ಚಿಕ್ಕಮಗಳೂರು: ಇಂದಿನ ಜೀವನ ಶೈಲಿಯಿಂದಾಗಿ ಒದಗುವ ಬದುಕಿನ ಒತ್ತಡ ನಿವಾರಣೆಗೆ ಪೂರಕವಾಗಿ ಸಂಗೀತ ಮನಸ್ಸಿಗೆ ಮುದ ನೀಡುತ್ತದೆ ಎಂದು ಶಾಸಕ ಹೆಚ್.ಡಿ.ತಮ್ಮಯ್ಯ ಬಣ್ಣಿಸಿದರು.
ನಗರದ ಪೂರ್ವಿ ಸುಗಮ ಸಂಗೀತ ಅಕಾಡೆಮಿ ಟ್ರಸ್ಟ್, ಯುರೇಕಾ ಅಕಾಡೆಮಿ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಲಯನ್ಸ್ ಸಂಸ್ಥೆ, ಮಲೆನಾಡು ವಿದ್ಯಾಸಂಸ್ಥೆ ಹಾಗೂ ಬ್ರಾಹ್ಮಣ ಮಹಾಸಭಾದ ಸಂಯುಕ್ತ ಆಶ್ರಯದಲ್ಲಿ ನಗರದ ಕುವೆಂಪು ಕಲಾಮಂದಿರದಲ್ಲಿ ವಿಶ್ವ ಸಂಗೀತ ದಿನಾಚರಣೆ ಅಂಗವಾಗಿ ಆಯೋಜಿಸಿದ್ದ ವರಕವಿ ದ.ರಾ.ಬೇಂದ್ರೆ, ಒಲವಿನ ಕವಿ ಕೆ.ಎಸ್.ನರಸಿಂಹಸ್ವಾಮಿಯವರ ಕಾವ್ಯಗಾಯನ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ಜನರು ಒಂದಲ್ಲ ಒಂದು ರೀತಿಯಲ್ಲಿ ಟೆನ್ಷನ್ನಲ್ಲೇ ಬದುಕುತ್ತಿರುವ ಕಾಲ ಇದು. ಅಂಥವರು ಸಂಗೀತದ ಮೊರೆ ಹೋದರೆ ಮನಸ್ಸು ಹಗುರಗೊಳ್ಳುತ್ತದೆ. ಪೂರ್ವಿ ತಂಡದ ಕಲಾವಿದರು ವೃತ್ತಿಯನ್ನು ಅವಲಂಬಿಸಿ ಸಂಗೀತವನ್ನು ಪ್ರವೃತ್ತಿಯನ್ನಾಗಿಸಿಕೊಂಡವರು ಎಂದು ಅಭಿಪ್ರಾಯಪಟ್ಟರು.
ಸುಗಮ ಸಂಗೀತ ಕ್ಷೇತ್ರಕ್ಕೆ ಪ್ರತೀ ವರ್ಷ ಸರ್ಕಾರ ೨ ಲಕ್ಷ ರೂ.ಗಳ ಪ್ರೆತ್ಸಾಹಧನವನ್ನು ನೀಡುತ್ತಿದ್ದು, ಈಗಾಗಲೇ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯಿಂದ ಜಿಲ್ಲೆಯ ೧೦ ಸುಗಮ ಸಂಗೀತ ಸಂಸ್ಥೆಗಳಿಗೆ ಹಣ ಒದಗಿಸಲಾಗುತ್ತಿದೆ. ಇದೀಗ ಹನ್ನೊಂದನೆಯದಾಗಿ ಪೂರ್ವಿ ಸುಗಮ ಸಂಗೀತ ಅಕಾಡೆಮಿ ಟ್ರಸ್ಟ್ ಸೇರಿದೆ ಎಂದು ತಿಳಿಸಿದರು.
ಮುಖ್ಯ ಭಾಷಣಕಾರ ಸುಗಮ ಸಂಗೀತ ಪರಿಷತ್ ಜಿಲ್ಲಾಧ್ಯಕ್ಷ ಎಸ್.ಎಸ್.ವೆಂಕಟೇಶ್ ಮಾತನಾಡಿ, ವರಕವಿ ದ.ರಾ.ಬೇಂದ್ರೆ ಮತ್ತು ಪ್ರೇಮಕವಿ ಕೆ.ಎಸ್.ನರಸಿಂಹಸ್ವಾಮಿ ಅವರಲ್ಲಿರುವ ಸಾಮ್ಯತೆ ಎಂದರೆ ಇವರಿಬ್ಬರೂ ತಮ್ಮ ಸರಳ ಕಾವ್ಯಗಳ ಮೂಲಕ ಜನಸಾಮಾನ್ಯರನ್ನು ತಲುಪಿದವರು. ಕನ್ನಡ ಕಾವ್ಯ ಪರಂಪರೆಯ ಮೇರು ಸದೃಶ ಕವಿಗಳವರು. ಬೇಂದ್ರೆ ತಮ್ಮ ಜೀವನದ ಬಡತನ, ನೋವು, ಕಷ್ಟ, ದುಃಖವನ್ನು ಅನುಭವಿಸಿ ಕಾವ್ಯವನ್ನಾಗಿಸಿದವರು. ನೀ ಹೀಂಗ ನೋಡಬ್ಯಾಡ ನನ್ನ.. ಗೀತೆಯನ್ನು ಇದಕ್ಕೆ ಉದಾಹರಿಸಿದರು. ಅವರು ಒಟ್ಟು ೧೪೩೨ ಕವನಗಳನ್ನು ಬರೆದಿದ್ದಾರೆ. ಕಾವ್ಯ, ನಾಟಕ, ವಿಮರ್ಶೆ, ಅಧ್ಯಾತ್ಮ, ಅನುವಾದ, ಸಂಖ್ಯಾಶಾಸ್ತ್ರ ಮತ್ತಿತರ ಅಕ್ಷರ ಕೃಷಿ ಮಾಡಿದ್ದಾರೆ. ಅವರು ಕಾವ್ಯ ಲೋಕದ ಗಾರುಡಿಗ ಎಂದು ವಿಶ್ಲೇಷಿಸಿದರು.
ಕೆ.ಎಸ್.ನರಸಿಂಹಸ್ವಾಮಿ ಕನ್ನಡದ ಅದ್ವಿತೀಯ ಪ್ರೇಮಕವಿ. ದಾಂಪತ್ಯದ ಪಿಸುಮಾತಿನ, ನಿಜಜೀವನವನ್ನು ಕಣ್ಮುಂದೆ ಕಟ್ಟಿಕೊಟ್ಟವರು. ಕನ್ನಡ ಕಾವ್ಯ ಪರಂಪರೆಯಲ್ಲಿ ಪು.ತಿ.ನರಸಿಂಹಾಚಾರ್ ಮೊದಲು ದಾಂಪತ್ಯ ಗೀತೆ ಬರೆಯುತ್ತಾರೆ. ಅನಂತರ ಅದಕ್ಕೆ ಗಟ್ಟಿಯಾದ ತಳಹದಿ ಹಾಕಿ ವಿಶ್ವವಿಖ್ಯಾತಗೊಳಿಸಿದವರು ಡಾ.ಕೆ.ಎಸ್.ನರಸಿಂಹಸ್ವಾಮಿ. ಅವರು ಕೂಡ ಬಡತನದಲ್ಲೇ, ಸರಳತನದಲ್ಲೇ ಕಾವ್ಯ ಕೃಷಿ ಮಾಡಿದವರು. ಸಂಸಾರದ ಒಲವು-ನಲಿವು, ನೋವು-ನಗೆಗಳ ಸುಂದರ ಚಿತ್ರಣ ಮೈಸೂರು ಮಲ್ಲಿಗೆ. ಈ ಕಾವ್ಯವನ್ನು ಅವರು ಆಪ್ತವಾಗಿ ಕಟ್ಟಿಕೊಟ್ಟಿದ್ದಾರೆ ಎಂದು ಬಣ್ಣಿಸಿದರು. ಈ ಇಬ್ಬರು ಕವಿಗಳ ಗೀತೆಗಳಿಗೆ ಧ್ವನಿ ನೀಡಿದ ಗಾಯಕರಾದ ಸಿ.ಅಶ್ವತ್ಥ್ ಹಾಗೂ ಯಶವಂತ್ ಹಳಿಬಂಡಿ ಅವರನ್ನು ಈ ಸಂದರ್ಭದಲ್ಲಿ ಸ್ಮರಿಸಿದರು. ನರಸಿಂಹಸ್ವಾಮಿಯವರ ‘ಸಿರಿಗೆರೆಯ ನೀರಲ್ಲಿ..’ ಕವನದ ತುಣುಕುಗಳನ್ನು ಇದೇ ವೇಳೆ ಅವರು ಹಾಡಿ ರಂಜಿಸಿದರು.
ಬೀರೂರಿನ ಸಪ್ತಸ್ವರ ಸಂಗೀತ ಶಾಲೆಯ ಸಂಸ್ಥಾಪಕಿ ಜ್ಯೋತಿ ಅನಂತ್ ಅವರ ಸಾಧನೆಯನ್ನು ಗುರುತಿಸಿ ಇದೇ ಸಂದರ್ಭದಲ್ಲಿ ಗೌರವಿಸಲಾಯಿತು. ಅಧ್ಯಕ್ಷತೆ ವಹಿಸಿದ್ದ ಯುರೇಕಾ ಅಕಾಡೆಮಿ ಸಂಸ್ಥಾಪಕ ದೀಪಕ್ ದೊಡ್ಡಯ್ಯ, ಬೀರೂರಿನ ಸಂಗೀತ ಶಿಕ್ಷಕಿ ಜ್ಯೋತಿ ಅನಂತ್ ಮಾತನಾಡಿದರು. ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕ ಡಾ.ಸಿ.ರಮೇಶ್, ಲಯನ್ಸ್ ಸಂಸ್ಥೆಯ ಖಜಾಂಚಿ ಸಿ.ಎನ್.ಕುಮಾರ್ ವೇದಿಕೆಯಲ್ಲಿದ್ದರು.
ಸುಮಾ ಪ್ರಸಾದ್, ರೂಪಾ ನಾಯಕ್ ಕಾರ್ಯಕ್ರಮ ನಿರೂಪಿಸಿದರು. ಸುಗಮ ಸಂಗೀತ ಅಕಾಡೆಮಿ ಟ್ರಸ್ಟ್ನ ಅಧ್ಯಕ್ಷ ಎಂ.ಎಸ್.ಸುಧೀರ್ ಸ್ವಾಗತ, ರಾಯನಾಯಕ್ ವಂದನಾರ್ಪಣೆ ನೆರವೇರಿಸಿದರು.
ಪೂರ್ವಿ ಗಾನಯಾನದ ೮೮ನೇ ಈ ಸರಣಿಯಲ್ಲಿ ವರಕವಿ ದ.ರಾ.ಬೇಂದ್ರೆ, ಒಲವಿನ ಕವಿ ಕೆ.ಎಸ್.ನರಸಿಂಹಸ್ವಾಮಿ ವಿರಚಿತ ಸುಮಾರು ೧೮ ಗೀತೆಗಳಿಗೆ ಜೋಗಿ ಚಲನಚಿತ್ರ ಖ್ಯಾತಿಯ ಗಾಯಕಿ ಸುನೀತಾ, ಗಾಯಕ ಬೆಂಗಳೂರಿನ ಡಾ.ಅಮಿತ್ ಶೇಖರ್, ಪೂರ್ವಿಯ ಗಾಯಕರಾದ ಎಂ.ಎಸ್.ಸುಧೀರ್, ಚೇತನ್ ರಾಮ್, ರಾಯನಾಯಕ್, ದರ್ಶನ್, ಪಿ.ಎಸ್.ದೀಪಕ್, ವಿಷ್ಣು ಭಾರದ್ವಾಜ್, ರೂಪಾ ಅಶ್ವಿನ್, ಅನುಷಾ, ರುಕ್ಸಾನಾ ಕಾಚೂರ್, ರಮ್ಯಾ ಮಧುಸೂದನ್, ಶ್ವೇತಾ ಭಾರದ್ವಾಜ್, ಪಂಚಮಿ ಚಂದ್ರಶೇಖರ್, ಅನುರಾಧ ಭಟ್, ಲಾಲಿತ್ಯ ಅಣ್ವೇಕರ್, ಚೈತನ್ಯ ಧ್ವನಿಯಾದರು. ಶ್ರೀಕೃಷ್ಣ ಉಡುಪ ಕೀಬೋರ್ಡ್, ಜಿ.ಎಲ್.ರಮೇಶ್ ಕುಮಾರ್ ಕೊಳಲು, ತುಕಾರಾಮ್ ರಾವ್ ರಂಗಧೋಳ್ ತಬಲ, ವಿಠಲ್ ರಂಗಧೋಳ್ ರಿದಂ ಪ್ಯಾಡ್ನಲ್ಲಿ ಸಾಥ್ ನೀಡಿ ಕಾರ್ಯಕ್ರಮಕ್ಕೆ ಮೆರುಗು ತಂದರು.
೨೫ಸಿಕೆಎಂ೧: ನಗರದ ಕುವೆಂಪು ಕಲಾಮಂದಿರದಲ್ಲಿ ಶನಿವಾರ ಸಂಜೆ ನಡೆದ ಪೂರ್ವಿ ಗಾನಯಾನ-೮೮ ಅನ್ನು ಶಾಸಕ ಹೆಚ್.ಡಿ.ತಮ್ಮಯ್ಯ ಉದ್ಘಾಟಿಸಿದರು. ಎಸ್.ಎಸ್.ವೆಂಕಟೇಶ್, ದೀಪಕ್ ದೊಡ್ಡಯ್ಯ, ಜ್ಯೋತಿ ಅನಂತ್, ಎಂ.ಎಸ್.ಸುಧೀರ್, ರಾಯನಾಯಕ್, ಸುಮಾ ಪ್ರಸಾದ್ ಇನ್ನಿತರರಿದ್ದರು.
Music gives relief to a stressful life