ಚಿಕ್ಕಮಗಳೂರುಎಕ್ಸ್ಪ್ರೆಸ್: ಯುವಕರು ಗ್ರಾಮಗಳನ್ನು ತೊರೆಯದೆ ಆಧುನಿಕ ಕೃಷಿ ಪದ್ಧತಿಯನ್ನು ಅಳವಡಿಸಿಕೊಂಡು ತಮ್ಮ ಜಮೀನಿನಲ್ಲಿಯೇ ವಿವಿಧ ರೀತಿಯ ತೆಂಗು, ಬಾಳೆ, ಅಡಿಕೆ, ಮಾವು, ಹಲಸು ಹಾಗೂ ವಿವಿಧ ಬೆಳೆಗಳನ್ನು ಮಾಡಿಕೊಂಡು, ನೆಮ್ಮದಿಯ ಜೀವನ ಮಾಡಬಹುದೆಂದು ಲೋಕೋಪಯೋಗಿ ಇಲಾಖೆಯ ಸಹಾಯಕ ಕಾರ್ಯಪಾಲಕ ಅಭಿಯಂತರರಾದ ಗವಿರಂಗಪ್ಪ ತಿಳಿಸಿದರು.
ಸೋಮವಾರ ಜಿ.ಪಂ.ವತಿಯಿಂದ ಹಮ್ಮಿಕೊಳ್ಳಲಾಗಿರುವ ಅನುಭವಾತ್ಮಕ ಕಲಿಕೆ ಅಂಗವಾಗಿ ತಾಲ್ಲೂಕಿನ ಬಾಣೂರಿನಲ್ಲಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಮಕ್ಕಳಿಗೆ ಕೃಷಿ ಅದ್ಯಯನ ಶಿಬಿರ ನಡೆಸಲಾಯಿತು.
ಲೋಕೋಪಯೋಗಿ ಇಲಾಖೆ ಸಹಾಯಕ ಅಭಿಯಂತ ಗವಿರಂಗಪ್ಪ ಅವರ ಜಮೀನಿನಲ್ಲಿ ನಡೆದ ಶಿಬಿರದಲ್ಲಿ ಸ್ಥಳೀಯ ಕೃಷಿಕರು ಮತ್ತು ಶಿಕ್ಷಕರು ಕೃಷಿ ಪದ್ಧತಿ ಕುರಿತು ಮಕ್ಕಳಿಗೆ ಮಾಹಿತಿ ನೀಡಿದರು.
ಈ ವೇಳೆ ಜಮೀನಿನ ಮಾಲೀಕರೂ ಆದ ಇಂಜಿನೀಯರ್ ಗವಿರಂಗಪ್ಪ ವಿದ್ಯಾರ್ಥಿಗಳನ್ನು ಉದ್ದೇಶಿಸಿ ಮಾತನಾಡಿ, ಸರ್ಕಾರಿ ಶಾಲೆಯಲ್ಲಿ ವಿದ್ಯಾಭ್ಯಾಸ ಮಾಡಿ ಇಂದು ನಾವು ಉತ್ತಮ ಸ್ಥಾನದಲ್ಲಿದ್ದೇವೆ, ನೀವು ಸಹ ಉನ್ನತ ವ್ಯಾಸಂಗ ಮಾಡಿ ಆಧುನಿಕ ಕೃಷಿ ಪದ್ಧತಿಯನ್ನು ಅಳವಡಿಸಿಕೊಂಡು ಇತರರಿಗೆ ಮಾದರಿಯಾಗಿ ಬದುಕಬಹುದು ಎಂದರು.
ತಮ್ಮ ತಂದೆಯವರಿಗೆ ಸೇರಿದ ಈ ಜಮೀನು ಬರಡು ಭೂಮಿಯಾಗಿತ್ತು ಸತತ ೮ ವರ್ಷಗಳ ಪರಿಶ್ರಮದಿಂದ ೪೦೦ ತೆಂಗು, ನೀರಿಗಾಗಿ ನಾಲ್ಕು ಬೋರ್ವೆಲ್ ತೆಗೆಸಿ ಕೃಷಿ ಹೊಂಡ ಮಾಡಿ ೨೦ ಸಾವಿರ ಮೀನು ಮರಿ ಸಾಕಾಣಿಕೆ, ೪೦೦೦ ಅಡಿಕೆ, ೧೫೦ ಹಲಸು ಮಾವು, ಮೆಣಸು, ಬಾಳೆ ಎಲ್ಲವನ್ನೂ ಕೃಷಿ ತಜ್ಞರ ಸಲಹೆ ಪಡೆದು ಮಕ್ಕಳ ಶ್ರಮದಿಂದಾಗಿ ಫಸಲು ಬರುವ ಹಂತಕ್ಕೆ ತಂದಿದ್ದೇವೆ ಎಂದರು.
ಕ್ರಮಬದ್ಧ ಕೃಷಿ ಮಾಡಿದರೆ ಜಮೀನಿದ್ದರೂ ನಗರ, ಪಟ್ಟಣಕ್ಕೆ ಗುಳೇ ಹೋಗುವುದು ತಪ್ಪುತ್ತದೆ. ಆದರೆ ವಾರದಲ್ಲೊಮ್ಮೆ ಜಮೀನಿಗೆ ಬಂದು ಉಳಿದ ದಿನ ಮನೆಯಲ್ಲಿದ್ದರೆ ಸಮಗ್ರ ಕೃಷಿ ಆಗುವುದಿಲ್ಲ. ಕೃಷಿ ಲಾಭದಾಯಕವಾಗಿದೆ. ಮಾಡುವ ಎಲ್ಲಾ ಕೆಸದಲ್ಲೂ ಲಾಭ ನಿರೀಕ್ಷೆ ಮಾಡಲು ಸಾಧ್ಯವಿಲ್ಲ. ಆದರೆ ಆಸಕ್ತಿಯಿಂದ ಕೃಷಿ ಮಾಡಿದರೆ ಲಾಭ ಖಂಡಿತ ಇದೆ ಎಂದರು.
ಅಂದಿನ ಕಾಲದಲ್ಲಿ ಪರಿಶಿಷ್ಟ ಸಮಾಜದಲ್ಲಿ ಇಂಜಿನೀಯರಿಂದ ಪದವಿ ಗಳಿಸುವುದೇ ಕಷ್ಟವಾಗಿದ್ದಾಗ ಸಮಯಕ್ಕೆ ಸರಿಯಾಗಿ ಪದವಿ ಮುಗಿಸಿದ್ದು ಒಂದು ಸಾಧನೆಯಾದರೆ, ಬರಡು ಭೂಮಿಯಲ್ಲಿ ಕೃಷಿ ಮಾಡಿ ಸಾಧನೆ ಮಾಡಬೇಕು ಎನ್ನುವ ಛಲ ಇತ್ತು ಅದನ್ನು ಸಾಧನೆ ಮಾಡಿದ ತೃಪ್ತಿ ಇದೆ ಎಂದು ತಿಳಿಸಿದರು.
ಮುಖ್ಯ ಶಿಕ್ಷಕ ಕೆ.ಎಂ. ಮಂಜಪ್ಪ ಮಾತನಾಡಿ, ಬಹು ಬೆಳೆಗಳನ್ನು ಮಾಡುವ ಕುರಿತು, ಮೀನುಗಾರಿಕೆ ಹಾಗೂ ಬಗ್ಗೆ ಹಸಿರು ಬೆಳೆಸುವುದರಿಂದ ಬಂಜರು ಭೂಮಿಯನ್ನು ಹಸನಾಗುವುದು ಹೇಗೆ ಎನ್ನುವ ಬಗ್ಗೆ ತಿಳುವಳಿಕೆ ಮೂಡಿಸಲಾಯಿತು. ಪರಿಸರದ ಬಗ್ಗೆ ಕೃಷಿ ಕ್ಷೇತ್ರದ ಬಗ್ಗೆ ಆಸಕ್ತಿ ಮೂಡಿಸುವುದು ಉದ್ದೇಶ ಎಂದರು.
ಸಹಶಿಕ್ಷಕ ಬಿ.ಎಂ.ರಾಜು ಮಾತನಾಡಿ, ಅನುಭವಾತ್ಮ ಕಲಿಕೆ ಎನ್ನುವುದು ಒಂದು ವಿಶಿಷ್ಠ ಪ್ರಯತ್ನವಾಗಿದೆ. ಮಕ್ಕಳು ಕೃಷಿ ಬಗ್ಗೆ ಆಸಕ್ತಿಯಿಂದ ಕೇಳಿ ತಿಳಿದುಕೊಳ್ಳುತ್ತಿದ್ದಾರೆ. ಮಕ್ಕಳನ್ನು ಈಗಿನಿಂದಲೇ ಕೃಷಿಕಡೆ ಆಕರ್ಷಿಸಲು ಉತ್ತಮ ಯೋಜನೆ ಎಂದರು.
ವಿದ್ಯಾರ್ಥಿನಿ ಬಿ.ಎ.ಜ್ಞಾನಾಕ್ಷಿ ಮಾತನಾಡಿ, ವೈದ್ಯರು, ಇಂಜಿನೀಯರ್ ಆಗಬೇಂದಷ್ಟೇ ಅಭಿಲಾಷೆ ಇಟ್ಟುಕೊಂಡರೆ ಸಾಲದು, ಕೃಷಿ ಬಗ್ಗೆಯೂ ಜ್ಞಾನ ಇರಬೇಕು. ಇದರಿಂದ ಬದುಕು ಕಟ್ಟಿಕೊಳ್ಳಲು ಸಾಧ್ಯವಿದೆ ಎಂದರು. ಈ ಸಂದರ್ಭದಲ್ಲಿ ಶಿಕ್ಷಕಿ ವಸಂತ್ಕುಮಾರಿ, ಉಷಾರಾಣಿ, ಬಿ.ಜಿ.ಮಂಜುನಾಥ್, ಬಿ.ರವಿ. ಬಿ.ಆರ್.ಪ್ರಕಾಶ್, ಜಯಸಿಂಗ್ ನಾಯಕ್ ಇತರರು ಉಪಸ್ತಿತರಿದ್ದರು.
If you work in agriculture, you can have a good life