ಚಿಕ್ಕಮಗಳೂರು: ಯುವ ಜನಾಂಗ ಮಾದಕ ವಸ್ತುಗಳ ಚಟಕ್ಕೆ ದಾಸರಾಗಿ ಆರೋಗ್ಯ, ಗೌರವ ಹಾಳು ಮಾಡಿಕೊಳ್ಳುವುದರಿಂದ ನಿಜವಾಗಿ ನೋವು, ಹಿಂಸೆ ಅನುಭವಿಸುವುದು ಪೋಷಕರು ಮಾತ್ರ. ಇದಕ್ಕೆ ಅವಕಾಶ ಮಾಡಿಕೊಡಬಾರದು ಎಂದು ಸಿಇಎನ್ ಪೊಲೀಸ್ ಠಾಣೆಯ ಡಿವೈಎಸ್ಪಿ ಜೆ.ಎಸ್.ತಿಪ್ಪೇಸ್ವಾಮಿ ತಿಳಿಸಿದರು.
ಅವರು ಮಂಗಳವಾರ ನಗರದ ಆದಿಚುಂಚನಗಿರಿ ಪಾಲಿಟೆಕ್ನಿಕ್ ಕಾಲೇಜಿನ ಪ್ರಥಮ ವರ್ಷದ ವಿದ್ಯಾರ್ಥಿಗಳ ಪ್ರೇರಣಾ ಕಾರ್ಯಕ್ರಮದಲ್ಲಿ ಸೈಬರ್ ಅಪರಾಧಗಳು ಮತ್ತು ಮಾದಕ ವಸ್ತುಗಳಿಂದುಂಟಾಗುವ ದುಷ್ಪರಿಣಾಮಗಳ ಕುರಿತು ಅರಿವು ಮೂಡಿಸಿ ಮಾತಾಡಿ ಧೂಮಪಾನ, ಮದ್ಯಪಾನದ ಜೊತೆಗೆ ವೈಟ್ನರ್, ಥಿನ್ನರ್, ಸಲೂಷನ್, ಅಯೋಡಿಕ್ಸ್ ಇವುಗಳೆಲ್ಲವೂ ಮಾರುಕಟ್ಟೆಯಲ್ಲಿ ಸುಲಭಕ್ಕೆ ಸಿಗುವ ಮಾದಕ ಪದಾರ್ಥಗಳು. ನಂತರದ್ದು ಗಾಂಜಾ, ಜೊತೆಗೆ ಸಿಂಥಟಿಕ್ ಡ್ರಗ್ಗಳಾದ ಅಫೀಮು, ಹೆರಾಯಿನ್, ಕೊಕೇನ್ ಹಾಗೆಯೇ ಎಂಡಿಎಂಎ ಎನ್ನುವ ಮಾತ್ರೆ ರೂಪದ ವಸ್ತು, ಹಾಗೂ ಚಾಕೊಲೇಟ್ ಮಾದರಿಯಲ್ಲೂ ಸಿಗುತ್ತಿದೆ ಎಂದು ವಿವರಿಸಿದರು.
ಈ ಪೈಕಿ ಸುಲಭವಾಗಿ ಸಿಗುವ ಥಿನ್ನರ್ ಮತ್ತು ಸಲೂಷನ್ ಚಟಕ್ಕೆ ಹಲವಾರು ಯುವಕರು ಬಲಿಯಾಗುತ್ತಿದ್ದಾರೆ. ಅದನ್ನು ಮಾರಾಟ ಮಾಡುವುದಕ್ಕೆ ಯಾವುದೇ ನಿರ್ಬಂಧಗಳಿಲ್ಲದಿರುವುದು ಹಾಗೂ ಅದನ್ನು ಸೇವಿಸಿದವರನ್ನು ಪರೀಕ್ಷೆಗೊಳಪಡಿಸಿದರೆ ನೆಗಟೀವ್ ಫಲಿತಾಂಶ ಬರುವ ಹಿನ್ನೆಲೆಯಲ್ಲಿ ಕ್ರಮ ಕೈಗೊಳ್ಳಲು ತಾಂತ್ರಿಕ ಅಂಶಗಳು ಅಡ್ಡಿ ಬರುತ್ತಿವೆ. ಈ ಹಿನ್ನೆಲೆಯಲ್ಲಿ ಅವುಗಳಿಂದಾಗುವ ಅಪಾಯವನ್ನು ಅರಿತು ಯುವಕರು ಮತ್ತು ಪೋಷಕರೇ ನಿಯಂತ್ರಿಸುವ ಕಡೆ ಗಮನ ಹರಿಸಬೇಕು ಎಂದು ಸಲಹೆ ಮಾಡಿದರು.
ನಮ್ಮ ದೇಶದಲ್ಲಿ ಮಾದಕ ವ್ಯಸನಿಗಳ ಸಂಖ್ಯೆ ಸುಮಾರು ೭.೫೦ ಕೋಟಿಯಷ್ಟಿದೆ ಇದು ನಮ್ಮ ರಾಜ್ಯದ ಒಟ್ಟು ಜನಸಂಖ್ಯೆಯಷ್ಟಾಗುತ್ತದೆ. ಸಂಶೋಧನಾ ವರದಿಗಳು ಈ ಮಾಹಿತಿಯನ್ನು ಬಹಿರಂಗಪಡಿಸಿವೆ. ಮಾದಕ ವಸ್ತು ಸೇವನೆಯಿಂದ ಬಹು ಅಂಗಾಂಗ ವೈಫಲ್ಯಗೊಂಡು ಪ್ರಾಣ ಕಳೆದುಕೊಳ್ಳುವವರು ಸಾಕಷ್ಟಿದ್ದಾರೆ. ಆದರೆ ಪ್ರತಿದಿನ ಹತ್ತುಮಂದಿ ಮಾದಕ ವ್ಯಸನಿಗಳು ನಮ್ಮ ದೇಶದಲ್ಲಿ ಆತ್ಮಹತ್ಯೆಗೆ ಶರಣಾಗುತ್ತಿದ್ದಾರೆ. ಆ ಹತ್ತು ಜನರ ಪೈಕಿ ೧೮ ವರ್ಷದೊಳಗಿನ ಇಬ್ಬರು ಇರುತ್ತಾರೆ. ಇದು ಆತಂಕಕಾರಿ ಎಂದು ಹೇಳಿದರು.
ಇದಲ್ಲದೆ ನಮ್ಮ ದೇಶದ ೨೭೨ ಜಿಲ್ಲೆಗಳನ್ನು ಅತೀ ಹೆಚ್ಚು ಮಾದಕ ವ್ಯಸನಿಗಳನ್ನೊಳಗೊಂಡ ಜಿಲ್ಲೆ ಎಂದು ಘೋಷಣೆ ಆಗಿದೆ. ಕರ್ನಾಟಕದಲ್ಲೂ ಇಂತಹ ೭ ಜಿಲ್ಲೆಗಳನ್ನು ಗುರುತಿಸಲಾಗಿದೆ. ಇದರ ನಿಯಂತ್ರಣಕ್ಕೆ ಪೊಲೀಸ್ ಇಲಾಖೆ ಅಷ್ಟೇ ಅಲ್ಲದೆ ಪ್ರತಿಯೊಬ್ಬ ನಾಗರೀಕರು ಯುದ್ಧೋಪಾದಿಯಲ್ಲಿ ಹೋರಾಡಬೇಕಿದೆ ಎಂದು ಕರೆ ನೀಡಿದರು.
ಇನ್ನು ಅಂತರ್ಜಾಲವನ್ನು ಬಳಸಿಕೊಂಡು ಮೋಸ, ವಂಚನೆ ಮಾಡುವ ಸೈಬರ್ ಅಪರಾಧಗಳು ಈಗ ಹೆಚ್ಚುತ್ತಿವೆ. ಬ್ಯಾಂಕ್ ಖಾತೆಗಳನ್ನು ಹ್ಯಾಕ್ ಮಾಡುವುದು, ಎಟಿಎಂಗಳಲ್ಲಿ ವಂಚಿಸುವುದು ಇನ್ನಿತರೆ ಆರ್ಥಿಕ ಅಪರಾಧಗಳು ಒಂದೆಡೆಯಾದರೆ ಇನ್ಸ್ಟ್ರಾಗ್ರಾಂ, ಫೇಸ್ ಬುಕ್ ಇನ್ನಿತರೆ ಸಾಮಾಜಿಕ ಜಾಲತಾಣಗಳಲ್ಲಿ ಫೋಟೋ-ಮಾಹಿತಿಗಳನ್ನು ಕದ್ದು ಅದನ್ನು ಬಳಸಿಕೊಂಡು ಬ್ಲ್ಯಾಕ್ಮೇಲ್ ಮಾಡಿ ಹಣ ದೋಚುವ ಪ್ರಸಂಗಗಳು ಹೆಚ್ಚುತ್ತಿವೆ. ಸಾಕಷ್ಟು ಯುವತಿಯರು ಮತ್ತು ಮಹಿಳೆಯರು ಇದರಿಂದ ಮಾನ, ಪ್ರಾಣ ಕಳೆದುಕೊಳ್ಳುತ್ತಿದ್ದಾರೆ. ಹಲವರು ಭಯದಿಂದ ದೊಡ್ಡ ಮಟ್ಟದಲ್ಲಿ ಹಣ ಕಳೆದುಕೊಂಡಿದ್ದಾರೆ. ಈ ಹಿನ್ನೆಲೆಯಲ್ಲಿ ಅಪರಿಚಿತರೊಂದಿಗೆ ಫೋಟೋ, ವೀಡಿಯೋಗಳನ್ನು ಹಂಚಿಕೊಳ್ಳುವಾಗ ಎಚ್ಚರಿಕೆಯಿಂದಿರಬೇಕು ಎಂದು ಸಲಹೆ ಮಾಡಿದರು.
ಮಾದಕ ವಸ್ತು ಸೇವನೆ, ಮಾರಾಟ ಪ್ರಕರಣಗಳು ಕಂಡುಬಂದಲ್ಲಿ ಹಾಗೂ ಸೈಬರ್ ಅಪರಾಧಕ್ಕೆ ತುತ್ತಾದಲ್ಲಿ ಕೂಡಲೇ ನಾರ್ಕೊಟಿಕ್ ಕಂಟ್ರೋಲ್ ಬ್ಯುರೋದ ದೂರವಾಣಿ ಟೋಲ್ ಫ್ರೀ ಸಂಖ್ಯೆ ೧೯೦೮ ಹಾಗೂ ಡ್ರಗ್ ಫ್ರೀ ಕರ್ನಾಟಕ ಮೊಬೈಲ್ ಆಪ್ನಲ್ಲಿ ಯಾರೇ ಮಾಹಿತಿ ನೀಡಿದರೂ ಕೂಡಲೇ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದರು.
ಈ ವೇಳೆ ಎಐಟಿ ಪಾಲಿಟೆಕ್ನಿಕ್ ಕಾಲೇಜಿನ ಪ್ರಾಂಶುಪಾಲರಾದ ಸಚಿನ್ ಕೆ.ಎಂ., ಉಪ ಪ್ರಾಂಶುಪಾಲರಾದ ಸಿದ್ದಣ್ಣ, ಹಿರಿಯ ಉಪನ್ಯಾಸಕಿ ಮಧುರ ವಿ.ಕೆ. ಉಪಸ್ಥಿತರಿದ್ದರು ಸಹಾಯಕ ಬೋಧಕ ಎನ್. ಸಾಯಿ ನಂದನ್ ಅವರು ಸ್ವಾಗತಿಸಿ ನಿರೂಪಿಸಿದರು.
The youth should not become slaves to drug addiction.