ಚಿಕ್ಕಮಗಳೂರುಎಕ್ಸ್ಪ್ರೆಸ್: ಇಡಿ, ಐಟಿ, ಸಿಬಿಐ ಇನ್ನಿತರೆ ತನಿಖಾ ಸಂಸ್ಥೆಗಳು ತಮ್ಮ ಕಾರ್ಯಚಟುವಟಿಕೆ ಮತ್ತು ವೇಳಾಪಟ್ಟಿಯನ್ನು ಕಾಂಗ್ರೆಸ್ ನಾಯಕರ ಅನುಕೂಲಕ್ಕೆ ತಕ್ಕಂತೆ ನಿಗಧಿಪಡಿಸಲು ಸಾಧ್ಯವಿಲ್ಲ. ಅವು ಸ್ವಾಯತ್ತ ಸಂಸ್ಥೆಗಳಾಗಿದ್ದು, ಕೇಂದ್ರ ಸರ್ಕಾರ ದುರ್ಬಳಕೆ ಮಾಡಿಕೊಳ್ಳುತ್ತಿದೆ ಎನ್ನುವ ಕಾಂಗ್ರೆಸ್ ಆರೋಪ ಆಧಾರ ರಹಿತವಾದದ್ದು ಎಂದು ಜಿಲ್ಲಾ ಬಿಜೆಪಿ ವಕ್ತಾರ ದೀಪಕ್ ದೊಡ್ಡಯ್ಯ ಹೇಳಿದರು.
ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ಚುನಾವಣೆ, ಅಧಿವೇಶನ, ಬಾರತ್ ಜೋಡೋ ಯಾತ್ರೆ ಇಂತಹ ಸಂದರ್ಭಗಳಲ್ಲಿ ಕಾಂಗ್ರೆಸ್ ನಾಯಕರ ಮನೆ, ಉದ್ದಿಮೆಗಳ ಮೇಲೆ ತನಿಖಾ ಸಂಸ್ಥೆಗಳಿಂದ ದಾಳಿ ನಡೆಸಿ ದುರುಪಯೋಗ ಪಡಿಸಿಕೊಳ್ಳಲಾಗುತ್ತದೆ ಎನ್ನುವ ಜಿಲ್ಲಾ ಕಾಂಗ್ರೆಸ್ ಆರೋಪಕ್ಕೆ ಪ್ರತಿಕ್ರಿಯಿಸಿದರು.
ತನಿಖಾ ಸಂಸ್ಥೆಗಳು ತನ್ನದೇ ಆದ ಪದ್ದತಿ ಮತ್ತು ನಿಯಮದಂತೆ ಕೆಲಸ ಮಾಡುತ್ತವೆ. ಕೇಂದ್ರ ಸರ್ಕಾರ ಮಧ್ಯ ಪ್ರವೇಶ ಮಾಡಲು ಸಾಧ್ಯವಿಲ್ಲ ಎಂಬ ಪರಿಜ್ಞಾನ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷರಿಗಿದ್ದಂತಿಲ್ಲ ಎಂದರು.
ಪ್ರತಿಯೊಬ್ಬ ವ್ಯವಹಾರಸ್ಥ ಪ್ರಜೆ ದಾಖಲೆಗಳನ್ನು ಇಟ್ಟುಕೊಂಡು ಆದಾಯಕ್ಕೆ ತಕ್ಕಂತೆ ತೆರಿಗೆ ಕಟ್ಟಬೇಕು. ಇದು ಸಂವಿಧಾನಾತ್ಮಕ ಕಾನೂನು. ಅದನ್ನು ತಪ್ಪಿಸುವ ಯಾರೇ ಆದರೂ ಅವರನ್ನು ಪ್ರಶ್ನಿಸುವುದು ತನಿಖಾ ಸಂಸ್ಥೆಗಳ ಕರ್ತವ್ಯವಾಗಿರುತ್ತದೆ. ಇದಕ್ಕೆ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಅವರೂ ಹೊರತಲ್ಲ. ಇದನ್ನು ಕಾಂಗ್ರೆಸ್ ಅರ್ಥಮಾಡಿಕೊಳ್ಳಬೇಕು ಎಂದರು.
ಡಿ.ಕೆ.ಶಿವಕುಮಾರ್ ಕೆಪಿಸಿಸಿ ಅಧ್ಯಕ್ಷರಾದ ಮಾತ್ರಕ್ಕೆ ಅವರು ನಡೆಸುವ ಶಿಕ್ಷಣ ಸಂಸ್ಥೆಗಳು ಇನ್ನಿತರೆ ಉದ್ದಿಮೆಗಳು ಕಾನೂನು ಚೌಕಟ್ಟು ಮೀರಿ ನಡೆಯುವಂತಿಲ್ಲ. ದೇಶದ ಕಾನೂನು ಪ್ರತಿಯೊಬ್ಬರಿಗೂ ಅನ್ವಯಿಸುತ್ತದೆ. ಅದನ್ನು ಪಾಲಿಸುವುದು ಸಹ ಎಲ್ಲರ ಕರ್ತವ್ಯ ಎಂದರು.
ವಿರೋಧ ಪಕ್ಷಗಳ ಗೌರವಕ್ಕೆ ಧಕ್ಕೆ ತರುವ ಕೆಲಸವನ್ನು ಬಿಜೆಪಿ ಎಂದಿಗೂ ಮಾಡಿಲ್ಲ. ಅವರುಗಳನ್ನು ಹತ್ತಿಕ್ಕುವ ಪ್ರಯತ್ನವನ್ನೂ ನಡೆಸಿಲ್ಲ. ಕೇಂದ್ರ ರಾಜ್ಯ ಸರ್ಕಾರಗಳು ಅಭಿವೃದ್ಧಿಯಲ್ಲಿ ಎಂದಿಗೂ ಹಿಂದೆ ಬಿದ್ದಿಲ್ಲ. ಹಿಂದೆಂದೂ ನಡೆಯದಷ್ಟು ಅಭಿವೃದ್ಧಿ ಕೆಲಸಗಳು ನಿರಂತರವಾಗಿ ನಡೆಯುತ್ತಿದೆ. ಈ ಬಗ್ಗೆ ಬಹಿರಂಗ ಚರ್ಚೆಗಳ ಬಿಜೆಪಿ ಸದಾ ಸಿದ್ಧ ಎಂದರು.
ಮುಂಬರುವ ಚುನಾವಣೆಯಲ್ಲಿ ಬಿಜೆಪಿ ಜಿಲ್ಲೆಯ ಐದೂ ಕ್ಷೇತ್ರದಲ್ಲೂ ಗೆಲುವು ಸಾಧಿಸಲಿದೆ. ಕಾಂಗ್ರೆಸಿಗರಿಗೆ ಠೇವಣಿ ಕಳೆದುಕೊಳ್ಳುವ ಭೀತಿ ಕಾಡುತ್ತಿದೆ. ಆ ಕಾರಣಕ್ಕಾಗಿ ದಿನಕ್ಕೊಬ್ಬರು ನಾಯಕರು ಒಂದೊಂದು ರೀತಿ ಹೇಳಿಕೆಗಳನ್ನು ಕೊಡುತ್ತಿದ್ದಾರೆ ಎಂದು ಟೀಕಿಸಿದರು.
ಶಾಸಕರ ಮೇಲೆ ಆಸ್ತಿಗಳಿಕೆ ವಿಚಾರದಲ್ಲಿ ಸಲ್ಲದ ಆರೋಪಗಳನ್ನು ಮಾಡುವ ಕಾಂಗ್ರೆಸಿಗರು ದಾಖಲೆಗಳಿದ್ದರೆ ಸಂಬಂಧ ಪಟ್ಟ ತನಿಖಾ ಸಂಸ್ಥೆಗಳಿಗೆ ದೂರು ಸಲ್ಲಿಸಲಿ ಎಂದು ಸವಾಲು ಹಾಕಿದ ಅವರು, ಇಲ್ಲವಾದಲ್ಲಿ ಅಭಿವೃದ್ಧಿ ಕಾರ್ಯಗಳಿಗೆ ಕೈಜೋಡಿಸಲಿ ಎಂದು ಸಲಹೆ ಮಾಡಿದರು.
ಬಿಜೆಪಿ ಮುಖಂಡ ಟಿ.ರಾಜಶೇಖರ್ ಮಾತನಾಡಿ, ಕೆಪಿಸಿಸಿ ಕಿಸಾನ್ ಘಟಕದ ಅಧ್ಯಕ್ಷ ಸಚಿನ್ ಮೀಗಾ ಅವರು ಹಸಿರು ಶಾಲು ಹಾಕಿಕೊಂಡ ಮಾತ್ರಕ್ಕೆ ದೊಡ್ಡ ನಾಯಕ ಎನ್ನುವ ಭ್ರಮೆಯಲ್ಲಿ ಶಾಸಕ ಸಿ.ಟಿ.ರವಿ ಅವರ ವಿರುದ್ಧ ಆಧಾರ ರಹಿತ ಆರೋಪಗಳನ್ನು ಮಾಡಿದ್ದಾರೆ. ಕೇವಲ ಒಂದು ಗ್ರಾ.ಪಂ.ಚುನಾವಣೆಯಲ್ಲಿ ನಿಂತು ಗೆಲ್ಲುವ ಶಕ್ತಿ ಅವರಲ್ಲಿಲ್ಲ. ಜಿಲ್ಲೆಯಲ್ಲಿ ಈಗಲೂ ಕಾಂಗ್ರೆಸ್ ಏಕಾಂಗಿ ಹೋರಾಟಮಾಡುವ ಶಕ್ತಿ ಉಳಿಸಿಕೊಂಡಿಲ್ಲ. ಜೆಡಿಎಸ್, ರೈತಸಂಘ, ಡಿಎಸ್ಎಸ್, ಬಿಎಸ್ಪಿ, ಸಿಪಿಐ ಎಲ್ಲರ ಬೆಂಬಲ ಅದಕ್ಕೆ ಬೇಕಾಗಿದೆ ಎಂದು ಟೀಕಿಸಿದರು.
ಸುದ್ದಿಗೋಷ್ಠಿಯಲ್ಲಿ ಜಿಲ್ಲಾ ಬಿಜೆಪಿ ಮಾಧ್ಯಮ ಸಹ ವಕ್ತಾರರಾದ ಅಂಕಿತಾ, ಯುವ ಮೋರ್ಚಾ ಜಿಲ್ಲಾಧ್ಯಕ್ಷ ಸಂತೋಷ್ ಕೋಟ್ಯಾನ್ ಉಪಸ್ಥಿತರಿದ್ದರು.
Investigating agencies cannot fix at their own convenience