ಚಿಕ್ಕಮಗಳೂರು: ಇದೊಂದು ಬೇಜವಬ್ದಾರಿ ಸರ್ಕಾರ, ಬೆಲೆ ಏರಿಕೆಯ ತನ್ನ ಚಾಳಿಯನ್ನು ಬಿಟ್ಟಿಲ್ಲ. ಖಜಾನೆ ಖಾಲಿ, ಆಸ್ಪತ್ರೆಯಲ್ಲಿ ಔಷಧಿ ಇಲ್ಲ, ಮೂರು ಬಾರಿ ಮದ್ಯದ ಬೆಲೆ ಏರಿಕೆ. ಇದು, ನಿಮ್ಮ ಸಾಧನೆ ಎಂದು ವಿಧಾನ ಸಭೆಯ ಪ್ರತಿ ಪಕ್ಷದ ನಾಯಕ ಆರ್.ಅಶೋಕ್ ಹೇಳಿದರು.
ಭಾನುವಾರ ಸುದ್ದಿಗೋಷ್ಠಿಯಲ್ಲಿ ಟೀಕಿಸಿದ ಅವರು, ಬೆಲೆ ಏರಿಕೆ ನಿಮ್ಮ ನಿತ್ಯದ ಕೆಲಸವಾಗಿದೆ. ಎರಡು ವರ್ಷದ ನಿಮ್ಮ ಸಾಧನೆ ಏನು ಎಂದು ಅವರು ರಾಜ್ಯ ಸರ್ಕಾರವನ್ನು ಪ್ರಶ್ನೆ ಮಾಡಿ ನಾಳೆ ಕಾಂಗ್ರೆಸ್ ಪಕ್ಷ ನಡೆಸಲು ಉದ್ದೇಶಿಸಿರುವ ಸಾಧನಾ ರ್ಯಾಲಿಯ ಬಗ್ಗೆ ಮಾತನಾಡಿದರು
ಮದ್ಯದ ಟ್ಯಾಕ್ಸ್ ಶೇ. ೧೦೦ ರಷ್ಟು ಹೆಚ್ಚಳ ಮಾಡಲಾಗಿದೆ. ಲೈಸನ್ಸ್ ಶುಲ್ಕ ೨೭ ರಿಂದ ೫೦ ಲಕ್ಷಕ್ಕೆ ಹೆಚ್ಚಳ ಮಾಡಲಾಗಿದೆ. ಐಎಂಎಲ್ ಲೈಸನ್ಸ್ ೪೫ ರಿಂದ ೯೫ ಸಾವಿರಕ್ಕೆ ಹೆಚ್ಚಿಸಲಾಗಿದೆ. ಮದ್ಯದ ದರ ಹೆಚ್ಚು ಮಾಡುವುದರಿಂದ ಮದ್ಯ ಕುಡಿಯುವವರ ಸಂಖ್ಯೆ ಕಡಿಮೆಯಾಗಿದೆ ಎಂದು ಸಿಎಂ ಸಿದ್ದರಾಮಯ್ಯ ಛೇಡಿಸಿದ್ದಾರೆ. ಮದ್ಯದ ದರ ಹೆಚ್ಚಳ ಆಗಿರುವುದರಿಂದ ಕಳ್ಳತನ ಪ್ರಕರಣಗಳು ಹೆಚ್ಚಾಗಿವೆ. ಇದೊಂದು ತೊಘಲಕ್ ದರ್ಬಾರ್ ಎಂದು ಆರೋಪಿಸಿದರು.
ರಾಜ್ಯದ ಜನತೆಗೆ ಐದು ಗ್ಯಾರಂಟಿ ಕೊಡುತ್ತೇವೆ. ಯಾವುದೇ ಟ್ಯಾಕ್ಸ್ ಹಾಕೋದಿಲ್ಲ ಎಂದು ವಿಧಾನಸಭಾ ಚುನಾವಣಾ ಪ್ರಣಾಳಿಕೆಯಲ್ಲಿ ಕಾಂಗ್ರೆಸ್ ಭರವಸೆ ನೀಡಿತ್ತು. ಈ ಮಾತನ್ನು ಉಳಿಸಿಕೊಳ್ಳಲು ಅವರಿಗೆ ಸಾಧ್ಯವಾಗಿಲ್ಲ. ಗ್ಯಾರಂಟಿ ಯೋಜನೆಗಳನ್ನು ಜಾರಿಗೆ ತರಲು ಹಣದ ಕೊರತೆಯಾಗಿದ್ದರಿಂದ ಎಲ್ಲಾ ವಸ್ತುಗಳ ಮೇಲೆ ಮನಬಂದಂತೆ ತೆರಿಗೆ ವಿಧಿಸುತ್ತಿದ್ದಾರೆ ಎಂದು ಹೇಳಿದ ಅಶೋಕ್, ಕಳೆದ ಎರಡು ವರ್ಷಗಳಲ್ಲಿ ಎಷ್ಟು ಅಣೆಕಟ್ಟನ್ನು ಕಟ್ಟಿದ್ದಿರಾ ?, ಎಷ್ಟು ಅಣೆಕಟ್ಟುಗಳನ್ನು ಎತ್ತರಿಸಿದ್ದೀರಾ ಎಂದು ಪ್ರಶ್ನಿಸಿದರು.
ಕ್ಷೇತ್ರಗಳ ಅಭಿವೃದ್ಧಿಗೆ ಸರ್ಕಾರ ಹಣ ಕೊಡುತ್ತಿಲ್ಲವೆಂದು ಕಾಂಗ್ರೆಸ್ ಶಾಸಕರೇ ಹೇಳುತ್ತಿದ್ದಾರೆ. ಅಭಿವೃದ್ಧಿ ಮರೀಚಿಕೆಯಾಗಿದೆ. ಇಂತಹ ಸಂದರ್ಭದಲ್ಲಿ ಸಂಭ್ರಮಾಚರಣೆ ಹಾಸ್ಯಸ್ಪದ. ಮೂಡಾ ಅವ್ಯವಹಾರ, ವಾಲ್ಮೀಕಿ ಹಗರಣ, ಪ್ರಾಮಾಣಿಕ ಅಧಿಕಾರಿಗಳು ಬಲಿ, ಸುಮಾರು ೨ ಸಾವಿರ ಮಂದಿ ರೈತರ ಆತ್ಮಹತ್ಯೆ. ರೈತರ ಸಾವಿಗೆ ನೀವೇ ಕಾರಣವೆಂದು ಸಂಭ್ರಮ ಮಾಡ್ತಾ ಇದೀರಾ ಎಂದು ಪ್ರಶ್ಸಿಸಿದ್ದರು.
ದೇಶದಲ್ಲಿ ಸಿಂಧೂರ ಸಮರ ನಿಂತಿಲ್ಲ. ಗಡಿ ಭಾಗದಲ್ಲಿ ಇಂದಿಗೂ ಕೂಡ ಯುದ್ಧದ ವಾತಾವರಣ ಇದೆ. ಇಂತಹ ಸಂದರ್ಭದಲ್ಲಿ ನಿಮಗೆ ಸಮಾವೇಶ ಬೇಕಾಗಿತ್ತಾ, ಕಾಂಗ್ರೆಸ್ನ ಹಿರಿಯ ಮತ್ತು ಮರಿ ಮುಖಂಡರು ಮನಸ್ಸಿಗೆ ಬಂದಂತೆ ಹೇಳಿಕೆ ನೀಡುತ್ತಿದ್ದಾರೆ. ೪ ಪ್ಲೇನ್ ಹಾರಿಸಿದ್ದು ಬಿಟ್ರೆ ಉಗ್ರರಿಗೆ ಏನೂ ಮಾಡಿಲ್ಲವೆಂದು ಹೇಳಿರುವವರಿಗೆ ತಲೆ ಕೆಟ್ಟಿದೆ. ಅವರಿಗೆ ತಾಕತ್ತು ಇದ್ರೆ ಯುದ್ಧದ ಗಡಿಯ ನಿಂತು ಬರಲಿ ಸವಾಲು ಹಾಕಿದರು.
ಕಾಂಗ್ರೆಸ್ ಪಕ್ಷದ ಕಿರಿಯ ಮುಖಂಡರಿಗೆ ದೇಶದ ಬಗ್ಗೆ ಗೌರವ ಇಲ್ಲ, ಸೈನಿಕರ ಮೇಲೆ ವಿಶ್ವಾಸ ಇಲ್ಲ. ಮತೀಯ ವಾದ, ವೋಟ್ ಪಾಲಿಟಿಕ್ಸ್ ಬಿಟ್ಟರೆ ಬೇರೇನೂ ಇವರ ತಲೆಯಲ್ಲಿ ಇಲ್ಲ. ಈ ಸಮಾವೇಶ ಆದ ಮೇಲೆ ಕಾಂಗ್ರೆಸ್ ಪಕ್ಷಕ್ಕೆ ಭವಿಷ್ಯ ಇಲ್ಲ ಎಂದು ಹೇಳಿ, ಬ್ರಾಂಡ್ ಬೆಂಗಳೂರು ಹೋಗಿದೆ. ಮುಳುಗುತ್ತಿರುವ, ಕಸದ ರಾಶಿ, ಗುಂಡಿ ಬಿದ್ದಿರುವ ರಸ್ತೆಯ ಡಿಕೆಶಿ ಬೆಂಗಳೂರು ಆಗಿದೆ ಎಂದು ಆರೋಪಿಸಿದರು.
ಬಾಣಾಂತಿಯರ ಸಾವು, ಲವ್ ಜಿಹಾದ್ ಹೆಸರಿನಲ್ಲಿ ಕೊಲೆ, ಗಣೇಶ ವಿಗ್ರಹವನ್ನು ಪೊಲೀಸ್ ವಾಹನದಲ್ಲಿ ತೆಗೆದುಕೊಂಡು ಹೋಗುವುದು ಇದು ನಿಮ್ಮ ಸಾಧನೆ. ಗುತ್ತಿಗೆದಾರರಿಗೆ ಬಿಲ್ ಪಾವತಿ ಆಗಿಲ್ಲ. ಸಾರಿಗೆ ನೌಕರರಿಗೆ ಸಂಬಳ ಕೊಟ್ಟಿಲ್ಲ, ರೈತರಿಗೆ ಹಾಲಿನ ಬಾಕಿ ಹಣ ಕೊಟ್ಟಿಲ್ಲ, ರಸ್ತೆಗಳಲ್ಲಿ ಬಿದ್ದಿರೋ ಗುಂಡಿ ಮುಚ್ಚಲು ಆಗ್ತಾ ಇಲ್ಲ. ಹಣ ಇಲ್ಲದೆ ಖಜಾನೆ ಖಾಲಿ ಆದ್ರೂ ದೊಂಬರಾಟ ನಿಂತಿಲ್ಲ ಎಂದರು.
ಜನರು ಕಟ್ಟಿರೋ ತೆರಿಗೆ ಹಣದಲ್ಲಿ ಕಾರ್ಯಕ್ರಮ ಮಾಡುತ್ತಿದ್ದಾರೆ. ಜನರನ್ನು ಪಾತಾಳಕ್ಕೆ ತಳ್ಳಿ, ಇವರು ಬಿರಿಯಾನಿ ಊಟ ಮಾಡುತ್ತಿದ್ದಾರೆ. ಆತ್ಮಹತ್ಯೆ ಮಾಡಿಕೊಂಡಿರುವ ರೈತರ, ನಿಷ್ಟಾವಂತ ಅಧಿಕಾರಿಗಳ ಸಮಾಧಿಯ ಮೇಲೆ ಸರ್ಕಾರ ಸಮಾವೇಶ ಮಾಡುತ್ತಿದೆ ಎಂದು ಆರೋಪಿಸಿದರು.
ಸುದ್ದಿಗೋಷ್ಠಿಯಲ್ಲಿ ವಿಧಾನಪರಿಷತ್ ಮುಖ್ಯ ಸಚೇತಕ ರವಿಕುಮಾರ್, ವಿಧಾನಪರಿಷತ್ ಸದಸ್ಯ ಸಿ.ಟಿ. ರವಿ, ಬಿಜೆಪಿ ಜಿಲ್ಲಾಧ್ಯಕ್ಷ ದೇವರಾಜ್ ಶೆಟ್ಟಿ, ರೈತ ಮೋರ್ಚಾದ ರಾಜ್ಯ ಪ್ರಧಾನ ಕಾರ್ಯದರ್ಶಿ ಎಚ್.ಸಿ. ಕಲ್ಮರಡಪ್ಪ, ಮುಖಂಡರಾದ ದೀಪಕ್ ದೊಡ್ಡಯ್ಯ, ಪುಷ್ಪರಾಜ್, ಹಿರೇಮಗಳೂರು ಪುಟ್ಟಸ್ವಾಮಿ ಇದ್ದರು.
Price hikes are a daily occurrence for the Congress government.