ಚಿಕ್ಕಮಗಳೂರು: ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅವರ ಆರೋಗ್ಯ ಚೇತರಿಸಿ, ಶೀಘ್ರ ಗುಣಮುಖರಾಗಲೆಂದು ಪ್ರಾರ್ಥಿಸಿ ಜೆಡಿಎಸ್ ಕಾರ್ಯಕರ್ತರು ಇಂದು ನಗರದ ತಹಸೀಲ್ದಾರ್ ಕಚೇರಿ ಆವರಣದ ಗಣಪತಿ ದೇವಸ್ಥಾನದಲ್ಲಿ ಪೂಜೆ ನೆರವೇರಿಸಿದರು.
ಈ ವೇಳೆ ಹೊಲದಗದ್ದೆ ಗಿರೀಶ್ ಮಾತನಾಡಿ, ಕುಮಾರಸ್ವಾಮಿ ಅವರು ಬೇಗನೆ ಗುಣಮುಖರಾಗಿ ರಾಜ್ಯದ ಜನರ ಕಷ್ಟ ಕಾರ್ಪಣ್ಯಗಳಿಗೆ ಸ್ಪಂದಿಸುವಂತಾಗಲಿ ಎಂದು ಭಗವಂತನಲ್ಲಿ ಬೇಡಿಕೊಂಡಿದ್ದೇವೆ ಎಂದರು.
ಕೆಲವು ಕಾರಣಕ್ಕೆ ಪಕ್ಷಕ್ಕೆ ತಾವು ರಾಜೀನಾಮೆ ನೀಡಿದ್ದರೂ ಎಚ್.ಡಿ.ಕುಮಾರಸ್ವಾಮಿ ಅವರ ಬಗ್ಗೆ ವೈಯಕ್ತಿಕವಾಗಿ ಅಪಾರ ಗೌರವವನ್ನು ಹೊಂದಿದ್ದೇವೆ. ಅವರಿಂದ ನಾಡಿಗೆ ಇನ್ನೂ ಉತ್ತಮ ಸೇವೆ ಆಗಬೇಕಿದೆ. ಅವರು ಮುಖ್ಯಮಂತ್ರಿ ಆಗಿದ್ದ ಸಂದರ್ಭದಲ್ಲಿ ರಾಜ್ಯಕ್ಕೆ ನೀಡಿದ ಕೊಡುಗೆ ಜನತೆ ಇನ್ನೂ ಮರೆತಿಲ್ಲ ಎಂದರು.
ಸರಳ ಸಜ್ಜನಿಕೆಗೆ ಮತ್ತೊಂದು ಹೆಸರೇ ಕುಮಾರಸ್ವಾಮಿ ಅವರು, ಕಳೆದ ೨೦ ವರ್ಷಗಳಿಂದ ಕುಮಾರಸ್ವಾಮಿ ಅಭಿಮಾನಿ ಸಂಘವನ್ನು ಕಟ್ಟಿ ಅವರ ಮೇಲಿನ ಅಭಿಮಾನದಿಂದಾಗಿ ಹಲವು ಕಾರ್ಯಕ್ರಮಗಳನ್ನು ನಡೆಸಿದ್ದೇವೆ. ಅವರು ಬೇಗನೆ ಗುಣಮುಖರಾಗಲಿ ಎಂದು ಪ್ರಾರ್ಥಿಸುತ್ತೇವೆ ಎಂದರು.
ಜೆಡಿಎಸ್ ಜಿಲ್ಲಾ ಮಹಾ ಪ್ರಧಾನ ಕಾರ್ಯದರ್ಶಿ ಜಿ.ಎಸ್.ಚಂದ್ರಪ್ಪ, ಜಿಲ್ಲಾ ಉಪಾಧ್ಯಕ್ಷ ಲಕ್ಷ್ಮಣಗೌಡ, ಮಹಿಳಾ ಘಟಕದ ಅಧ್ಯಕ್ಷ ಜಯಂತಿ ಇತರರು ಈ ಸಂದರ್ಭದಲ್ಲಿ ಇದ್ದರು.
Special puja for recovery of HD Kumaraswamy at Ganapati temple