ಚಿಕ್ಕಮಗಳೂರು: ಜಿಲ್ಲೆಯಲ್ಲಿ ಗೌರಿ ಗಣೇಶ ಮೂರ್ತಿಗಳ ಪ್ರತಿಷ್ಠಾಪನೆ ಮಾಡುವವರು ಕಡ್ಡಾಯವಾಗಿ ನಿಯಮಗಳನ್ನು ಪಾಲಿಸಬೇಕೆಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ. ವಿಕ್ರಮಅಮಟೆ ತಿಳಿಸಿದರು.
ನಗರದ ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ಗೌರಿ ಗಣೇಶ ಪ್ರತಿಷ್ಠಾಪನೆ ಮಾಡುವ ಸೂಕ್ಷ್ಮ ಮತ್ತು ಅತಿಸೂಕ್ಷ್ಮ ಪ್ರದೇಶಗಳಲ್ಲಿ ಹೆಚ್ಚಿನ ಪೊಲೀಸ್ ಸಿಬ್ಬಂದಿಗಳನ್ನು ನೇಮಿಸುವ ಮೂಲಕ ಸೂಕ್ತ ಕ್ರಮಗಳನ್ನು ಕೈಗೊಳ್ಳಲಾಗುವುದು ತಿಳಿಸಿದರು. ಸಾರ್ವಜನಿಕರಿಗೆ ಹಾಗೂ ಸಂಚಾರಕ್ಕೆ ಅಡಚಣೆ ಉಂಟಾಗುವಂತೆ ಸಾರ್ವಜನಿಕ ಸ್ಥಳದಲ್ಲಿ ಹಾಗೂ ವಿವಾದಿತ ಸ್ಥಳಗಳಲ್ಲಿ ಗಣಪತಿ ಪೆಂಡಲ್ಗಳನ್ನು ನಿರ್ಮಾಣ ಮಾಡಬಾರದು. ಗೌರಿ-ಗಣೇಶ ವಿಗ್ರಹಗಳನ್ನು ಪ್ರತಿಷ್ಠಾಪನೆ ಮಾಡುವ ಮೊದಲು ಸಬ್ಬಂದಪಟ್ಟ ಇಲಾಖೆಗಳಿಂದ ಕಡ್ಡಾಯವಾಗಿ ಅನುಮತಿಯನ್ನು ಪಡೆದಿರಬೇಕು ಹಾಗೂ ಠಾಣೆಯಿಂದ ಪಡೆಯುವ ಅನುಮತಿ ಮುಚ್ಚಳಿಕೆ ಪತ್ರವನ್ನು ಛಾಪಾ ಕಾಗದದಲ್ಲಿ ಬರೆದುಕೊಡಬೇಕು ಎಂದರು.
ಪೊಲೀಸ್ ಠಾಣೆಯಿಂದ ನಡೆಸುವ ಸೌಹಾರ್ದಯುತ ಶಾಂತಿ ಸಭೆಗಳಿಗೆ ಭಾಗವಹಿಸಬೇಕು ಹಾಗೂ ಅಲ್ಲಿ ನೀಡುವ ಸೂಚನೆಗಳನ್ನು ಪಾಲಿಸಿ, ಕಾನೂನು ವ್ಯವಸ್ಥೆ ಕಾಪಾಡುವಲ್ಲಿ ಪೊಲೀಸ್ ವ್ಯವಸ್ಥೆಯೊಂದಿಗೆ ಸಹಕರಿಸಬೇಕು. ಪರಿಸರಕ್ಕೆ ಹಾನಿಯಾಗದಂತ ವಸ್ತುಗಳಿಂದ ತಯಾರಿಸಿದ ಪರಿಸರ ಸ್ನೇಹಿ ಗಣೇಶನ ಮೂರ್ತಿಯನ್ನು ಮಾತ್ರ ಪ್ರತಿಷ್ಠಾಪಿಸಬೇಕು ಎಂದರು.
ವಿಶೇಷ ಮನೊರಂಜನಾ ಕಾರ್ಯಕ್ರಮಗಳು ಇದ್ದಲ್ಲಿ, ಅಂತವುಗಳ ಬಗ್ಗೆ ಮುಂಚಿತವಾಗಿಯೇ ಅನುಮತಿಯನ್ನು ಪಡೆದುಕೊಳ್ಳಬೇಕು, ಗಣೇಶ ಪ್ರತಿಷ್ಠಾಪನೆ ಮಾಡುವ ಮುಖ್ಯಸ್ಥರ ಮೊಬೈಲ್ ನಂಬರ್ ಮತ್ತು ವಿಳಾಸವನ್ನು ನೀಡವುದು, ಯಾವುದೇ ಅವಘಡ ನಡೆಯದಂತೆ ಮುಂಜಾಗೃತ ಕ್ರಮವನ್ನು ವಹಿಸುವುದು, ಅಗತ್ಯವಿರುವ ನೀರು, ಮರಳು ಮತ್ತು ಫೈಯರ್ ಗ್ಯಾಸ್ ವ್ಯವಸ್ಥೆಯನ್ನು ಇಟ್ಟುಕೊಳ್ಳಬೇಕು. ಗಾಂಜಾ/ಮಧ್ಯ ಸೇವನೆ ಮಾಡಿ ಗಣಪತಿ ಕಾರ್ಯಕ್ರಮದ ಸ್ಥಳ ಮತ್ತು ಮೆರವಣಿಗೆಯಲ್ಲಿ ಭಾಗವಹಿಸುವಂತಿಲ್ಲ ಎಂದರು.
ಗಣೇಶ ವಿಸರ್ಜನಾ ಮೆರವಣಿಗೆಯಲ್ಲಿ ಗಣೇಶನ ಆರ್ಚ್ಗಳನ್ನು ಎತ್ತರವಾಗಿ ಮಾಡದೆ ವಿದ್ಯುತ್ ಅವಘಡಗಳು ನಡೆಯದಂತೆ ತಡೆಯಲು ಸಹಕರಿಸಬೇಕು. ಮೆರವಣಿಗೆ ನಡೆಸುವಾಗ ಸೌಂಡ್ ಸಿಸ್ಟಮ್, ಡಿಜೆ, ಪಟಾಕಿ ಸಿಡಿಸುವುದಾಗಲಿ ಅಥವಾ ಪ್ರಚೋದನಾಕಾರಿ ಘೋಷಣೆಯಾಗಲಿ ಮಾಡುವಂತಿಲ್ಲ, ಮೆರವಣಿಗೆ ಸಾಗುವ ಮಾರ್ಗದಲ್ಲಿ ಇರುವ ಸೂಕ್ಷ್ಮ ಸ್ಥಳಗಳಲ್ಲಿ ಉತ್ತಮ ಗುಣಮಟ್ಟದ ಸಿಸಿ ಟಿವಿ ಕ್ಯಾಮರಾ ಮತ್ತು ಡ್ರೋನ್ಗಳನ್ನು ಅಳವಡಿಸಿಕೊಳ್ಳುವುದು. ವಿಸರ್ಜನಾ ಸ್ಥಳಗಳಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಸಾರ್ವಜನಿಕರು ಸೇರದಂತೆ ಸಂಘಟಕರು ನೋಡಿಕೊಳ್ಳಬೇಕು ಹಾಗೂ ಬೆಳಕಿನ ಅಭಾವ ಉಂಟಾಗದಂತೆ ಸಾಕಷ್ಟು ಬೆಳಕಿನ ವ್ಯವಸ್ಥೆ ಇರುವಂತೆ ಮುಂಜಾಗ್ರತೆ ವಹಿಸಬೇಕು. ಎಲ್ಲಾ ಗಣೇಶ ಮೂರ್ತಿಗಳನ್ನು ಕಡ್ಡಾಯವಾಗಿ ಸಂಜೆ ೬ ಗಂಟೆಯ ಒಳಗಾಗಿ ವಿಸರ್ಜನೆ ಮಾಡುವಂತೆ ತಿಳಿಸಿದರು.
ಜಿಲ್ಲಾಧಿಕಾರಿ ಮೀನನಾಗರಾಜ್ ಮಾತನಾಡಿ ಜಿಲ್ಲೆಯ ಹಲವು ಕಡೆಗಳಲ್ಲಿ ಗಣೇಶನನ್ನು ಪ್ರತಿಷ್ಠಾಪಿಸಿ ಎಲ್ಲಾ ಕೋಮಿನವರು ಸೇರಿ ಅರ್ಥಪೂರ್ಣವಾಗಿ ವಿಜೃಂಭಣೆಯಿಂದ ಆಚರಿಸುವ ಆಚರಣೆಯಾಗಿದೆ, ಚಿಕ್ಕವರಿಂದ ದೊಡ್ಡವರ ವರೆಗೂ ಮತ್ತು ಸಂಘಟನೆಯವರು ಪ್ರತಿಯೊಬ್ಬರು ಆಚರಿಸುವ ಆಚರಣೆಯು ಮುಖ್ಯವಾದದ್ದು ಎಂದರು.
ಗೌರಿ-ಗಣೇಶ ಪ್ರತಿಷ್ಠಾಪನೆಗೆ ಸೆ. ೮ ರಿಂದ ಅನುಮತಿಯನ್ನು ನೀಡಲಾಗುವುದು, ಹಲವಾರು ವರ್ಷಗಳಿಂದ ವಿಸರ್ಜನೆ ಮಾಡಿಕೊಂಡು ಬಂದಿರುವ ಬಸವನಹಳ್ಳಿ ಕೆರೆಯಲ್ಲಿ ಕೃತಕ ಕೆರೆಯನ್ನು ನಿರ್ಮಿಸಿ ಗಣೇಶ ವಿಸರ್ಜನೆಗೆ ಅನುವು ಮಾಡಿಕೊಡಲಾಗುವುದು ಹಾಗೂ ಮನೆಗಳಲ್ಲಿ ಪ್ರತಿಷ್ಠಾಪಿಸಿದ ಗಣೇಶನ ವಿಸರ್ಜನೆಗೆ ಟ್ಯಾಂಕರ್ ವ್ಯವಸ್ಥೆಯನ್ನು ಮಾಡಲಾಗುವುದು ಎಂದರು.
ಸಿಇಓ ಗೋಪಾಲಕೃಷ್ಣ ಮಾತನಾಡಿ ಯುವಕರು ಚಂದವನ್ನು ಎತ್ತಿ ಸ್ನೇಹಿತರು, ನೆರೆ ಹೊರೆಯವರು ಮತ್ತು ಕುಟುಂಬದವರೊಂದಿಗೆ ಸೇರಿ ಗಣೇಶನನ್ನು ಕೂರಿಸುವುದು ಒಳ್ಳೆಯ ಆಚರಣೆಯಾಗಿದ್ದರು ಸಹ, ಇತ್ತೀಚಿನ ದಿನಗಳಲ್ಲಿ ಹಲವು ರೀತಿಯ ಅಹಿತಕರ ಘಟನೆಗಳ ನಡೆದ ಕಾರಣದಿಂದ, ಕಾಲಕ್ಕೆ ತಕ್ಕಂತೆ ಆಚರಣೆಗಳನ್ನು ಮಾಡಿಕೊಂಡು ಸರ್ಕಾರದ ಸೂಚನೆಗಳನ್ನು ಪಾಲಿಸುವ ಮೂಲಕ ಆಚರಣೆಗಳನ್ನು ಮಾಡುವಂತೆ ತಿಳಿಸಿದರು.
ಈ ಸಂದರ್ಭದಲ್ಲಿ ನಗರಸಭೆ ಅಧ್ಯಕ್ಷ ವರಸಿದ್ಧಿ ವೇಣುಗೋಪಾಲ್, ಆಯುಕ್ತರಾದ ಬಸವರಾಜ್ ಉಪಸ್ಥಿತರಿದ್ದರು.
Gauri-Ganesha and Eid Milad Peace Meeting