ಬೀರೂರು: ಎಳೆಯರಿಗೆ ಸುಭದ್ರ ಸಮಾಜ ಕಟ್ಟುವಲ್ಲಿ ಮಾರ್ಗದರ್ಶನ ಮಾಡುವ ಮಹತ್ತರ ಕೆಲಸ ನಿರ್ವಹಿಸುವ ಶಿಕ್ಷಕರು ಒತ್ತಡ ಮುಕ್ತವಾಗಿ ಬೋಧನೆ ಮಾಡುವ ವಾತಾವರಣ ನಿರ್ಮಾಣವಾಗಬೇಕಿದೆ ಎಂದು ಶಾಸಕ ಕೆ.ಎಸ್.ಆನಂದ್ ಅಭಿಪ್ರಾಯಪಟ್ಟರು.
ಪಟ್ಟಣದ ರೈಲ್ವೆ ಸ್ಟೇಷನ್ ರಸ್ತೆಯಲ್ಲಿರುವ ಗುರುಭವನದಲ್ಲಿ ಶನಿವಾರ ನಡೆದ ಶೈಕ್ಷಣಿಕ ಕಾರ್ಯಾಗಾರ ಮತ್ತು ಶಿಕ್ಷಕರ ಸಂವಹನ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ಬಲಿಷ್ಠ ದೇಶ ನಿರ್ಮಾಣದಲ್ಲಿ ಶಿಕ್ಷಕರ ಪಾತ್ರ ಬಹು ಮುಖ್ಯವಾಗಿದೆ. ರಾಜ್ಯ ಸರ್ಕಾರ ಶಿಕ್ಷಣಕ್ಕಾಗಿ ಸಾಕಷ್ಟು ಅನುದಾನ ಮೀಸಲಿರಿಸಿದರೂ ಸಾಕ್ಷರತೆ ಹಾಗೂ ಸಾಮಾಜಿಕ ಬದಲಾವಣೆ ನಿರೀಕ್ಷಿತ ಮಟ್ಟದಲ್ಲಿ ಇಲ್ಲ. ದೇಶದಲ್ಲಿಯೇ ಶೈಕ್ಷಣಿಕವಾಗಿ ಮುಂದಿರುವ ಕೇರಳದ ಜ್ಞಾನಪ್ರಸಾರ ಕಾರ್ಯಕ್ರಮ ಅನುಕರಣೀಯ. ಆದರೂ ಬಹಳಷ್ಟು ರಾಜ್ಯಗಳಿಗೆ ಹೋಲಿಸಿದರೆ ಕರ್ನಾಟಕದಲ್ಲಿ ಪ್ರಗತಿ ಗಣನೀಯವಾಗಿದೆ. ಪಠ್ಯೇತರ ಚಟುವಟಿಕೆಗಳಿಗೂ ಶಿಕ್ಷಕರನ್ನು ಬಳಸಿಕೊಳ್ಳುವುದರಿಂದ ಅವರು ಮಕ್ಕಳ ಶೈಕ್ಷಣಿಕ ಅಭಿವೃದ್ಧಿಗೆ ಪೂರ್ಣ ಸಮಯ ಮೀಸಲು ನೀಡಲು ಸಾಧ್ಯವಾಗುತ್ತಿಲ್ಲ. ಶಿಕ್ಷಕರ ಮೇಲಿರುವ ಒತ್ತಡದ ಕರ್ತವ್ಯ ಭಾರವನ್ನು ತಗ್ಗಿಸುವಲ್ಲಿ ಸರ್ಕಾರದ ಗಮನ ಸೆಳೆಯುತ್ತೇನೆ’ ಎಂದರು.
ಕ್ಷೇತ್ರ ಶಿಕ್ಷಣಾಧಿಕಾರಿ ಎಚ್.ಗಂಗಾಧರ್ ಪ್ರಾಸ್ತಾವಿಕವಾಗಿ ಮಾತನಾಡಿದರು. ಜಿಲ್ಲಾ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ಭೈರೇಗೌಡ ಮಾತನಾಡಿ, ‘ಶಿಕ್ಷಕರು ಒತ್ತಡದಲ್ಲಿ ಕರ್ತವ್ಯವನ್ನು ನಿಭಾಯಿಸುವಂತಾಗಿದೆ. ಪಾಠ, ಪ್ರವಚನದ ಜತೆಗೆ ಚುನಾವಣೆ, ಗಣತಿ, ಅಕ್ಷರ ದಾಸೋಹ ಹೀಗೆ ಬೇರೆ ಕರ್ತವ್ಯವನ್ನೂ ನಿರ್ವಹಿಸುವಂತೆ ಒತ್ತಡ ಹೇರುತ್ತಿರುವುದು ಸಮರ್ಥನೀಯವಲ್ಲ. ಇದನ್ನು ಅಧಿವೇಶನದ ವೇಳೆಯಲ್ಲಿ ಚರ್ಚಿಸಬೇಕು’ ಎಂದು ಮನವಿ ಮಾಡಿದರು.
ಪುರಸಭೆ ಸದಸ್ಯರಾದ ಬಿ.ಕೆ.ಶಶಿಧರ್, ಲೋಕೇಶಪ್ಪ, ಶಿಕ್ಷಕರ ಸಂಘದ ನಿರ್ದೇಶಕ ಬಿ.ಟಿ.ಅಜ್ಜಯ್ಯ ಮಾತಾನಾಡಿದರು. ಜಿಲ್ಲಾ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಉಪಾಧ್ಯಕ್ಷ ಜಗದೀಶ್, ತಾಲ್ಲೂಕು ಅಧ್ಯಕ್ಷ ಎನ್.ಮಹೇಶ್, ಸಹ ಕಾರ್ಯದರ್ಶಿ ಎಂ.ಮೈಲಾರಪ್ಪ, ನಿರ್ದೇಶಕ ಬಸಪ್ಪ, ಪ್ರೌಢಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ಶಿವಕುಮಾರ್, ದೈಹಿಕ ಶಿಕ್ಷಣ ಶಿಕ್ಷಕರ ಸಂಘದ ಮಾದಯ್ಯ, ಪ್ರೌಢಶಾಲಾ ದೈಹಿಕ ಶಿಕ್ಷಣ ಶಿಕ್ಷಕರ ಸಂಘದ ಚಂದ್ರಶೇಖರ್, ನಿರ್ದೇಶಕರಾದ ಕವಿತಾ, ಉಮಾಮಹೇಶ್, ಸೀತಾಲಕ್ಷ್ಮಿ, ಗೀತಾ, ಯಮುನಾ, ಕವಿತಾ, ಆರ್.ಟಿ.ಅಶೋಕ, ನಿವೃತ್ತ ಶಿಕ್ಷಕರಾದ ಎಸ್.ಟಿ.ರಾಜಪ್ಪ, ಹನುಮಂತಪ್ಪ ಮತ್ತು ಬೀರೂರು ವಲಯದ ಶಿಕ್ಷಕರು ಇದ್ದರು.
Creating an atmosphere where teachers can teach without stress