ಚಿಕ್ಕಮಗಳೂರು: ಕಡೂರು ತಾಲ್ಲೂಕಿನ ಕುಂಕನಾಡು ಗ್ರಾಮದಲ್ಲಿ ಅಕ್ರಮವಾಗಿ ಮಂಜೂರು ಮಾಡಿರುವ ಜಮೀನಿನ ಪಹಣಿಯನ್ನು ರದ್ದುಗೊಳಿಸುವ ಜೊತೆಗೆ ಅಕ್ರಮದಲ್ಲಿ ಭಾಗಿಯಾಗಿರುವವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳುವಂತೆ ಕರ್ನಾಟಕ ಭೀಮ್ ಸೇನೆ ಜಿಲ್ಲಾಧ್ಯಕ್ಷ ಕುಂಕನಾಡು ಮಂಜುನಾಥ್ ಒತ್ತಾಯಿಸಿದರು.
ಇಂದು ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ೨೦೨೧ ರಲ್ಲಿ ಕುಂಕನಾಡು ಗ್ರಾಮದ ಸರ್ವೆ ನಂ.೨೭ರಲ್ಲಿ ಅಕ್ರಮವಾಗಿ ೧೦ ಎಕರೆ ಜಮೀನು ಮಂಜೂರು ಮಾಡಿದ್ದು ಈ ಬಗ್ಗೆ ತಾವು ನೀಡಿದ ದೂರಿನ ಆಧಾರದಲ್ಲಿ ತನಿಖೆ ನಡೆದು ಮೇಲ್ನೋಟಕ್ಕೆ ಆರೋಪ ಸಾಬೀತಾಗಿದೆ ಎಂದು ಹೇಳಿದರು.
ಆಗಿನ ತಹಸೀಲ್ದಾರ್ ವಿಶ್ವನಾಥ್, ಶಿರಸ್ತೇದಾರ್ ನಂಜುಂಡಪ್ಪ, ಭೂಮಿ ಕೇಂದ್ರದ ಶೃತಿ ಎಂಬುವವರ ಮೇಲೆ ದೂರು ನೀಡಲಾಗಿದ್ದು ಆ ಸಂದರ್ಭದಲ್ಲಿ ಉಪ ವಿಭಾಗಾಧಿಕಾರಿಯಾಗಿದ್ದ ಸಂಜೀವ್ ರೆಡ್ಡಿ ಅವರು ತನಿಖೆ ನಡೆಸಿ ಅಕ್ರಮವನ್ನು ಬಯಲಿಗೆ ಎಳೆದಿದ್ದಾರೆ ಎಂದರು.
ಅಕ್ರಮದಲ್ಲಿ ಭಾಗಿಯಾಗಿದ್ದ ಆರೋಪಿಗಳ ಪೈಕಿ ನಂಜುಂಡಪ್ಪ ಅವರು ನಿವೃತ್ತರಾಗಿದ್ದಾರೆ ಉಳಿದವರಿಗೆ ಬೇರೆ ಕಡೆ ವರ್ಗಾವಣೆ ಮಾಡಲಾಗಿದೆ ಈವರೆಗೆ ಯಾವುದೇ ಕ್ರಮ ಕೈಗೊಂಡಿಲ್ಲವೆಂದು ಆರೋಪಿಸಿದರು.
ಈಗಾಗಲೇ ಬೇರೆ ಪ್ರಕರಣಗಳ ಬಗ್ಗೆಯೂ ತನಿಖೆ ನಡೆಯುತ್ತಿದ್ದು ಕುಂಕನಾಡು ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿ ಆರೋಪಿಗಳ ಮೇಲೆ ಕ್ರಮ ಕೈಗೊಳ್ಳಬೇಕು ಇಲ್ಲದಿದ್ದಲ್ಲಿ ಜಿಲ್ಲಾಧಿಕಾರಿಗಳ ಕಚೇರಿ ಎದುರು ಸಂಘಟನೆ ವತಿಯಿಂದ ಪ್ರತಿಭಟನೆ ನಡೆಸುವುದಾಗಿ ಎಚ್ಚರಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಭೀಮಸೇನೆಯ ಪದಾಧಿಕಾರಿಗಳಾದ ನಿರ್ವಾಣಪ್ಪ, ಮನುಕುಮಾರ್, ಭಾರತಿನಿರ್ವಾಣಪ್ಪ , ಕೆ.ಆರ್ ಅಣ್ಣಪ್ಪ, ಲೋಕೇಶ್ ಉಪಸ್ಥಿತರಿದ್ದರು.
Land illegality in Kunkanad