ಚಿಕ್ಕಮಗಳೂರು: ಸ್ಕೌಟ್ಸ್ ಮತ್ತು ಗೈಡ್ಸ್ ತರಬೇತಿಯು ಮಕ್ಕಳಲ್ಲಿ ಸ್ವಯಂ ಶಿಸ್ತು ಹಾಗೂ ನಾಯಕತ್ವ ಗುಣ ಬೆಳೆಸುವುದರ ಜೊತೆಗೆ ವ್ಯಕ್ತಿತ್ವ ವಿಕಸನಕ್ಕೂ ಸಹಕಾರಿಯಾಗಲಿದೆ ಎಂದು ಸ್ಕೌಟ್ಸ್ ಮತ್ತು ಗೈಡ್ಸ್ ಸಂಸ್ಥೆ ರಾಜ್ಯ ಉಪಾಧ್ಯಕ್ಷ ಎ.ಎನ್.ಮಹೇಶ್ ಹೇಳಿದರು.
ನಗರದ ಜಿಲ್ಲಾ ಸ್ಕೌಟ್ಸ್ ಭವನದಲ್ಲಿ ಶಾಲಾ ಶಿಕ್ಷಣ ಮತ್ತು ಸಾಕ್ಷರತೆ ಇಲಾಖೆ, ಜಿಲ್ಲಾಪಂಚಾಯಿತಿ ಹಾಗೂ ಸ್ಕೌಟ್ಸ್ ಮತ್ತು ಗೈಡ್ಸ್ ಸಂಸ್ಥೆ ಚಿಕ್ಕಮಗಳೂರು ಇವರ ಸಹಯೋಗದಲ್ಲಿ ಗುರುವಾರ ಆಯೋಜಿಸಿದ್ದ ಕಬ್ಸ್ ಮತ್ತು ಬುಲ್ಬುಲ್ಸ್ ಮೂಲ ತರಬೇತಿ ಶಿಬಿರದಲ್ಲಿ ಅವರು ಮಾತನಾಡಿದರು.
ಶಾಲೆಗಳಲ್ಲಿ ಮಕ್ಕಳನ್ನು ಕ್ರಿಯಾಶೀಲರಾಗಿಸಲು ಜತೆಗೆ ಪಠ್ಯೇತರ ಚಟುವಟಿಕೆಗಳಲ್ಲಿ ಪಾಲ್ಗೊಳ್ಳಲು ಪ್ರೇರಣೆ ನೀಡಲು ಪ್ರಾಥಮಿಕ ಶಾಲಾ ಶಿಕ್ಷಕರಿಗೆ ಏಳು ದಿನಗಳ ಕಾಲ ಕಬ್ಸ್ ಮತ್ತು ಬುಲ್ಬುಲ್ಸ್ ಮೂಲ ತರಬೇತಿ ಆಯೋಜಿಸಲಾಗಿದೆ. ಶಿಬಿರದಲ್ಲಿ ಜಿಲ್ಲೆಯ ವಿವಿಧ ತಾಲ್ಲೂಕುಗಳಿಂದ ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡಿದ್ದು ಇದರ ಸದುಪಯೋಗ ಪಡೆದುಕೊಳ್ಳುವಂತೆ ಸಲಹೆ ನೀಡಿದರು.
ಪ್ರಾಥಮಿಕ ಶಾಲೆಗಳಲ್ಲಿ ೬ ರಿಂದ ೧೦ ವರ್ಷದ ಬಾಲಕ-ಬಾಲಕಿಯರಿಗೆ ಶಿಸ್ತು, ನಾಯಕತ್ವ, ದೇಶಪ್ರೇಮದ ಬೆಳಸಿಕೊಳ್ಳುವಂತೆ ತರಬೇತಿ ನೀಡಲು ಇದು ಸಹಕಾರಿಯಾಗಲಿದೆ. ಇದನ್ನು ಕಲಿತಾಗ ಮಕ್ಕಳು ದೇಶಕ್ಕೆ ಆಸ್ತಿಯಾಗಲಿದ್ದಾರೆ ಎಂದು ಹೇಳಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಜಿಲ್ಲಾ ಸ್ಕೌಟ್ಸ್ ಮತ್ತು ಗೈಡ್ಸ್ ಮುಖ್ಯ ಆಯುಕ್ತ ಎಂ.ಎನ್.ಷಡಕ್ಷರಿ ಮಾತನಾಡಿ, ಯಾವುದೇ ಜಾತಿ, ಧರ್ಮವಿಲ್ಲದೇ ಪ್ರಪಂಚದಾದ್ಯಂತ ವಿಸ್ತರಿಸುವ ಸಂಸ್ಥೆ ಸ್ಕೌಟ್ಸ್ ಮತ್ತು ಗೈಡ್ಸ್. ಇಲ್ಲಿನ ತರಬೇತಿ ಪ್ರತಿಯೊಬ್ಬರಲ್ಲಿ ದೇಶಪ್ರೇಮ, ಭಾತೃತ್ವವನ್ನು ಬೆಳೆಸಲಿದೆ ಎಂದರು.
೧೯೬೦ ರಲ್ಲಿ ಅಮೆರಿಕಾದ ವೈಟ್ಹೌಸ್ನಲ್ಲಿ ವ್ಯಕ್ತಿಯೊಬ್ಬರು ಸ್ಕೌಟ್ಸ್ ಸಮವಸ್ತ್ರವನ್ನು ಗುರುತಿಸಿ ಗೌರವ ತಂಗಲು ಆಥಿತ್ಯ ನೀಡಿದ್ದರು. ಚಿಕ್ಕಂದಿನಲ್ಲೇ ಮಕ್ಕಳಿಗೆ ಶಿಸ್ತು, ಮಾನವೀಯ ಗುಣಗಳನ್ನು ಬೆಳೆಸಲು ಇಂತಹ ತರಬೇತಿ ಅಗತ್ಯ ಎಂದು ತಿಳಿಸಿದರು.
ಪ್ರಾಥಮಿಕ ಶಾಲಾ ಶಿಕ್ಷಕರು ಪರಿಪೂರ್ಣರಾದಾಗ ಮಕ್ಕಳಿಗೆ ವಿಶಿಷ್ಟ ಜ್ಞಾನ ಕಲಿಸಲು ಸಾಧ್ಯ. ಆ ಹಿನ್ನೆಲೆ ರಾಜ್ಯ ಮಟ್ಟದ ತರಬೇತುದಾರರಿಂದ ಶಿಕ್ಷಕರಿಗೆ ಮೂಲ ತರಬೇತಿ ನೀಡಲಾಗುತ್ತಿದೆ. ಇದರ ಸದುಪಯೋಗಪಡೆದು ಕೊಂಡು ಶಾಲೆಗಳಲ್ಲಿ ತಂಡಗಳ ರಚಿಸಿ ಅನುಷ್ಠಾನಗೊಳಿಸಬೇಕು ಎಂದು ಸಲಹೆ ನೀಡಿದರು.
ಕಬ್ಸ್ನ ತರಬೇತಿ ನಾಯಕಿ ಸಂಧ್ಯಾರಾಣಿ, ಬುಲ್, ಬುಲ್ಸ್ ತರಬೇತಿ ನಾಯಕಿ ಸೋಫಿಯಾ, ಪ್ರಾಥಮಿಕ ಶಾಲಾ ಶಿಕ್ಷಕರಿಗೆ ಮೂಲ ತರಬೇತಿ ನೀಡಿದರು. ಸ್ಕೌಟ್ಸ್ ಜಿಲ್ಲಾ ಸಂಘಟಕ ಕಿರಣ್ಕುಮಾರ್, ಸ್ಕೌಟ್ಸ್ ಮತ್ತು ಗೈಡ್ಸ್ ಸಂಸ್ಥೆ ಜಿಲ್ಲಾ ಸಹಕಾರ್ಯದರ್ಶಿ ನೀಲಕಂಠಚಾರ್, ನಿಹಾಲ್ ಸೇರಿದಂತೆ ಮತ್ತಿತರರು ಇದ್ದರು.
Cubs and Bulbuls Basic Training Camp