ಚಿಕ್ಕಮಗಳೂರು: ಮುಳ್ಳಯ್ಯನಗಿರಿ ಸಂರಕ್ಷಿತ ಮೀಸಲು ಪ್ರದೇಶದಲ್ಲಿನ ಸಮಸ್ಯೆಗಳು ಇತ್ಯರ್ಥವಾಗುವ ವರೆಗೂ ವರದಿ ತಡೆಹಿಡಿಯುವಂತೆ ಹಾಗೂ ಅರಣ್ಯ ಇಲಾಖೆ ಮತ್ತು ಕಂದಾಯ ಇಲಾಖೆಗಳ ಭೂ ವರ್ಗೀಕರಣ, ಸೆಕ್ಷನ್ ೪(೧), ಡೀಮ್ಡ್ ಫಾರೆಸ್ಟ್ ಹಾಗೂ ಇತರೆ ಗೊಂದಲಗಳಿಗೆ ಪರಿಹಾರ ಕಲ್ಪಿಸುವಂತೆ ಕಸ್ತೂರಿರಂಗನ್ ವರದಿ ವಿರೋಧಿ ಮತ್ತು ಮುಳ್ಳಯ್ಯನಗಿರಿ ಸಂರಕ್ಷಿತ ಮೀಸಲು ಪ್ರದೇಶ ವಿರೋಧಿ ಹೋರಾಟ ಸಮಿತಿ ವತಿಯಿಂದ ಮನವಿ ನೀಡಿದರು.
ಕಸ್ತೂರಿರಂಗನ್ ವರದಿ ವಿರೋಧಿ ಮತ್ತು ಮುಳ್ಳಯ್ಯನಗಿರಿ ಸಂರಕ್ಷಿತ ಮೀಸಲು ಪ್ರದೇಶ ವಿರೋಧಿ ಹೋರಾಟ ಸಮಿತಿಯ ಪ್ರಧಾನ ಸಂಚಾಲಕರಾದ ಎಸ್.ವಿಜಯಕುಮಾರ್ ಮನವಿ ನೀಡಿ ಮಾತನಾಡಿ ಜಿಲ್ಲೆಯ ಪ್ರಮುಖ ಪ್ರವಾಸಿ ಮತ್ತು ಪ್ರೇಕ್ಷಣೀಯ ತಾಣವಾದ ಮುಳ್ಳಯ್ಯನಗಿರಿ ಗಿರಿಸಾಲಿನಲ್ಲಿ ಬರುವ ಸುಮಾರು ೮ ಗ್ರಾಮ ಪಂಚಾಯ್ತಿಗಳ ವ್ಯಾಪ್ತಿಯ ಸುಮಾರು ೨೦,೭೦೦ ಎಕರೆ ಪ್ರದೇಶಗಳಾದ ಕಂದಾಯ ಗೋಮಾಳ, ಕಾಫಿ ಖರಾಬು, ಕಾಫಿ ಬಂಜರುನಂತಹ ಪಹಣಿ ಹೊಂದಿರುವ ಜಮೀನುಗಳನ್ನು ಮುಳ್ಳಯ್ಯನಗಿರಿ ಸಂರಕ್ಷಿತ ಮೀಸಲು ಪ್ರದೇಶ ಎಂದು ಘೋಷಣೆ ಮಾಡಲು ತೀರ್ಮಾನಿಸಲಾಗಿತ್ತು
ಜನರ ಗಮನಕ್ಕೆ ಬಾರದೆ ಇದುದ್ದರಿಂದ ಪ್ರತಿ ಗ್ರಾಮ ಪಂಚಾಯಿತಿ ಅಭಿಪ್ರಾಯ ಪಡೆಯಬೇಕೆಂಬ ನಿಯಮದ ಅನುಸಾರ ಕಂದಾಯ, ಅರಣ್ಯ ಗ್ರಾಮ ಪಂಚಾಯಿತಿ ಅಧಿಕಾರಿಗಳು ಮತ್ತು ಗ್ರಾಮಸ್ಥರ ಸಭೆ ನಡೆಸಿ ೭ ಗ್ರಾಮ ಪಂಚಾಯಿತಿಗಳಲ್ಲಿ ಗ್ರಾಮಸ್ಥರ ಸಹಯೋಗದೊಂದಿಗೆ ಅರಣ್ಯ ಕಾಪಾಡಲು ಸಭೆ ತೀರ್ಮಾನಿಸಲಾಗಿತ್ತು ಎಂದರು.
ಯೋಜನೆಗೆ ಸೇರಿದ ಸುಮಾರು ೧೩ ಸಾವಿರ ಎಕರೆಗಳನ್ನು ಡೀಮ್ಡ್ ಫಾರೆಸ್ಟ್ ಎಂದು ಸಭೆಯ ಮುಂದೆ ಈ ಸರ್ವೆ ನಂಬರ್ಗಳನ್ನು ಪ್ರಚಾರ ಪಡಿಸದೆ, ಜನ, ಜನವಸತಿ, ರಸ್ತೆ, ಊರು, ಗ್ರಾಮ, ದೇವಸ್ಥಾನಗಳನ್ನು ಗಣನೆಗೆ ತೆಗೆದುಕೊಳ್ಳುವಂತೆ ಒತ್ತಾಯಿಸಲಾಗಿತ್ತು, ಜಿಲ್ಲಾಡಳಿತ ಮತ್ತು ಗ್ರಾಮ ಪಂಚಾಯಿತಿಗಳ ಅಭಿಪ್ರಾಯವನ್ನು ಕಡೆಗಣಿಸಿ ಸರ್ಕಾರದ ಒಪ್ಪಿಗೆ ಕಳುಯಿಸಲಾಗಿತ್ತು ಎಂದರು.
ಸಂಬಂದಪಟ್ಟ ಇಲಾಖಾ ಅಧಿಕಾರಿಗಳು, ಆಗಿನ ಮುಖ್ಯ ಮಂತ್ರಿಗಳು ಹಾಗೂ ಗೃಹ ಮಂತ್ರಿಗಳು, ಹಾಗೂ ಅರಣ್ಯ ಸಚಿವರಿಗೆ ಮನವರಿಕೆ ಮಾಡಿ ಮರು ಪರಿಶೀಲಿಸುವಂತೆ ಪ್ರಸ್ತಾವನೆಯನ್ನು ಹಿಂದಕ್ಕೆ ಪಡೆಯಲಾಯಿತು, ಈ ಬಗ್ಗೆ ಗ್ರಾಮಸ್ಥರು ರೈತರ ಜಮೀನು, ಶಾಲಾ ಕಾಲೇಜು, ಗೋವುಗಳಿಗೆ ತಕ್ಕಂತೆ ಗೋಮಾಳ ಹಾಗೂ ಮುಳ್ಳಯಯ್ಯನಗಿರಿ, ಸೀತಾಳಯ್ಯನಗಿರಿ, ನಾರಕಂತೆ ಮಠ, ಬಾಬಾಬುಡನಗಿರಿ-ದತ್ತಪೀಠ, ದೇವಿರಮ್ಮ ಬೆಟ್ಟ, ಬಿಸಗ್ನಿಮಠ ಸೇರಿದಂತೆ ಹಲವು ವೃದ್ಧಾಶ್ರಮಗಳಿದ್ದು, ಪ್ರವಾಸೋದ್ಯಮಕ್ಕೆ ಅಡಚಣೆಯಾಗದಂತೆ ನಕ್ಷೆ ತಯಾರಿಸುವಂತೆ ಹಲವು ಬಾರಿ ಜಿಲ್ಲಾಡಳಿತಕ್ಕೆ ಮನವಿ ಮಾಡಲಾಗಿತ್ತು ಎಂದರು.
ಮನವಿ ಸಲ್ಲಿಸಿದರೂ ಸಹ ಅದನ್ನು ನಿರ್ಲಕ್ಷಿಸಿ ಯೋಜನೆಯನ್ನು ಅಂತಿಮಗೊಳಿಸುತ್ತಿರುವುದು ಖಂಡನೀಯ, ಆದ್ದರಿಂತ ತಾವುಗಳು ದಯಮಾಡಿ ಈ ಬಗ್ಗೆ ತಮ್ಮ ನೇತೃತ್ವದಲ್ಲಿ ಅರಣ್ಯ, ಕಂದಾಯ, ಚುನಾಯಿತ ಪ್ರತಿನಿಧಿಗಳು ಹಾಗೂ ಹೋರಾಟ ಸಮಿತಿ ಸೇರಿಂದಂತೆ ಸಭೆ ನಿಗಧಿಮಾಡಿ ಎಲ್ಲರ ಅಭಿಪ್ರಾಯದ ಮೇಲೆ ಸೂಕ್ತ ಕ್ರಮ ಕೈಗೋಳ್ಳಬೇಕೆಂದು ವಿನಂತಿಸಿಕೊಂಡರು.
ಜಿಲ್ಲೆಯಾದ್ಯಂತ ಈಗಾಗಲೇ ಬಹುತೇಕ ಪ್ರದೇಶಗಳನ್ನು ವಿವಿಧರೀತಿಯ ಅರಣ್ಯವೆಂದು ಘೋಷಿಸಿ ಲಕ್ಷಾಂತರ ಹೆಕ್ಟೇರ್ ಪ್ರದೇಶಗಳನ್ನು ಅರಣ್ಯೀಕರಣಗೊಳಿಸಲಾಗಿದೆ, ಅರಣ್ಯೀಕರಣ ಗೊಳಿಸುವ ಸಂದರ್ಭದಲ್ಲಿ ಆ ಭಾಗದಲ್ಲಿ ವಾಸಿಸುತ್ತಿದ್ದ ಜನರ ಸಮಸ್ಯೆಗಳನ್ನು ಸರ್ಕಾರಕ್ಕೆ ಮರೆಮಾಚಿ, ಅಧಿಕಾರಿಗಳು ಜನರಿಗೆ ಸಂಕಷ್ಟ ತಂದೊದಗಿಸಿದ್ದಾರೆ, ಬದುಕಿನ ದಾರಿ ಕಾಣದೆ ಜನರು ಕಂಗಾಲಾಗಿದ್ದಾರೆ ಎಂದರು.
ಜಿಲ್ಲೆಯಲ್ಲಿ ಕುದುರೆಮುಖ ರಾಷ್ಟ್ರೀಯ ಉದ್ಯಾನವನ, ಭದ್ರಾ ಅಭಯಾರಣ್ಯ, ಸ್ಟೇಟ್ ಫಾರೆಸ್ಟ್, ರಿಜರ್ವ ಫಾರೆಸ್ಟ್, ವಿಲೇಜ್ ಫಾರೆಸ್ಟ್, ರೆವಿನೂ ಫಾರೆಸ್ಟ್, ಡೀಮ್ಡ್ ಫಾರೆಸ್ಟ್, ಸೊಪ್ಪಿನ ಬೆಟ್ಟ, ರಕ್ಷಿರ ಅರಣ್ಯ ಎಂಬ ಹಲವು ಹೆಸರಿನಲ್ಲಿ ಶೇ. ೫೦ಕ್ಕೂ ಹೆಚ್ಚು ಭೂ ಪ್ರದೇಶಗಳನ್ನು ಹೊಂದಿರುವ ಚಿಕ್ಕಮಗಳೂರು ಜಿಲ್ಲೆಯಲ್ಲಿ ಮುಳ್ಳಯ್ಯನಗಿರಿ ಮೀಸಲು ಅರಣ್ಯ ಸಂರಕ್ಷಣಾ ಸೂಕ್ಷ್ಮ ಪ್ರದೇಶ ಯೋಜನೆ ಹಾಗೂ ಸೆಕ್ಷನ್ ೪(೧) ಹೆಸರಿನಲ್ಲಿ ಲಕ್ಷಾಂತರ ಎಕರೆ ಗೋಮಾಳ. ಹುಲುಬನಿ, ಸೊಪ್ಪಿನಬೆಟ್ಟ ಕಂದಾಯ ಭೂಮಿಗಳನ್ನು ಸೇರಿದಂತೆ ಹೊಸ ಯೋಜನೆಗಳಿಗೆ ಸೇರಿಸಿ ಸಂಪೂರ್ಣವಾಗಿ ಮಲೆನಾಡಿನ ಜನರ ಬದುಕು ಮತ್ತು ಸಂಸ್ಕೃತಿಯನ್ನು ಕಡೆಗಣಿಸಲಾಗಿದೆ ಎಂದರು.
ಅತ್ತಿಗುಂಡಿ, ಮಹಲ್ ಮುಖಾಂತರ ಕೆಮ್ಮಣ್ಣುಗುಂಡಿಗೆ ಹೋಗುವ ರಸ್ತೆಯನ್ನು ಮುಚ್ಚಲಾಗಿದ್ದು, ಇದರಿಂದ ಗಿರಿ ವ್ಯಾಪ್ತಿಗೆ ಬರುವ ಪ್ರವಾಸಿಗರು ಮಹಲ್ನಿಂದ ಮತ್ತೆ ನಗರದಕಡೆ ಬಂದು ಕೆಮ್ಮಣ್ಣುಗುಂಡಿಗೆ ಹೋಗುವುದರಿಂದ ಗಿರಿಯ ಮೇಲೆ ವಾಹನ ಸಂಚಾರ ದಟ್ಟಣೆ ಹೆಚ್ಚುವುದರ ಜತೆಗೆ ಕೇವಲ ೧೮ ಕಿ.ಮೀ ಕ್ರಮಿಸಬೇಕಾದವರು ಸುತ್ತ ಮುತ್ತಲಿನ ಗ್ರಾಮಸ್ಥರ ಸಂಚಾರದಟ್ಟಣೆಯಲ್ಲಿ ಸಿಲುಕಿ ೭೫ ರಿಂದ ೮೦ ಕಿ.ಮೀ ಸಂಚರಿಸುವ ಸ್ಥಿತಿ ಬಂದಿದೆ ಎಂದರು.
ಈ ಎಲ್ಲಾ ಸಮಸ್ಯೆಗಳನ್ನು ಪರಿಗಣಿಸಿ ಈ ರಸ್ತೆಯನ್ನು ಖುಲ್ಲಾಗೋಳಿಸಿ ಅಭಿವೃದ್ಧಿಪಡಿಸಬೇಕಾಗಿ ತಿಳಿಸಲಾಗಿದೆ, ಜಿಲ್ಲೆಯ ಪ್ರವಾಸಿ ತಾಣಗಳಲ್ಲಿ ಒಂದಾದ ಹೆಬ್ಬೆ ಫಾಲ್ಸ್ಗೆ ಹೋಗಲು ಅರಣ್ಯ ಇಲಾಖೆ ನಿರ್ಬಂಧವಿದ್ದು ಇದನ್ನೇ ನಂಬಿಕೊಂಡು ಜೀವನ ಸಾಗಿಸುತ್ತಿದ್ದ ಸ್ಥಲೀಯ ಜನರ ಬದುಕು ಸಂಕಷ್ಟದಲ್ಲಿದೆ, ಜಿಲ್ಲೆಯಾದ್ಯಂತ ಹಲವು ಅರಣ್ಯ ಪ್ರದೇಶಗಳಲ್ಲಿ ಹತ್ತಾರು ಹಳ್ಳಿಗಳಿದ್ದು, ಶಾಲೆ, ಅಂಗನವಾಡಿ, ಮತಘಟ್ಟೆ ಹೊಂದಿದ್ದರು ಸಹ ಕಂದಾಯ ಗ್ರಾಮವಾಗದೆ, ಭೂ ಪ್ರದೇಶಗಳಿಗೆ ಹಕ್ಕು ಪತ್ರವನ್ನು ನೀಡಲಾಗದೆ ಸಮಸ್ಯೆಗಳನ್ನು ಅನುಭವಿಸುತ್ತಿದ್ದು, ಇಂತಹ ಅರಣ್ಯ ವಾಸಿಗಳನ್ನು ಗುರುತಿಸಿ, ಸೂಕ್ತ ಕ್ರಮ ಕೈಗೊಳ್ಳುವಂತೆ ಸರ್ಕಾರ ಶಿಫಾರಸ್ಸು ಮಾಡಬೇಕೆಂದರು.
ಈ ಮೇಲ್ಕಂಡ ಸಮಸ್ಯೆಗಳನ್ನು ಇತ್ಯರ್ಥಗೊಳಿಸಲು ಕಂದಾಯ ಮತ್ತು ಅರಣ್ಯ ಇಲಾಖೆಗಳ ಜಂಟಿ ಸರ್ವೆ ಹಾಗೂ ಜಂಟಿ ಸಭೆಯನ್ನು, ಅಮೃತ್ ಮಹಲ್ ಪ್ರದೇಶಗಳ ಗಡಿ ಗುರುತು ಮಾಡುವ ಕೆಲಸ ತುರ್ತಾಗಿ ಮಾಡಿಸಲು ನಿರ್ಧೇಸನ ನೀಡಬೇಕಾಗಿ ವಿನಂತಿಸಿಕೊಳ್ಳಲಾಗಿದೆ ಎಂದು ತಿಳಿಸಿದರು. ಈ ಸಂದರ್ಭದಲ್ಲಿ ಸಂಚಾಲಕರಾದ ಕೆ.ಕೆ.ರಘು,ಸದಸ್ಯರುಗಳಾದ ಮುನ್ನಾ, ಅಥಾಹುಲ್ಲಾ ಮತ್ತಿತರರು ಉಪಸ್ಥಿತರಿದ್ದರು.
Request to the Collector to withhold the report until the problem is resolved