ಚಿಕ್ಕಮಗಳೂರು: ನಮಗೆ ಜನ ಶಕ್ತಿ ತುಂಬಿ ಸೇವೆಗೆ ಜವಾಬ್ದಾರಿ ನೀಡಿದ್ದಾರೆ. ಅದನ್ನು ಯಶಸ್ವಿಯಾಗಿ ನಿರ್ವಹಿಸುತ್ತೇವೆ. ಈ ಮೂಲಕ ಜನರು ನಮ್ಮ ಮೇಲಿಟ್ಟಿರುವ ಭರವಸೆಗೆ ಗೌರವ ನೀಡುವ ಕೆಲಸ ಮಾಡುತ್ತೇವೆ ಎಂದು ಶಾಸಕ ಎಚ್.ಡಿ.ತಮ್ಮಯ್ಯ ತಿಳಿಸಿದರು.
ನಗರದ ಕೆಂಪನಹಳ್ಳಿ ಮುಖ್ಯ ರಸ್ತೆಗೆ ಲೋಕೋಪಯೋಗಿ ಇಲಾಖೆ ವತಿಯಿಂದ ೩.೮೯ ಕೋಟಿ ರೂ ವೆಚ್ಚದಲ್ಲಿ ೧೩೧೦ ಮೀಟರ್ ಕಾಂಕ್ರಿಟ್ ರಸ್ತೆ ಮತ್ತು ಬಾಕ್ಸ್ ಚರಂಡಿ ನಿರ್ಮಾಣ ಕಾಮಗಾರಿಗೆ ಶಂಕುಸ್ಥಾಪನೆ ನೆರವೇರಿಸಿ ಅವರು ಮಾತನಾಡಿದರು.
ಕೆಂಪನಹಳ್ಳಿ, ಬಾಳೆಹಳ್ಳಿ, ಐನಳ್ಳಿ ಮತ್ತು ಕರ್ಕೆಪೇಟೆ ಗ್ರಾಮಸ್ಥರ ಹಲವು ದಿನಗಳ ಬೇಡಿಕೆ ಇದಾಗಿತ್ತು. ಹೆಚ್ಚು ಹಾಳಾಗಿದ್ದ ಭಾಗವನ್ನು ಸಧ್ಯಕ್ಕೆ ಕಾಂಕ್ರಿಟ್ ರಸ್ತೆ ಮಾಡಲಾಗುತ್ತಿದೆ. ಉಳಿದ ಭಾಗವನ್ನೂ ಅಭಿವೃದ್ಧಿ ಪಡಿಸಲಾಗುವುದು. ಅಧಿಕಾರಿಗಳು ಮತ್ತು ಗುತ್ತಿಗೆದಾರರು ನಿಂತು ಗುಣಮಟ್ಟದ ರಸ್ತೆಯನ್ನು ಮಾಡಿಸಬೇಕು ಎಂದರು.
ಇಡೀ ದೇಶದಲ್ಲಿ ನುಡಿದಂತೆ ನಡೆಯುವ ಮುಖ್ಯಮಂತ್ರಿಗಳಿದ್ದರೆ ಅದು ಸಿದ್ದರಾಮಯ್ಯ ಮಾತ್ರ. ೪ ಗ್ಯಾರಂಟಿಗಳನ್ನು ಅಧಿಕಾರಕ್ಕೆ ಬಂದ ೧೦೦ ದಿನದಲ್ಲಿ ಜಾರಿಗೆ ಕೊಡುವ ಮೂಲಕ ನುಡಿದಂತೆ ನಡೆದಿದ್ದಾರೆ ಎಂದರು.
ಬಡವರು, ದಲಿತರು, ಅಲ್ಪಸಂಖ್ಯಾತರು, ಶೋಷಿತರ ಪರ ಧ್ವನಿಯಾಗಿ ಸಿದ್ದರಾಮಯ್ಯ ಮತ್ತು ಡಿ.ಕೆ.ಶಿವಕುಮಾರ್ ಕೆಲಸ ಮಾಡುತ್ತಿದ್ದಾರೆ. ಅವರೊಂದಿಗೆ ನಾವು ಕೈಜೋಡಿಸಿ ಕೆಲಸ ಮಾಡುತ್ತಿದ್ದೇವೆ. ಮಹಿಳೆಯರು ಗ್ಯಾರಂಟಿ ಯೋಜನೆಗಳಿಂದ ಖುಷಿಯಾಗಿದ್ದಾರೆ. ಅದರ ಜೊತೆಗೆ ಅಭಿವೃದ್ಧಿಗೆ ಒತ್ತುಕೊಡುವ ಕೆಲಸ ಮಾಡುತ್ತಿದ್ದೇವೆ ಎಂದರು.
ಈಗಾಗಲೇ ನಾವು ನಗರದಲ್ಲಿ ವಾರ್ಡ್ ಸಭೆಗಳನ್ನು ಆರಂಭಿಸಿದ್ದೇವೆ. ಸಮಸ್ಯೆ ಇರುವ ಕಡೆ ಅಧಿಕಾರಿಗಳನ್ನು ಕರೆದೊಯ್ಯು ಪರಿಹಾರ ಕೊಡಿಸುವ ಕೆಲಸವನ್ನು ಪ್ರಾಮಾಣಿಕವಾಗಿ ಮಾಡಲಾಗುವುದು ಎಂದು ತಿಳಿಸಿದರು.
ಒಳಚರಂಡಿ ಮತ್ತು ಅಮೃತ್ ಯೋಜನೆ ಕಾಮಗಾರಿಗಳನ್ನು ಎಲ್ಲಾ ನಗರಸಭೆ ಸದಸ್ಯರನ್ನು ವಿಶ್ವಾಸಕ್ಕೆ ತೆಗೆದುಕೊಂಡು ನಿರ್ವಹಿಸಲಾಗುವುದು ಎಂದು ತಿಳಿಸಿದರು.
ವಿಧಾನ ಪರಿಷತ್ ಮಾಜಿ ಸದಸ್ಯೆ ಗಾಯತ್ರಿ ಶಾಂತೇಗೌಡ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಎಚ್.ಪಿ.ಮಂಜೇಗೌಡ, ನಗರಸಭೆ ಸದಸ್ಯೆ ಮಂಜುಳಾ ಲಕ್ಷ್ಮಣ್ ಮತ್ತು ಲಕ್ಷ್ಮಣ್, ಲೋಕೋಪಯೋಗಿ ಇಲಾಖೆ ಸಹಾಯಕ ಇಂಜಿನೀಯರ್ ಗವಿರಂಗಪ್ಪ ಇತರರು ಭಾಗವಹಿಸಿದ್ದರು.
Foundation stone laying for concrete road and box sewer construction work at Kempanahalli