ಚಿಕ್ಕಮಗಳೂರು: ಒಬ್ಬ ವ್ಯಕ್ತಿಯಿಂದ ಯಾವುದೇ ಕೆಲಸ ಮಾಡುವುದು ಸಾಧ್ಯವಿಲ್ಲ ಎಲ್ಲಾ ಅಧಿಕಾರಿಗಳು ಒಗ್ಗೂಡಿದಾಗ ಮಾತ್ರ ಸಾರ್ವಜನಿಕ ಬದುಕಲ್ಲಿ ಯಶಸ್ವಯಾಗಲು ಸಾಧ್ಯ ಎಂದು ನಿಕಟ ಪೂರ್ವ ಜಿಲ್ಲಾಧಿಕಾರಿ ಕೆ.ಎನ್ ರಮೇಶ್ ಅಭಿಪ್ರಾಯಿಸಿದರು.
ನಗರಸಭೆಯಲ್ಲಿ ಏರ್ಪಡಿಸಲಾಗಿದ್ದ ಅಭಿನಂದನಾ ಸಮಾರಂಭದಲ್ಲಿ ಅಭಿನಂದನೆ ಸ್ವೀಕರಿಸಿ ಮಾತನಾಡುತ್ತಾ ವಿವಿಧತೆಯಲ್ಲಿ ಏಕತೆ ಮೋದಿಯವರ ’ಏಕ್ ಭಾರತ್ ಶ್ರೇಷ್ಠ ಭಾರತ್’ ಮಾತಿನಂತೆ ಎಲ್ಲಾ ಅಧಿಕಾರಿಗಳು ಒಟ್ಟಾಗಿ ಕೆಲಸ ಮಾಡಿದ್ದರಿಂದ ಚಿಕ್ಕಮಗಳೂರು ಹಬ್ಬ ಯಶಸ್ವಿಯಾಗಿ ಭಾರತ ಸಂಸ್ಕೃತಿ ಬಿಂಭಿಸಲು ಸಾಧ್ಯವಾಯಿತು ಎಂದು ಶ್ಲಾಘಿಸಿದರು.
ಜಿಲ್ಲೆಯಲ್ಲಿ ೨ ವರ್ಷ ೩ ತಿಂಗಳು ಸೇವೆ ಸಲ್ಲಿಸಿರುವುದು ನನಗೆ ಬಹಳ ತೃಪ್ತಿ ತಂದಿದೆ, ಸೇವಾವಧಿ ಸಂದರ್ಭದಲ್ಲಿ ಸಾರ್ವಜನಿಕರ ಕೆಲಸಗಳನ್ನು ಮಾಡುವ ಮೂಲಕ ಯಶಸ್ವಯಾಗಿದ್ದೇನೆಂದರೆ ಅದು ಎಲ್ಲಾ ಇಲಾಖೆಯ ಸಿಬ್ಬಂದಿಗಳ ಸಹಕಾರ, ರಾಜಕೀಯ ಮುಖಂಡರ ಸಲಹೆ, ಪೌರಕಾರ್ಮಿಕರ ಶ್ರಮ ಎಲ್ಲವೂ ಅಗತ್ಯವಾಗಿತ್ತು ಎಂದು ಹೇಳಿದರು.
ಕೊರೋನ ಸಂದರ್ಭದಲ್ಲಿ ಕೈಗೊಂಡ ನಿರ್ಧಾರಗಳು ಜೀವದ ಹಂಗು ತೊರೆದು ಸೇವೆ ಸಲ್ಲಿಸಿದ ಪೌರ ಕಾರ್ಮಿಕರು, ವೈದ್ಯರು, ದಾದಿಯರ ಶ್ರಮ ಶ್ಲಾಘನೀಯ ಇವರೆಲ್ಲರ ಪೂರ್ಣ ಪ್ರಮಾಣದ ಕರ್ತವ್ಯದ ಫಲವಾಗಿ ಜಿಲ್ಲೆಯಲ್ಲಿ ಯಾವುದೇ ಅಹಿತಕರ ಮತ್ತು ಸಾವುನೋವುಗಳು ಸಂಭವಿಸಲಿಲ್ಲ, ಚಿಕ್ಕಮಗಳೂರು ಹಬ್ಬ ಸಹ ಯಶಸ್ವಿಯಾಗಿದ್ದು, ನಗರಸಭೆ ಸಿಬ್ಬಂದಿ ತಮ್ಮ ಜೊತೆಗೆ ಸೇರಿ ಕರ್ತವ್ಯ ನಿರ್ವಹಿಸಿರುವುದು ನಗರ ಸಭೆ ಚುನಾವಣೆ ಮತ್ತು ವಿಧಾನಸಭೆ ಚುನಾವಣೆಯಲ್ಲಿ ಯಶಸ್ವಿಯಾಗಲು ಕಾರಣವಾಯಿತು ಎಂದು ತಿಳಿಸಿದರು.
ವಿಧಾನಸಭಾ ಚುನಾವಣೆ ಸಂದರ್ಭದಲ್ಲಿ ೩೬ ಕೋಟಿ ರೂ. ಮೌಲ್ಯದ ವಿವಿಧ ವಸ್ತುಗಳು, ನಗದು, ಚಿನ್ನಾಭರಣ ವಶಪಡಿಸಿಕೊಂಡಿರುವುದು ರಾಜ್ಯದಲ್ಲೇ ಜಿಲ್ಲೆ ಪ್ರಥಮವಾಗಿದೆ, ಇದಕ್ಕೆ ಚುನಾವಣಾ ಆಯೋಗ ಸಹ ಪ್ರಶಂಸೆ ವ್ಯಕ್ತಪಡಿಸಿದೆ ಎಂದು ವಿವರಿಸಿದರು.
ತಮ್ಮ ಅಧಿಕಾರವಧಿಯಲ್ಲಿ ಕೈಗೊಂಡ ಪೌರ ಸೇವಾ ನೌಕರರನ್ನು ಖಾಯಂಗೊಳಿಸಿರುವುದು, ನಿವೇಶನ ರಹಿತರಿಗೆ ನಿವೇಶನ ನೀಡಲು ಭೂಮಿ ಗುರುತು ಮಾಡಲಾಗಿದೆ, ರೈಲ್ವೆ ಭೂಸ್ವಾಧೀನ ಪ್ರಕ್ರಿಯೆ ಪೂರ್ಣಗೊಳಿಸಲಾಗಿದೆ ಎಂಬುದು ಸೇರಿದಂತೆ ಜಿಲ್ಲೆಯ ಸಮಸ್ಯೆಗಳಿಗೆ ಬೆಳಕು ಚೆಲ್ಲಲು ಸಹಕಾರಿಯಾಗಿದೆ ನನ್ನ ಮೇಲೆ ಅಭಿಮಾನವಿಟ್ಟು ನಗರಸಭೆಯಲ್ಲಿ ಬೀಳ್ಕೊಡುಗೆ ಸಮಾರಂಭ ನಡೆಸುತ್ತಿರುವುದು ನಗರಸಭೆ ಸಿಬ್ಬಂದಿ ಮತ್ತು ಅಧ್ಯಕ್ಷರಿಗೆ ತುಂಬು ಹೃದಯದ ಕೃತಜ್ಞತೆ ಸಲ್ಲಿಸಿದರು.
ಪ್ರೀತಿಯಿಂದ ಜನರನ್ನು ಗೆಲ್ಲಲು ಸಾಧ್ಯ ಎಂದು ಅಧಿಕಾರಿಗಳಿಗೆ ಕಿವಿಮಾತು ಹೇಳಿದ ಅವರು ನಿಮ್ಮೆಲ್ಲರ ಸಹಕಾರದಿಂದ ಯಶಸ್ವಿಯಾಗಲು ನೆರವಾಗಿದೆ ಸರ್ಕಾರಿ ಕೆಲಸ ಮತ್ತು ಸಾರ್ವಜನಿಕರ ಕೆಲಸ ನಮ್ಮ ಕೆಲಸ ಎಂಬಂತೆ ಎಲ್ಲರೂ ಒಗ್ಗೂಡಿ ಕೆಲಸಮಾಡಬೇಕೆಂದು ಹೇಳಿದರು.
ನಗರಸಭಾ ಅಧ್ಯಕ್ಷ ವರಸಿದ್ದಿ ವೇಣುಗೋಪಾಲ್ ಮಾತನಾಡಿ ಕಳೆದ ೨ ವರ್ಷಗಳಿಂದ ಯಾವುದೇ ಕಪ್ಪು ಚುಕ್ಕಿ ಇಲ್ಲದಂತೆ ಅಧಿಕಾರ ನಿರ್ವಹಣೆ ಮಾಡಿದ ಜಿಲ್ಲಾಧಿಕಾರಿ ಕೆ.ಎನ್ ರಮೇಶ್ರವರು ಎಲ್ಲಾ ರೀತಿಯ ಸಮಸ್ಯೆಗಳನ್ನು ಸಮರ್ಥವಾಗಿ ನಿಭಾಯಿಸಿದ್ದಾರೆಂದು ಬಣ್ಣಿಸಿದರು.
ನಗರಸಭೆ ಚುನಾಯಿತ ಪ್ರತಿನಿಧಿಗಳ ಅಧಿಕಾರವಧಿ ಮುಕ್ತಾಯಗೊಂಡಾಗ ೧೦ ತಿಂಗಳು ನಗರಸಭೆಗೆ ಆಡಳಿತಾಧಿಕಾರಿಯಾಗಿ ಕಾರ್ಯನಿರ್ವಹಿಸಿದ್ದಾರೆ. ವಿವಿಧ ೧೩ ಸಮಿತಿಗಳನ್ನು ರಚಿಸಿ ಒಂದೊಂದು ಸಮಿತಿಗೆ ಒಬ್ಬ ಸರ್ಕಾರಿ ಅಧಿಕಾರಿಯನ್ನು ನೇಮಕ ಮಾಡಿ ಆರ್ಥಿಕ ಸಮಸ್ಯೆಗಳನ್ನು ನಿಭಾಯಿಸುವ ಮೂಲಕ ಚಿಕ್ಕಮಗಳೂರು ಹಬ್ಬವನ್ನು ಯಶಸ್ವಯಾಗಿಸಲು ಶ್ರಮಿಸಿದ್ದಾರೆ ಎಂದರು.ಈಗ ಜಿಲ್ಲೆಯಿಂದ ವರ್ಗಾವಣೆಯಾಗಿದ್ದು ಮುಂದೆ ಉನ್ನತ ಹುದ್ದೆಗೆ ಏರುವ ಮೂಲಕ ಯಶಸ್ವಿಯಾಗಲಿ ಎಂದು ಹಾರೈಸಿದರು.
ನಗರಸಭಾ ಪೌರಾಯುಕ್ತ ಉಮೇಶ್ ಮಾತನಾಡಿ ಜಿಲ್ಲೆಯಲ್ಲಿ ೨ ವರ್ಷಗಳ ಕಾಲ ಜಾತ್ಯಾತೀತವಾಗಿ ಜನಪರ ಸೇವೆಗಳ ಮೂಲಕ ಯಶಸ್ವಿ ಜಿಲ್ಲಾಧಿಕಾರಿಯಾಗಿ ಕಾರ್ಯ ನಿರ್ವಹಿಸಿರುವ ಕೆ.ಎನ್ ರಮೇಶ್ ರವರು ಈಗ ವರ್ಗಾವಣೆಯಾಗಿದ್ದಾರೆ ಸರ್ಕಾರಿ ಹುದ್ದೆಯಲ್ಲಿ ವರ್ಗಾವಣೆ, ನಿವೃತ್ತಿ ಸಹಜ ಪ್ರಕ್ರಿಯೆ ಎಂದು ಹೇಳಿದರು.
ಕಳೆದ ವಿಧಾನಸಭಾ ಚುನಾವಣೆಯಲ್ಲಿ ಜಿಲ್ಲೆಯಲ್ಲಿ ಚಿಕ್ಕದೊಂದು ಸಮಸ್ಯೆಯಾಗದಂತೆ ಕರ್ತವ್ಯ ನಿರ್ವಹಿಸಿರುವುದನ್ನು ಶ್ಲಾಘಿಸಿದ ಅವರು ಜಿಲ್ಲಾಧಿಕಾರಿಗಳು ಸರಳ ಸಜ್ಜನಿಕೆ ವ್ಯಕ್ತಿತ್ವ ಮೈಗೂಡಿಸಿಕೊಂಡಿರುವ ಅವರು ಎಲ್ಲರನ್ನೂ ಸಮಾನವಾಗಿ ಕಾಣುತ್ತಿದ್ದರು ಎಂದು ಬಣ್ಣಿಸಿದರು.ವೇದಿಕೆಯಲ್ಲಿ ನಗರಸಭೆ ಸದಸ್ಯರಾದ ರೂಪಕುಮಾರ್, ಪರಮೇಶ್ ಮತ್ತಿತರರು ಭಾಗವಹಿಸಿದ್ದರು.
A felicitation ceremony was organized for the District Collector KN Ramesh in the municipal council