ಚಿಕ್ಕಮಗಳೂರುಎಕ್ಸ್ಪ್ರೆಸ್- ಸಕಾರದ ನೂತನ ಕಾರ್ಯಕ್ರಮದಡಿ ಜಿಲ್ಲೆಯ ನಾಲ್ಕು ಕಡೆಗಳಲ್ಲಿ ನಮ್ಮ ಕ್ಲಿನಿಕ್ಗಳಿಗೆ ಇಂದಿನಿಂದ ಚಾಲನೆ ದೊರೆತಿದ್ದು, ನಗರ ಹಾಗೂ ಪಟ್ಟಣ ಪ್ರದೇಶದ ಜನರು ಇದರ ಪ್ರಯೋಜನ ಪಡೆದುಕೊಳ್ಳಬೇಕು ಎಂದು ಜಿಲ್ಲಾಧಿಕಾರಿ ಕೆ.ಎನ್.ರಮೇಶ್ ತಿಳಿಸಿದರು.
ಅವರು ಬುಧವಾರ ನಗರದ ಬೈಪಾಸ್ ರಸ್ತೆಯ ನರಿಗುಡ್ಡೇನಹಳ್ಳಿ ಸರ್ಕಲ್ ಬಳಿ ನಮ್ಮ ಕ್ಲಿನಿಕ್ಗೆ ಚಾಲನೆ ನೀಡಿ ನಂತರ ಮಾತನಾಡಿದರು. ಜನರಿಗೆ ಉತ್ತಮ ಆರೋಗ್ಯ ಕಲ್ಪಿಸುವುದು ಸರ್ಕಾರದ ಕರ್ತವ್ಯವಾಗಿದೆ. ಇಂದು ವಿಶೇಷವಾಗಿ ೧೧೪ ನಮ್ಮ ಕ್ಲಿನಿಕ್ಗಳನ್ನು ಮುಖ್ಯಮಂತ್ರಿಗಳು ಉದ್ಘಾಟಿಸಿದ್ದಾರೆ. ನಮ್ಮ ಜಿಲ್ಲೆಯ ಚಿಕ್ಕಮಗಳೂರು, ಕಡೂರು, ತರೀಕೆರೆ ಮತ್ತು ಬೀರೂರುಗಳಲ್ಲಿ ಕ್ಲಿನಿಕ್ಗಳನ್ನು ತೆರೆಯಲಾಗಿದೆ ಎಂದರು.
ನಗರ ಪ್ರದೇಶದಲ್ಲಿ ಉತ್ತಮ ಆರೋಗ್ಯ ಸೇವೆ ಒದಗಿಸುವುದು ಇದರ ಉದ್ದೇಶವಾಗಿದೆ. ಪಿಹೆಚ್ಸಿಗಳು, ತಾಲ್ಲೂಕು ಆಸ್ಪತ್ರೆಗಳು ದೂರದಲ್ಲಿರುತ್ತದೆ. ಬಹಳಷ್ಟು ಜನರಿಗೆ ಇದರಿಂದ ತೊಂದರೆ ಆಗುವ ಹಿನ್ನೆಲೆಯಲ್ಲಿ ನಗರ ಪ್ರದೇಶದಲ್ಲಿ ಅತೀ ಹೆಚ್ಚು ಜನಸಂಖ್ಯೆ ಇರುವ ಜಾಗಗಳಲ್ಲಿ ಈ ರೀತಿ ನಮ್ಮ ಕ್ಲಿನ್ ಮಾಡುವ ಮೂಲಕ ಮನೆ ಬಾಗಿಲಿಗೆ ಆರೋಗ್ಯ ಸೇವೆ ಒದಗಿಸಲು ಸಾಧ್ಯವಾಗುತ್ತದೆ ಎಂದರು.
ಜಿ.ಪಂ.ಮುಖ್ಯ ಕಾರ್ಯನಿರ್ವಾಹಕ ಅದಿಕಾರಿ ಜಿ.ಪ್ರಭು ಮಾತನಾಡಿ ನಮ್ಮ ಕ್ಲಿನಿಕ್ಗಳಲ್ಲಿ ಸುಮಾರು ೧೨ ಆರೋಗ್ಯ ಸೇವೆಗಳು ಲಭ್ಯವಿರುತ್ತದೆ. ೧೪ ವಿವಿಧ ರೀತಿಯ ಪ್ರಯೋಗಾಲಯ ತಪಾಸಣೆಗಳನ್ನು ನಡೆಸಲು ಅಗತ್ಯವಿರುವ ಎಲ್ಲಾ ರೀತಿಯ ಸಿದ್ಧತೆಗಳನ್ನು ಮಾಡಿಕೊಳ್ಳಲಾಗಿದೆ ಎಂದರು.
ಎಲ್ಲಾ ರೀತಿಯ ಔಷಧಿಗಳನ್ನು ಉಚಿತವಾಗಿ ನೀಡುವ ವ್ಯವಸ್ಥೆ ಇರುತ್ತದೆ. ಯಾವುದೇ ಚೀಟಿಗಳನ್ನು ಬರೆದುಕೊಡದಂತೆ ಎಲ್ಲಾ ಮಾತ್ರೆ ಇನ್ನಿತರೆ ಸೇವೆಗಳನ್ನು ಒಂದೇ ಸೂರಿನಡಿ ಒದಗಿಸಬೇಕು ಎನ್ನುವುದು ಸರ್ಕಾರದ ನಿರ್ದೇಶನ ಸಹ ಇದೆ ಎಂದರು.
ವೈದ್ಯಾಧಿಕಾರಿ ಡಾ. ಭರತ್ ಮಾತನಾಡಿ, ಇಂದಿನಿಂದಲೆ ಜಿಲ್ಲೆಯ ಎಲ್ಲಾ ನಾಲ್ಕು ಕ್ಲಿನಿಕ್ಗಳು ಕಾರ್ಯಾರಂಭ ಮಾಡುತ್ತಿವೆ. ಬೇರೆ ಪ್ರಾಥಮಿಕ ಕೇಂದ್ರಗಳಲ್ಲಿ ಲಭ್ಯವಿರುವ ಎಲ್ಲಾ ಸೇವೆಗಳು ಇಲ್ಲೂ ಲಭ್ಯವಿರುತ್ತದೆ ಎಂದರು.
ನಮ್ಮ ಕ್ಲಿನಿಕ್ಗಳಲ್ಲಿ ವೈದ್ಯಾಧಿಕಾರಿಗಳು, ಸ್ಟಾಫ್ ನರ್ಸ್ ಲ್ಯಾಬ್ ಟೆಕ್ನಿಷಿಯನ್ ಮತ್ತು ಗ್ರೂಪ್ ಡಿ ಇರುತ್ತಾರೆ ಮುಂದೆ ಸರ್ಕಾರದ ತೀರ್ಮಾನದಂತೆ ಬೇರೆ ಪ್ರಾಥಮಿಕ ಕೇಂದ್ರಗಳಲ್ಲಿರುವ ರೀತಿ ಆಶಾ ಕಾರ್ಯಕರ್ತೆಯರು ಇತರೆ ಸಿಬ್ಬಂದಿಗಳನ್ನು ನೇಮಿಸಿಕೊಳ್ಳುತ್ತೇವೆ. ಪ್ರಮುಖವಾಗಿ ಜಿಲ್ಲಾ ಆಸ್ಪತ್ರೆ ಹಾಗೂ ತಾಲ್ಲೂಕು ಕೇಂದ್ರದ ಆಸ್ಪತ್ರೆಗಳು ದೂರ ಇದ್ದು, ಅದರಿಂದ ಸಮಸ್ಯೆ ಆದವರಿಗೆ ನಮ್ಮ ಕ್ಲಿನಿಕ್ಗಳು ಅನುಕೂಲವಾಗಲಿದೆ. ಇದರಿಂದ ಜಿಲ್ಲಾ ಆಸ್ಪತ್ರೆ ಮೇಲೆ ಒತ್ತಡವೂ ಕಡಿಮೆ ಆಗಲಿದೆ ಎಂದರು.
೩೦ ಸಾವಿರ ಜನಸಂಖ್ಯೆಗೆ ೧ ರಂತೆ ನಮ್ಮ ಕ್ಲಿನಿಕ್ಗಳನ್ನು ಸರ್ಕಾರ ತೆರೆಯುತ್ತಿದೆ. ನಮ್ಮ ನಗರದಲ್ಲಿ ಈಗಾಗಲೇ ೫೦ ಸಾವಿರ ಜನಸಂಖ್ಯೆಗೆ ೨ ನಗರ ಆರೋಗ್ಯ ಕೇಂದ್ರಗಳು ಇವೆ. ಮುಂದಿನ ದಿನಗಳಲ್ಲಿ ಮೂಡಿಗೆರೆ, ಕೊಪ್ಪ ಹಾಗೂ ಎನ್ಆರ್ಪುರಗಳಲ್ಲಿ ತಲಾ ಒಂದು ಕ್ಲಿನಿಕ್ ಬರುವ ಸಾಧ್ಯತೆಗಳಿವೆ ಎಂದು ತಿಳಿಸಿದರು.
ನಗರಸಭೆ ಅಧ್ಯಕ್ಷ ವರಸಿದ್ದಿ ವೇಣುಗೋಪಾಲ್ ಮಾತನಾಡಿದರು. ಉಪಾಧ್ಯಕ್ಷೆ ಉಮಾದೇವಿ ಕೃಷ್ಣಪ್ಪ, ಮಲ್ಲೇಗೌಡ ಜಿಲ್ಲಾ ಆಸ್ಪತ್ರೆ ಜಿಲ್ಲಾ ಸರ್ಜನ್ ಡಾ.ಮೋಹನ್ ಕುಮಾರ್, ತಾಲ್ಲೂಕು ವೈದ್ಯಾಧಿಕಾರಿ ಡಾ.ಸೀಮಾ, ಜಿಲ್ಲಾ ಆಯುಷ್ ಅಧಿಕಾರಿ ಡಾ.ಗೀತಾ ಇತರರು ಇದ್ದರು.
Driving to our clinics in four parts of the district