ಚಿಕ್ಕಮಗಳೂರುಎಕ್ಸ್ಪ್ರೆಸ್: ಅಕಾಲಿಕ ಮಳೆ ಇನ್ನಿತರೆ ಹವಾಮಾನ ವೈಪರೀತ್ಯಗಳಿಂದಾಗಿ ಕಾಫಿ ಬೆಳೆ ನಿರಂತರವಾಗಿ ಹಾನಿಗೀಡಾಗುತ್ತಿರುವ ಹಿನ್ನೆಲೆಯಲ್ಲಿ ಕಾಫಿಯನ್ನೂ ಬೆಳೆ ವಿಮೆ ಯೋಜನೆ ವ್ಯಾಪ್ತಿಗೆ ಸೇರ್ಪಡೆಗೊಳಿಸಬೇಕು ಎಂದು ಕರ್ನಾಟಕ ಬೆಳೆಗಾರರ ಒಕ್ಕೂಟ ಒತ್ತಾಯಿಸಿದೆ.
ಶುಕ್ರವಾರ ಒಕ್ಕೂಟದ ಅಧ್ಯಕ್ಷ ಡಾ.ಎಚ್.ಟಿ.ಮೋಹನ್ಕುಮಾರ್ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಏಳೆಂಟು ವರ್ಷಗಳಿಂದ ಅರೇಬಿಕಾ ಕಾಫಿ ಕೊಯ್ಲು ಸಂದರ್ಭದಲ್ಲಿ ಅಕಾಲಿಕ ಮಳೆ ಬರುತ್ತಿದೆ. ಈ ವರ್ಷವೂ ಅದು ಮರುಕಳಿಸಿದೆ. ಕಾಫಿ ಹಣ್ಣುಗಳು ಬಾಯಿಬಿಟ್ಟು ನೆಲಕ್ಕೆ ಉದುರಿ ನಷ್ಟ ಉಂಟಾಗಿದೆ. ಬೆಳೆಗಾರರಿಗೆ ರಕ್ಷಣೆ ಬೇಕಾಗಿರುವುದರಿಂದ ಕಾಫಿ ಬೆಳೆಯನ್ನೂ ವಿಮೆ ಯೋಜನೆ ವ್ಯಾಪ್ತಿಗೆ ತರಬೇಕು ಎಂದರು.
ಕಾಫಿ ಮಂಡಳಿ ಹಾಗೂ ಕಂದಾಯ ಇಲಾಖೆ ಸಮೀಕ್ಷೆ ಮಾಡಿ ಶೇ.೩೦ ರಷ್ಟು ಕಾಫಿ ನಷ್ಟ ಉಂಟಾಗಿದೆ ಎಂದು ಅಂದಾಜಿಸಿ ಎಡಿಆರ್ಎಫ್ ನಿಂದ ಒಂದು ಎಕೆರೆಗೆ ೧೮ ಸಾವಿರ ರೂ.ಕೇಂದ್ರ ಸರ್ಕಾರದಿಂದ ಹಾಗೂ ರಾಜ್ಯ ಸರ್ಕಾರದಿಂದ ೧೦ ಸಾವಿರ ರೂ. ಪರಿಹಾರ ನೀಡಿದೆ. ಅದನ್ನು ಕನಿಷ್ಟ ಎರಡು ಎಕರೆಗೆ ಮಾತ್ರ ಸೀಮಿತಗೊಳಿಸಲಾಗಿದೆ. ಆದರೆ ಇದಾದ ಮೇಲೂ ಅಕಾಲಿಕ ಮಳೆಯಿಂದ ಮತ್ತೆ ಶೇ.೨೦ ರಷ್ಟು ಕಾಫಿ ನಷ್ಟ ಉಂಟಾಗಿದೆ. ಎನ್ಡಿಆರ್ಎಫ್ ನಡಿ ಈಗ ಕೊಡುತ್ತಿರುವ ಪರಿಹಾರ ಬಹುವಾರ್ಷಿಕ ಬೆಳೆಯಾದ ಕಾಫಿಗೆ ತುಂಬಾ ಕಡಿಮೆ ಆಗುತ್ತದೆ. ಈ ಕಾರಣಕ್ಕೆ ಪರಿಹಾರ ಹೆಚ್ಚಿಸುವ ಜೊತೆಗೆ ೨ ಎಕರೆ ಮಿತಿಯನ್ನು ತೆಗೆದು ಕನಿಷ್ಟ ೧೦ ಎಕರೆಗೆ ಮಿತಿಗೊಳಿಸಬೇಕು ಎಂದು ಒತ್ತಾಯಿಸುತ್ತೇವೆ ಎಂದರು.
ಸಹಕಾರಿ ಬ್ಯಾಂಕ್ಗಳಲ್ಲಿ ೩ ಲಕ್ಷ ರೂ. ವರೆಗೆ ಶೂನ್ಯ ಬಡ್ಡಿ ದರದಲ್ಲಿ ಸಾಲ ಕೊಡುತ್ತಿದ್ದಾರೆ. ಅದನ್ನು ೧೦ ಲಕ್ಷ ರೂ.ಗಳಿಗೆ ಹೆಚ್ಚಿಸಬೇಕು. ರಾಷ್ಟ್ರೀಕೃತ ಬ್ಯಾಂಕ್ಗಳಲ್ಲಿ ಬಡ್ಡಿದರವನ್ನು ಕಡಿತಗೊಳಿಸಬೇಕು. ಈ ಎಲ್ಲಾ ಬೇಡಿಕೆ ಮುಂದಿಟ್ಟು ಮತ್ತೊಮ್ಮೆ ದೆಹಲಿಗೆ ನಿಯೋಗ ತೆರಳಿ ಹಣಕಾಸು ಸಚಿವರು, ವಾಣಿಜ್ಯ ಸಚಿವರು, ನಮ್ಮ ಜಿಲ್ಲೆಯವರೇ ಆದ ಸಚಿವೆ ಶೋಭಾ ಕರಂದ್ಲಾಜೆ ಅವರನ್ನು ಭೇಟಿ ಮಾಡಿ ಗಮನಕ್ಕೆ ತರುತ್ತೇವೆ ಎಂದರು.
ಮುಖ್ಯಮಂತ್ರಿಗಳು ಆನೆ ದಾಳಿಯಿಂದ ಮೃತಪಟ್ಟವರ ಕುಟುಂಬಕ್ಕೆ ಪರಿಹಾರವನ್ನು ದುಪ್ಪಟ್ಟು ಅಂದರೆ ೧೫ ಲಕ್ಷ ರೂ.ಗಳಿಗೆ ಹೆಚ್ಚಿಸಿದ್ದರೂ ಅದು ಶಾಶ್ವತ ಪರಿಹಾರ ಆಗುವುದಿಲ್ಲ. ಹಂತ ಹಂತವಾಗಿ ಈ ಭಾಗದಲ್ಲಿರುವ ಆನೆಗಳನ್ನು ಅರಣ್ಯಕ್ಕೆ ಸ್ಥಳಾಂತರಿಸಿ ಅರಣ್ಯದಂಚಿನಲ್ಲಿ ಬೇಲಿ ಅಳವಡಿಸಬೇಕು ಎಂದು ಒತ್ತಾಯಿಸುತ್ತೇವೆ ಎಂದರು.
ಈಗಾಗಲೇ ರಾಜ್ಯ ಸರ್ಕಾರ ಕೊಟ್ಟ ಭರವಸೆಯಂತೆ ಭೂಕಬಳಿಕೆ ಕಾಯ್ದೆಯಿಂದ ರೈತರನ್ನು ಹೊರಗಿಟ್ಟಿದೆ. ಅದೇ ರೀತಿ ಬೆಳೆಗಾರರ ಒತ್ತುವರಿ ಭೂಮಿಯನ್ನು ಕನಿಷ್ಟ ೩೦ ವರ್ಷದ ವರೆಗೆ ಲೀಸ್ಗೆ ಕೊಡುವ ತೀರ್ಮಾನ ತೆಗೆದುಕೊಂಡಿದ್ದಾರೆ. ಬೆಳಗಾವಿ ಅಧಿವೇಶನದಲ್ಲೇ ಘೋಷಣೆ ಮಾಡುವುದಾಗಿ ಕಂದಾಯ ಇಲಾಖೆ ಸಚಿವರು ಭರವಸೆ ನೀಡಿದ್ದಾರೆ ಎಂದರು.
ಸುದ್ದಿಗೋಷ್ಠಿಯಲ್ಲಿ ಕರ್ನಾಟಕ ಬೆಳೆಗಾರರ ಒಕ್ಕೂಟದ ಉಪಾಧ್ಯಕ್ಷ ವಸಂತೇಗೌಡ, ಖಜಾಂಚಿ ಉಮೇಶ್, ವಸ್ತಾರೆ ಬೆಳೆಗಾರರ ಸಂಘದ ಅಧ್ಯಕ್ಷ ಟಿ.ಡಿ.ಮಲ್ಲೇಶ್, ಕಾರ್ಯದರ್ಶಿ ರತೀಶ್, ದೇವರಾಜ್ ಇದ್ದರು.
Karnataka Growers Union