ಚಿಕ್ಕಮಗಳೂರು: ಕಳೆದ ನಾಲ್ಕು ದಿನಗಳಿಂದ ನಗರಸಭೆ ಆವರಣದಲ್ಲಿ ವಿವಿಧ ಬೇಡಿಕೆಗಳನ್ನು ಸರ್ಕಾರದ ಮುಂದಿಟ್ಟು ನಡೆಸುತ್ತಿದ್ದ ಪೌರಸೇವಾ ನೌಕರರ ಅನಿದಿರ್ಷ್ಟಾವಧಿ ಮುಷ್ಕರ ಸರ್ಕಾರದ ಭರವಸೆ ಹಿನ್ನೆಲೆಯಲ್ಲಿ ಅಂತ್ಯಗೊಳಿಸಿ ಇಂದಿನಿಂದ ಪೌರಕಾರ್ಮಿಕರು ಕರ್ತವ್ಯಕ್ಕೆ ಮರಳಿದ್ದಾರೆ.
ಇಂದು ಬೆಳಗ್ಗೆ ನಗರಸಭೆ ಆವರಣದಿಂದ ಪೌರಸೇವಾ ನೌಕರರ ಸಂಘದ ನೇತೃತ್ವದಲ್ಲಿ ಮೆರವಣಿಗೆ ಹೊರಟ ಪೌರ ಕಾರ್ಮಿಕರು, ಆಜಾದ್ ವೃತ್ತದವರೆಗೆ ಸಾಗಿ ಪಟಾಕಿ ಸಿಡಿಸಿ ಸಂಭ್ರಮಿಸಿದರು.
ಸಂಘದ ಜಿಲ್ಲಾಧ್ಯಕ್ಷ ಎನ್.ಅಣ್ಣಯ್ಯ ಮಾತನಾಡಿ, ಪೌರ ಕಾರ್ಮಿಕರಿಗೆ ಕೆಜಿಐಡಿ ಮತ್ತು ಜ್ಯೋತಿ ಸಂಜೀವಿನಿ ಸೇರಿದಂತೆ ತಮ್ಮ ಬೇಡಿಕೆಗಳನ್ನು ಬಹುತೇಕ ಈಡೇರಿಸುವುದಾಗಿ ಪೌರಾಡಳಿತ ಸಚಿವರು ಲಿಖಿತ ಪತ್ರದ ಮೂಲಕ ಭರವಸೆ ನೀಡಿರುವ ಹಿನ್ನೆಲೆಯಲ್ಲಿ ಮುಷ್ಕರವನ್ನು ವಾಪಾಸ್ ಪಡೆಯಲಾಗಿದೆ ಎಂದು ಹೇಳಿದರು.
ನಗರಸಭೆಯಲ್ಲಿ ಹೊರಗುತ್ತಿಗೆ ಆಧಾರದಲ್ಲಿ ಸೇವೆ ಸಲ್ಲಿಸುತ್ತಿದ್ದ ನೌಕರರಿಗೆ ನೇರ ಪಾವತಿಯೆಡೆಗೆ ಹಾಗೂ ಹಾಲಿ ನೇರ ಪಾವತಿಯಲ್ಲಿ ಸೇವೆ ಸಲ್ಲಿಸುತ್ತಿದ್ದ ನೌಕರರನ್ನು ಕಾಯಂಗೊಳಿಸುವುದಾಗಿ ಲಿಖಿತ ಪತ್ರದ ಮೂಲಕ ಸಚಿವರು ತಿಳಿಸಿದ್ದಾರೆ ಎಂದು ವಿವರಿಸಿದರು.
ಈಗಾಗಲೇ ಒಟ್ಟು ನಗರಸಭೆಯಲ್ಲಿ ನೇರಪಾವತಿಯಡಿ ೭೦ ನೌಕರರು ಸೇವೆ ಸಲ್ಲಿಸುತ್ತಿದ್ದು, ಅವರನ್ನು ಕೂಡಲೇ ಕಾಯಂಗೊಳಿಸುವಂತೆ ಮನವಿ ಸಲ್ಲಿಸಿದ ಹಿನ್ನೆಲೆಯಲ್ಲಿ ಹಂತ ಹಂತವಾಗಿ ಆದೇಶ ಮಾಡುವ ಭರವಸೆ ನೀಡಿರುವ ಸಚಿವರು ಹಾಗೂ ಈ ನಮ್ಮ ಹೋರಾಟಕ್ಕೆ ಬೆಂಬಲಿಸಿದ ವಿವಿಧ ಪಕ್ಷ ಸಂಘಟನೆಗಳ ಮುಖಂಡರಿಗೆ ಧನ್ಯವಾದಗಳನ್ನು ಸಲ್ಲಿಸಿದರು.
ವಿಧಾನ ಪರಿಷತ್ ಸದಸ್ಯರುಗಳಾದ ಸಿ.ಟಿ. ರವಿ ಮತ್ತು ಎಸ್.ಎಲ್. ಭೋಜೇಗೌಡ ಸೇರಿದಂತೆ ಎಲ್ಲರೂ ಬೆಂಬಲ ವ್ಯಕ್ತಪಡಿಸಿದ್ದಾರೆ. ಶಾಸಕ ಹೆಚ್.ಡಿ. ತಮ್ಮಯ್ಯ ಅವರು ಪೌರಾಡಳಿತ ಸಚಿವ ರಹೀಂಖಾನ್ರೊಂದಿಗೆ ಮಾತುಕತೆ ನಡೆಸಿ ನಮ್ಮ ಬೇಡಿಕೆಗಳು ಈಡೇರಿಸುವ ಭರವಸೆ ನೀಡಿದ್ದಾರೆ. ಜೊತೆಗೆ ಪೌರಾಯುಕ್ತ ಬಿ.ಸಿ. ಬಸವರಾಜ್ ಅವರು ಪೌರ ಕಾರ್ಮಿಕರನ್ನು ಸ್ವಂತ ಮಕ್ಕಳಂತೆ ಕಾಣುತ್ತ ಮುಷ್ಕರಕ್ಕೆ ಬೆಂಬಲ ನೀಡಿದ್ದರು ಎಂದು ಶ್ಲಾಘಿಸಿದರು.
ಇಂದಿನಿಂದ ಪೌರ ಕಾರ್ಮಿಕರು ಕರ್ತವ್ಯಕ್ಕೆ ಮರಳಿದ್ದು, ನಾಲ್ಕು ದಿನಗಳಿಂದ ನಗರ ವ್ಯಾಪ್ತಿಯಲ್ಲಿ ರಾಶಿ ಬಿದ್ದಿದ್ದ ಕಸವನ್ನು ಸಂಜೆವರೆಗೂ ಸ್ವಚ್ಚಗೊಳಿಸುವುದಾಗಿ ತಿಳಿಸಿದರು.
ತಾಲ್ಲೂಕು ಸಂಘದ ಅಧ್ಯಕ್ಷ ಶ್ರೀನಿವಾಸ್ ಮಾತನಾಡಿ, ಕುಂಟುತ್ತಾ ಸಾಗುತ್ತಿದ್ದ ಪೌರ ಕಾರ್ಮಿಕರ ಸಂಘಟನೆಗೆ ಎಲ್ಲರ ಬೆಂಬಲ ವ್ಯಕ್ತವಾಗಿ ಪೌರ ನೌಕರರು ಸಾತ್ ನೀಡಿದ್ದರಿಂದ ಮುಷ್ಕರ ನಡೆಸಲು ಚೇತನ ಮೂಡಿ ಪೌರ ನೌಕರರಲ್ಲಿ ಉತ್ಸಾಹ ಮೂಡಿತ್ತು. ಯಶಸ್ವಿಯಾಗಿ ಬೇಡಿಕೆ ಈಡೇರಿರುವುದಕ್ಕೆ ರಾಜ್ಯ ಸಂಘದ ಪದಾಧಿಕಾರಿಗಳಿಗೆ ತುಂಬು ಹೃದಯದ ಧನ್ಯವಾದಗಳನ್ನು ಅರ್ಪಿಸುತ್ತೇನೆ ಎಂದರು.
ಪೌರಸೇವಾ ನೌಕರರ ಬೇಡಿಕೆ ಈಡೇರಿದೆ ಎಂದು ಪೌರಾಡಳಿತ ಸಚಿವರು ಲಿಖಿತ ಪತ್ರದ ಮೂಲಕ ತಿಳಿಸಿರುವುದರಿಂದ ನಮ್ಮ ಕೆಲಸದ ಮೂಲಕ ಸ್ವಚ್ಚವನ್ನು ಮಾಡಿ ನಾಗರೀಕರ ಆರೋಗ್ಯ ಕಾಪಾಡುವಲ್ಲಿ ಶ್ರಮಿಸೋಣ, ಒಗ್ಗಟ್ಟು ಪ್ರದರ್ಶಿಸೋಣ ಎಂದು ಕರೆನೀಡಿದರು.
ಆರ್.ಓ ಶಿವಾನಂದ್, ಆರೋಗ್ಯ ನಿರೀಕ್ಷಕರಾದ ವೆಂಕಟೇಶ್, ಈಶ್ವರ್, ನಾಗಪ್ಪ, ರಂಗಪ್ಪ, ವಿವೇಕ್, ರಮೇಶ್, ಹೊರಗುತ್ತಿಗೆ ನೌಕರರಾದ ಕೃಷ್ಣ, ಮೂರ್ತಿ, ಪ್ರಸನ್ನ ಇತರರು ಉಪಸ್ಥಿತರಿದ್ದರು.
Government fulfills demands of civil servants – Civil servants celebrate