ಚಿಕ್ಕಮಗಳೂರು: ದಾನ ದಾನಗಳಲ್ಲಿ ಅತ್ಯಂತ ಶ್ರೇಷ್ಟ ಹಾಗೂ ಮಹತ್ವವಾದ ದಾನ ರಕ್ತದಾನವಾಗಿದ್ದು, ಇದು ಸಾವಿನಂಚಿನಲ್ಲಿರುವ ರೋಗಿಗಳ ಪ್ರಾಣ ಉಳಿಸುತ್ತದೆ ಎಂದು ಶಾಸಕ ಹೆಚ್.ಡಿ. ತಮ್ಮಯ್ಯ ಹೇಳಿದ್ದಾರೆ.
ಚಿಕ್ಕಮಗಳೂರು ಲಯನ್ಸ್ ಕ್ಲಬ್, ಲಯನ್ಸ್ ಸೇವಾ ಟ್ರಸ್ಟ್, ಚಿಕ್ಕಮಗಳೂರು ವೈದ್ಯಕೀಯ ವಿಜ್ಞಾನಗಳ ಸಂಸ್ಥೆ ಮತ್ತು ಅರಳಗುಪ್ಪೆ ಮಲ್ಲೇಗೌಡ ಜಿಲ್ಲಾ ಆಸ್ಪತ್ರೆಯ ಆಶ್ರಯದಲ್ಲಿ ಲಯನ್ ದಿ|| ಬಿ.ಎನ್. ಮಲ್ಲೇಶ್ ಸ್ಮರಣಾರ್ಥ ಲಯನ್ಸ್ ಸೇವಾ ಭವನದಲ್ಲಿ ಹಮ್ಮಿಕೊಂಡಿದ್ದ ಮೆಗಾ ರಕ್ತದಾನ ಶಿಬಿರವನ್ನು ಉದ್ಘಾಟಿಸಿ ಮಾತನಾಡುತ್ತಿದ್ದರು.
ಲಯನ್ಸ್ ಕ್ಲಬ್ ತನ್ನ ಸುವರ್ಣ ಮಹೋತ್ಸವ ಆಚರಿಸಿಕೊಳ್ಳುತ್ತಿರುವ ಈ ವರ್ಷದಲ್ಲಿ ರಕ್ತದಾನ ಶಿಬಿರ ಹಮ್ಮಿಕೊಂಡಿರುವುದು ಸಂತೊಷದ ಸಂಗತಿಯಾದರೂ ಇತ್ತೀಚಿಗೆ ಅಕಾಲಿಕ ಮರಣಕ್ಕೀಡಾದ ಗೆಳೆಯ ಹಾಗೂ ಬಹುದಿನದ ಒಡನಾಡಿ ಬಿ.ಎನ್. ಮಲ್ಲೇಶ್ರವರ ಅಕಾಲಿಕ ಮರಣ ವೈಯುಕ್ತಿಕವಾಗಿ ತಮಗೆ ನೋವು ತಂದಿದೆ ಎಂದು ವಿಷಾಧಿಸಿದರು.
ಚಿಕ್ಕಮಗಳೂರು ವೈದ್ಯಕೀಯ ವಿಜ್ಞಾನಗಳ ಸಂಸ್ಥೆಯ ನಿರ್ದೇಶಕ ಡಾ. ಹರೀಶ್ ಮಾತನಾಡಿ ಲಯನ್ಸ್ ಕ್ಲಬ್ ಹಮ್ಮಿಕೊಂಡಿರುವ ಈ ಮೆಗಾ ರಕ್ತದಾನ ಶಿಬಿರದಲ್ಲಿ ಚಿಕ್ಕಮಗಳೂರು ಮೆಡಿಕಲ್ ಕಾಲೇಜಿನ ೩೫ ಹೆಚ್ಚು ವಿದ್ಯಾರ್ಥಿಗಳು ಸ್ವಯಂಪ್ರೇರಿತವಾಗಿ ರಕ್ತದಾನ ಮಾಡಿದ್ದಾರೆ. ಇದರಿಂದ ಸಾವಿನಂಚಿನಲ್ಲಿರುವ ಎಷ್ಟೋ ರೋಗಿಗಳ ಜೀವ ಉಳಿಯುತ್ತದೆ. ಓರ್ವ ವ್ಯಕ್ತಿ ರಕ್ತದಾನ ಮಾಡುವ ಮೂಲಕ ೩ ಜನ ರೋಗಿಗಳ ಪ್ರಾಣವನ್ನು ಉಳಿಸಬಹುದಾಗಿದೆ ಎಂದು ತಿಳಿಸಿದರು.
ಅರಳಗುಪ್ಪೆ ಮಲ್ಲೇಗೌಡ ಜಿಲ್ಲಾ ಸಾರ್ವಜನಿಕ ಆಸ್ಪತ್ರೆಯ ಜಿಲ್ಲಾ ಸರ್ಜನ್ ಡಾ. ಮೋಹನ್ಕುಮಾರ್ ಮಾತನಾಡಿ, ರಕ್ತದಾನ ಮಾಡುವುದರಿಂದ ರೋಗಿಗಳ ಜೀವ ಉಳಿಸಬಹುದಾಗಿದೆ. ರಕ್ತದಾನದ ಮಹತ್ವ ಕುರಿತು ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸುವ ಅಗತ್ಯ ಇದೆ ಎಂದು ಹೇಳಿದರು.
ಚಿಕ್ಕಮಗಳೂರು ಜಿಲ್ಲಾ ರಕ್ತನಿಧಿ ಕೇಂದ್ರದ ಮುಖ್ಯಸ್ಥರಾದ ಡಾ. ಮುರುಳೀಧರ ರಕ್ತದಾನದ ಮಹತ್ವ ಕುರಿತು ವಿವರಣೆ ನೀಡಿದರು.
ಸ್ವಯಂ ಪ್ರೇರಿತವಾಗಿ ರಕ್ತದಾನ ಮಾಡುವುದರ ಮೂಲಕ ರೋಗಿಗಳ ಪ್ರಾಣ ಉಳಿಸುವುದರ ಜೊತೆಗೆ ರಕ್ತದಾನ ಮಾಡುವ ವ್ಯಕ್ತಿಯ ದೇಹದಲ್ಲಿನ ಕೊಬ್ಬಿನ ಅಂಶ ಕಡಿಮೆ ಮಾಡುವುದರ ಜೊತೆಗೆ ರಕ್ತದಾನದಿಂದ ಹೃದಯಾಘಾತಗಳಂತಹ ಪ್ರಕರಣಗಳನ್ನು ತಡೆಯಬಹುದು. ಆರೋಗ್ಯವಂತ ಪ್ರತಿಯೊಬ್ಬ ಮನುಷ್ಯ ೩ ತಿಂಗಳಿಗೊಮ್ಮೆ ಕನಿಷ್ಟ ೬ ತಿಂಗಳಿಗೊಮ್ಮೆಯಾದರೂ ರಕ್ತದಾನ ಮಾಡುವುದು ಆರೋಗ್ಯಕ್ಕೆ ಒಳ್ಳೆಯದು ಎಂದರು.
ಲಯನ್ಸ್ ಕ್ಲಬ್ ಅಧ್ಯಕ್ಷ ಜಿ. ರಮೇಶ್ ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿ ಲಯನ್ಸ್ ಕ್ಲಬ್ನಲ್ಲಿ ಸಹಕಾರ್ಯದರ್ಶಿಯಾಗಿ ಅತ್ಯಂತ ಕ್ರಿಯಾಶೀಲವಾಗಿ ಕೆಲಸ ಮಾಡುತ್ತಿದ್ದ ದಿ|| ಬಿ.ಎನ್. ಮಲ್ಲೇಶ್ರವರ ಅಕಾಲಿಕ ಮರಣ ಲಯನ್ಸ್ ಕ್ಲಬ್ಗೆ ತುಂಬಲಾರದ ನಷ್ಟವಾಗಿದೆ. ಸುವರ್ಣ ಮಹೋತ್ಸವದ ಆಚರಣೆ ಹಿನ್ನೆಲೆಯಲ್ಲಿ ಅರಣ್ಯ ಇಲಖೆಯ ೫೦ ಎಕರೆ ಭೂ ಪ್ರದೇಶದಲ್ಲಿ ಗಿಡಗಳನ್ನು ನೆಡಲಾಗಿದ್ದು, ಅವುಗಳಿಗೆ ನೀರುಣಿಸಿ, ನಿರ್ವಹಣೆ ಜವಾಬ್ದಾರಿ ಹೊತ್ತಿದ್ದ ಬಿ.ಎನ್. ಮಲ್ಲೇಶ್ರವರ ಸಾವು ಲಯನ್ಸ್ ಕ್ಲಬ್ಗೆ ಅಘಾತ ಉಂಟುಮಾಡಿದೆ ಎಂದರು.
ಲಯನ್ಸ್ ಕ್ಲಬ್ಗೆ ಹೊಸದಾಗಿ ಸದಸ್ಯರಾಗಿ ಸೇರ್ಪಡೆಗೊಂಡ ಸುನಿಲ್ ಕುಮಾರ್ ಮತ್ತು ರೂಪೇಶ್ರವರ ಪರಿಚಯವನ್ನು ಲಯನ್ಸ್ ಕ್ಲಬ್ ಖಜಾಂಚಿ ಬಾಲಕೃಷ್ಣ ಮಾಡಿಕೊಟ್ಟರು. ವೈದ್ಯಕೀಯ ವಿಜ್ಞಾನಗಳ ಸಂಸ್ಥೆಯ ನೋಡಲ್ ಅಧಿಕಾರಿ ಡಾ. ರೋಹಿತ್ಕುಮಾರ್, ಡಾ. ಪ್ರೀತಿ, ಲಯನ್ಸ್ ಸುವರ್ಣ ಮಹೋತ್ಸವದ ಕಟ್ಟಡ ನಿರ್ಮಾಣ ಸ್ವಾಗತ ಸಮಿತಿ ಅಧ್ಯಕ್ಷ ಡಾ. ಜೆ.ಪಿ. ಕೃಷ್ಣೇಗೌಡ ಸಿವಿಲ್ ಇಂಜಿನಿಯರ್ ಸಂಘದ ಅಧ್ಯಕ್ಷ ಪ್ರಕಾಶ್ ಸಮಾರಂಭದಲ್ಲಿ ಉಪಸ್ಥಿತರಿದ್ದರು.
ಮಲ್ಲೇಶ್ ನಿಧನದಿಂದ ತೆರವಾದ ಲಯನ್ಸ್ ಕಾರ್ಯದರ್ಶಿ ಸ್ಥಾನಕ್ಕೆ ಲಯನ್ ಹರೀಶ್ರವರನ್ನು ನೇಮಕ ಮಾಡಲಾಯಿತು. ಲಯನ್ಸ್ ಕ್ಲಬ್ನ ಸದಸ್ಯ ಸಂತೊಷ್ ನೀತಿ ಸಂಹಿತೆ ಬೋಧಿಸಿದರು. ಲಯನ್ಸ್ ಕ್ಲಬ್ನ ಸದಸ್ಯರಾದ ಎಂ.ಆರ್. ನಾಗರಾಜ್, ಪುಷ್ಪರಾಜ್, ಪ್ರೊ. ಜಗದೀಶಪ್ಪ, ಕೇಶವಮೂರ್ತಿ, ರತ್ನಾಕರ್, ಹಾಗೂ ಲಯನ್ಸ್ ಮಾಜಿ ಗೌರ್ನರ್ ಹೆಚ್.ಆರ್. ಹರೀಶ್ ಉಪಸ್ತಿತರಿದ್ದರು. ಲಯನ್ಸ್ ಕ್ಲಬ್ ಅಧ್ಯಕ್ಷ ಜಿ. ರಮೇಶ್ ಸ್ವಾಗತಿಸಿ, ಟಿ. ನಾರಾಯಣಸ್ವಾಮಿ ವಂದಿಸಿದರು.
The best donation is blood donation