ಚಿಕ್ಕಮಗಳೂರು: ತಾಲ್ಲೂಕಿನ ಮೈಲಿಮನೆ ಗ್ರಾಮಪಂಚಾಯಿತಿ ಅಧ್ಯಕ್ಷ ಹಾಗೂ ಉಪಾಧ್ಯಕ್ಷ ಸ್ಥಾನಕ್ಕೆ ಶುಕ್ರವಾರ ನಡೆದ ಚುನಾವಣೆಯಲ್ಲಿ ಅಧ್ಯಕ್ಷರಾಗಿ ಎಂ.ಸಿ.ಚೇತನ್ ಗೌಡ ಹಾಗೂ ಉಪಾಧ್ಯಕ್ಷರಾಗಿ ರಮ್ಯಾಪೂರ್ಣೇಶ್ ಅವಿರೋಧವಾಗಿ ಆಯ್ಕೆಯಾದರು.
ಮೈಲಿಮನೆ ಪಂಚಾಯಿತಿ ೧೦ ಸದಸ್ಯರ ಪೈಕಿ ಅಧ್ಯಕ್ಷ ಹಾಗೂ ಉಪಾಧ್ಯಕ್ಷ ಸ್ಥಾನಕ್ಕೆ ಪ್ರತಿಸ್ಪರ್ಧಿಯಾಗಿ ಯಾರೊಬ್ಬರು ನಾಮಪತ್ರ ಸಲ್ಲಿಸದ ಹಿನ್ನಲೆ ಚುನಾವಣಾಧಿಕಾರಿ ರಮೇಶ್ ಅವಿರೋಧ ಆಯ್ಕೆಯನ್ನು ಘೋಷಣೆ ಮಾಡಿದರು.
ಮೈಲಿಮನೆ ಪೂರ್ಣೇಶ್ ಅವಿರೋಧವಾಗಿ ಆಯ್ಕೆಗೊಂಡ ಅಧ್ಯಕ್ಷ, ಉಪಾಧ್ಯಕ್ಷರಿಗೆ ಅಭಿನಂದನೆಯನ್ನು ಸಲ್ಲಿಸಿ ಮಾತನಾಡಿ ಕಳೆದ ಬಾರಿಯಂತೆ ಈ ಬಾರಿಯು ಯಾವುದೇ ಚುನಾವಣೆ ನಡೆಯದೆ ಅವಿರೋಧವಾಗಿ ಆಯ್ಕೆಯಾಗಿರುವುದು ಮೈಲಿಮನೆ ವಿಶೇಷತೆ ಎಂದು ಹೇಳಬಹುದು, ಗ್ರಾಮದ ಹಿರಿಯರ ಆಸೆಯಂತೆ ನಮ್ಮ ಗ್ರಾಮ ಪಂಚಾಯಿತಿಯನ್ನು ಅಭಿವೃದ್ಧಿಯತ್ತ ಕೋಂಡೊಯುವ ಮೂಲಕ ಜಿಲ್ಲೆಯಲ್ಲಿಯೇ ಮಾದರಿ ಗ್ರಾಮ ಪಂಚಾಯಿತಿಯನ್ನಾಗಿ ನಿರ್ಮಾಣ ಮಾಡಬೇಕೆಂದು ತಿಳಿಸಿದರು.
ಗ್ರಾಮಪಂಚಾಯಿತಿಯನ್ನು ಮಾದರಿಯನ್ನಾಗಿಸುವ ನಿಟ್ಟಿನಲ್ಲಿ ನೂತನ ಅಧ್ಯಕ್ಷರು ಹಾಗೂ ಉಪಾಧ್ಯಕ್ಷರು ಶ್ರಮಿಸಬೇಕು. ಎಲ್ಲಾ ಸದಸ್ಯರು ಹಾಗೂ ಅಧಿಕಾರಿಗಳ ಮಾರ್ಗದರ್ಶನ ಪಡೆದು ಗ್ರಾಮದ ಅಭಿವೃದ್ಧಿಗೆ ಶ್ರಮಿಸುವಂತೆ ತಿಳಿಸಿದರು.
ಗ್ರಾಮಪಂಚಾಯಿತಿ ಬರುವ ಅನುದಾನವನ್ನು ಸಮರ್ಪಕವಾಗಿ ಬಳಕೆ ಮಾಡಿಕೊಳ್ಳಬೇಕು. ಕುಡಿಯುವ ನೀರು, ಬೀದಿ ದೀಪ, ಸ್ವಚ್ಚತೆ, ರಸ್ತೆ, ಅಂಗನವಾಡಿ ಸೇರಿದಂತೆ ಮೂಲಭೂತ ಸೌಕರ್ಯಗಳಿಗೆ ಹೆಚ್ಚು ಆಧ್ಯತೆ ನೀಡುವಂತೆ ಸಲಹೆ ನೀಡಿದರು.
ಅಭಿವೃಧ್ಧಿ ವಿಷಯದಲ್ಲಿ ನಮ್ಮ ಗ್ರಾಮ ಪಂಚಾಯಿತಿ ಯಾವುದೇ ರೀತಿಯಲ್ಲಿ ಹಿಂದೆ ಉಳಿದಿಲ್ಲ, ಕುಡಿಯುವ ನೀರು, ರಸ್ತೆ, ಶೈಕ್ಷಣಿಕ ಹಾಗೂ ಆರೋಗ್ಯದಂತಹ ಮೂಲಭೂತ ಸೌಕರ್ಯಗಳು ೮೦% ಭಾಗದಷ್ಟು ಪೂರೈಕೆಯಾಗಿದೆ, ಮುಂದಿನ ದಿನಗಳಲ್ಲಿ ಶಾಸಕರು, ಎಂಪಿಗಳು ಮತ್ತು ವಿಧಾನಪರಿಷತ್ ಸದಸ್ಯರು ಸೇರಿದಂತೆ ಸರ್ಕಾರ ಜೊತೆಗೆ ಒಡನಾಟವನ್ನಿಟ್ಟುಕೊಂಡು ಅಭಿವೃದ್ಧಿ ಪಥದಕಡೆಗೆ ಸಾಗಲು ನಾವೆಲ್ಲರೂ ಬದ್ಧರಾಗಿದ್ದೇವೆ ಎಂದರು.
ನೂತನ ಅಧ್ಯಕ್ಷರಾದ ಎಂ.ಸಿ.ಚೇತನ್ ಗೌಡ ಮಾತನಾಡಿ ಎಲ್ಲಾ ಸದಸ್ಯರು ಸಹಕಾರದಿಂದಾಗಿ ಇಂದು ಚುನಾವಣೆಯಲ್ಲಿ ಅಧ್ಯಕ್ಷ ಸ್ಥಾನಕ್ಕೆ ಅವಿರೋಧವಾಗಿ ಆಯ್ಕೆಯಾಗಿರುವುದು ಸಂತಸ ತಂದಿದೆ. ಮಹತ್ವದ ಸ್ಥಾನದ ಜವಾಬ್ದಾರಿಯನ್ನು ಸಮರ್ಥವಾಗಿ ನಿಭಾಯಿಸಲಾಗುವುದು, ಗ್ರಾಮಗಳಲ್ಲಿ ಸಮಸ್ಯೆಗಳ ಬಗ್ಗೆ ಗಮನಹರಿಸಿ ಪರಿಹರಿಸಲು ಶ್ರಮಿಸಲಾಗುವುದು, ಗ್ರಾಮದಲ್ಲಿ ಮುಖ್ಯವಾಗಿ ನಿವೇಶನ ರಹಿತರು, ಬೀದಿದೀಪ, ಕುಡಿಯುವ ನೀರು, ಶೌಚಾಲಯ ನಿರ್ಮಾಣಕ್ಕೆ ಆದ್ಯತೆ ನೀಡಿ ಪಂಚಾಯಿತಿಯನ್ನು ಮಾದರಿಯನ್ನಾಗಿ ಮಾಡಲಾಗುವುದು ಎಂದು ಹೇಳಿದರು.
ಉಪಾಧ್ಯಕ್ಷರಾದ ರಮ್ಯಾಪೂರ್ಣೇಶ್ ಮಾತನಾಡಿ ಸಾಮಾಜಿಕ ಸೇವೆ ಜತೆಗೆ ಗ್ರಾಮದ ಏಳಿಗೆಯನ್ನು ಧ್ಯೇಯವಾಗಿರಿಸಿಕೊಂಡು ಶ್ರಮಿಸುತ್ತಿದ್ದು, ಇದೀಗ ಉಪಾಧ್ಯಕ್ಷ ಸ್ಥಾನಕ್ಕೆ ಅವಿರೋಧ ಆಯ್ಕೆ ಮಾಡಲಾಗಿದೆ. ಗ್ರಾಮದ ಏಳಿಗೆ ನಿಟ್ಟಿನಲ್ಲಿ ಎಲ್ಲಾ ಸದಸ್ಯರ ಸಹಕಾರದೊಂದಿಗೆ ಶ್ರಮಿಸಲಾಗುವುದು ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಗ್ರಾ.ಪಂ ಸದಸ್ಯರಾದ ಜಿ.ಡಿ ಪರಮೇಶ್, ಹೇಮಾವತಿ, ವಿಂದ್ಯಾ, ಶಿವಕುಮಾರ್, ಕಾರ್ತಿಕ್, ಸವಿತಾ, ಹೊನ್ನಮ್ಮಮಂಜುನಾಥ್, ಸುನೀಲ್ಕುಮಾರ್, ಪಿಡಿಒ ಫರಿದಾಭಾನು, ತಾಲ್ಲೂಕು ಪಂಚಾಯಿತಿ ಮಾಜಿ ಸದಸ್ಯೆ ಅರ್ಪಿತಪ್ರದೀಪ್, ಗ್ರಾಮದ ಮುಖಂಡರಾದ ಜಯಚಂದ್ರ, ವಿರೂಪಾಕ್ಷ, ನಾಗೇಶ್, ಕೃಷ್ಣಮೂರ್ತಿ, ಸೇರಿದಂತೆ ಮತ್ತಿತರರು ಇದ್ದರು.
Mailimane Gram Panchayat