ಚಿಕ್ಕಮಗಳೂರು: ನಗರದ ಯುಜಿಡಿ ಹಾಗೂ ಅಮೃತ್ ಕಾಮಗಾರಿ ಅವ್ಯವಹಾರವನ್ನು ತನಿಖೆ ಗೊಳಪಡಿಸುವುದು ಹಾಗೂ ಕಳಪೆ ಕಾಮಗಾರಿ ನಡೆಸಿರುವ ಗುತ್ತಿಗೆದಾರರಿಗೆ ನಷ್ಟ ಭರಿಸುವಂತೆ ಸೂಚನೆ ನೀಡಬೇಕು ಎಂದು ನಗರಾಭಿವೃಧ್ದಿ ಸಚಿವರನ್ನು ಸೈಯದ್ ಜಮೀಲ್ ಅಹ್ಮದ್ ಒತ್ತಾಯಿಸಿದ್ದಾರೆ.
ಈ ಸಂಬಂಧ ನಗರಾಭಿವೃದ್ದಿ ಸಚಿವ ಬಿ.ಎಸ್.ಸುರೇಶ್ ಅವರಿಗೆ ಅಂಚೆ ಮೂಲಕ ಮನವಿ ಸಲ್ಲಿಸಿರುವ ನಗರಸಭಾ ಮಾಜಿ ಅಧ್ಯಕ್ಷ ಸೈಯದ್ ಜಮೀಲ್ ಅಹ್ಮದ್ ಕಾಮಗಾರಿ ಅವ್ಯವಹಾರ ತನಿಖೆಪಡಿಸಿ ಗುತ್ತಿಗೆದಾರರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು.
ನಗರ ಅಮೃತ್ ಹಾಗೂ ಯುಜಿಡಿ ಕಾಮಗಾರಿಯು ೧೩ ವರ್ಷಗಳಿಂದ ತೆವಳುತ್ತಾ ಸಾಗಿ ೫೭ ಕೋಟಿ ವೆಚ್ಚ ಯುಜಿಡಿ ಕಾಮಗಾರಿ ೧೨೦ ಕೋಟಿ ಹಣ ವ್ಯಯಿಸಿದರೂ ಮುಕ್ತಾಯವಾಗಿಲ್ಲ. ಈ ಬಗ್ಗೆ ಸಚಿವರು ಐದು ತಿಂಗಳ ವರೆಗೆ ಕಾಮಗಾರಿ ಪೂರ್ಣಗೊಳಿಸಲು ಗಡುವು ನೀಡಿದ್ದು ಈ ಕಾಮಗಾರಿಗಳಲ್ಲಿ ನಡೆದ ಅವ್ಯವಹಾರದ ಬಗ್ಗೆ ಯಾವುದೇ ಕ್ರಮ ಕೈಗೊಳ್ಳಲು ಸೂಚನೆ ನೀಡಿರುವುದಿಲ್ಲ ಎಂದಿದ್ದಾರೆ.
ಇದೇ ರೀತಿ ಕಳಪೆ ಕಾಮಗಾರಿ ನಡೆಸಿರುವವರಿಗೆ ಗಡುವು ನೀಡುತ್ತಿದ್ದರೆ ಅಧಿಕಾರಿಗಳು ಮತ್ತು ಗುತ್ತಿಗೆದಾ ರರು ಕಾಮಗಾರಿ ಪೂರ್ಣಗೊಳಿಸುವುದಿಲ್ಲ. ಕೇವಲ ನೆಪಹೇಳಿ ಪದೇ ಪದೇ ಹೆಚ್ಚುವರಿ ಹಣ ಬಿಡುಗಡೆ ಮಾಡಿಸಿಕೊಂಡು ದುರುಪಯೋಗಪಡಿಸಿಕೊಳ್ಳುತ್ತಾರೆ ಎಂದು ಹೇಳಿದ್ದಾರೆ.
ಸಾರ್ವಜನಿಕ ಹಣ ಈ ರೀತಿ ಪೋಲು ಮಾಡುತ್ತಿರುವ ಅಧಿಕಾರಿಗಳು ಮತ್ತು ಗುತ್ತಿಗೆದಾರರ ಮೇಲೆ ಕೂಡಲೇ ಶಿಸ್ತು ಕ್ರಮ ಕೈಗೊಳ್ಳಬೇಕು. ಈ ಕಾಮಗಾರಿಗಳ ಕಾರ್ಯವೈಖರಿ ಬಗ್ಗೆ ಹಾಗೂ ಕಾಲಮಿತಿಯೊಳಗೆ ಪೂರ್ಣಗೊಳಿಸಲು ನಗರದ ಜವಾಬ್ದಾರಿಯುತ ವ್ಯಕ್ತಿಗಳನ್ನು ಮೇಲುಸ್ತುವಾರಿ ಸಮಿತಿಯನ್ನು ರಚಿಸಿ ನಗರಸಭಾ ಮಾಜಿ ಅಧ್ಯಕ್ಷರಾಗಿರುವ ತಮ್ಮನ್ನು ಕಮಿಟಿಯೊಳಗೆ ಸೇರಿಸಿಕೊಳ್ಳಬೇಕು ಎಂದು ಒತ್ತಾಯಿಸಿದ್ದಾರೆ.
Compulsion to pay damages to contractors who have done poor work