಾಡುವ ಪರಿಪಾಠ ಬೆಳೆಸಿಕೊಳ್ಳುವ ಮೊದಲು ತಮ್ಮ ಆತ್ಮ ಸಂತೋಷಕ್ಕಾಗಿ ಹಾಡುವುದನ್ನು ರೂಢಿಸಿಕೊಳ್ಳಬೇಕು ಎಂದು ಹೇಳಿದರು.
ಆದಿಚುಂಚನಗಿರಿ ತಾಂತ್ರಿಕ ಮಹಾವಿದ್ಯಾಲಯದ ರಿಜಿಸ್ಟರ್ ಸಿ ಕೆ ಸುಬ್ಬರಾಯ ಮಾತನಾಡಿ ಪುರಂದರದಾಸರು,ಕನಕದಾಸರು ಸೇರಿದಂತೆ ದಾಸ ಶ್ರೇಷ್ಠರು ನೀಡಿರುವ ಕೀರ್ತನೆಗಳಲ್ಲಿ ಮಾನವೀಯ ಮೌಲ್ಯಗಳು, ತತ್ವ ಆದರ್ಶಗಳನ್ನು ತಮ್ಮ ಬದುಕಿನಲ್ಲಿ ಅಳವಡಿಸಿಕೊಂಡದ್ದೆ ಆದರೆ ಬದುಕನ್ನು ಸರಿದಾರಿಯಲ್ಲಿ ಸಾಗಿಸಲು ಸಾಧ್ಯವಾಗುತ್ತದೆ ಎಂದು ಹೇಳಿದರು.
ಮನೋರಂಜನಿ ಸಂಗೀತ ಮಹಾವಿದ್ಯಾಲಯದ ಮುಖ್ಯಸ್ಥ ಬಿ.ಸಿ ಜಯರಾಮ್ ಪ್ರಾಸ್ತಾವಿಕವಾಗಿ ಮಾತನಾಡಿ ೧೯೯೦ರಲ್ಲಿ ಆರಂಭಗೊಂಡ ಮನರಂಜನೆ ಸಂಗೀತ ವಿದ್ಯಾಲಯ ೨೫ ವರ್ಷಗಳ ಸುಧೀರ್ಘ ಪಯಣದಲ್ಲಿ ಸಾವಿರಾರು ವಿದ್ಯಾರ್ಥಿಗಳಿಗೆ ಸಂಗೀತಗಾರವನ್ನಾಗಿಸಿ ರೂಪಿಸಿದೆ. ೨೫ ವರ್ಷಗಳಿಂದ ಸಂಸ್ಥೆಯು ಆಯೋಜಿಸಿಕೊಂಡು ಬಂದ ಕಾರ್ಯಕ್ರಮಗಳ ಬಗ್ಗೆ ಮಾಹಿತಿ ನೀಡಿದರು.
ಈ ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಿದುಷಿ ಅರ್ಪಣಾ ಜಯರಾಮ್ ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕ ಡಾಕ್ಟರ್ರಮೇಶ್, ಬಿ ಎಚ್ ನರೇಂದ್ರ ಪೈ ಉಪಸ್ಥಿತರಿದ್ದರು. ಅರ್ಪಿತ ಪ್ರಾರ್ಥಿಸಿ, ಸುಜೇತಜಯರಾಮ್,ಗೀತಾನಿ ರೂಪಿಸಿದರು.
Music and literature are an integral part of Indian culture.