ಚಿಕ್ಕಮಗಳೂರು: ಬಹುಜನ ಸಮಾಜ ಪಕ್ಷದ ಕಾರ್ಯಕರ್ತರು ವಿಧಾನಸಭಾ ಚುನಾವಣೆಯಲ್ಲಿನ ಸೋಲಿಗೆ ಧೃತಿಗೆಡಬಾರದು. ಮುಂಬರುವ ಚುನಾವಣೆಗಳನ್ನು ಗೆಲ್ಲುವ ನಿಟ್ಟಿನಲ್ಲಿ ತಯಾರಿ ನಡೆಸಬೇಕು ಎಂದು ಬಿ.ಎಸ್.ಪಿ ರಾಜ್ಯ ಉಪಾಧ್ಯಕ್ಷ ಗಂಗಾಧರ್ ಬಹುಜನ್ ಕರೆ ನೀಡಿದರು.
ನಗರದ ಬಿ.ಎಸ್.ಪಿ ಕಚೇರಿಯಲ್ಲಿ ಭಾನುವಾರ ಏರ್ಪಡಿಸಿದ್ದ ಜಿಲ್ಲಾಮಟ್ಟದ ಕಾರ್ಯಕರ್ತರ ಸಭೆಯನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಬಹುಜನ ಸಮಾಜ ಪಕ್ಷಕ್ಕೆ ಸೋಲು, ಗೆಲುವು, ಏಳು, ಬೀಳುಗಳು ಮುಖ್ಯವಲ್ಲ. ಅದು ಬಹಳಷ್ಟು ಚುನಾವಣೆಗಳಲ್ಲಿ ಸೋತು ನಂತರ ಫೀನಿಕ್ಸ್ ನಂತೆ ಎದ್ದು ನಿಂತಿದೆ ಎಂದರು. ನಮ್ಮ ಹಿರಿಯರ ಹೋರಾಟದ ಫಲವಾಗಿ ನಾವು ಇಂದು ಸ್ವತಂತ್ರವಾಗಿ ಬದುಕಲು ಸಾಧ್ಯವಾಗಿದೆ. ಆದರೆ, ಅದನ್ನು ಮತ್ತೆ ಕಳೆದುಕೊಳ್ಳುವ ಆತಂಕ ಎದುರಾಗಿದೆ. ಇತ್ತೀಚಿನ ವರ್ಷಗಳಲ್ಲಿ ದೇಶ ದಲ್ಲಿ, ರಾಜ್ಯದಲ್ಲಿ ಪ್ರಜಾಪ್ರಭುತ್ವದ ಮೌಲ್ಯಗಳು ಕುಸಿಯುತ್ತಿವೆ. ಕಾನೂನು ವ್ಯವಸ್ಥೆ ಹದಗೆಡುತ್ತಿದೆ. ಸಂವಿಧಾನ ಅಸ್ತಿತ್ವ ಕಳೆದುಕೊಳ್ಳುತ್ತಿದೆ. ಈ ಹಿನ್ನೆಲೆಯಲ್ಲಿ ಎಲ್ಲರೂ ಆತ್ಮ ವಿಮರ್ಶೆ ಮಾಡಿಕೊಳ್ಳ ಬೇಕಾಗಿದೆ ಎಂದು ಹೇಳಿದರು.
ಇತ್ತೀಚೆಗ ನಡೆದ ವಿಧಾನಸಭಾ ಚುನಾವಣೆ ನ್ಯಾಯಯುತವಾಗಿ, ಮುಕ್ತವಾಗಿ ನಡೆದಿಲ್ಲ. ಅದರಿಂದಾಗಿ ಅರ್ಹತೆ ಇಲ್ಲದವರೂ ಚುನಾಯಿತರಾಗಿದ್ದಾರೆ. ಕೋಟ್ಯಾಂತರ ರೂ. ಸುರಿದು ಹಣ, ಹೆಂಡ, ಹಂಚಿ ಅಧಿಕಾರಕ್ಕೆ ಬಂದವರು ಭ್ರಷ್ಟಾಚಾರ ರಹಿತ ಆಡಳಿತ ನೀಡಲು ಸಾಧ್ಯವೇ ಎಂದು ಪ್ರಶ್ನಿಸಿದ ಅವರು, ಗಂಡಾ ಗುಂಡಿ ಮಾಡಿ, ಗಡಿಗೆ ತುಪ್ಪ ತಿನ್ನುವುದಲ್ಲ. ಆ ನಿಟ್ಟಿನಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯನವರು ನಾವು ಹೇಗೆ ಗೆದ್ದು ಬಂದಿದ್ದೇವೆ ಎಂದು ಆತ್ಮಾವ ಲೋಕನ ಮಾಡಿಕೊಳ್ಳಬೇಕು ಎಂದರು.
ದೇಶದಲ್ಲಿ ರಾಜ್ಯದಲ್ಲಿ ಸರ್ಕಾರಿ ಶಾಲೆಗಳು, ಸರ್ಕಾರಿ ಆಸ್ಪತ್ರೆಗಳು ಮುಚ್ಚಿ ಹೋಗುತ್ತಿವೆ. ಖಾಸಗಿ ಶಾಲೆಗಳು, ನರ್ಸಿಂಗ್ ಹೋಮ್ಗಳು ಬೆಳೆಯುತ್ತಿವೆ. ಅಗತ್ಯ ವಸ್ತುಗಳ ಬೆಲೆ ಗಗನಕೇರುತ್ತಿದೆ. ಇದರ ನಡುವೆ ಜನರ ಬದುಕು ದುಸ್ತರವಾಗಿದೆ. ಪ.ಜಾತಿ, ಪ.ವರ್ಗದ ಅಭಿವೃದ್ಧಿಗೆ ಮೀಸಲಿ ಟ್ಟಿದ್ದ ಹಣವನ್ನು ರಾಜ್ಯ ಸರ್ಕಾರ ಬಿಟ್ಟಿ ಭಾಗ್ಯಗಳಿಗೆ ಬಳಸಿದೆ. ಕಾಂಗ್ರೆಸ್ ಬಿಜೆಪಿ ಎರಡೂ ಒಳ ಒಪ್ಪಂದ ಮಾಡಿಕೊಂಡಿವೆ. ಹಾಗಾಗಿ ಒಂದು ಬಾರಿ ಅವರು ಇನ್ನೊಂದು ಬಾರಿ ಇವರು ಅಧಿ ಕಾರಕ್ಕೆ ಬರುತ್ತಿದ್ದಾರೆ. ಲೂಟಿ ಹೊಡೆಯುತ್ತಿದ್ದಾರೆ. ಮನು ವಾದವನ್ನು ಬೆಳೆಸುತ್ತಿದ್ದಾರೆ ಎಂದು ಆರೋಪಿಸಿದರು.
ಬಿಜೆಪಿಯವರಿಗೆ ಯಾವುದೇ ದೇಶಭಕ್ತಿ ಅಥವಾ ರಾಷ್ಟ್ರಪ್ರೇಮವಿಲ್ಲ. ಅವರು ಅಧಿಕಾರಕ್ಕಾಗಿ ಏನು ಬೇಕಾದರೂ ಮಾಡುತ್ತಾರೆ. ಸಮಾನತೆಗಾಗಿ, ಸರ್ವರಿಗೂ ಸಮಪಾಲು, ಸಮ ಬಾಳಿಗಾಗಿ ಹೋ ರಾಟ ನಡೆಸುತ್ತಿರುವುದು ಬಿಎಸ್ಪಿ ಮಾತ್ರ ಎಂದ ಅವರು, ಮುಂದಿನ ತಲೆಮಾರು ಸುಖ ಸಂತೋಷ ಮತ್ತು ನೆಮ್ಮದಿಯಿಂದ ಬದುಕಬೇಕಾದರೆ ಬಹುಜನ ಸಮಾಜ ಪಕ್ಷ ಈ ದೇಶಕ್ಕೆ ಅನಿವಾರ್ಯ ಎಂದರು.
ಬಿ.ಎಸ್.ಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ಜಾಕೀರ್ ಹುಸೇನ್ ಮಾತನಾಡಿ, ಸಂವಿಧಾನ ಉಳಿಸುವ ಶಕ್ತಿ ಇರುವುದು ಬಿಎಸ್ಪಿಗೆ ಮಾತ್ರ. ಬಹುಜನ ಚಳುವಳಿಯಿಂದಾಗಿ ಇಂದು ಸಂವಿಧಾನ ಉಳಿದಿದೆ. ಆ ಚಳುವಳಿಯನ್ನು ಮುಂದುವರಿಸುವ ಹೊಣೆಗಾರಿಕೆ ಪಕ್ಷದ ಕಾರ್ಯ ಕರ್ತರ ಮೇಲಿದೆ ಎಂದರು.
ವಿಧಾನಸಭೆ ಚುನಾವಣೆಯ ಸೋಲಿನಿಂದ ಪಕ್ಷದ ಕಾರ್ಯಕರ್ತರು ಆತ್ಮಸ್ಥೈರ್ಯ ಕಳೆದು ಕೊಳ್ಳಬಾರದು. ಮುಂಬರುವ ಜಿಲ್ಲಾ ಪಂಚಾಯಿತಿ, ತಾಲೂಕು ಪಂಚಾಯಿತಿ ಚುನಾವಣೆಗಳಲ್ಲಿ ಪಕ್ಷವನ್ನು ಗೆಲ್ಲಿಸಲು ಸನ್ನದ್ಧರಾಗಬೇಕು. ಬಾಬಾ ಸಾಹೇಬರ ಆಶಯ ಮತ್ತು ಕನಸುಗಳು ಸಂವಿಧಾನ ಉಳಿಯಬೇಕಾದರೆ ಬಹುಜನ ಚಳುವಳಿಯನ್ನು ಮತ್ತೆ ಮುಂದುವರೆಸಬೇಕು ಎಂದು ಕರೆ ನೀಡಿದರು.
ಬಿಎಸ್ಪಿ ರಾಜ್ಯ ಕಾರ್ಯದರ್ಶಿ ಕೆ.ಬಿ.ಸುಧಾ ಮಾತನಾಡಿ, ಮುಂಬರುವ ಚುನಾವಣೆಗಳನ್ನು ಗೆಲ್ಲಿ ಸಲು ಕಾರ್ಯಕರ್ತರು ಪಣ ತೊಡಬೇಕು ಎಂದರು. ಅಧ್ಯಕ್ಷತೆ ವಹಿಸಿ ಮಾತನಾಡಿದ ಜಿಲ್ಲಾಧ್ಯಕ್ಷ ಕೆ.ಟಿ.ರಾಧಾಕೃಷ್ಣ ಕಾರ್ಯಕ್ರಮದ ಯಶಸ್ಸಿಗೆ ಸಹಕರಿಸಿದವರಿಗೆ ಕೃತಜ್ಞತೆ ಸಲ್ಲಿಸಿದರು.
ಬಿಎಸ್ಪಿ ತಾಲೂಕು ಅಧ್ಯಕ್ಷ ಕುಮಾರ್, ಸಂಯೋಜಕಿ ಕೆ.ಎಸ್.ಮಂಜುಳಾ, ಜಿಲ್ಲಾ ಉಪಾಧ್ಯಕ್ಷ ರಾದ ಕೆ.ಆರ್.ಗಂಗಾಧರ್, ಶಂಕರ್, ಜಿಲ್ಲಾ ಉಸ್ತುವಾರಿ ಗೋಪಾಲ್, ಪಕ್ಷದ ಮುಖಂಡರಾದ ಪುಟ್ಟಸ್ವಾಮಿ, ಪಿ.ಪರಮೇಶ್, ಪಿ.ವಿ.ತಂಬನ್, ಜಾಕೀರ್ ಅಲಿಖಾನ್, ಮಂಜಯ್ಯ, ವಾಹಿದ್ ಜಾನ್, ಎಂ.ಬಾಬು, ಪಿ.ಕೆ.ಮಂಜುನಾಥ್ ಉಪಸ್ಥಿತರಿದ್ದರು. ವಿವಿಧ ತಾಲೂಕುಗಳ ಅಧ್ಯಕ್ಷರು ಪದಾಧಿಕಾರಿಗಳು ಸಭೆಯಲ್ಲಿ ಪಾಲ್ಗೊಂಡಿದ್ದರು.
District level workers meeting at BSP office