ಚಿಕ್ಕಮಗಳೂರುಎಕ್ಸ್ಪ್ರೆಸ್: ಮುಂಬರುವ ಚುನಾವಣೆಯಲ್ಲಿ ಚಿಕ್ಕಮಗಳೂರು ವಿಧಾನಸಭಾ ಕ್ಷೇತ್ರದಿಂದ ಸ್ಪರ್ಧಿಸಲು ತಮಗೇ ಬಿಜೆಪಿ ಟಿಕೆಟ್ ನೀಡಬೇಕೆಂದು ಒತ್ತಾಯಿಸಿ ಪಕ್ಷದ ಮುಖಂಡ ಎಚ್.ಡಿ.ತಮ್ಮಯ್ಯ ಸೋಮವಾರ ನೂರಾರು ಬೆಂಬಲಿಗರೊಂದಿಗೆ ಆಗಮಿಸಿ ಜಿಲ್ಲಾ ಬಿಜೆಪಿ ಅಧ್ಯಕ್ಷರಲ್ಲ್ಲಿ ಕೋರಿಕೆ ಸಲ್ಲಿಸಿದರು.
ಪ್ರಸ್ತುತ ಬಿಜೆಪಿ ವಿವಿಧ ಪ್ರಕೋಷ್ಠಗಳ ಜಿಲ್ಲಾ ಸಂಚಾಲಕರಾಗಿರುವ ತಮ್ಮಯ್ಯ, ನಾಲ್ಕು ಬಾರಿ ನಗರಸಭೆ ಸದಸ್ಯರಾಗಿ, ಒಮ್ಮೆ ಅಧ್ಯಕ್ಷರಾಗಿ ಸೇವೆ ಸಲ್ಲಿಸಿರುವುದಲ್ಲದೆ, ಪಕ್ಷದಲ್ಲೂ ವಿವಿಧ ಹುದ್ದೆಗಳನ್ನು ನಿಭಾಯಿಸಿರುವುದನ್ನು ಪರಿಗಣಿಸಿ ಈ ಬಾರಿ ಟಿಕೆಟ್ ನೀಡಬೇಕು ಎಂದು ಒತ್ತಾಯಿಸಿದರು.
ತಮ್ಮಯ್ಯ ಅವರು ಬೆಳಗ್ಗೆ ಕೋಟೆ ಬಡಾವಣೆಯ ಆಂಜನೇಯಸ್ವಾಮಿ ದೇವಸ್ಥಾನದಲ್ಲಿ ನಡೆದ ಪಕ್ಷದ ಬೂತ್ ವಿಜಯ ಅಭಿಯಾನ ಉದ್ಘಾಟನಾ ಸಮಾರಂಭದಲ್ಲಿ ಭಾಗವಹಿಸಿದ್ದರು. ಈ ವೇಳೆ ಅವರ ನೂರಾರು ಬೆಂಬಲಿಗರು ಪಕ್ಷದ ಬಾವುಟ ಹಿಡಿದು ಜಿಲ್ಲಾ ಬಿಜೆಪಿ ಕಚೇರಿ ಬಳಿ ಆಗಮಿಸಿ ತಮ್ಮಯ್ಯ ಪರ ಘೋಷಣೆ ಕೂಗಿದ್ದಲ್ಲದೆ, ಅವರಿಗೇ ಈ ಬಾರಿ ಟಿಕೆಟ್ ನೀಡಬೇಕು ಎಂದು ಒತ್ತಾಯಿಸಿದರು.
ಸ್ವಲ್ಪ ಸಮಯದ ನಂತರ ಜಿಲ್ಲಾಧ್ಯಕ್ಷ ಎಚ್.ಸಿ.ಕಲ್ಮರುಡಪ್ಪ ಅವರೊಂದಿಗೆ ಪಕ್ಷದ ಕಚೇರಿಗೆ ಆಗಮಿಸಿದ ತಮ್ಮಯ್ಯ ಸುಮಾರು ೧೦ ನಿಮಿಷಗಳ ಕಾಲ ಅಧ್ಯಕ್ಷರೊಂದಿಗೆ ಮಾತನಾಡಿದರು. ಈ ವೇಳೆ ಪಕ್ಷದ ಜಿಲ್ಲಾ ಪ್ರಧಾನ ಕಾರ್ಯದರ್ಶಿ ದೇವರಾಜ್ ಶೆಟ್ಟಿ, ನಗರಾಧ್ಯಕ್ಷ ಮಧುಕುಮಾರ್ ರಾಜ್ ಅರಸ್ ಸಹ ಇದ್ದರು.
ನಂತರ ಹೊರಕ್ಕೆ ಬಂದ ತಮ್ಮಯ್ಯ ಬೆಂಬಲಿಗರನ್ನುದ್ದೇಶಿಸಿ ಮಾತನಾಡಿ, ನಿಮ್ಮೆಲ್ಲರ ಒತ್ತಾಸೆ ಮೇರೆಗೆ ಪಕ್ಷದ ಚೌಕಟ್ಟಿನಲ್ಲಿ ಈ ಬಾರಿ ಚುನಾವಣೆಗೆ ಸ್ಪರ್ಧಿಸುವ ಆಂಕಾಂಕ್ಷೆಯನ್ನು ಜಿಲ್ಲಾಧ್ಯಕ್ಷರ ಬಳಿ ವ್ಯಕ್ತಪಡಿಸಿದ್ದೇನೆ ಎಂದು ತಿಳಿಸಿದರು.
ಟಿಕೆಟ್ಗಾಗಿ ಲಿಖಿತವಾಗಿ ಅರ್ಜಿ ನೀಡುವ ಪದ್ಧತಿ ನಮ್ಮ ಪಕ್ಷದಲ್ಲಿ ಇಲ್ಲ. ಈಗ ಅವರು ನಿಮ್ಮಲ್ಲರ ಮನದಾಳದ ನಿಲುವನ್ನು ತಿಳಿದುಕೊಂಡಿದ್ದಾರೆ. ಅದನ್ನು ಎಲ್ಲಿಗೆ ಮುಟ್ಟಿಸಬೇಕು ಅಲ್ಲಿಗೆ ಮುಟ್ಟಿಸುವುದಾಗಿ ತಿಳಿಸಿದ್ದಾರೆ. ಪಕ್ಷದ ತೀರ್ಮಾನಕ್ಕೆ ನಾವು ನೀವೆಲ್ಲರೂ ಬದ್ಧರಾಗಿ ಕೆಲಸ ಮಾಡೋಣ ಎಂದು ತಿಳಿಸಿದರು.
ಜಿಲ್ಲಾ ಬಿಜೆಪಿ ಅಧ್ಯಕ್ಷ ಎಚ್.ಡಿ.ಕಲ್ಮರುಡಪ್ಪ ಈ ವೇಳೆ ಮಾತನಾಡಿ, ಬಿಜೆಪಿ ಕಾರ್ಯಕರ್ತರ ಆಧಾರಿತ ಪಕ್ಷ, ವೈವಿದ್ಯತೆಯನ್ನು ಅಳವಡಿಸಿಕೊಂಡಿರುವ ಪಕ್ಷ, ತಮ್ಮಯ್ಯ ಅವರು ತಾವೂ ಓರ್ವ ಆಕಾಂಕ್ಷಿ ಎನ್ನುವ ವಿಚಾರವನ್ನು ನಮ್ಮಲ್ಲಿ ಹೇಳಿದ್ದಾರೆ. ಈ ಬಗ್ಗೆ ಕೋರ್ ಕಮಿಟಿ ಸಭೆಯಲ್ಲಿ ಚರ್ಚಿಸುತ್ತೇವೆ. ಇದರ ಅಂತಿಮ ತೀರ್ಮಾನವಾಗುವುದು ಪಕ್ಷದ ಪಾರ್ಲಿಮೆಂಟರಿ ಬೋರ್ಡ್ನಲ್ಲಿ. ಅದೇ ಪಕ್ಷದ ಅತ್ಯುನ್ನತ ಸಭೆ. ಅಲ್ಲಿ ಇಡೀ ರಾಜ್ಯದ ಎಲ್ಲಾ ಕ್ಷೇತ್ರದ ಅಭ್ಯರ್ಥಿಗಳ ನಿರ್ಧಾರ ಆಗುತ್ತದೆ. ಅಭ್ಯರ್ಥಿ ಯಾರೇ ಆದರೂ ಇದೇ ಉತ್ಸಾಹದಿಂದ ಕೆಲಸ ಮಾಡೋಣ ಎಂದರು.ಈ ವೇಳೆ ಬೆಂಬಲಿಗರು ತಮ್ಮಯ್ಯ ಅವರನ್ನು ಹೆಗಲಮೇಲೆ ಒತ್ತು ಕುಣಿದರಲ್ಲದೆ, ಅವರ ಪರ ಘೋಷಣೆಗಳನ್ನು ಕೂಗಿ ನಂತರ ವಾಪಾಸಾದರು.
Demand that BJP give ticket