ಚಿಕ್ಕಮಗಳೂರು: ಜನಸಂಖ್ಯೆಗೆ ಸಂತೆ ಮಾರುಕಟ್ಟೆ ವ್ಯವಸ್ಥೆಯನ್ನು ಸರ್ಕಾರ ಮತ್ತು ನಗರಸಭೆ ಮಾಡಬೇಕು, ಇದರಿಂದ ವ್ಯಾಪಾರಸ್ಥರು ಹಾಗೂ ಗ್ರಾಹಕರಿಗೆ ಅನುಕೂಲವಾಗಲಿದೆ ಎಂದು ವಿಧಾನ ಪರಿಷತ್ ಸದಸ್ಯ ಎಸ್.ಎಲ್. ಭೋಜೇಗೌಡ ತಿಳಿಸಿದರು.
ಅವರು ಇಂದು ನಗರದ ಸಂತೆ ಮಾರುಕಟ್ಟೆಗೆ ನಗರಸಭಾಧ್ಯಕ್ಷೆ ಶೀಲಾದಿನೇಶ್ ಹಾಗೂ ಸದಸ್ಯರೊಂದಿಗೆ ಭೇಟಿನೀಡಿ ಸ್ವಚ್ಚತೆ ಬಗ್ಗೆ ಮತ್ತು ಸಾರ್ವಜನಿಕರು ಓಡಾಡುವ ದಾರಿಯಲ್ಲಿ ತರಕಾರಿಗಳನ್ನು ಇಡದೇ ಕಟ್ಟೆಮೇಲೆ ಇಟ್ಟು ವ್ಯಾಪಾರ ಮಾಡಬೇಕೆಂದು ಸೂಚನೆ ನೀಡಿದರು.
ವ್ಯಾಪಾರಸ್ಥರು ಜನ ತಿರುಗಾಡುವ ದಾರಿಯಲ್ಲಿ ತರಕಾರಿ, ಹಣ್ಣು, ವೀಳ್ಯಾದೆಲೆ, ಹೂವು ಸೇರಿದಂತೆ ಎಲ್ಲವುಗಳನ್ನು ಇಡುತ್ತಿರುವುದರಿಂದ ಸ್ವಚ್ಚತೆಗೆ ಧಕ್ಕೆಯಾಗಿದೆ. ಕಟ್ಟೆ ಮೇಲೆ ಈ ವಸ್ತುಗಳನ್ನು ಇಟ್ಟುಕೊಂಡು ವ್ಯಾಪಾರ ಮಾಡುವಂತೆ ತಿಳಿಸಿದರು.
ಸಂತೆಯ ಒಳಭಾಗದಲ್ಲಿ ವಾಹನಗಳ ಪಾರ್ಕಿಂಗ್, ತಳ್ಳುಗಾಡಿಗಳಲ್ಲಿ ವ್ಯಾಪಾರ ಮಾಡುತ್ತಿರುವುದರಿಂದ ಮಹಿಳೆಯರು ಮತ್ತು ಸಾರ್ವಜನಿಕರಿಗೆ ತೊಂದರೆಯಾಗುತ್ತಿದ್ದು, ಇದರಿಂದಾಗಿ ಜೇಬುಕಳ್ಳರ ಹಾವಳಿ ಹೆಚ್ಚಾಗುತ್ತಿದೆ. ಇದಕ್ಕೆ ನಗರಸಭೆ ಕಡಿವಾಣ ಹಾಕಬೇಕೆಂದು ಕಡಕ್ ಸೂಚನೆ ನೀಡಿದರು.
ನಗರಸಭಾಧ್ಯಕ್ಷೆ ಶೀಲಾದಿನೇಶ್ ಮಾತನಾಡಿ, ಸಂತೆಯಲ್ಲಿ ಶುಚಿತ್ವ ಕಾಪಾಡುವ ಜೊತೆಗೆ ನಗರಸಭೆಯ ನಿಬಂಧನೆಗಳನ್ನು ಕಟ್ಟುನಿಟ್ಟಾಗಿ ಪಾಲಿಸುವಂತೆ ವ್ಯಾಪಾರಸ್ಥರಿಗೆ ಕಡಕ್ ಸೂಚನೆ ನೀಡಿದ್ದು, ಪಾಲಿಸದ ವ್ಯಾಪಾರಸ್ಥರ ವಿರುದ್ಧ ಮುಂದಿನ ವಾರ ಕ್ರಮ ಕೈಗೊಳ್ಳುವುದಾಗಿ ಭರವಸೆ ನೀಡಿದರು.
ಸದಸ್ಯ ಎ.ಸಿ. ಕುಮಾರ್ಗೌಡ ಮಾತನಾಡಿ, ನಗರದಲ್ಲಿ ಪ್ರತೀ ಬುಧವಾರ ಸಂತೆ ನಡೆಯುತ್ತಿದ್ದು, ನಗರಸಭೆಯಿಂದ ವ್ಯಾಪಾರದ ಕಟ್ಟೆ ವ್ಯವಸ್ಥೆ, ಶೌಚಾಲಯ ನಿರ್ಮಾಣ ಮಾಡಿದ್ದು, ದಾರಿಯಲ್ಲಿ ತರಕಾರಿ ಮಾರಾಟ ಮಾಡುತ್ತಿರುವುದರಿಂದ ಸಾರ್ವಜನಿಕರಿಗೆ ತೊಂದರೆಯಾಗುತ್ತಿದೆ ಎಂದರು.
ಮುಂದಿನ ವಾರವೂ ಇದೇ ರೀತಿ ಆಗಿದ್ದರೆ ವ್ಯಾಪಾರಸ್ಥರ ವಿರುದ್ಧ ಶಿಸ್ತು ಕ್ರಮ ಕೈಗೊಂಡು ದಂಡ ವಿಧಿಸುವುದಾಗಿ ಎಚ್ಚರಿಸಿದ ಅವರು, ಸಧ್ಯದಲ್ಲೇ ಸಂತೆಯ ಪ್ರಾಂಗಣದಲ್ಲಿ ಶುದ್ಧಗಂಗಾ ನೀರಿನ ಘಟಕವನ್ನು ಸ್ಥಾಪಿಸುವುದಾಗಿ ವಿಶ್ವಾಸ ವ್ಯಕ್ತಪಡಿಸಿದರು.
ಈ ಸಂದರ್ಭದಲ್ಲಿ ನಗರಸಭೆ ಪೌರಾಯುಕ್ತ ಬಿ.ಸಿ. ಬಸವರಾಜ್, ಆರೋಗ್ಯ ನಿರೀಕ್ಷರು ಮತ್ತು ಸಿಬ್ಬಂದಿ ಭಾಗವಹಿಸಿದ್ದರು.
Business owners must follow municipal regulations