ಚಿಕ್ಕಮಗಳೂರು: ರಾಜ್ಯ ಕಾಂಗ್ರೆಸ್ ಸರ್ಕಾರದ ರೈತ ವಿರೋಧಿ ನೀತಿಗಳನ್ನು ವಿರೋಧಿಸಿ ಬಿಜೆಪಿ ರೈತ ಮೋರ್ಚಾ ಕಾರ್ಯಕರ್ತರು ಶುಕ್ರವಾರ ನಗರದಲ್ಲಿ ಪ್ರತಿಭಟನೆ ನಡೆಸಿದರು.
ತಹಸೀಲ್ದಾರ್ ಕಚೇರಿಯಿಂದ ಆಜಾದ್ ಪಾರ್ಕ್ ಸರ್ಕಲ್ ವರೆಗೆ ಮೆರವಣಿಗೆ ನಡೆಸಿ ಸರ್ಕಾರದ ವಿರುದ್ಧ ಘೋಷಣೆಗಳನ್ನು ಕೂಗಿದರು.
ಈ ವೇಳೆ ಬಿಜೆಪಿ ಗ್ರಾಮಾಂತರ ಅಧ್ಯಕ್ಷ ಈಶ್ವರಳ್ಳಿ ಮಹೇಶ್ ಪ್ರತಿಭಟನಾಕಾರರನ್ನುದ್ದೇಶಿಸಿ ಮಾತನಾಡಿ, ರೈತರು ಹಣಕ್ಕಾಗಿ ಆತ್ಮಹತ್ಯೆ ಮಾಡಿಕೊಳ್ಳುತ್ತಾರೆ ಎಂದು ಹಗುರವಾಗಿ ಮಾತನಾಡಿರುವ ರಾಜ್ಯ ಕಾಂಗ್ರೆಸ್ ಸರ್ಕಾರದ ಮಂತ್ರಿ ಶಿವಾನಂದ ಪಾಟೀಲ್ ಅವರನ್ನು ಸಂಪುಟದಿಂದ ವಜಾಗೊಳಿಸಬೇಕು ಎಂದು ಆಗ್ರಹಿಸಿದರು.
ಹಿಂದಿನ ಬಿಜೆಪಿ ಸರ್ಕಾರ ಜಾರಿಗೆ ತಂದಿದ್ದ ರೈತಪರವಾದ ಕೃಷಿ ಸಂಪದ, ರೈತನಿಧಿ ಸೆರಿದಂತೆ ಹತ್ತಾರು ಕಾರ್ಯಕ್ರಮಗಳನ್ನು ಕಾಂಗ್ರೆಸ್ ಸರ್ಕಾರ ರದ್ದುಗೊಳಿಸಿದೆ. ಅದನ್ನು ಕೂಡಲೇ ಪ್ರಾರಂಭಿಸಬೇಕು ಎಂದು ಒತ್ತಾಯಿಸಿದರು.
ಅವೈಜ್ಞಾನಿಕವಾಗಿ ವಿದ್ಯುತ್ ಲೋಡ್ಶೆಡ್ಡಿಂಗ್ ಮಾಡಲಾಗುತ್ತಿದೆ. ಅದನ್ನು ಕೈಬಿಡಬೇಕು. ಮಳೆ ಕೊರತೆಯಾಗಿದ್ದರೂ ಬರಗಾಲ ಪೀಡಿತ ಪ್ರದೇಶ ಘೋಷಣೆ ಆಗಿಲ್ಲ. ಚಿಕ್ಕಮಗಳೂರು ಕ್ಷೇತ್ರದ ಕರಗಡ, ಬೈರಾಪುರ ಪಿಕ್ ಅಪ್, ದೇವೀಕೆರೆ, ಮಾದರಸನ ಕೆರೆ ಯೋಜನೆಗಳ ಚಾನಲ್ನ ಹೂಳು ತೆಗೆಯದ ಕಾರಣ ಯಾವುದೇ ಕೆರೆಗಳು ತುಂಬಲು ಸಾಧ್ಯವಾಗಿಲ್ಲ. ಹಿಂದಿನ ಶಾಸಕ ಸಿ.ಟಿ.ರವಿ ಅವರು ಜಾಕ್ ವೆಲ್ ಕಾಮಗಾರಿ ಕೈಗೊಂಡು ಕೆರೆಗಳಿಗೆ ನೀರು ಹರಿಸುವ ಕೆಲಸ ಮಾಡಿಸಿದ್ದರು. ಆದರೆ ಈಗ ಚಾನಲ್ಗಳನ್ನು ಸ್ವಚ್ಛಗೊಳಿಸದ ಪರಿಣಾಮ ನೀರು ಹರಿಯದಂತಾಗಿದೆ. ಬರ ತಾಂಡವವಾಡುತ್ತಿದೆ. ಇದಕ್ಕೆ ಸರ್ಕಾರವೇ ನೇರ ಹೊಣೆಯಾಗಿರುತ್ತದೆ ಎಂದು ದೂರಿದರು.\
ಜಿಲ್ಲಾ ಬಿಜೆಪಿ ಕಾರ್ಯದರ್ಶಿ ರವೀಂದ್ರ ಬೆಳವಾಡಿ ಮಾತನಾಡಿ, ಹಿಂದೆ ಕೋರ್ಟ್ ಆದೇಶದ ಸಂದರ್ಭದಲ್ಲಿ ಕಾವೇರಿ ನೀರನ್ನು ತಮಿಳುನಾಡಿಗೆ ಬಿಟ್ಟಾಗ ಡಿ.ಕೆ.ಶಿವಕುಮಾರ್, ಸಿದ್ದರಾಮಯ್ಯ ಅವರು ಜನರನ್ನು ಎತ್ತಿಕಟ್ಟಿ ಪ್ರತಿಭಟಿಸುತ್ತಿದ್ದರು. ಆದರೆ ಇಂದು ಕೋರ್ಟ್ ಆದೇಶವಿಲ್ಲದಿದ್ದರೂ, ತಮಿಳುನಾಡು ನೀರು ಕೇಳದಿದ್ದರೂ ೧ ತಿಂಗಳಿಂದಲೂ ನೀರು ಹರಿಸಲಾಗುತ್ತಿದೆ. ತಮಿಳು ನಾಡು ಸರ್ಕಾರ ಐಎನ್ಡಿಐಎ ಜೊತೆಗಿದೆ ಎನ್ನುವ ಕಾರಣಕ್ಕೆ ಈ ತೀರ್ಮಾನ ತೆಗೆದುಕೊಂಡಿದ್ದಾರೆ ಎನ್ನುವುದು ಸ್ಪಷ್ಟ ಎಂದು ದೂರಿದರು.
ಕಾಂಗ್ರೆಸ್ ಸಕಾರ ಅಧಿಆರಕ್ಕೆ ಬಂದ ಮೇಲೆ ೧೭೪ ಜನ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಆದರೂ ಇವರ ಸರ್ಕಾರದ ಮಂತ್ರಿಯೊಬ್ಬರು ಹಣಕ್ಕೋಸ್ಕರ ರೈತರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಹಗುರವಾಗಿ ಮಾತನಾಡಿದ್ದಾರೆ. ನಾವು ಸಂಘಟನೆಯವರೆಲ್ಲ ಸೇರಿ ಆ ಮಂತ್ರಿಗೆ ೨ ಕೋಟಿ ರೂ. ಕೊಡುತ್ತೇವೆ ಅವರು ಆತ್ಮಹತ್ಯೆ ಮಾಡಿಕೊಳ್ಳಲಿ ಎಂದು ಸವಾಲು ಹಾಕಿದರಲ್ಲದೆ ರೈತರನ್ನು ಅಪಹಾಸ್ಯ ಮಾಡುವುದನ್ನು ನಿಲ್ಲಿಸಬೇಕು ಎಂದು ಒತ್ತಾಯಿಸಿದರು.
ಬಿಜೆಪಿ ಸರ್ಕಾರ ಜಾರಿಗೆ ತಂದಿದ್ದ ಎಪಿಎಂಸಿ ಕಾಯ್ದೆಯಿಂದ ರೈತರಿಗೆ ಸಾಕಷ್ಟು ಒಳ್ಳೆಯದಾಗಿತ್ತು ಅದನ್ನು ಕಾಂಗ್ರೆಸ್ ಸರ್ಕಾರ ರದ್ದುಗೊಳಿಸಿದೆ. ಜಿಲ್ಲೆಗೊಂದು ಗೋಶಾಲೆ ಯೋಜನೆ ಕೈಬಿಟ್ಟು ಅಕ್ರಮ ಗೋ ಸಾಕಾಣಿಕೆದಾರರಿಗೆ ಲಾಭ ಮಾಡಿಕೊಡಲು ಕಾಂಗ್ರೆಸ್ ಮುಂದಾಗಿದೆ ಎಂದು ಆರೋಪಿಸಿದರು.
ರೈತರಿಗೆ ಹೆಚ್ಚುವರಿ ಸಹಾಯಧನ ನೀಡುವ ಭೂ ಸಿರಿ ಯೋಜನೆ, ಕಿಸಾನ್ ಸಮ್ಮಾನ್ ಯೋಜನೆ, ಕೃಷಿ ಭೂಮಿ ಮಾರಾಟ ಕಾಯ್ದೆಗಳನ್ನು ರದ್ದು ಪಡಿಸಲಾಗಿದೆ. ನೀರಾವರಿ ಯೋಜನೆಗಳನ್ನು ನಿರ್ಲಕ್ಷಿಸಲಾಗಿದೆ. ಕ್ಷೀರ ಸಮೃದ್ಧಿ ಬ್ಯಾಂಕ್, ಶ್ರಮಶಕ್ತಿ ಯೋಜನೆ, ಜೀವನ್ ಜ್ಯೋತಿ ವಿಮಾ ಯೋಜನೆ ಹೀಗೆ ಎಲ್ಲಾ ಯೋಜನೆಗಳನ್ನು ರದ್ದು ಪಡಿಸಿ ಸರ್ಕಾರ ರೈತವಿರೋಧಿಯಾಗಿ ವರ್ತಿಸಿದೆ ಎಂದು ದೂರಿದರು.
ಪ್ರತಿಭಟನೆಯಲ್ಲಿ ಬಿಜೆಪಿ ಮುಖಂಡರುಗಳಾದ ಪುಷ್ಪರಾಜ್, ದಿನೇಶ್ ಪಾದಮನೆ, ಸಂತೋಷ್ ಕೋಟ್ಯಾನ್, ಶಿವಕುಮಾರ್, ಗೋಪಿ, ಈಶ, ನಗರಸಭೆ ಸದಸ್ಯ ರಾಜು ಇತರರು ಭಾಗವಹಿಸಿದ್ದರು.
Protest by BJP Raith Morcha workers against anti-farmer policies