ಚಿಕ್ಕಮಗಳೂರು: ನಾವು ಜಿಲ್ಲಾಧಿಕಾರಿಯಾಗಿ ಬಂದ ನಂತರ ಅಕ್ರಮ ಭೂ ಮಂಜೂರಾತಿ ವಿರುದ್ಧ ಕಠಿಣ ಕ್ರಮ ಕೈಗೊಂಡು ಆರೇಳು ಮಂದಿ ಕಂದಾಯ ನೌಕರರನ್ನು ಜೈಲಿಗೆ ಕಳಿಸಲು ಸಹ ಹಿಂಜರಿಯಲಿಲ್ಲ ಎಂದು ನಿರ್ಗಮಿತ ಜಿಲ್ಲಾಧಿಕಾರಿ ಕೆ.ಎನ್.ರಮೇಶ್ ತಿಳಿಸಿದರು.
ವರ್ಗಾವಣೆಗೊಂಡಿರುವ ಹಿನ್ನೆಲೆಯಲ್ಲಿ ತಮ್ಮ ಅವಧಿಯಲ್ಲಿ ಜಿಲ್ಲೆಯಲ್ಲಿ ಕೈಗೊಂಡ ಅಭಿವೃದ್ಧಿ ಕಾರ್ಯಗಳ ಬಗ್ಗೆ ಮಾಧ್ಯಮದವರೊಂದಿಗೆ ಮಾಹಿತಿ ಹಂಚಿಕೊಂಡ ಅವರು, ಕಾನೂನಿನ ಬಗ್ಗೆ ಗೌರವ, ರ್ಕವ್ಯ ನಿಷ್ಠೆ ಮೂಡಿಸಬೇಕು ಎನ್ನುವ ಕಾರಣಕ್ಕೆ ಕಠಿಣ ಕ್ರಮ ಕೈಗೊಂಡಿದ್ದೇವೆ. ಮೂಡಿಗೆರೆ ಭಾಗದಲ್ಲಿ ೯೫೦ ಎಕರೆಗೂ ಹೆಚ್ಚು ಭೂಮಿಯನ್ನು ಅಕ್ರಮ ಮಂಜೂರಾತಿ ರದ್ದು ಮಾಡಿ ಸರ್ಕಾರದ ವಶಕ್ಕೆ ಪಡೆದು ಪಹಣಿ ಇಂಡೀಕರಣ ಮಾಡುವ ಕೆಲಸವನ್ನು ಕೈಗೊಂಡಿದ್ದೇವೆ ಎಂದರು.
೯೦೫ ಎಕರೆ ಜಮೀನು ಪತ್ತೆ: ನಿವೇಶನ ರಹಿತರಿಗೆ ನಿವೇಶನ ಒದಗಿಸಿಕೊಡಬೇಕು ಎನ್ನುವುದು ನಮ್ಮ ಆಧ್ಯತೆಯಾಗಿತ್ತು. ಜಿ.ಪಂ. ಸಿಇಓ ಅವರೊಂದಿಗೆ ಪದೇ ಪದೇ ಚರ್ಚಿಸಿ ಯೋಜನೆಗಳನ್ನು ರೂಪಿಸಿದ್ದೇವೆ. ೧೯೮೫ ನೇ ಸಾಲಿನಿಂದ ನಿವೇಶನ ವಿರತಣೆಗೆಂದು ತುಂಬಾ ಜಮೀನನ್ನು ಪಂಚಾಯ್ತಿಗಳಿಗೆ ಕೊಡಲಾಗಿತ್ತು. ಆದರೆ ಕಾಲ ಕ್ರಮೇಣ ಯಾರೂ ಅದನ್ನು ನೋಡಿಕೊಂಡಿರಲಿಲ್ಲ. ಆ ಜಾಗ ಎಲ್ಲಿದೆ ಎನ್ನುವುದು ಸಹ ಗೊತ್ತಿರಲಿಲ್ಲ. ಹಾಗೆ ಸುಮಾರು ೧೫ ರಿಂದ ೨೦ ವರ್ಷಗಳಿಂದ ನಿವೇಶನ ರಹಿತರಿಗೆಂದು ಮೀಸಲಿಡಲಾಗಿದ್ದ ಜಮೀನಿನ ಪಟ್ಟಿಯನ್ನು ನಾವು ಸರ್ಕಾರದ ಮಟ್ಟದಲ್ಲಿ ವ್ಯವಹರಿಸಿ ತೆಗೆಸಿದ್ದೇವೆ ಎಂದರು.
ನಮ್ಮ ಜಿಲ್ಲೆಯಲ್ಲಿ ಇಂತಹ ಸುಮಾರು ೯೦೫ ಎಕರೆ ಜಮೀನನ್ನು ಸರ್ವೇ ನಂಬರ್ ಸಹಿತ ಪತ್ತೆ ಹಚ್ಚಲಾಗಿದೆ. ಚಿಕ್ಕಮಗೂರು ತಾಲ್ಲೂಕೊಂದರಲ್ಲೇ ೨೨೯ ಎಕರೆ ಜಾಗ ಇದೆ. ಬೆಂಗಳೂರಿನ ಭೂಮಿ ಕೋಶದಿಂದ ಈ ಪಟ್ಟಿಯನ್ನು ದೊರಕಿಸಿಕೊಟ್ಟಿದ್ದೇವೆ ಎಂದರು.
ಈಗ ಗುರುತಿಸಲಾಗಿರುವ ಭೂಮಿಯನ್ನು ಹಂತ ಹಂತವಾಗಿ ತಾಲ್ಲೂಕು ಮಟ್ಟದ ಅಧಿಕಾರಿಗಳ ಸಭೆ ಮಾಡಿ ಪ್ರತಿ ತಿಂಗಳು ಹತ್ತರಿಂದ ಹನ್ನೆರಡು ಪಂಚಾಯ್ತಿಗಳಿಗೆ ಜಮೀನು ಅಳತೆ ಮಾಡಿಕೊಡುವ ಯೋಜನೆ ನಮ್ಮದಾಗಿತ್ತು ಮುಂದಿನ ಜಿಲ್ಲಾಧಿಕಾರಿಗಳಿಗೆ ಈ ಬಗ್ಗೆ ಮಾಹಿತಿ ಕೊಡುತ್ತೇವೆ. ಅವರು ಅದನ್ನು ಮುಂದುವರಿಸುತ್ತಾರೆ ಎಂದರು. ಈ ೯೫೦ ಎಕರೆಯನ್ನೂ ನಾವು ಬಳಸಿಕೊಂಡರೆ ಸಾಕಷ್ಟು ಮಂದಿಗೆ ನಿವೇಶನ ನೀಡಿ ಸಮಸ್ಯೆಯನ್ನು ತಾರ್ಕಿಕ ಅಂತ್ಯಕ್ಕೆ ಕೊಂಡೊಯ್ಯಬಹುದು ಎಂದು ಹೇಳಿದರು.
ರಾಜಿ ಪ್ರಶ್ನೆ ಇಲ್ಲ: ಕಡೂರು ತಾಲ್ಲೂಕಿನ ಕಂದಾಯ ಇಲಾಖೆಯಲ್ಲಿ ನಡೆದಿರುವ ಅಕ್ರಮಕ್ಕೆ ಸಂಬಂಧಿಸಿದಂತೆ ಸರ್ಕಾರಕ್ಕೆ ವರದಿ ಕಳಿಸಿದ್ದೇವೆ ರಾಜಿ ಆಗುವ ಪ್ರಶ್ನೆ ಇಲ್ಲ. ಎಂತಹ ಪ್ರಭಾವಿ ವ್ಯಕ್ತಿ ಆಗಿದ್ದರೂ ಕ್ರಮ ಆಗುತ್ತದೆ ಎಂದರು.
ಕುದುರೇಮುಖ ನಿರಾಶ್ರಿತರ ಸಮಸ್ಯೆ ಪರಿಹಾರಕ್ಕೆ ಕ್ರಮ ತೆಗೆದುಕೊಂಡಿದ್ದೇವೆ. ಒಟ್ಟು ೧೬೩ ಫಲಾನುಭವಿಗಳಿಗೆ ಅನುಕೂಲ ಕಲ್ಪಸುವ ಸಲುವಾಗಿ ಸರ್ಕಾರದ ಕಡೆಯಿಂದ ೫.೭೯ ಲಕ್ಷ ಮಾತ್ರ ಬಿಡುಗಡೆ ಆಗಿದೆ. ಅದು ಸಾಕಾಗುವುದಿಲ್ಲ ಎನ್ನುವ ಕಾರಣಕ್ಕೆ ೪೫.೧೦ ಲಕ್ಷ ರೂ.ನ ಕ್ರಿಯಾಯೋಜನೆ ತಯಾರಿಸಿ ನರೇಗಾದಲ್ಲಿ ವ್ಯವಸ್ಥೆ ಕಲ್ಪಿಸು ಪ್ರಯತ್ನ ಆಗಿದೆ ಎಂದರು.
ಸಂತ್ರಸ್ಥರಿಗೆ ಜಮೀನು ಮೀಸಲು: ಮೂಡಿಗೆರೆ ತಾಲ್ಲೂಕಿನ ಮಲೇಮನೆ ಮತ್ತು ಮಧುಗುಂಡಿಯ ನಿರಾಶ್ರಿತರಿಗೆ ಪುನರ್ವಸತಿ ಕಲ್ಪಿಸಲು ಅವರು ಕೇಳಿದ ಜಾಗದಲ್ಲಿ ಪರಿಹಾರ ಕಲ್ಪಿಸಲು ಪ್ರಯತ್ನಿಸಲಾಗಿದೆ. ಆ ಜಾಗ ಅರಣ್ಯಕ್ಕೆ ಸೇರಿದ್ದಾಗಿದೆ. ಆದರೂ ಮತ್ತೊಂದು ದಾರದಳ್ಳಿ ಗ್ರಾಮದಲ್ಲಿ ಅವರಿಗಾಗಿ ೬.೨೦ ಎಕೆರೆ ಭೂಮಿಯನ್ನು ಮೀಸಲಿಡಲಾಗಿದೆ. ಇನ್ನೂ ೨೦ ಎಕರೆ ಜಾಗ ಸಿಕ್ಕಲ್ಲಿ ಸಮಸ್ಯೆಗೆ ಶಾಶ್ವತ ಪರಿಹಾರ ನೀಡಲು ಸಾಧ್ಯವಾಗುತ್ತದೆ ಎಂದರು.
ಚಿಕ್ಕಮಗಳೂರು ಜನರಿಗೆ ಒಳ್ಳೆ ಆಡಳಿತ ಕೊಡಲು ಪ್ರಾಮಾಣಿಕ ಪ್ರಯತ್ನ ಮಾಡಿದ್ದೇವೆ. ಇದಕ್ಕೆ ಸಹಕರಿಸಿದ ಎಲ್ಲರಿಗೂ ಅಭಿನಂದಿಸುತ್ತೇನೆ ಎಂದರು.
He did not even hesitate to send revenue officials to jail