ಚಿಕ್ಕಮಗಳೂರು: ಐದು ಕೆ.ಜಿ. ಆಹಾರ ಧಾನ್ಯಕ್ಕೆ ಬದಲಾಗಿ ಪ್ರತಿ ಕೆಜಿಗೆ ೩೪ ರು.ಗಳಂತೆ ಜಿಲ್ಲೆಯ ೨,೧೩,೨೫೭ ಪಡಿತರ ಚೀಟಿದಾರರ ಮುಖ್ಯಸ್ಥರ ಖಾತೆಗೆ ೧೧,೫೮,೦೬,೭೨೦ ರೂ. ಸಂದಾಯವಾಗಿದೆ ಎಂದು ಜಿಲ್ಲಾಧಿಕಾರಿ ಮೀನಾ ನಾಗರಾಜ್ ಹೇಳಿದ್ದಾರೆ.
ರಾಜ್ಯ ಸರ್ಕಾರದ ಮಹತ್ವಾಕಾಂಕ್ಷಿ ಯೋಜನೆಗಳಲ್ಲೊಂದಾದ ಅನ್ನಭಾಗ್ಯ ಯೋಜನೆಗೆ ಜಿಲ್ಲೆಯಲ್ಲಿನ ಎಎವೈ ಮತ್ತು ಪಿಹೆಚ್ಹೆಚ್ ಫಲಾನುಭವಿಗಳಿಗೆ ಪ್ರತಿ ತಿಂಗಳು ಹೆಚ್ಚುವರಿಯಾಗಿ ವಿತರಿಸಲಾಗುವ ೫ ಕೆಜಿ ಆಹಾರ ಧಾನ್ಯಕ್ಕೆ ಬದಲಾಗಿ ಕುಟುಂಬದ ಮಹಿಳಾ ಮುಖ್ಯಸ್ಥರ ಬ್ಯಾಂಕ್ ಖಾತೆಗೆ ನೇರ ನಗದು ವರ್ಗಾವಣೆ ಮೂಲಕ ಜಮಾ ಮಾಡಲಾಗುತ್ತಿದೆ ಎಂದು ಹೇಳಿಕೆಯಲ್ಲಿ ತಿಳಿಸಿದ್ದಾರೆ.
ಜಿಲ್ಲೆಯಲ್ಲಿ ೨೫,೬೮೨ ಪಡಿತರ ಚೀಟಿಗಳು ನಿಷ್ಕ್ರೀಯವಾಗಿವೆ. ಈ ಪೈಕಿ ೭೭೩೧ ಪಡಿತರ ಚೀಟಿದಾರರು ನಿಷ್ಕ್ರೀಯ ಬ್ಯಾಂಕ್ ಖಾತೆಯನ್ನು ಹೊಂದಿದ್ದಾರೆ. ೧೭,೮೫೬ ಪಡಿತರ ಚೀಟಿದಾರರು ಬ್ಯಾಂಕ್ ಖಾತೆಯನ್ನೇ ಹೊಂದಿಲ್ಲ, ೯೫ ಪಡಿತರ ಚೀಟಿದಾರರ ಬ್ಯಾಂಕ್ ಖಾತೆಗೆ ಆಧಾರ್ ಸಂಖ್ಯೆ ಲಿಂಕ್ ಆಗಿಲ್ಲ, ಈ ಕಾರಣಕ್ಕಾಗಿ ಈ ಪಡಿತರ ಚೀಟಿದಾರರ ಖಾತೆಗೆ ಹಣ ಜಮಾ ಆಗಿಲ್ಲ.
ಚಿಕ್ಕಮಗಳೂರು ನಗರ ಪ್ರದೇಶದಲ್ಲಿ ೨೮೧೫, ಗ್ರಾಮಾಂತರ ಪ್ರದೇಶದಲ್ಲಿ ೩೯೮೫, ಅಜ್ಜಂಪುರ ತಾಲ್ಲೂಕಿನಲ್ಲಿ ೧೫೮೮, ಕಡೂರು ತಾಲ್ಲೂಕಿನಲ್ಲಿ ೬೮೨೭, ಕೊಪ್ಪ ತಾಲ್ಲೂಕಿನಲ್ಲಿ ೧೭೫೩, ಮೂಡಿಗೆರೆ ತಾಲ್ಲೂಕಿನಲ್ಲಿ ೩೪೫೨, ನರಸಿಂಹರಾಜಪುರ ತಾಲ್ಲೂಕಿನಲ್ಲಿ ೧೩೯೪, ಶೃಂಗೇರಿ ತಾಲ್ಲೂಕಿನಲ್ಲಿ ೮೩೫, ತರೀಕೆರೆ ತಾಲ್ಲೂಕಿನಲ್ಲಿ ೩೦೩೩, ಪಡಿತರ ಚೀಟಿದಾರರ ಖಾತೆಗಳು ಸಮರ್ಪಕವಾಗಿಲ್ಲ. ಈ ಪಡಿತರ ಚೀಟಿದಾರರ ವಿವರವನ್ನು ಸಂಬಂಧಪಟ್ಟ ನ್ಯಾಯಬೆಲೆ ಅಂಗಡಿಗಳ ಮುಂದೆ ಪ್ರದರ್ಶಿಸಲಾಗಿದೆ.
ಹೊಸದಾಗಿ ಉಳಿತಾಯ ಖಾತೆ ತೆರೆಯದ ಪಡಿತರ ಚೀಟಿದಾರರಿಗೆ ಅನುಕೂಲವಾಗಲು ಎಲ್ಲಾ ತಾಲ್ಲೂಕು ಕಛೇರಿಗಳಲ್ಲಿ ಅಂಚೆ ಕಛೇರಿಗಳ ಮೂಲಕ ಐಪಿಪಿಬಿ (ಇಂಡಿಯನ್ ಪೋಸ್ಟಲ್ ಪೇಮೆಂಟ್ ಬ್ಯಾಂಕಿಂಗ್) ಅಂಚೆ ಖಾತೆ ತೆರೆಯುವ ಕೇಂದ್ರವನ್ನು ತೆರೆಯಲಾಗಿದೆ. ಎಲ್ಲಾ ಅಂಚೆ ಕಛೇರಿಗಳಲ್ಲಿ ಐಪಿಪಿಬಿ (ಇಂಡಿಯನ್ ಪೋಸ್ಟಲ್ ಪೇಮೆಂಟ್ ಬ್ಯಾಂಕಿಂಗ್) ಮೂಲಕ ಖಾತೆಯನ್ನು ತೆರೆಯಬಹುದಾಗಿದೆ ಎಂದು ತಿಳಿಸಿದ್ದಾರೆ.
ಆಧಾರ್ ಸಂಖ್ಯೆಯನ್ನು ಚಾಲ್ತಿಯಲ್ಲಿರುವ ಬ್ಯಾಂಕ್ ಖಾತೆಗೆ ಕೆಲವರು ಲಿಂಕ್ ಮಾಡಿಲ್ಲ, ಪಡಿತರ ಚೀಟಿಯಲ್ಲಿ ಒಂದಕ್ಕಿಂತ ಹೆಚ್ಚು ಮುಖ್ಯಸ್ಥರಿದ್ದಾಗ ಅಥವಾ ಮುಖ್ಯಸ್ಥರೇ ಇಲ್ಲದಿದ್ದ ಸಂದರ್ಭದಲ್ಲಿ, ಆಧಾರ್ ಸಂಖ್ಯೆಯನ್ನು ತಪ್ಪಾಗಿ ನಮೂದಿಸಿದ್ದಲ್ಲಿ, ಬ್ಯಾಂಕಿನಲ್ಲಿ ಇ – ಕೆವೈಸಿ ಪೂರ್ಣಗೊಳಿಸದಿರುವಾಗ, ಕಳೆದ ಮೂರು ತಿಂಗಳಲ್ಲಿ ಒಂದು ತಿಂಗಳಾದರೂ ಪಡಿತರ ಪಡೆಯದಿದ್ದಲ್ಲಿ ಈ ಕಾರಣಗಳಿಂದ ಪಡಿತರ ಚೀಟಿದಾರರಿಗೆ ಹಣ ಜಮೆಯಾಗದಿರುವುದರಿಂದ ಅಂತಹ ಪಡಿತರ ಚೀಟಿದಾರರು ಬ್ಯಾಂಕಿಗೆ ಭೇಟಿ ನೀಡಿ ತಮ್ಮ ಮೊಬೈಲ್ ಸಂಖ್ಯೆ ಮತ್ತು ಆಧಾರ್ ಸಂಖ್ಯೆಯನ್ನು ಕಡ್ಡಾಯವಾಗಿ ಲಿಂಕ್ ಮಾಡಿಸಿ, ಖಾತೆಯನ್ನು ಸಕ್ರಿಯೆಗೊಳಿಸಿದ್ದಲ್ಲಿ ಮಾತ್ರ ಆಗಸ್ಟ್ ೨೦೨೩ರ ಮಾಹೆಗೆ ಸಂಬಂಽಸಿದಂತೆ ಬ್ಯಾಂಕ್ ಖಾತೆಗೆ ಹಣ ವರ್ಗಾಹಿಸಲು ಕ್ರಮವಹಿಸಲಾಗುವುದು ಎಂದು ತಿಳಿಸಿದ್ದಾರೆ.
Payment of money to district ration card holders account