ಚಿಕ್ಕಮಗಳೂರು: ಒಂದು ವಾರಗಳ ಕಾಲ ಪತ್ನಿ ಜೊತೆ ಗೋವಾ ರೌಂಡ್ಸ್ ಮಾಡಿಕೊಂಡು ಬಂದ ಪತಿ ಮನೆಗೆ ಬಂದ ಮರುದಿನವೇ ಪತ್ನಿಯನ್ನ ಕೊಲೆ ಮಾಡಿರುವ ಘಟನೆ ಚಿಕ್ಕಮಗಳೂರು ನಗರದ ಕ್ರಿಶ್ಚಿಯನ್ ಕಾಲೋನಿಯಲ್ಲಿ ಇಂದು(ಮಂಗಳವಾರ) ನಡೆದಿದೆ. ಮೃತಳನ್ನ ಶಮಾಭಾನು(34) ಎಂದು ಗುರುತಿಸಲಾಗಿದೆ.
ಪತ್ನಿಯನ್ನ ಕೊಲೆಗೈದ ಪತಿ ಶಬ್ಬರ್ ಅಹಮದ್ ಸೀದಾ ನಗರ ಪೊಲೀಸ್ ಠಾಣೆಗೆ ಹೋಗಿ ಶರಣಾಗಿದ್ದಾನೆ. ಆರೋಪಿ ಶಬ್ಬೀರ್ ಅಹಮದ್ ತನ್ನ ಪತ್ನಿ ಶಮಾಭಾನು ಜೊತೆ ಗೋವಾ ಪ್ರವಾಸ ಹೋಗಿದ್ದನು. ಒಂದು ವಾರಗಳ ಕಾಲ ಗೋವಾದಲ್ಲಿ ಪ್ರವಾಸ ಮುಗಿಸಿ ಬಂದ ಮರುದಿನವೇ ಪತ್ನಿಯನ್ನ ಸುತ್ತಿಗೆಯಿಂದ ಹೊಡೆದು ಕೊಲೆಗೈದಿದ್ದಾನೆ.
ಮನೆಯ ರೂಮಿನ ಗೋಡೆಗಳೆಲ್ಲಾ ರಕ್ತಮಯವಾಗಿದೆ. ಆರೋಪಿ ಶಬ್ಬೀರ್ ಮೊದಲ ಪತ್ನಿ ಕೊರೋನಾದಿಂದ ಸಾವನ್ನಪ್ಪಿದ್ದರು. ಹಿರಿಯ ಪತ್ನಿ ಸಾವಿನ ನಂತರ ಕಳೆದೊಂದು ವರ್ಷದ ಹಿಂದೆ ಶಮಾಭಾನುರನ್ನ ಮದುವೆಯಾಗಿದ್ದನು. ಇದೀಗ, ಆಕೆಯನ್ನ ಸುತ್ತಿಗೆಯಿಂದ ಹೊಡೆದು ಕೊಲೆಗೈದು ಪೊಲೀಸ್ ಠಾಣೆಗೆ ಬಂದು ಶರಣಾಗಿದ್ದಾನೆ.
ಪೊಲೀಸರಿಗೆ ಶರಣಾಗಿರುವ ಆರೋಪಿ ಇಬ್ಬರಿಗೂ ಜಗಳವಾಯ್ತು, ಆಕೆ ನನ್ನನ್ನ ತಲೆದಿಂಬಿನಿಂದ ಮುಖಕ್ಕೆ ಮುಚ್ಚಿ ಸಾಯಿಸಲು ಯತ್ನಿಸಿದ್ದಳು. ಅದಕ್ಕೆ ಹೊಡೆದಿದ್ದೇನೆ ಎಂದು ಮಾಹಿತಿ ನೀಡಿದ್ದಾನೆ. ಸ್ಥಳಕ್ಕೆ ನಗರ ಪೊಲೀಸರು ಹಾಗೂ ಎಸ್ಪಿ ವಿಕ್ರಮ್ ಅಮಟೆ ಭೇಟಿ ನೀಡಿ ಸ್ಥಳ ಪರಿಶೀಲನೆ ನಡೆಸಿದ್ದಾರೆ. ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
A husband who killed his wife