ಚಿಕ್ಕಮಗಳೂರು: ಜನಬಳಕೆಯ ಪದಗಳನ್ನು ತಿಣುಕದೆ ಸುಲಲಿತವಾಗಿ ಬಳಸಿ ಸಾಹಿತ್ಯ ಸೃಷ್ಟಿಸುತ್ತಿದ್ದರಲ್ಲ, ಅದುವೇ ಎಚ್ಚೆಸ್ವಿಯವರ ಕಾವ್ಯ ರಚನೆಯ ದೊಡ್ಡ ಶಕ್ತಿ. ಅದುವೇ ನಾವೆಂದಿಗೂ ಅವರನ್ನು ನೆನಪಿನಂಗಳದಲ್ಲಿ ಸ್ಮರಣೆ ಮಾಡಿಕೊಳ್ಳಲು ಕಾರಣ ಎಂದು ಸಾಹಿತಿ ಡಾ.ಎಚ್.ಎಸ್.ಸತ್ಯನಾರಾಯಣ ಅಭಿಪ್ರಾಯ ವ್ಯಕ್ತಪಡಿಸಿದರು.
ಚಿಕ್ಕಮಗಳೂರು ಬ್ರಾಹ್ಮಣ ಮಹಾಸಭಾ, ಪೂರ್ವಿ ಸುಗಮ ಸಂಗೀತ ಅಕಾಡೆಮಿ ಟ್ರಸ್ಟ್, ಸಾಂಸ್ಕೃತಿಕ ಸಂಘ ಹಾಗೂ ಸುಗಮ ಸಂಗೀತ ಗಂಗಾ ಸಹಯೋಗದಲ್ಲಿ ಭಾನುವಾರ ಸಂಜೆ ನಗರದ ಬ್ರಹ್ಮಸಮುದ್ರ ಶ್ರೀ ರಂಗಣ್ಣನವರ ಛತ್ರದಲ್ಲಿ ಆಯೋಜಿಸಿದ್ದ `ನೆನಪಿನಂಗಳದಲ್ಲಿ ಎಚ್ಚೆಸ್ವಿ’ ಡಾ.ಎಚ್.ಎಸ್.ವೆಂಕಟೇಶಮೂರ್ತಿಯ ಕಾವ್ಯ ಗಾಯನ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಗೋಪಿಕಾ ಸ್ತ್ರೀಯರಂತೆ ಕೃಷ್ಣನನ್ನು ಪ್ರೀತಿಸಿದವರಿಗೆ ಮಾತ್ರ ಕೃಷ್ಣನ ಮೇಲೆ ಅಷ್ಟೊಂದು ಭಾವ ತೀವ್ರತೆಯಿಂದ ಕಾವ್ಯ ಸೃಷ್ಟಿಸಲು ಸಾಧ್ಯ, ಎಚ್ಚೆಸ್ವಿಯವರ `ಡಿವೈನ್ ಲವ್’ ಆ ರೀತಿಯದು ಎಂದ ಅವರು, ಎಚ್ಚೆಸ್ವಿಯವರ ರಚನೆ `ತೂಗು ಮಂಚದಲ್ಲಿ ಕೂತು.. ಮೇಘ ಶ್ಯಾಮ ರಾಧೆಗಾತು.. ಆಡುತಿರುವನು ಏನೋ ಮಾತು.. ರಾಧೆ ನಾಚುತ್ತಿದ್ದಳು.. ಸೆರಗ ಬೆರಳಿನಲ್ಲಿ ಸುತ್ತಿ, ಜಡೆಯ ತುದಿಯ ಕೆನ್ನೆಗೊತ್ತಿ, ಜುಮ್ಮ ಕೊಡುವ ಮುಖವನೆತ್ತಿ ಕಣ್ಣು ಮುಚ್ಚುತ್ತಿದ್ದಳು’ ಅವಳು ನಾಚುತ್ತಿದ್ದಳೆಂದರೆ ಮಿಲನದ, ಶೃಂಗಾರದ ಮಾತನ್ನೇ ಕೃಷ್ಣ ಆಡುತ್ತಿದ್ದ ಎಂದೆನಿಸುತ್ತದೆ. `ಮುಖವ ಎದೆಯ ನಡುವೆ ಒತ್ತಿ, ತೋಳಿನಿಂದ ಕೊರಳ ಸುತ್ತಿ, ತುಟಿಯ ತೀಡಿ ಬೆಂಕಿಗೊತ್ತಿ ಹಮ್ಮನುಸಿರಬಿಟ್ಟಳು.. ಅದು ದೈವಿಕ ಪ್ರೇಮ ಎನ್ನುವ ಅರಿವಿರುವ ಕವಿ ಎಚ್ಚೆಸ್ವಿ ತಮ್ಮ ಕಾವ್ಯವನ್ನು ಅಶ್ಲೀಲಗೊಳಿಸದೆ ಸೊಗಸಾಗಿ ಚಿತ್ರಿಸಿದ್ದಾರೆ ಎಂದು ಬಣ್ಣಿಸಿದರು.
`ಮಧುರೆಗೆ ಹೋದನು ಮಾಧವ.. ಬರುವನೊ.. ಬಾರನೊ ಹೋದವ..’ ಆ ಎರಡು ಸಾಲುಗಳಲ್ಲಿರುವ ಸುದೀರ್ಘ ವಿರಹದ ತೀವ್ರತೆ ಇದೆಯಲ್ಲ, ಆ ಹಾಡು ನಮಗೆ ಪ್ರಿಯವಾಗುವುದಕ್ಕೆ ಅದೇ ಕಾರಣ ಎಂದು ವಿಶ್ಲೇಷಿಸಿದರು. ರಾಘವೇಂದ್ರ ಬೀಜಾಡಿ ಸ್ವರ ಸಂಯೋಜನೆ ಮಾಡಿ ಹಾಡಿದ `ಇರಬೇಕು ಇರುವಂತೆ ತೊರೆದು ಸಾವಿರ ಚಿಂತೆ’ ಗೀತೆ ೪೯ ಲಕ್ಷ ಜನರನ್ನು ತಲುಪಿದ್ದು, ನಮ್ಮ ಕಾಲಕ್ಕೆ ಅದು ಅತ್ಯಂತ ದೊಡ್ಡ ದಾಖಲೆ. `ಲೋಕದ ಕಣ್ಣಿಗೆ ರಾಧೆಯು ಕೂಡ.. ಎಲ್ಲರಂತೆ ಹೆಣ್ಣು’, `ಅಮ್ಮ ನಾನು ದೇವರಾಣೆ.. ಬೆಣ್ಣೆ ಕದ್ದಿಲ್ಲಮ್ಮ’, `ಇಷ್ಟು ಕಾಲ ಒಟ್ಟಿಗಿದ್ದು..’ ಇತ್ಯಾದಿ ಗೀತೆಯ ಮೂಲಕ ಸಾಗರದಾಚೆಯ ಜನರಿಗೂ ಎಚ್ಚೆಸ್ವಿ ತಲುಪಿದ್ದಾರೆ ಎಂದರು.
ಎಚ್ಚೆಸ್ವಿ ಸುಮಾರು ೨೨ ಕವಿತಾ ಸಂಕಲನಗಳು, ನಾಲ್ಕು ವಿಮರ್ಶಾ ಕೃತಿಗಳು, ರಂಗಭೂಮಿಯನ್ನು ಆಳಿ ಪ್ರಸಿದ್ಧಿಯಾದ ೧೧ ನಾಟಕಗಳು, ಮಕ್ಕಳಿಗಾಗಿ ೨೭ ಕೃತಿಗಳು, ಗೀತ ನಾಟಕಗಳು, ಎರಡು ಖಂಡ ಕಾವ್ಯಗಳು ಸೇರಿದಂತೆ ಒಟ್ಟು ೧೨೭ ಕೃತಿಗಳನ್ನು ರಚಿಸಿದ್ದಾರೆ. ಎರಡು ವರ್ಷಗಳಲ್ಲಿ ಐದು ಮುದ್ರಣ ಕಂಡಿರುವ ಅವರ `ಬುದ್ಧಚರಣ’ ಮಹಾಕಾವ್ಯಕ್ಕೆ ಜ್ಞಾನಪೀಠ ಪ್ರಶಸ್ತಿ ಬರಬೇಕೆನ್ನುವ ನಿರೀಕ್ಷೆ ಇತ್ತು. ಆದರೆ ಅನುವಾದ ಸಾಹಿತ್ಯ ಮತ್ತು ಮಕ್ಕಳ ಸಾಹಿತ್ಯಕ್ಕಾಗಿ ಅವರಿಗೆ ಎರಡು ಬಾರಿ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಬಂದಿತ್ತು ಎಂದು ಹೇಳಿದರು.
ಮಕ್ಕಳಿಗಾಗಿ ಕಾದಂಬರಿ ಬರೆದವರಲ್ಲಿ ಎಚ್ಚೆಸ್ವಿ ಮೊದಲಿಗರು. ಅವರಿಗಾಗಿ ಅನೇಕ ನಾಟಕಗಳು ಹಾಗೂ ಕಥೆಗಳನ್ನು ಬರೆದಿದ್ದಾರೆ. ಮಕ್ಕಳನ್ನು ಸಾಹಿತ್ಯ ಓದುವುದಕ್ಕೆ ಹಚ್ಚಬೇಕೆಂದರೆ ಚಿಕ್ಕ ಪುಸ್ತಕ ನೀಡಿ ಅವರ ಭಾವಕೋಶ ಜಾಗೃತಗೊಳಿಸಿ ಸಾಹಿತ್ಯದ ಸಂಸ್ಕಾರ ನೀಡಬೇಕು. ಅದಕ್ಕಾಗಿಯೇ ಪಂಜೆ ಮಂಗೇಶರಾಯರು, ಕುವೆಂಪು, ಕಾರಂತ, ಮಾಸ್ತಿ, ಬೇಂದ್ರೆ, ರಾಜರತ್ನಂ, ಶಿಶು ಸಂಗಮೇಶ ಇವರೆಲ್ಲ ಮಕ್ಕಳಿಗಾಗಿ ಮೊದಲು ಬರೆದರು ಎಂದು ಎಚ್ಚೆಸ್ವಿ ಹೇಳಿದ್ದರು ಎಂದರು.
ಸಂಗೀತ ಶಿಕ್ಷಕಿ ಬೀರೂರಿನ ಜ್ಯೋತಿ ಅನಂತು ಉದ್ಘಾಟಿಸಿದ ಈ ಕಾರ್ಯಕ್ರಮದಲ್ಲಿ ವಿಧಾನ ಪರಿಷತ್ ಸದಸ್ಯ ಸಿ.ಟಿ.ರವಿ, ಚಿಕ್ಕಮಗಳೂರು ಬ್ರಾಹ್ಮಣ ಮಹಾಸಭಾದ ಅಧ್ಯಕ್ಷ ಪಿ.ಮಂಜುನಾಥ ಜೋಷಿ, ಆದಿಚುಂಚನಗಿರಿ ವಿಶ್ವವಿದ್ಯಾಲಯದ ರಿಜಿಸ್ಟ್ರಾರ್ ಡಾ.ಸಿ.ಕೆ.ಸುಬ್ಬರಾಯ, ಹಿರಿಯ ಪತ್ರಕರ್ತ ಸ.ಗಿರಿಜಾಶಂಕರ, ಸಾಹಿತಿ ಬೆಳವಾಡಿ ಮಂಜುನಾಥ, ಸಾಂಸ್ಕೃತಿಕ ಸಂಘದ ಅಧ್ಯಕ್ಷ ಆನಂದ್ ಕುಮಾರ್ ಶೆಟ್ಟಿ ಮತ್ತಿತರರು ಇದ್ದರು. ಸಾಂಸ್ಕೃತಿಕ ಸಂಘದ ಕಾರ್ಯದರ್ಶಿ ಉಜ್ವಲ್ ಪಡುಬಿದ್ರಿ ಸ್ವಾಗತಿಸಿದರು. ಬಿಎಂಎಸ್ ಜಂಟಿ ಕಾರ್ಯದರ್ಶಿ ಎ.ಎನ್.ಗೋಪಾಲಕೃಷ್ಣ ವಂದಿಸಿದರು. ಬಿಎಂಎಸ್ ನಿರ್ದೇಶಕಿ ಸುಮಾ ಪ್ರಸಾದ್ ನಿರೂಪಿಸಿದರು.
ಎಂ.ಎಸ್.ಸುಧೀರ್ ನೇತೃತ್ವದಲ್ಲಿ ಪೂರ್ವಿ ತಂಡದ ಗಾಯಕರಾದ ಚೇತನ್ರಾಮ್, ವಿಷ್ಣು ಭಾರದ್ವಾಜ್, ರೂಪ ಅಶ್ವಿನ್, ಅನುಷ, ರುಕ್ಸಾನಾ ಕಾಚೂರು, ರಾಯನಾಯಕ್, ಜ್ಯೋತಿ ವಿನೀತ್ಕುಮಾರ್, ಪೃಥ್ವಿಶ್ರೀ, ಸ್ವೇಚಿತ್, ಚಿನ್ಮಯಿ ಕೆ.ಎಸ್., ಮಾನ್ಯತ ಭಾಗಮನೆ, ಮಾನ್ಯ ಭಟ್ ಎಚ್ಚೆಸ್ವಿ ರಚನೆಯ ಗೀತೆಗಳಿಗೆ ಧ್ವನಿಯಾಗಿ ಸಂಗೀತ ಪ್ರಿಯರನ್ನು ರಂಜಿಸಿದರು. ಪಕ್ಕವಾದ್ಯದಲ್ಲಿ ಗಣೇಶ್ ಭಟ್(ಕೀಬೋರ್ಡ್), ಅರುಣ್ಕುಮಾರ್ (ರಿದಮ್ ಪ್ಯಾಡ್), ವೇಣುಗೋಪಾಲ್ (ತಬಲ), ಪ್ರದೀಪ್ ಕಿಗ್ಗಾಲ್ (ಗಿಟಾರ್) ಸಾಥ್ ನೀಡಿದರು.
Dr. H.S. Venkateshamurthy’s poetry creation in popular terms