ಚಿಕ್ಕಮಗಳೂರು: ಹೆಚ್ಚುವರಿ ೫ ಕೆಜಿ ಪಡಿತರ ಅಕ್ಕಿ ಬದಲಿಗೆ ತಲಾ ವ್ಯಕ್ತಿಗೆ ೧೭೫ ರೂ. ಹಣ ನೀಡುವ ನೇರ ನಗದು ವರ್ಗಾವಣೆಯಲ್ಲಿ ಜಿಲ್ಲೆಯು ಶೇ.೯೫ ಕ್ಕೂ ಹೆಚ್ಚು ಸಾಧನೆ ಮಾಡಿ ರಾಜ್ಯದಲ್ಲೇ ಮೊದಲ ಸ್ಥಾನದಲ್ಲಿದೆ ಎಂದು ಶಾಸಕ ಎಚ್.ಡಿ.ತಮ್ಮಯ್ಯ ತಿಳಿಸಿದರು.
ಅವರು ನಗರದ ತಾಲ್ಲೂಕು ಕಛೇರಿ ಸಭಾಂಗಣದಲ್ಲಿ ಕ್ಷೇತ್ರ ವ್ಯಾಪ್ತಿಯ ಪಡಿತರ ವಿತರಕರ ಸಭೆ ನಡೆಸಿ ಮಾಹಿತಿ ನೀಡಿದರು, ಜಿಲ್ಲೆಯಲ್ಲಿ ಪಡಿತರ ಚೀಟಿದಾರಿಗೆ ಒಟ್ಟು ೧೩ ಕೋಟಿ ರೂ.ಗಳಿಗೂ ಹೆಚ್ಚು ಹಣ ನೇರವಾಗಿ ಕುಟುಂಬದ ಯಜಮಾನಿ ಹೆಸರಿಗೆ ವರ್ಗಾವಣೆ ಆಗಿದೆ. ಈ ಹಣದಲ್ಲಿ ಅಕ್ಕಿಯನ್ನೇ ಕೊಂಡುಕೊಳ್ಳುವಂತೆ ಪಡಿತರ ಚೀಟಿದಾರರಿಗೆ ತಿಳಿಸಬೇಕು ಎಂದರು.
ನಮ್ಮ ಸರ್ಕಾರಕ್ಕೆ ದೀನ, ದಲಿತರು ಅಲ್ಪಸಂಖ್ಯಾತರ ಬದುಕಿನ ಬಗ್ಗೆ ಕಾಳಜಿ ಇದೆ. ಅದು ನಮ್ಮದು ಹಾಗೂ ಮುಖ್ಯಮಂತ್ರಿಗಳ ಕನಸಾಗಿದೆ. ಹಸಿದವನಿಗೆ ಹೊಟ್ಟೆ ತುಂಬ ಅನ್ನ ಕೊಡಬೇಕೆಂದು ಸರ್ಕಾರ ಈ ಯೋಜನೆಯನ್ನು ಮಾಡಿದೆ. ಪಡಿತರ ವಿತರಕರು ಸರ್ಕಾರದ ಸೌಲಭ್ಯಗಳನ್ನು ಫಲಾನುಭವಿಗಳಿಗೆ ಪ್ರಾಮಾಣಿಕವಾಗಿ ತಲುಪಿಸುವ ಕೆಲಸ ಮಾಡಬೇಕು. ನಿಮ್ಮ ಸಮಸ್ಯೆಗಳಿಗೆ ಸ್ಪಂದಿಸಿ ನಾನು ಕೆಲಸ ಮಾಡುತ್ತೇನೆ. ನೀವು ಜನರು ಮೆಚ್ಚುವಂತೆ ಕೆಲಸ ಮಾಡಬೇಕು ಎಂದು ಸೂಚಿಸಿದರು.
ಕಾರು ಹೊಂದಿದವರಿಗೆ ಸರ್ಕಾರ ಬಿಪಿಎಲ್ ಕಾರ್ಡ್ ರದ್ದು ಮಾಡಿದೆ. ಕಾರು ಮಗನ ಹೆಸರಲ್ಲಿದ್ದು, ಆತನ ಹೆಸರು ಕಾರ್ಡ್ನಲ್ಲಿದ್ದರೆ ಅಂತಹ ಕಾರ್ಡು ರದ್ದಾಗುತ್ತದೆ. ಮತ್ತೋರ್ವ ಟ್ಯಾಕ್ಸ್ ಕಟ್ಟುವ ಸಾಫ್ಟ್ವೇರ್ ಇಂಜಿನೀಯರ್ ಇರುತ್ತಾನೆ. ತಂದೆ, ತಾಯಿ ಬಡವರಾಗೇ ಇರುತ್ತಾರೆ. ಅಂತಹ ಕಾರ್ಡು ರದ್ದಾಗುತ್ತದೆ. ಈ ಸಮಸ್ಯೆ ಅರ್ಥವಾಗಿದೆ. ಈ ಬಗ್ಗೆ ಸರ್ಕಾರದ ಮಟ್ಟದಲ್ಲಿ ಚರ್ಚೆ ಮಾಡಿ ರಾಜ್ಯಕ್ಕೆ ಅನ್ವಯಿಸುವಂತೆ ನೀತಿ ರೂಪಿಸುವಂತೆ ಒತ್ತಾಯಿಸುತ್ತೇನೆ. ಈ ಸಂಬಂಧ ಆಹಾರ ಸಚಿವರ ಜೊತೆ ಮಾತನಾಡುತ್ತೇನೆ ಎಂದರು.
ಮಲೆನಾಡು ಭಾಗದವರಿಗೆ ಸೀಮೆ ಎಣ್ಣೆ ಅವಶ್ಯಕತೆ ಇದೆ ಎಂದು ಕೇಳಿದ್ದಾರೆ. ಜಿಲ್ಲೆಯಲ್ಲಿ ಸೀಮೇಎಣ್ಣೆ ಎತ್ತುವಳಿಗೆ ಯಾರೂ ಮುಂದೆ ಬಾರದೆ ಸಮಸ್ಯೆ ಆಗಿದೆ ಅದನ್ನೂ ಪರಿಹರಿಸುವ ಪ್ರಯತ್ನ ಮಾಡುತ್ತೇವೆ ಎಂದರು.
ಮಳೆ ಕಾರಣ ಮರಗಳು, ವಿದ್ಯುತ್ ಕಂಬಗಳು ಬಿದ್ದು ಸಮಸ್ಯೆ ಆಗಿದೆ. ಅದನ್ನು ಸರಿಪಡಿಸುವ ಕೆಲಸ ಆಗುತ್ತಿದೆ. ಮಲ್ಲೇನಹಳ್ಳಿಯಲ್ಲಿ ೧೭ ರಂದು ನೂತನ ಎಂವಿಎಸ್ಎಸ್ ಕೇಂದ್ರ ಉದ್ಘಾಟನೆ ಆಗಲಿದ್ದು, ಬಹುತೇಕ ಸಮಸ್ಯೆ ಬಗೆಹರಿಯಲಿದೆ ಎಂದರು.
ಜಾಗರ, ಶಿರವಾಸೆ, ಮೇಲು ಹುಲುವತ್ತಿ ಭಾಗಕ್ಕೆ ವಿದ್ಯುತ್ ಪೂರೈಕೆ ಸಂಬಂಧ ಬೇಡಿಕೆ ಈಡೇರಿಸಲು ಸುಮಾರು ೨ ಕೋಟಿ ರೂ. ವೆಚ್ಚದ ಪ್ರಸ್ತಾವನೆ ಸಿದ್ಧಪಡಿಸಲಾಗಿದೆ. ಜಿಲ್ಲಾ ಉಸ್ತುವಾರಿ ಸಚಿವರೇ ಇಂಧನ ಸಚಿವರಾಗಿದ್ದು, ಮಂಜೂರಾತಿ ನೀಡುವುದಾಗಿ ಭರವಸೆ ನೀಡಿದ್ದಾರೆ ಎಂದರು.
ಇದೇ ವೇಳೆ ಪಡಿತರ ವಿತರಕರ ಸಂಘವು ವಿತರಕರಿಗೆ ಕಮಿಷನ್ ಕಡಿಮೆ ಬರುತ್ತಿರುವ ಬಗ್ಗೆ, ಇಕೆವೈಸಿ ಹಣ ಸಂಗ್ರಹ, ನೇರನಗದು ವರ್ಗಾವಣೆ ಬದಲಾಗಿ ಪಡಿತರವನ್ನೇ ವಿತರಿಸುವುದು ಸೇರಿದಂತೆ ಹಲವು ಬೇಡಿಕೆಗಳನ್ನು ಶಾಸಕರ ಮುಂದಿಟ್ಟಿತು.ಸಭೆಯಲ್ಲಿ ತಹಸೀಲ್ದಾರ್ ಸುಮಂತ್, ಆಹಾರ ಇಲಾಖೆ ಉಪನಿರ್ದೇಶಕ ಸುಬ್ರಮಣ್ಯ ಉಪಸ್ಥಿತಿತರಿದ್ದರು.
The district achieved more than 95% in direct cash transfer