ಚಿಕ್ಕಮಗಳೂರು: ಮಹಾತ್ಮ ಪ್ರೊ.ಬಿ.ಕೃಷ್ಣಪ್ಪನವರು ಹಚ್ಚಿರುವ ಹೋರಾಟದ ಹಣತೆಯನ್ನು ಶೋಷಿತರು ಮತ್ತು ಕೆಳವರ್ಗದ ಜನ ಆರದಂತೆ ನೋಡಿಕೊಳ್ಳಬೇಕು ಎಂದು ಬಿಎಸ್ಪಿ ಜಿಲ್ಲಾಧ್ಯಕ್ಷ ಕೆ.ಟಿ.ರಾಧಾ ಕೃಷ್ಣ ಮನವಿ ಮಾಡಿದರು.
ನಗರದ ಬಿಎಸ್ಪಿ ಕಚೇರಿಯಲ್ಲಿ ಶನಿವಾರ ನಡೆದ ಜಿಲ್ಲಾ ಸಹೋದರತ್ವ ಸಮಿತಿಯ ಮಾಸಿಕ ಸಭೆ ಮತ್ತು ಮಹಾತ್ಮ ಪ್ರೊ.ಬಿ.ಕೃಷ್ಣಪ್ಪನವರ ಜನ್ಮ ದಿನಾಚರಣೆ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಕೆಳ ವರ್ಗದವರು ಶೋಷಿತರು ಮತ್ತು ನೊಂದವರ ಧ್ವನಿಯಾಗಿ ನಿಂತ ವರು ಮಹಾತ್ಮ ಪ್ರೊ. ಬಿ.ಕೃಷ್ಣಪ್ಪನವರು, ಚಂದ್ರಗುತ್ತಿಯಲ್ಲಿ ನಡೆಯುತ್ತಿದ್ದ ಅಮಾನವೀಯ ಬೆತ್ತಲೆ ಸೇವೆ ತಡೆಗಟ್ಟುವುದು ಸೇರಿದಂತೆ ನೊಂದವರು, ಅಸಹಾಯಕರು ಮತ್ತು ಬಡವರ ಪರವಾಗಿ ಲಿಂಗ ತಾರತಮ್ಯವಿಲ್ಲದೆ ತಮ್ಮ ಬದುಕಿನದ್ದಕ್ಕೂ ಹೋರಾಟ ನಡೆಸಿದವರು ಎಂದರು.
ದಲಿತ ಸಂಘರ್ಷ ಸಮಿತಿಯನ್ನು ಸ್ಥಾಪಿಸುವುದರ ಜೊತೆಗೆ ರಾಜ್ಯದಲ್ಲಿ ಬಹುಜನ ಸಮಾಜ ಪಕ್ಷವನ್ನು ಕಟ್ಟಿ ಬೆಳೆಸಿದವರು ಕೃಷ್ಣಪ್ಪನವರು ಎಂದ ರಾಧಾಕೃಷ್ಣ, ಕೆಳ ವರ್ಗದ ಜನ ಕೃಷ್ಣಪ್ಪನವರು ಹಾಕಿ ಕೊಟ್ಟಿರುವ ಹೋರಾಟದ ಹಾದಿಯಲ್ಲಿ ಸಾಗಬೇಕು. ಸ್ವಾಭಿಮಾನ, ರಾಜಕೀಯ ಪ್ರಜ್ಞೆ ಯನ್ನು ಬೆಳೆಸಿಕೊಳ್ಳಬೇಕು. ಜಾಗೃತರಾಗಬೇಕು ಎಂದು ಕಿವಿ ಮಾತು ಹೇಳಿದರು.
ಬಿಎಸ್ಪಿ ರಾಜ್ಯ ಕಾರ್ಯದರ್ಶಿ ಕೆ.ಬಿ.ಸುಧಾ ಮಾತನಾಡಿ, ಮಹಾತ್ಮ ಪ್ರೊ. ಬಿ.ಕೃಷ್ಣಪ್ಪನವರ ಬದುಕು, ಸಂದೇಶ, ಅವರ ಜೀವನದ ಪ್ರಮುಖ ಘಟ್ಟ ಗಳನ್ನು ಹೋರಾಟದ ಹಾದಿಯನ್ನು ವಿವರಿಸಿದರು.
ಸಂವಿಧಾನ ಶಿಲ್ಪಿ ಡಾ.ಬಿ.ಆರ್.ಅಂಬೇಡ್ಕರ್, ಮಹಾತ್ಮ ಪ್ರೊ. ಬಿ.ಕೃಷ್ಣಪ್ಪ ನವರು, ದಾದಾ ಸಾಹೇಬ್ ಕಾನ್ಸೀರಾಮ್ ರಂತಹ ಮಹಾತ್ಮರು ಇಲ್ಲದಿ ದ್ದಲ್ಲಿ ಕೆಳ ವರ್ಗದ ಜನ ಸ್ವಾಭಿಮಾನದಿಂದ ಬದುಕಲು ಸಾಧ್ಯವಾ ಗುತ್ತಿರ ಲಿಲ್ಲ ಎಂದು ಹೇಳಿದರು.
ಅಧ್ಯಕ್ಷತೆ ವಹಿಸಿ ಮಾತನಾಡಿದ ಬಿಎಸ್ಪಿ ಜಿಲ್ಲಾ ಉಪಾಧ್ಯಕ್ಷ ಕೆ.ಆರ್. ಗಂಗಾಧರ್ ಕೆಳ ವರ್ಗದ ಜನ ಕೃಷ್ಣಪ್ಪನವರ ಆದರ್ಶಗಳನ್ನು ಮೈಗೂಡಿಸಿ ಕೊಳ್ಳಬೇಕು ಎಂದು ತಿಳಿಸಿದರು.
ಜನ್ಮದಿನದ ಅಂಗವಾಗಿ ಪ್ರೊ. ಕೃಷ್ಣಪ್ಪನವರ ಭಾವಚಿತ್ರಕ್ಕೆ ಸಾಮೂಹಿಕವಾಗಿ ಪುಷ್ಪ ನಮನ ಸಲ್ಲಿಸಲಾಯಿತು.
ಪಕ್ಷದ ಅಸೆಂಬ್ಲಿ ಸಂಯೋಜಕಿ ಕೆ.ಎಸ್.ಮಂಜುಳ ಪದಾಧಿಕಾರಿಗಳಾದ ಎಚ್.ಆರ್.ವಸಂತ್, ವಿಜಯಕುಮಾರ್, ಕಲಾವತಿ, ಗಿರೀಶ್, ರತ್ನ, ಸಿದ್ದಯ್ಯ, ಓಬಯ್ಯ, ಮಂಜುನಾಥ್ ಉಪಸ್ಥಿತರಿದ್ದರು.
Prof. B. Krishnappa built and raised BSP in the state