ಚಿಕ್ಕಮಗಳೂರು: ಧಾನಿ ನರೇಂದ್ರ ಮೋದಿ ನೇತೃತ್ವದಲ್ಲಿ ಕಳೆದ ೧೧ ವರ್ಷದ ಪೀಳಿಗೆಯು ಕೇಂದ್ರದಲ್ಲಿ ಒಂದೇ ಒಂದು ಭ್ರಷ್ಟಾಚಾರವಿಲ್ಲದ ವಿಶ್ವಾಸಾರ್ಹವಾದ, ಒಳ್ಳೆಯ ಆಡಳಿತವನ್ನು ಕಂಡಿದೆ. ಕೆಟ್ಟ ಆಡಳಿತ ಎಂದರೆ ಏನು ಎನ್ನುವುದನ್ನು ನೋಡದೇ ಇರುವ ಅವಧಿ ಇದು ಎಂದು ಬಿಜೆಪಿ ರಾಷ್ಟ್ರೀಯ ಯುವ ಮೋರ್ಚಾ ಅಧ್ಯಕ್ಷ, ಸಂಸದ ತೇಜಸ್ವಿ ಸೂರ್ಯ ಹೇಳಿದರು.
ಯೂಥ್ ಫಾರ್ ನೇಷನ್ ಸಂಘಟನೆ ವತಿಯಿಂದ ನಗರದ ಎಐಟಿ ಕಾಲೇಜಿನ ಬಿಜಿಎಸ್ ಸೆಮಿನಾರ್ ಸಭಾಂಗಣದಲ್ಲಿ ಹಮ್ಮಿಕೊಳ್ಳಲಾಗಿದ್ದ ನರೇಂದ್ರ ಮೋದಿ ಅವರ ೧೧ ವರ್ಷದ ಸರ್ಕಾರದ ಸಂಕಲ್ಪ-ಸಾಧನೆಗಳ ಕುರಿತಾದ ಸಂವಾದ ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಮಾತನಾಡಿ ೧೧ ವರ್ಷಗಳ ಹಿಂದೆ ಯುಪಿಎ ಸರ್ಕಾರದಲ್ಲಿ ಹಗರಣಗಳ ಸುದ್ದಿಗಳನ್ನೇ ಪತ್ರಿಕೆಗಳಲ್ಲಿ ಓದಿ ದಿನವನ್ನು ಆರಂಭಿಸಬೇಕಿತ್ತು. ಕಲ್ಲಿದ್ದಲು, ಅಗಸ್ತಾ ವೆಸ್ಟ್ಲ್ಯಾಂಡ್, ಕಾಮನ್ವೆಲ್ತ್ ಹೀಗೆ ಹಗರಣಗಳ ಸರಮಾಲೆಯೇ ನಡೆದಿತ್ತು. ಆದರೆ ಮೋದಿ ನೇತೃತ್ವದ ಎನ್ಡಿಎ ಅಧಿಕಾರಕ್ಕೆ ಬಂದ ನಂತರ ಕೇಂರ ಸರ್ಕಾರದ ಮೇಲೆ ಹೊಸ ನಂಬಿಕೆ, ವಿಶ್ವಾಸ ಬಂದಿದೆ. ಅಭಿವೃದ್ಧಿಗೆ ನಂಬರ್ ಹಾಕಬಹುದು ಆದರೆ ನಂಬಿಕೆ ಬರಬೇಕೆಂರೆ ಒಳ್ಳೆಯ ಆಡಳಿತ ಮಾತ್ರ ಬರಬೇಕಾಗುತ್ತದೆ ಎಂದರು.
೧೧ ವರ್ಷದಲ್ಲಿ ದೇಶದಲ್ಲಾಗಿರುವ ಬದಲಾವಣೆಗಳನ್ನು ಪಿಪಿಟಿ ಮೂಲಕ ಹೇಳುವ ಅಗತ್ಯವಿಲ್ಲ. ಪರಿಜ್ಞಾನ ಇರುವವರು, ಕಾಂಗ್ರೆಸ್ ಸೇರದಿರುವ ಪ್ರತಿಯೊಬ್ಬರೂ ಉತ್ತಮ ಬದಲಾವಣೆ ಆಗಿದೆ ಎನ್ನುತ್ತಿದ್ದಾರೆ. ದಿನ ನಿತ್ಯದ ಜೀವನದಲ್ಲಿ ನಮಗೆ ಗೊತ್ತಿಲ್ಲದೆ ಬದಲಾವಣೆ ಅನುಭವಕ್ಕೆ ಬರುತ್ತಿದೆ ಎಂದು ತಿಳಿಸಿದರು.
ಅಭಿವೃದ್ಧಿಯ ವೇಗ ಹೇಗಿದೆ ಎಂದರೆ ಕರ್ನಾಟಕ ಅಷ್ಟೇ ಅಲ್ಲದೆ ಇಡೀ ದೇಶದಲ್ಲಿ ಒಂರಿಂದ ಎರಡುಗಂಟೆ ಪ್ರಯಾಣ ಮಾಡುವಷ್ಟರಲ್ಲಿ ಒಂದು ಏರ್ಪೋರ್ಟ್ ಸಿಗುವಂತಾಗಿದೆ. ವೈಮಾನಿಕ ಕ್ರಾಂತಿಯೇ ನಡೆದಿದೆ. ನಾಲ್ಕೈದು ಸಾವಿರ ರೂ.ನಲ್ಲಿ ವಿಮಾನ ಯಾನ ಮಾಡಬಹುದಾಗಿದೆ. ಈ ರೀತಿಯ ಬದಲಾವಣೆಯನ್ನು ಜೀವಿಸುತ್ತಿದ್ದರೆ ಅದು ಮೋದಿ ಸರ್ಕಾರದ ಸಾಧನೆ ಎಂದು ಹೇಳಿದರು.
ಮನಿ ಆರ್ಡರ್ ಕಾಲದಿಂದ ಸಿಂಗಪುರ, ಅಮೇರಿಕಾದಂತಹ ದೇಶಗಳಿಗೆ ನಮ್ಮ ದೇಶದ ಮಕ್ಕಳು ಎಸ್ಎಂಎಸ್, ವಾಟ್ಸ್ ಆಪ್ ಮಾಡುವ ರೀತಿ ಹಣವನ್ನು ಕಳಿಸುವ ಮಟ್ಟಕ್ಕೆ ಬಂದಿದ್ದಾರೆ ಇದು ಡಿಜಿಟಲ್ ಇಂಡಿಯಾದ ಕ್ರಾಂತಿ, ಫಾರಿನ್ ಎಂದರೆ ಬಹಳ ವೇಗವಾಗಿ ಬೆಳೆದ ದೇಶಗಳು ಎಂಬ ಭಾವನೆ ಇದೆ. ಆದರೆ ಅಮೇರಿಕಾ ಸೇರಿದಂತೆ ಹಲವು ದೇಶಗಳಿಗೆ ನಾವು ನಿಯೋಗ ಹೋಗಿದ್ದಾಗ ಡಿಜಿಟಲ್ ಇಂಡಿಯಾ ಬಗ್ಗೆ ನಮಗೂ ಮಾಹಿತಿ ಕೊಡಿ ಎಂದು ಅಲ್ಲಿನ ಮುಖಂಡರು ಕೇಳುವ ಮಟ್ಟಕ್ಕೆ ನಾವು ಬೆಳೆದಿದ್ದೇವೆ. ೨ ಲಕ್ಷ ಕೋಟಿ ರೂ.ಗಳನ್ನು ಭಾರತ ದೇಶ ಕೇವಲ ನೇರ ನಗದು ವಹಿವಾಟಿನಲ್ಲಿ ಉಳಿತಾಯ ಮಾಡಿದೆ. ಇದು ಒಂದು ದೇಶದ ವಾರ್ಷಿಕ ಬಜೆಟ್ನಷ್ಟು ಗಾತ್ರದ್ದಾಗಿದೆ ಎಂದರು.
ವಿಜ್ಞಾನ ಮತ್ತು ತಂತ್ರಜ್ಞಾನದ ಕ್ಷೇತ್ರದ ಉತ್ತೇಜನಕ್ಕೆ ೧೧ ವರ್ಷಗಳಲ್ಲಿ ಹೆಚ್ಚಿನ ಮಹತ್ವ ನೀಡಲಾಗಿದೆ. ಈ ಕ್ಷೇತ್ರಗಳಲ್ಲಿ ಸಂಶೋಧನೆಗೆಂದು ಹತ್ತಾರು ಖಾಸಗಿ ಕಂಪನಿಗಳಿಗೆ ಅನುದಾನ ಮತ್ತು ಸೌಲತ್ತುಗಳನ್ನು ನೀಡಿ ಈ ಕ್ಷೇತ್ರದಲ್ಲಿ ಭಾರತವನ್ನು ಜಗತ್ತಿನ ನಾಯಕನನ್ನಾಗಿಸಲು ಮುಂದಡಿ ಇಡಲಾಗಿದೆ ಎಂದು ತಿಳಿಸಿದರು.
ಎಐ ಸೇರಿದಂತೆ ಇನ್ನಿತರೆ ಆಳ ತಂತ್ರಜ್ಞಾನದಲ್ಲಿ ಸಂಶೋಧನೆ ಹಾಗೂ ಆವಿಷ್ಕಾರಕ್ಕೆ ೫೦ ಸಾವಿರ ಕೋಟಿ ರೂ. ಅನುದಾನ ನೀಡುತ್ತಿದ್ದರೆ, ಇದೇ ವೇಳೆ ಬೀದಿ ಬದಿ ವ್ಯಾಪಾರಿಗಳ ಆರ್ಥಿಕ ಸ್ವಾವಲಂಬನೆ ದೃಷ್ಠಿಯಲ್ಲಿಟ್ಟುಕೊಂಡು ಪಿಎಂ ಸ್ವನಿಧಿ ಯೋಜನೆಯಡಿ ೧೦ ಸಾವಿರದಿಂದ ೧ ಲಕ್ಷ ರೂ. ವರೆಗೆ ಸಾಲ ಸೌಲಭ್ಯ ನೀಡುತ್ತಿದೆ. ಜಾಹಿರಾತು ನೀಡಿದರೆ ಜನರು ಮತ ಹಾಕುತ್ತಾರೆ ಎನ್ನುವ ಸ್ಥಿತಿಯಲ್ಲಿ ಅಭಿವೃದ್ಧಿ, ಒಳ್ಳೆಯ ಆಡಳಿತ ಎನ್ನುವುದು ಅನುಭವಕ್ಕೆ ಬರುವಂತಾಗಿರುವುದು ಕಳೆದ ೧೧ ವರ್ಷದಲ್ಲಿ ಎಂದರು.
ಸರ್ಜಿಕಲ್ ಸ್ಟ್ರೈಕ್, ಆಪರೇಷನ್ ಬಾಲಕೋಟ್, ಆಪರೇರಷನ್ ಸಿಂಧೂರ ನಂತಹ ದಿಟ್ಟ ಕ್ರಮಗಳ ಮೂಲಕ ಭಯೋತ್ಪಾದನೆ ಮಟ್ಟ ಹಾಕುವಲ್ಲಿ ದೇಶ ಯಶಸ್ಸುಕಂಡಿದೆ. ಮೇಕ್ ಇನ್ ಇಂಡಿಯಾದಲ್ಲಿ ತಯಾರಾದ ನಮ್ಮ ಆಕಾಶ್ ಕ್ಷಿಪಣಿಯನ್ನು ಖರೀದಿಸಲು ಹಲವು ದೇಶಗಳು ಕಾತುರವಾಗಿವೆ. ಇದಕ್ಕಾಗಿ ನರೇಂದ್ರ ಮೋದಿ ಅವರನ್ನು ನಮ್ಮ ದೇಶಕ್ಕೆ ಕಳಿಸಿಕೊಡಿ ಎಂದು ಕೋರಿಕೆ ಇಡುತ್ತಿವೆ. ಮೋದಿ ಅವರ ವಿದೇಶ ಪ್ರವಾಸದ ಬಗ್ಗೆ ಮಾತನಾಡುವ ಕಾಂಗ್ರೆಸಿಗರಿಗೆ ಇದು ಅರ್ಥವಾಗಬೇಕು ಎಂದರು.
ಸಂಸದ ಕೋಟಾ ಶ್ರೀನಿವಾಸ ಪೂಜಾರಿ, ವಿಧಾನ ಪರಿಷತ್ ಸದಸ್ಯ ಸಿ.ಟಿ.ರವಿ, ಮಾಜಿ ಸಚಿವ ಡಿ.ಎನ್.ಜೀವರಾಜ್, ಮಾಜಿ ಶಾಸಕ ಡಿ.ಎಸ್.ಸುರೇಶ್, ಜಿಲ್ಲಾ ಬಿಜೆಪಿ ಅಧ್ಯಕ್ಷ ದೇವರಾಜ ಶೆಟ್ಟಿ ಇತರರು ಭಾಗವಹಿಸಿದ್ದರು. ಯೂಥ್ ಫಾರ್ ನೇಷನ್ ಸಂಚಾಲಕ ಸೋತೋಷ್ ಕೋಟ್ಯಾನ್ ಅಧ್ಯಕ್ಷತೆ ವಹಿಸಿದ್ದರು.
There is new trust and confidence in the central government.